- 10 ತಿಂಗಳ ಮಗುವಿಗೆ ಕೋವಿಡ್ ಸೋಂಕು ದೃಢ, ಮಗುವಿನ ಆರೋಗ್ಯ ಸ್ಥಿರ
ಜಗತ್ತಿನಾದ್ಯಂತ ಹರಡುತ್ತಿರುವ ಕೊರೊನಾ (ಕೋವಿಡ್ 19) ಬಂಟ್ವಾಳ ತಾಲೂಕಿಗೆ ಕಾಲಿಟ್ಟಿದೆ. ತಾಲೂಕಿನ ಸಜೀಪನಡುವಿನ 10 ತಿಂಗಳ ಮಗುವೊಂದಕ್ಕೆ ಕೋವಿಡ್ 19 ಪಾಸಿಟಿವ್ ದೃಢಪಟ್ಟಿದೆ. ಮಗುವಿನ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಗು ಜ್ವರ ಮತ್ತು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಮಾ.23ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಲ್ಯಾಬ್ ಟೆಸ್ಟಿಂಗ್ ಶಿಷ್ಟಾಚಾರದ ಪ್ರಕಾರ ರಾಜ್ಯ ತಂಡದಿಂದ ಅನುಮತಿ ಪಡೆದು ಮಾ.24ರಂದು ಮಗುವಿನ ಗಂಟಲು ಸ್ರಾವ ಮಾದರಿಯನ್ನು ತಪಾಸಣೆಗೆ ಕಳುಹಿಸಿಕೊಡಲಾಗಿತ್ತು. ಮಾ.26ರಂದು ಬಂದ ವರದಿಯಂತೆ ಕೋವಿಡ್ 19 ಪಾಸಿಟಿವ್ ಎಂದು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಮಗುವಿನ ಹತ್ತಿರದ ಸಂಬಂಧಿಗಳನ್ನು ತೀವ್ರ ನಿಗಾವಣೆಯಲ್ಲಿರಿಸಲಾಗಿದ್ದು, ಕಾಂಟಾಕ್ಟ್ ಟ್ರೇಸಿಂಗ್ ಚಾಲನೆಯಲ್ಲಿದೆ. ಈ ಹಿನ್ನೆಲೆಯಲ್ಲಿ ಕೋವಿಡ್ 19 ಸೋಂಕು ಗ್ರಾಮದ ಇತರರಿಗೆ ಹರಡದಂತೆ ಎಲ್ಲ ರೀತಿಯ ಮುಂಜಾಗರೂಕತಾ ಕ್ರಮವನ್ನು ಕೈಗೊಳ್ಳಲಾಗಿದೆ. ಪ್ರಸ್ತುತ ಮಗುವಿನ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದವರು ಹೇಳಿದ್ದಾರೆ.
ಸದ್ಯ ಇಡೀ ಗ್ರಾಮವನ್ನು ಕ್ವಾರಂಟೈನ್ ಮಾಡಲಾಗಿದ್ದು, ಶಿಷ್ಟಾಚಾರದಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಯಾವುದೇ ವ್ಯಕ್ತಿಗಳು ಗ್ರಾಮದಿಂದ ಹೊರಗೆ ಹಾಗೂ ಗ್ರಾಮದ ಒಳಗೆ ಪ್ರವೇಶಿಸುವಂತಿಲ್ಲ. ಇದನ್ನು ನಿಭಾಯಿಸಲು ತಾಲೂಕಾಡಳಿತ ಮತ್ತು ಸ್ಥಳೀಯಾಡಳಿತ ಸಕಲ ಕ್ರಮಗಳನ್ನು ಕೈಗೊಂಡಿದೆ. ಈಗಾಗಲೇ ಸಜೀಪನಡು ಗ್ರಾಮದ ಮೂಲಕ ಹಾದುಹೋಗುವ ಎಲ್ಲ ವಾಹನಗಳನ್ನು ನಿರ್ಭಂದಿಸಲಾಗಿದೆ. ಬಂಟ್ವಾಳ ತಾಲೂಕಿನ ಮೇಲ್ಕಾರ್ ಮೂಲಕ ಕೊಣಾಜೆಗೆ ತೆರಳುವ ಮುಖ್ಯ ದಾರಿ ಇದಾಗಿದ್ದು, ಪ್ರತಿಯೊಂದು ಮನೆಗಳ ಆರೋಗ್ಯ ಸುರಕ್ಷತೆಯ ನಿಗಾವನ್ನು ಸ್ಥಳೀಯ ಆಶಾ ಕಾರ್ಯಕರ್ತೆಯರ ನೆರವಿನಿಂದ ಬಂಟ್ವಾಳ ಆರೋಗ್ಯ ಇಲಾಖೆ ಇರಿಸಲಿದೆ.
Be the first to comment on "ಬಂಟ್ವಾಳ ತಾಲೂಕಿನ ಸಜೀಪನಡು ಗ್ರಾಮ ಸಂಪೂರ್ಣ QUARANTINE"