ವಿದೇಶದಿಂದ ಬಂದವರಿಗೆ ಕಡ್ಡಾಯ ಹೋಮ್ ಕ್ವಾರಂಟೈನ್

  • ಮಾಧ್ಯಮ ಸಂವಾದದಲ್ಲಿ ದ.ಕ. ಜಿಲ್ಲಾಧಿಕಾರಿ ಸಿಂಧು ಬಿ.ರೂಪೇಶ್

ಕೊರೊನಾ ಸೋಂಕು ಪಸರಿಸದಂತೆ ನಾಗರಿಕರು ಮಾಡಬೇಕಾದ್ದಿಷ್ಟೆ. ವಿದೇಶಗಳಿಂದ ಬಂದವರೆಲ್ಲರೂ (ಸೋಂಕು ಇರಲಿ ಇಲ್ಲದಿರಲಿ) ಕಡ್ಡಾಯವಾಗಿ 14 ದಿನಗಳ ಹೋಮ್ ಕ್ವಾರಂಟೈನ್ ಮಾಡಬೇಕು ಮತ್ತು ಇತರ ನಾಗರಿಕರಿಂದ ಅಂತರ ಕಾಯ್ದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸಿಂಧು ಬಿ.ರೂಪೇಶ್ ತಿಳಿಸಿದ್ದಾರೆ.

ಜಾಹೀರಾತು

ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಆರೋಗ್ಯ ಇಲಾಖೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ವತಿಯಿಂದ ಶುಕ್ರವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದಕ್ಷಿಣ ಕನ್ನಡ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಗಾಯತ್ರಿ ನಾಯಕ್ ,ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಜೇಶ್, ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು. ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಆರ್.ಸಿ.ಭಟ್ ಕಾರ್ಯಕ್ರಮ ನಿರೂಪಿಸಿದರು.

ಜಿಲ್ಲಾಧಿಕಾರಿ ಜೊತೆ ಸಂವಾದದ ಪ್ರಮುಖ ಅಂಶಗಳು ಇವು:

