ಕೃಷಿ ಅಭಿಯಾನ ಪರಿಣಾಮಕಾರಿಯಾಗಿರಲಿ: ಶಾಸಕ ರಾಜೇಶ್ ನಾಯ್ಕ್ ಸಲಹೆ

ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ ವತಿಯಿಂದ “ಇಲಾಖೆಗಳ ನಡಿಗೆ ರೈತರ ಬಾಗಿಲಿಗೆ” ಮೂರು ದಿನಗಳ ಕಾಲ ನಡೆಯುವ ಬಂಟ್ವಾಳ ತಾಲೂಕು ಮಟ್ಟದ ಕೃಷಿ ಅಭಿಯಾನ ೨೦೧೯-೨೦ಕ್ಕೆ ಸೋಮವಾರ ಬಿ.ಸಿ.ರೋಡಿನ ತಾಲೂಕು ಪಂಚಾಯತ್ ಆವರಣದಲ್ಲಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಚಾಲನೆ ನೀಡಿದರು.

ಈ ಸಂದರ್ಭ ಮಾತನಾಡಿದ ಅವರು ಅಭಿಯಾನ ಪರಿಣಾಮಕಾರಿಯಾಗಿ ನಡೆಯಲಿ, ಕೇವಲ ಘೋಷಣೆಗಳನ್ನು ಕೂಗುವುದರಿಂದಷ್ಟೇ ಅಲ್ಲ, ರೈತರಿಗೆ ನಿಜಾರ್ಥದಲ್ಲಿ ಅಭಿಯಾನ ತಲುಪಬೇಕು ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.

ಕೃಷಿ ಕ್ಷೇತ್ರದಲ್ಲಿ ಅಭಿವೃದ್ಧಿಹೊಂದಲು ಸರಕಾರವು ಇಸ್ರೇಲ್ ಮಾದರಿಯ ಕೃಷಿ ಯೋಜನೆಯನ್ನು ರೂಪಿಸಿದೆ. ಆದರೆ, ಯೋಜನೆಯಡಿ ದ.ಕ. ಹಾಗೂ ಉಡುಪಿ ಜಿಲ್ಲೆಗಳನ್ನು ಕೈಬಿಟ್ಟಿರುವುದು ಖೇದಕರ ಎಂದು ಬೇಸರ ವ್ಯಕ್ತಪಡಿಸಿದರು.

ಇದು ಇಸ್ರೇಲ್ ಮಾದರಿಯ ಕೃಷಿ ತಂತ್ರಜ್ಞಾನಕ್ಕೆ ಸೂಕ್ತವಾದ ಕೃಷಿ ಪ್ರದೇಶವಾಗಿದೆ. ಈ ಯೋಜನೆಯನ್ನು ತಮ್ಮ ಜಿಲ್ಲೆಗಳಿಗೆ ವಿಸ್ತರಿಸುವಂತೆ ಮುಖ್ಯಮಂತ್ರಿ ಅವರೊಂದಿಗೆ ಚರ್ಚೆ ಮಾಡಿದ್ದು, ಮುಂದಿನ ಬಜೆಟ್‌ನಲ್ಲಿ ಸೇರಿಸುವ ಭರವಸೆ ನೀಡಿದ್ದಾರೆ ಎಂದವರು ಹೇಳಿದರು.