ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿ ಸನ್ನಿಧಿಯಲ್ಲಿ ಜನವರಿ 22ರಿಂದ ಫೆ.3ರವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವ ಹಿನ್ನೆಲೆಯಲ್ಲಿ ಬಂಟ್ವಾಳ ತಾಲೂಕಿನ ಭಕ್ತರನ್ನೊಳಗೊಂಡ ಪೂರ್ವಭಾವಿ ಸಭೆ ಬಿ.ಸಿ.ರೋಡಿನ ಹೋಟೆಲ್ ರಂಗೋಲಿಯಲ್ಲಿ ಭಾನುವಾರ ನಡೆಯಿತು.
www.bantwalnews.com Editor: Harish Mambady
26ರಂದು ಬಂಟ್ವಾಳದಿಂದ ಹೊರೆಕಾಣಿಕೆ ಮೆರವಣಿಗೆ
ಕಟೀಲು ಬ್ರಹ್ಮಕಲಶೋತ್ಸವ ಹಿನ್ನೆಲೆಯಲ್ಲಿ ಜನವರಿ 26ರಂದು ಬಂಟ್ವಾಳದಿಂದ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ ಎಂದು ಹೊರೆಕಾಣಿಕೆ ಸಮಿತಿ ಸಂಚಾಲಕ ಚಂದ್ರಹಾಸ ಶೆಟ್ಟಿ ರಂಗೋಲಿ ತಿಳಿಸಿದರು. ಮಧ್ಯಾಹ್ನ 2.30ಕ್ಕೆ ಬ್ರಹ್ಮಶ್ರೀ ನಾರಾಯಣಗುರು ವೃತ್ತದ ಸಮೀಪ ಮೈದಾನದಲ್ಲಿ ಒಟ್ಟು ಸೇರಿ ನಂತರ ಮೆರವಣಿಗೆ ಮೂಲಕ ಶ್ರೀ ಕ್ಷೇತ್ರ ತಲುಪಲಾಗುತ್ತದೆ. ಅನ್ನಪ್ರಸಾದಕ್ಕೆ ಮಲೆಬೆನ್ನೂರು, ಟೈಗರ್ ಬ್ರಾಂಡ್ ಬೆಳ್ತಿಗೆ ಅಕ್ಕಿ, ಸಕ್ಕರೆ, ಹೆಸರುಬೇಳೆ, ಕಡ್ಲೆಬೇಳೆ, ಮೆಣಸು, ದಿನಸಿ ಸಾಮಾನು, ತೆಂಗಿನಕಾಯಿ, ಸುವರ್ಣಗೆಡ್ಡೆ, ಕುಂಬಳಕಾಯಿ, ಸಿಹಿಕುಂಬಳಕಾಯಿ, ಸೌತೆ, ಬಾಳೆ ಎಲೆ, ತುಪ್ಪ, ಕರ್ಪೂರ, ಬೆಲ್ಲ, ಅವಲಕ್ಕಿ, ಎಳ್ಳೆಣ್ಣೆ, ನಾಗಮಂಡಲಕ್ಕೆ ಅಗತ್ಯವಿರುವ ಕಂಗಿನ ಹೂ ಪಿಂಗಾರ ಇತ್ಯಾದಿ ನೀಡಬಹುದು. ಅಕ್ಕಿ ಸಂಗ್ರಹ ಕಷ್ಟವಾದರೆ ಸಮಿತಿಯಿಂದ ಅಕ್ಕಿ ವ್ಯವಸ್ಥೆ ಮಾಡಲಾಗುತ್ತಿದ್ದು, 10, 25, 50, 100 ಕೆಜಿ ಅಕ್ಕಿಗೆ ತಲಾ 400, 1000, 2000, 4000 ರೂಗಳಂತೆ ಮೊತ್ತವನ್ನು ಜ.20ರೊಳಗೆ ಬಿ.ಸಿ.ರೋಡಿನ ಹೋಟೆಲ್ ರಂಗೋಲಿಯ ಹೊರೆಕಾಣಿಕೆ ಕೌಂಟರಿನಲ್ಲಿ ನೀಡಿ ರಶೀದಿ ಪಡೆಯಬಹುದು ಎಂದವರು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಆಶೀರ್ವಾದ ನೀಡಿದ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂನ ಶ್ರೀ ಗುರುದೇವಾನಂದ ಸ್ವಾಮೀಜಿ, ಬ್ರಹ್ಮಕಲಶೋತ್ಸವಕ್ಕೆ ಸೇವೆ ನಡೆಸಲು ದೊರಕಿದ ಸದವಕಾಶ ಇದಾಗಿದ್ದು, ಭಕ್ತರು ತಾಳ್ಮೆ, ಸಹನೆಯಿಂದ ಭಾಗವಹಿಸಬೇಕು. ಸ್ವಚ್ಛತೆಗೆ ಅನುಕೂಲ ಕಲ್ಪಿಸಬೇಕು, ಪ್ಲಾಸ್ಟಿಕ್ ಮುಕ್ತ ವಾತಾವರಣ ನಿರ್ಮಿಸಲು ಸಹಕರಿಸಬೇಕು. ಸ್ವಚ್ಛ ಮನಸ್ಸಿದ್ದಾಗ ಇದು ಸಾಧ್ಯವಾಗುತ್ತದೆ ಎಂದು ಹೇಳಿದರು.
ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮಾತನಾಡಿ, ಯಕ್ಷಗಾನಪ್ರಿಯ ಕಟೀಲು ಮಾತೆಯ ಸೇವೆ ಮಾಡುವ ಭಾಗ್ಯವಿದು. ಬ್ರಹ್ಮಕಲಶೋತ್ಸವ ಸಂದರ್ಭ ಪಾರ್ಕಿಂಗ್ ಗೆಂದು ಜಾಗ ಖರೀದಿ ಮಾಡುವ ಸಲುವಾಗಿ ಭಕ್ತರು ಕೈಜೋಡಿಸಬೇಕಾಗಿದ್ದು, ಮಾಣಿಲ ಶ್ರೀ ಮಹಾಲಕ್ಷ್ಮೀ ಸೇವಾ ಪ್ರತಿಷ್ಠಾನದಿಂದ 3 ಲಕ್ಷ ರೂ ನೀಡಲಾಗುವುದು ಎಂದು ಪ್ರಕಟಿಸಿದರು.
ಬಂಟ್ವಾಳ ಶಾಸಕ ಯು.ರಾಜೇಶ್ ನಾಯ್ಕ್ ಮಾತನಾಡಿ, ದೇವರಿಗೆ ಹೊರೆ ಕಾಣಿಕೆ ನೀಡುವ ಮೂಲಕ ನಮಗೆ ಸೇವೆ ಸಲ್ಲಿಸಲು ಅವಕಾಶ ದೊರೆಯುತ್ತದೆ ಎಂದರು. ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಪರಿಪೂರ್ಣವಾದ ಮನಸ್ಸಿನಿಂದ ದೇವರ ಸೇವೆ ಮಾಡೋಣ ಎಂದು ಶುಭ ಹಾರೈಸಿದರು.
ಕಟೀಲು ಲಕ್ಷ್ಮೀನಾರಾಯಣ ಆಸ್ರಣ್ಣ ಮತ್ತು ಅನಂತಪದ್ಮನಾಭ ಆಸ್ರಣ್ಣ ಶ್ರೀದೇವರ ಸನ್ನಿಧಿಯಲ್ಲಿ ನಡೆಯುವ ಬ್ರಹ್ಮಕಲಶೋತ್ಸವದ ಕುರಿತು ಮಾಹಿತಿ ನೀಡಿ, ಈ ಸಂದರ್ಭ ಕಟೀಲು ಶ್ರೀದೇವಿಯ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ದೇವರ ಪ್ರಸಾದವನ್ನು ಸ್ವೀಕರಿಸಲು ವಿನಂತಿಸಿದರು.
ಈ ಸಂದರ್ಭ ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರಪ್ರಕಾಶ ಶೆಟ್ಟಿ, ಬಿ.ಪದ್ಮಶೇಖರ ಜೈನ್, ಕಮಲಾಕ್ಷಿ ಕೆ. ಪೂಜಾರಿ, ಅನ್ನಸಂತರ್ಪಣೆ ಸಮಿತಿ ಅಧ್ಯಕ್ಷ ಗಿರಿಧರ ಶೆಟ್ಟಿ, ಕ್ರೈಸ್ತ ಸಮಾಜದ ಪ್ರತಿನಿಧಿ ಸಂದೀಪ್ ಮಿನೇಜಸ್, ಬಂಟ್ವಾಳ ಬಂಟರ ಸಂಘದ ಅಧ್ಯಕ್ಷ ವಿವೇಕ್ ಶೆಟ್ಟಿ ನಗ್ರಿಗುತ್ತು, ಧಾರ್ಮಿಕ ಮುಖಂಡ ಕೈಯೂರು ನಾರಾಯಣ ಭಟ್, ಪ್ರಮುಖರಾದ ಬೇಬಿ ಕುಂದರ್ ಉಪಸ್ಥಿತರಿದ್ದರು. ಬ್ರಹ್ಮಕಲಶೋತ್ಸವ ಹೊರೆಕಾಣಿಕೆ ಸಮಿತಿ ತಾಲೂಕು ಸಂಚಾಲಕ ಚಂದ್ರಹಾಸ ಡಿ. ಶೆಟ್ಟಿ ರಂಗೋಲಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮಣಿಮಾಲಾ ಶೆಟ್ಟಿ ಪ್ರಾರ್ಥಿಸಿದರು. ಸಾಮಾಜಿಕ ಕಾರ್ಯಕರ್ತ ತಾರಾನಾಥ ಕೊಟ್ಟಾರಿ ವಂದಿಸಿದರು. ಮುಖಂಡ ಬಿ.ದೇವದಾಸ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಇದೇ ವೇಳೆ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
Be the first to comment on "ಕಟೀಲು ಬ್ರಹ್ಮಕಲಶೋತ್ಸವ: ಬಂಟ್ವಾಳದಲ್ಲಿ ಪೂರ್ವಭಾವಿ ಸಭೆ"