  • ಕೊರೊನಾ ಸೋಂಕು ಹರಡದಂತೆ ತಡೆಗಟ್ಟಲು ಪ್ರತಿಯೊಬ್ಬರು ಸ್ವಯಂ ನಿಗಾ ಅಳವಡಿಸಿಕೊಳ್ಳಬೇಕು ಎಂದ ಅವರು, ಹೋಮ್ ಕ್ವಾರಂಟೈನ್‍ನಲ್ಲಿರುವ ವ್ಯಕ್ತಿಗಳ ಕುಟುಂಬ ಸದಸ್ಯರು ಸೂಕ್ತ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಬೇಕು. ಅಂಥ ವ್ಯಕ್ತಿಗಳಿಗೆ ಪ್ರತ್ಯೇಕ ಕೋಣೆ ಮತ್ತು ಪ್ರತ್ಯೇಕ ಬಾತ್ ರೂಮ್ ವ್ಯವಸ್ಥೆ ಮಾಡಿದರೆ ಉತ್ತಮ. ಮನೆಗಳಿಂದ ಹೊರಬಂದು ತಿರುಗಾಡಿದರೆ ಇತರರಿಗೆ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಈ ಸಾಮಾಜಿಕ ಜವಾಬ್ದಾರಿಯನ್ನು ಎಲ್ಲರೂ ನಿರ್ವಹಿಸಬೇಕು.
  • 14 ದಿನಗಳಲ್ಲಿ ಸೋಂಕಿನ ಲಕ್ಷಣ ಕಂಡುಬಂದರೆ ಕೂಡಲೆ 104 ಅಥವಾ 1077 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬೇಕು. ವಿದೇಶದಿಂದ ಬಂದವರು ಮಾತ್ರವಲ್ಲ, ಇತರರು ಕೂಡ ಸೋಂಕಿನ ಲಕ್ಷಣ ಕಂಡುಬಂದ ಕೂಡಲೆ ಈ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಿ ಮಾಹಿತಿ ನೀಡಬೇಕು 
  • ಕೊರೊನಾ ವೈರಾಣು ಅತಿ ವೇಗವಾಗಿ ಹಬ್ಬುತ್ತದೆ. ಇದಕ್ಕೆ ತಕ್ಕ ಜನಸಾಮಾನ್ಯರು ಮುನ್ನೆಚ್ಚರಿಕೆ ವಹಿಸಿ ಸಾಧ್ಯವಾದಷ್ಟು ಮಟ್ಟಿಗೆ ನಿಯಂತ್ರಣ ಹೇರಬೇಕು. ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರಗೆ ಬರಬೇಕು. ಕಚೇರಿ ಸಿಬ್ಬಂದಿಗಳು ಸಾಧ್ಯವಾದಷ್ಟು ಮಟ್ಟಿಗೆ ಮನೆಯಲ್ಲೇ ಕೆಲಸ ಮಾಡಲು ಪ್ರಯತ್ನಿಸಬೇಕು. ಕೆಲವೊಂದು ಕಟ್ಟುನಿಟ್ಟು ಅನಿವಾರ್ಯವಾದ್ದರಿಂದ ಕೆಲವು ಸೇವೆಗಳು ವ್ಯತ್ಯಯವಾಗಬಹುದು. ಆದರೂ ಅನಿವಾರ್ಯವಾಗಿ ಎಲ್ಲರೂ ಆಡಳಿತದ ಜತೆಯಲ್ಲಿ ಕೈಜೋಡಿಸಬೇಕು
  • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದುವರೆಗೂ ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿಲ್ಲದಿದ್ದರೂ ಸೂಕ್ತ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಒಂದು ವೇಳೆ ಪಾಸಿಟಿವ್ ಪ್ರಕರಣಗಳು ಪತ್ತೆಯಾದರೆ ಕೂಡಲೆ ಮೆಡಿಕಲ್ ಕಾಲೇಜುಗಳಿಗೆ ನೀಡಲಾದ ಆದೇಶವನ್ನು ಕಾರ್ಯರೂಪಕ್ಕೆ ತರಲಾಗುವುದು. ಈಗಾಗಲೇ ಜಿಲ್ಲೆಯ ಆರೋಗ್ಯ ಕ್ಷೇತ್ರದ ಸಿಬ್ಬಂದಿಗೆ ಕೊರೋನಾ ಪ್ರಕರಣಗಳ ನಿರ್ವಹಣೆ ಕುರಿತಂತೆ ಸೂಕ್ತ ತರಬೇತಿಯನ್ನೂ ನೀಡಲಾಗಿದೆ 
