- ಹರೀಶ ಮಾಂಬಾಡಿ
email: bantwalnews@gmail.com Phone: 9448548127
‘ಮನೇಲಿದ್ದೇನಲ್ಲಾ, ಏನೋ ತಪ್ ಮಾಡ್ತೀನಿ ಎಂಬ ಗಿಲ್ಟೀ ಫೀಲಿಂಗ್..’
ತಾಯಿ ಕರೆ ಮಾಡಿದಾಗ ಮಗ ಉತ್ತರಿಸುವುದು ಹೀಗೆ. ಹೀಗನ್ನುತ್ತಲೇ ರಾಕಿ ತಾನು ಮನೆಯಲ್ಲಿ ಒಂಟಿಯಾಗಿ ಕುಳಿತುಕೊಳ್ಳುವುದೇ ಮಹಾಪರಾಧ, ಸೋಮಾರಿಗಳ ಕೆಲಸ ಎಂಬಂತೆ ಭಾವಿಸುತ್ತಾನೆ. ಚಡಪಡಿಸುತ್ತಾನೆ. ಹಾಡು ಕೇಳುತ್ತಾನೆ. ನ್ಯೂಸ್ ನೋಡುತ್ತಾನೆ. ಕೆಲ ಹೊತ್ತಿನ ಬಳಿಕ ಕಾಲಿಂಗ್ ಬೆಲ್ ಸದ್ದಾಗುತ್ತದೆ. ಆಗ ಅಲ್ಲಿ ಪ್ರವೇಶಿಸುವ ಎರಡು ಪಾತ್ರಗಳು ಕಥೆಯನ್ನು, ರಾಕಿಯ ಆಲೋಚನೆಗಳನ್ನು ಬದಲಾಯಿಸುತ್ತವೆ. ನಂತರ ನಡೆಯುವ ವಿದ್ಯಮಾನವನ್ನು ನೀವು ನೋಡಿದರೇ ಚೆನ್ನಾಗಿರುತ್ತದೆ.
ವೇಗದ ಜಗತ್ತಿನ ನಡಿಗೆ ನಮ್ಮನ್ನು ವಾಸ್ತವದಿಂದ ದೂರ ಮಾಡುತ್ತಿದೆಯೇನೋ ಎಂದು ಯೋಚಿಸಲು ಪ್ರೇರಣೆ ನೀಡುವಂತಿದೆ ಚಿತ್ರಕತೆ. ಮೊಬೈಲ್ ನಲ್ಲಿ ಜಗತ್ತನ್ನೇ ಕಾಣುವ ಇಂದಿನ ದಿನಗಳಲ್ಲಿ, ಟಿ.ವಿ. ಸ್ವಿಚ್ ಆನ್ ಮಾಡಿದರೆ, ಸುದ್ದಿಯ ಮಹಾಪೂರವನ್ನೇ ಕಾಣುವ ಸಂದರ್ಭ, ಚಿತ್ರದ ಕೊನೆಯ ದೃಶ್ಯದಲ್ಲಿ ರಾಕಿ, ಬಾಗಿಲು ತೆರೆದು ಬಂದವರನ್ನು ಹುಡುಕುವುದು, ಆ ಸಂದರ್ಭ ಗೇಟಿನಲ್ಲಿ ವೃತ್ತಪತ್ರಿಕೆ ಮಡಿಸಿಟ್ಟಿರುವುದು, ಹಳೆಯ ಹೊಸತರ ಸಂಗಮವನ್ನು ಸಾಂಕೇತಿಕವಾಗಿ ಬಣ್ಣಿಸುತ್ತದೆ.
ಮನೆಯಲ್ಲಿ ಕುಳಿತು ಒಂಟಿತನ ಬೋರ್ ಆದಾಗ ಹಾಡುಗಳನ್ನು ಬದಲಾಯಿಸುವ ರಾಕಿ ಮನಸ್ಥಿತಿಯನ್ನು ತೋರಿಸುವ ದೃಶ್ಯಾವಳಿಗಳು ಸ್ವಲ್ಪ ಹೆಚ್ಚಾಯಿತು ಅಂದುಕೊಂಡರೂ ಬಳಿಕ ಸುಂದರ್, ಕುಮುದವಲ್ಲಿ ಪ್ರವೇಶವಾದೊಡನೆ ನಾವೂ ಕತೆಯೊಳಗೊಂದಾಗುತ್ತೇವೆ. ತೀರಾ ಭಾವುಕ ವ್ಯಕ್ತಿಗಳ ಕಣ್ಣಿಂದ ಹನಿಯೊಂದು ಬೀಳುವಂತೆ ಮಾಡುವ ಕೆಪ್ಯಾಸಿಟಿಯೂ ಕೆಲ ದೃಶ್ಯಗಳಿಗಿದೆ ಎನ್ನುವುದು ಪ್ಲಸ್ ಪಾಯಿಂಟ್. ಅಭಿನಂದನೆಗಳು ನಿರ್ಮಾಪಕ, ನಿರ್ದೇಶಕ ಅರವಿಂದ ಕೌಶಿಕ್, ನಿರ್ಮಾಪಕರಾದ ಶಿಲ್ಪಾ ಅರವಿಂದ್, ನವೀನ್ ಸಾಗರ್ ಅವರಿಗೆ. ಪ್ರಬುದ್ಧ ನಟನಾಗಿ ರಾಕೇಶ್ ಮಯ್ಯ ಇಷ್ಟವಾಗುತ್ತಾರೆ. ಅರ್ಜುನ್ ಸಂಗೀತ ಮುದ ನೀಡುತ್ತದೆ. ಪುಷ್ಪಾ ಅನಿಲ್ ಧ್ವನಿಯಲ್ಲೇ ಕತೆಯ ಮುಖ್ಯ ಪಾತ್ರಗಳಲ್ಲೊಂದಾಗುತ್ತಾರೆ. ಸತ್ವ ಮೀಡಿಯಾದಿಂದ ಇಂಥ ಇನ್ನಷ್ಟು ಸತ್ವಯುತವಾದ ಕಿರುಚಿತ್ರಗಳು ಹೊರಬರಲಿ.
ಇದು ಬಿಸಿಬೇಳೆಬಾತ್ ಟೀಸರ್.. ಕ್ಲಿಕ್ ಮಾಡಿರಿ.
Be the first to comment on "ಶಿಥಿಲ ಸಂಬಂಧಗಳ ಕತೆ ಹೇಳುವ ಬಿಸಿ ಬೇಳೆ ಬಾತ್"