ಪ್ರಮುಖ ಸುದ್ದಿಗಳು

ಶ್ರೀಕ್ಷೇತ್ರ ಗೋಕರ್ಣದಲ್ಲಿ ನಿತ್ಯ, ನಿರಂತರ ಕಲಾಸೇವೆ: ರಾಘವೇಶ್ವರ ಶ್ರೀಗಳು

ಹೊನ್ನಾವರ: ಶ್ರೀಕ್ಷೇತ್ರ ಗೋಕರ್ಣದ ಸರ್ವಾಂಗೀಣ ಅಭಿವೃದ್ಧಿ ಪರ್ವದಲ್ಲಿ ಹೊಸ ಶಖೆಯೊಂದು ಆರಂಭವಾಗುತ್ತಿದ್ದು, ನಾಡಿನ ಕಲಾವಿದರು ಶ್ರೀ ಮಹಾಬಲೇಶ್ವರನಿಗೆ ನಿರಂತರ ಕಲಾಸೇವೆ ಸಮರ್ಪಿಸಲು ಅನುವಾಗುವಂತೆ ದೇವಾಲಯ ಆವರಣದಲ್ಲಿ “ಶಿವಪದ” ವೇದಿಕೆ ಈ ತಿಂಗಳ 8ರಂದು ಲೋಕಾರ್ಪಣೆಯಾಗುತ್ತಿದೆ.

ಜಾಹೀರಾತು

ಜಗತ್ತಿನ ಏಕೈಕ ಎನಿಸಿದ ಆತ್ಮಲಿಂಗವನ್ನು ಸ್ವತಃ ಸ್ಪರ್ಶಿಸಿ ಪೂಜಿಸಲು ಭಕ್ತರಿಗೆ ಅವಕಾಶ ಇರುವಂತೆ, ಶ್ರೀ ಸನ್ನಿಧಿಯಲ್ಲಿ ಕಲಾವಿದರು ಅನುದಿನವೂ, ಅನುಕ್ಷಣವೂ ನಾದ- ನಾಟ್ಯದ ಮೂಲಕ ಶ್ರೀಮಹಾಬಲೇಶ್ವರನನ್ನು ಆರಾಧಿಸಲು ಇದು ವೇದಿಕೆಯಾಗಲಿದೆ ಎಂದು  ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಗೋಕರ್ಣ ಮಹಾಬಲೇಶ್ವರ ಸೇವಾ ಸಂತುಷ್ಟ, .ಶ್ರದ್ಧಾಸಂತುಷ್ಟ. ಕೋಟಿ ಹೊನ್ನು ಕಂಡು ಹರಸುವ ಹರನಲ್ಲ; ಬದಲಾಗಿ ಒಂದು ಗಾನಕ್ಕೆ, ಒಂದು ನಾಟ್ಯಕ್ಕೆ ಸುಪ್ರೀತನಾಗಿ ಒಲಿಯುವ ಓಂಕಾರೇಶ್ವರ ಎಂಬ ಪ್ರತೀತಿ. ಈ ಕಾರಣದಿಂದಲೇ ನಾಡಿನ ಕಲಾವಿದರಿಗೆ ನಿತ್ಯ ನಿರಂತರ ಕಲೋಪಾಸನೆಗೆ ಅವಕಾಶ ಕಲ್ಪಿಸುವ ಸಂಕಲ್ಪದಿಂದ ವೇದಿಕೆ ಸಜ್ಜಾಗಿದೆ.

8ರಂದು ಸಂಜೆ 5ಕ್ಕೆ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀಮಹಾಸ್ವಾಮಿಗಳು ಈ ಕಲಾವೇದಿಕೆ ಲೋಕಾರ್ಪಣೆ ಮಾಡುವರು. ಇದಕ್ಕೂ ಮುನ್ನ ವೇದಘೋಷದೊಂದಿಗೆ ಭವ್ಯ ಮೆರವಣಿಗೆಲ್ಲಿ ನಟರಾಜನನ್ನು ವೇದಿಕೆಗೆ ಕರೆ ತರಲಾಗುತ್ತದೆ. ಕಲಾವಿದರಿಗೆ ಅನುದಿನವೂ ಮುಕ್ತವಾಗಿರುವ ವೇದಿಕೆಯ ಲೋಕಾರ್ಪಣೆ ಸಂದರ್ಭದಲ್ಲಿ ಧಾರವಾಡದ ಪಂಡಿತ ವೆಂಕಟೇಶ ಕುಮಾರ್ ಸಂಗೀತ ರಸಧಾರೆ ಹರಿಸುವರು. ತಬಲಾದಲ್ಲಿ ಕೇಶವ ಜೋಶಿ ಸಹಕರಿಸುವರು.