  • ಕೊರೊನಾ ಚಿಕಿತ್ಸೆಗೆ ಇಎಸ್‍ಐ ಆಸ್ಪತ್ರೆ: ಮಂಗಳೂರಿನಲ್ಲಿರುವ ಇಎಸ್‍ಐ ಆಸ್ಪತ್ರೆಯನ್ನು ಕೊರೋನಾ ಚಿಕಿತ್ಸೆಗಾಗಿ ಮೀಸಲಿರಿಸಲಾಗಿದೆ. ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ 10 ಬೆಡ್‍ಗಳ ಪ್ರತ್ಯೇಕ ವಾರ್ಡ್ ತೆರೆಯಲಾಗಿದೆ. ಆಯುಷ್ ಆಸ್ಪತ್ರೆಯಲ್ಲೂ 10 ಬೆಡ್‍ಗಳ ಪ್ರತ್ಯೇಕ ವಾರ್ಡ್ ಮಾಡಲಾಗುತ್ತಿದೆ. ಮುಂದಿನ ದಿನಗಳ ಅಗತ್ಯ ಬಿದ್ದರೆ ಇತರ ಕಟ್ಟಡಗಳಲ್ಲೂ ಚಿಕಿತ್ಸೆ ಕೇಂದ್ರಗಳನ್ನು ಆರಂಭಿಸುವ ಚಿಂತನೆಯಿದೆ. ಅದಕ್ಕಾಗಿ ಕೆಲವು ಕಟ್ಟಡಗಳನ್ನು ಗುರುತಿಸಲಾಗಿದೆ
  • ಗಡಿ ಬಂದ್‍ಗೆ ಚಿಂತನೆ:ಜಿಲ್ಲೆಯ ಗಡಿಗಳನ್ನು ಬಂದ್ ಮಾಡುವ ಚಿಂತನೆಯಿದೆ. ಅಗತ್ಯಬಿದ್ದರೆ ಈ ಕುರಿತು ಚರ್ಚೆ ನಡೆಸಿ ಬಳಿಕ ತೀರ್ಮಾನಿಸಲಾಗುವುದು
  • ಆರೋಗ್ಯ ಕೇಂದ್ರ ಮಟ್ಟದಲ್ಲಿ ತಂಡ: ಕೊರೋನಾ ಸೋಂಕಿತರ ಕುರಿತು ಮಾಹಿತಿ ನೀಡಲು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮಟ್ಟದಲ್ಲೇ ಆರೋಗ್ಯಾಧಿಕಾರಿಗಳು, ಶಿಕ್ಷಕರು, ಆಶಾ ಕಾರ್ಯಕರ್ತೆಯರನ್ನೊಳಗೊಂಡ ತಂಡ ರಚನೆ ಮಾಡಲಾಗಿದೆ. ಜಿಲ್ಲಾಡಳಿತತದ ಗಮನಕ್ಕೆ ಬಾರದೆ ವಿದೇಶಗಳಿಂದ ಬಂದವರಿದ್ದರೆ ಅಥವಾ ಕೊರೋನಾ ಸೋಂಕಿನ ಲಕ್ಷಣಗಳಿದ್ದವರ ಕುರಿತು ಜನರೇ ಮಾಹಿತಿ ನೀಡುತ್ತಿದ್ದಾರೆ. ಇದು ಇನ್ನಷ್ಟು ಪರಿಣಾಮಕಾರಿಯಾಗಿ ಆಗಬೇಕಿದೆ. ಮಾಹಿತಿ ಬಂದ ಕೂಡಲೆ ಜಿಲ್ಲಾಡಳಿತ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಿದೆ. ಈಗಾಗಲೇ ಅಂಥ ಅನೇಕ ಮಾಹಿತಿಗಳನ್ನು ಸಾರ್ವಜನಿಕರು ನೀಡಿದ್ದು, ಕ್ರಮ ಕೈಗೊಳ್ಳಲಾಗಿದೆ ಎಂದರು.
  • ಮಾಹಿತಿ ನೀಡಿ: ಇತ್ತೀಚೆಗೆ ಮಂಗಳೂರು ವಿಮಾನ ನಿಲ್ದಾಣದ ಮೂಲಕ ಆಗಮಿಸಿದ ಕೊರೋನಾ ಸೋಂಕಿತ ಕಾಸರಗೋಡು ನಿವಾಸಿ ಸಂಚಾರ ನಡೆಸಿದ ಸ್ಥಳಗಳನ್ನೆಲ್ಲ ಅಲ್ಲಿನ ಜಿಲ್ಲಾಡಳಿತ ಗುರುತಿಸಿದೆ. ಗುರುತಿಸದೆ ಉಳಿದ ಜಾಗಗಳಿದ್ದರೆ ಗಮನ ಹರಿಸಲಾಗುವುದು. ಇಂತಹ ಪ್ರಕರಣಗಳಲ್ಲಿ ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಯಾರ್ಯಾರು ಬಂದಿರುತ್ತಾರೆ ಎಂಬುದನ್ನು ಪತ್ತೆ ಮಾಡುವುದು ಕಷ್ಟಕರ. ಸೋಂಕಿತ ವ್ಯಕ್ತಿ ಸಂಚರಿಸಿದ ರೂಟ್ ಮ್ಯಾಪ್‍ನ್ನು ಜಿಲ್ಲಾಡಳಿತ ಬಿಡುಗಡೆ ಮಾಡುತ್ತದೆ. ಅದಕ್ಕೆ ಅನುಗುಣವಾಗಿ ಜನರೇ ಮುಂದೆ ಬಂದು ಜಿಲ್ಲಾ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಸಿಂಧು ರೂಪೇಶ್ ಮನವಿ ಮಾಡಿದರು.

