ಭಂಡಾರಿ ಸಮಾಜದ ಅಭಿವೃದ್ಧಿಗೆ ಸಿಎಂ ಬಳಿಗೆ ನಿಯೋಗ: ಶಾಸಕ ರಾಜೇಶ್ ನಾಯ್ಕ್

ಸಮಾಜದಲ್ಲಿ ಸೇನೆಯ ಮೂಲಕ ಉತ್ತಮ ಹೆಸರು ಮಾಡಿಕೊಂಡಿರುವ ಭಂಡಾರಿ ಸಮಾಜವು ಸಂಖ್ಯೆಯಲ್ಲಿ ಕಡಿಮೆ ಇದೆ. ಮುಂದಿನ ದಿನಗಳಲ್ಲಿ ಬಂಟ್ವಾಳ ಭಂಡಾರಿ ಸಮಾಜದ ಅಭಿವೃದ್ಧಿಗೆ ತಮ್ಮ ನಿಯೋಗವನ್ನು ಮುಖ್ಯಮಂತ್ರಿಗಳ ಬಳಿಗೆ ಕರೆದುಕೊಂಡು ಹೋಗುವುದಾಗಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಭರವಸೆ ನೀಡಿದರು.

ಅವರು ಭಾನುವಾರ ಬಂಟ್ವಾಳದ ಅಜೆಕಲದಲ್ಲಿ ನೂತನವಾಗಿ ನಿರ್ಮಾಣಗೊಂಡ ಬಂಟ್ವಾಳ ಭಂಡಾರಿ ಸಮಾಜ ಸಂಘದ ಸಭಾಭವನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಮಾತನಾಡಿದರು. ಜಾತಿ ಸಂಘಟನೆಗಳು ಸಮಾಜದ ಕಟ್ಟಕಡೇಯ ವ್ಯಕ್ತಿಗೂ ತಲುಪಿದಾಗಲೇ ಅದರ ಅಸ್ತಿತ್ವಕ್ಕೆ ಅರ್ಥ ಬರಲು ಸಾಧ್ಯ ಎಂದರು.

ಮಾಜಿ ಸಚಿವ ಬಿ.ರಮಾನಾಥ ರೈ ಅವರು ಮಾತನಾಡಿ, ಸಾಮಾಜಿಕ ನ್ಯಾಯದಡಿಯಲ್ಲಿ ಇಂದು ಸಮಾಜದ ಪ್ರತಿಯೊಂದು ಸಮಾಜಗಳು ಮುಖ್ಯವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದು, ಭಂಡಾರಿ ಸಮಾಜವೂ ತನ್ನ ಅವಕಾಶಗಳನ್ನು ಬಳಸಿಕೊಂಡು ಸಾಕಷ್ಟು ಸಾಧನೆ ಮಾಡಿದೆ. ಈ ಸಮಾಜದ ಅಭಿವೃದ್ಧಿಗೆ ತನ್ನ ಸಹಕಾರವನ್ನೂ ನೀಡುತ್ತೇನೆ ಎಂದರು.

ಲೀಲಾವತಿ ಸದಾಶಿವ ಭಂಡಾರಿ ಹೊಸ್ಮಾರು ಅವರು ಸಭಾಭವನವನ್ನು ಉದ್ಘಾಟಿಸಿದರು. ಬೇಬಿ ಐಶಾನಿ ಅನೂಪ್‌ಕುಮಾರ್ ಮುಖ್ಯದ್ವಾರ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ದಿವಾಕರ ಶಂಭೂರು ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಸಭಾಭವನ ನಿರ್ಮಾಣಕ್ಕೆ ಸಹರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ವೇದಿಕೆಯಲ್ಲಿ ಮಂಗಳೂರು ಭಂಡಾರಿ ಸಂಘದ ಅಧ್ಯಕ್ಷ ರಘುವೀರ್ ಭಂಡಾರಿ, ಕಾರ್ಕಳ ಭಂಡಾರಿ ಸಂಘದ ಅಧ್ಯಕ್ಷ ಶೇಖರ್ ಭಂಡಾರಿ, ಬಂಟ್ವಾಳ ಸಂಘದ ಗೌರವಾಧ್ಯಕ್ಷ ಬಾಬು ಭಂಡಾರಿ ಅಜೆಕಲ, ಮಾಜಿ ಅಧ್ಯಕ್ಷರಾದ ಕನ್ಯಾನ ಪೂವಪ್ಪ ಭಂಡಾರಿ, ಸುಂದರ ಭಂಡಾರಿ ರಾಯಿ, ಪುಷ್ಪಾ ಸಂಜೀವ ಭಂಡಾರಿ, ಪದ್ಮಾವತಿ ವಿಠಲ ಭಂಡಾರಿ, ಸಂಘದ ಕಾರ್ಯದರ್ಶಿ ಸದಾಶಿವ ನಂದೊಟ್ಟು, ಮಹಿಳಾ ಘಟಕದ ಅಧ್ಯಕ್ಷೆ ದಾಕ್ಷಾಯಿಣಿ ನಾಗೇಶ್, ಯುವ ವೇದಿಕೆ ಅಧ್ಯಕ್ಷ ಡಾ| ಪ್ರಶಾಂತ್ ಕಲ್ಲಡ್ಕ ಉಪಸ್ಥಿತರಿದ್ದರು.