ಮಾಂಸ ಬೇಯಿಸಿ ತಿನ್ನಿ
ಯಾವುದೇ ಮಾಂಸವನ್ನು ಸೇವಿಸುವುದರ ಮೊದಲು ಸರಿಯಾಗಿ ಬೇಯಿಸಿ ತಿನ್ನಬೇಕು. ಕುದಿಸಿದ ಮಾಂಸದಲ್ಲಿ ಯಾವುದೇ ವೈರಸ್ ಬದುಕುಳಿಯುವುದಿಲ್ಲ. ಹಾಗಾಗಿ ಅರೆಬರೆ ಬೇಯಿಸಿ ಮಾಂಸ ತಿನ್ನಬೇಡಿ. ಉಳಿದಂತೆ ಮಾಂಸ ತಿನ್ನುವುದರಿಂದ ಯಾವುದೇ ಸಮಸ್ಯೆಯಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಜೇಶ್ ತಿಳಿಸಿದರು.

ಜಾಹೀರಾತು

ಸೂಕ್ತ ಚಿಕಿತ್ಸೆ ಲಭ್ಯವಿಲ್ಲ
ಕೊರೋನಾ ಸೋಂಕಿಗೆ ಸೂಕ್ತ ಚಿಕಿತ್ಸೆ ಇದುವರೆಗೂ ಲಭ್ಯವಿಲ್ಲ. ಪಾಸಿಟಿವ್ ಪ್ರಕರಣ ಪತ್ತೆಯಾದರೆ ಸೋಂಕಿನ ಲಕ್ಷಣಗಳಾದ ಶೀತ, ಕೆಮ್ಮು, ಜ್ವರ ಇತ್ಯಾದಿ ಸೋಂಕು ಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆ ನೀಡಲಾಗುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಿರುವವರು ಅತಿ ಬೇಗನೇ ವಾರದಲ್ಲೇ ರೋಗದಿಂದ ಗುಣಮುಖರಾಗಬಹುದು. ಕೆಲವರಿಗೆ ಜಾಸ್ತಿ ಸಮಯ ಹಿಡಿಯಬಹುದು. ಅವರವರ ರೋಗ ನಿರೋಧಕ ಶಕ್ತಿಯನ್ನು ಅವಲಂಬಿಸಿರುತ್ತದೆ ಎಂದು ಡಾ.ರಾಜೇಶ್ ಹೇಳಿದರು.

ಲ್ಯಾಬ್ ಆರಂಭಿಸಲು ಪ್ರಯತ್ನ
ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಪರೀಕ್ಷಾ ಲ್ಯಾಬ್ ಇಲ್ಲ. ಜಿಲ್ಲೆಯಲ್ಲಿ ಪತ್ತೆಯಾಗುವ ಶಂಕಿತರ ಗಂಟಲಿನ ಸ್ರವದ ಮಾದರಿಯನ್ನು ಪ್ರಸ್ತುತ ಹಾಸನದ ಪ್ರಯೋಗಾಲಯಕ್ಕೆ ಕಳುಹಿಸಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಮಂಗಳೂರಿನಲ್ಲಿ ಕರೋನಾ ಪತ್ತೆ ಲ್ಯಾಬ್ ಆರಂಭಿಸುವ ನಿಟ್ಟಿನಲ್ಲಿ ರಾಜ್ಯ ಮುಖ್ಯ ಕಾರ್ಯದರ್ಶಿ ಮತ್ತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗೆ ಮನವಿ ಮಾಡಲಾಗಿದೆ. ಐಸಿಎಂಆರ್ ಗೈಡ್‍ಲೈನ್ ಪ್ರಕಾರ ಲ್ಯಾಬ್ ನಿರ್ಮಾಣವಾಗಬೇಕಿದ್ದು, ಐಸಿಎಂಆರ್ ತಂಡ ಜಿಲ್ಲೆಗೆ ಭೇಟಿ ಈ ಕುರಿತು ನಡೆಸಬೇಕಿದೆ. ಶೀಘ್ರ ಲ್ಯಾಬ್ ಆರಂಭಿಸಲು ಪ್ರಯತ್ನಿಸಲಾಗುವುದು ಎಂದರು.

ದಕ್ಷಿಣ ಕನ್ನಡ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಗಾಯತ್ರಿ ನಾಯಕ್ ಮಾತನಾಡಿ, ಜನರು ಗಾಬರಿ ಪಡುವ ಅಗತ್ಯವಿಲ್ಲ. ಆದರೆ ಎಲ್ಲರೂ ಎಚ್ಚರಿಕೆಯಿಂದ ಮುಂಜಾಗ್ರತಾ ಕ್ರಮವನ್ನು ಅಸನುಸರಿಸಬೇಕು. ಸೋಂಕು ಇದ್ದವರು ಮಾತ್ರ ಮಾಸ್ಕ್ ಧರಿಸಿದರೆ ಸಾಕು. ಕೊರೊನಾ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ಸಾರ್ವಜನಿಕ ಸಂಪರ್ಕದಿಂದ ದೂರ ಇರಿ ಎಂದು ತಿಳಿಸಿದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ವಿದೇಶದಿಂದ ಬಂದವರಿಗೆ ಕಡ್ಡಾಯ ಹೋಮ್ ಕ್ವಾರಂಟೈನ್"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*