ಅಭಿವೃದ್ಧಿ ಪಥ

ಶ್ರೀಕ್ಷೇತ್ರ ಗೋಕರ್ಣ ಶ್ರೀರಾಮಚಂದ್ರಾಪುರ ಮಠದ ಆಡಳಿತಕ್ಕೆ ಒಳಪಟ್ಟ ಬಳಿಕ ಕಳೆದೊಂದು ದಶಕದಲ್ಲಿ ಅಪಾರ ಅಭಿವೃದ್ಧಿ ಕಾರ್ಯಗಳು ನಡೆದಿದ್ದು, ಶ್ರೀಕ್ಷೇತ್ರದಲ್ಲಿ ಪುರಾಣಕಾಲದ ಗತವೈಭವ ಮರುಕಳಿಸಿದೆ. ಜಗದೀಶ್ವರನ ಸುಪ್ರಸನ್ನತೆ, ಭಕ್ತರ ಮನಃಸಂತೋಷ ಹಾಗೂ ಆಶ್ರಿತರಿಗೆ ಹಿತ ಎಂಬ ಮೂರು ಧ್ಯೇಯಗಳನ್ನು ಕೇಂದ್ರೀಕರಿಸಿ ಅಭಿವೃದ್ಧಿ ಕಾರ್ಯಗಳು ಶರವೇಗದಲ್ಲಿ ನಡೆಯುತ್ತಿವೆ.

ಧಾರ್ಮಿಕ, ಸಾಮಾಜಿಕ, ದೇಗುಲ ಪರಿಸರ ಹೀಗೆ ವಿಭಿನ್ನ ಆಯಾಮಗಳಲ್ಲಿ ಗಣನೀಯ ಸುಧಾರಣೆಗಳು ಆಗಿವೆ. ಧಾರ್ಮಿಕವಾಗಿ ಗೋಕರ್ಣ ಗೌರವ ಎಂಬ ವಿಶೇಷ ಕಾರ್ಯಕ್ರಮದಡಿ ದೇಶದ ಮೂಲೆ ಮೂಲೆಗಳಿಂದ ಯತಿಗಳನ್ನು ಆಮಂತ್ರಿಸಿ ದಿನಕ್ಕೊಬ್ಬರು ಯತಿಗಳಿಂದ ವಿಶೇಷ ಪೂಜೆಗಳು ನಿರಂತರ 600 ದಿನ ನಡೆದಿದ್ದು ವಿಶೇಷ.

ಸಮಸ್ತ ಭಕ್ತಕೋಟಿಯ ಈ ಅಪೂರ್ವ ಶ್ರದ್ಧಾ-ಭಕ್ತಿಯ ಕೇಂದ್ರದಲ್ಲಿ ಕೈಯಲ್ಲಿ ಚಿಕ್ಕಾಸು ಇಲ್ಲದವರು ಕೂಡಾ ಧರ್ಮದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿದ್ದು, ಸಮಾಜದ ಕಟ್ಟಕಡೆಯ ವ್ಯಕ್ತಿ ಕೂಡಾ ಗರ್ಭಗುಡಿಯಲ್ಲಿ ಆತ್ಮಲಿಂಗವನ್ನು ಸ್ಪರ್ಶಿಸಿ ಧನ್ಯತಾ ಭಾವದಿಂದ ಮನಃಶಾಂತಿ ಪಡೆಯುವಂತಾಗಬೇಕು ಎಂಬ ಶ್ರೀರಾಘವೇಶ್ವರ ಭಾರತೀಮಹಾಸ್ವಾಮಿಗಳ ಆಶಯ ಸಾಕಾರಗೊಂಡಿದೆ.

ಸೈನಿಕರನ್ನು, ನಿವೃತ್ತ ಯೋಧರಿಗೆ ವಿಶೇಷ ಗೌರವ ಸಲ್ಲಿಸುವ ಮೇಲ್ಪಂಕ್ತಿಯನ್ನು ಶ್ರೀಕ್ಷೇತ್ರ ಹಾಕಿಕೊಟ್ಟಿದ್ದು, ದೇಶಕಾಯುವ ಕಾಯಕಯೋಗಿಗಳಿಗೆ ನೇರವಾಗಿ ದರ್ಶನ ಪಡೆಯುವ ಅವಕಾಶ ಕಲ್ಪಿಸಲಾಗಿದೆ. ದೇಶದ ವಿವಿಧೆಡೆಗಳಿಂದ ಪ್ರತಿದಿನ ಆಗಮಿಸುವ ಗಣ್ಯಮಾನ್ಯರು, ನ್ಯಾಯಮೂರ್ತಿಗಳು, ಭಕ್ತರಿಗೆ ಕಲ್ಪಿಸಿರುವ ಸೌಲಭ್ಯದ ಬಗ್ಗೆ ಮೆಚ್ಚುಗೆಯ ನುಡಿಗಳನ್ನು ಸಂದರ್ಶಕರ ಅಭಿಪ್ರಾಯದಲ್ಲಿ ದಾಖಲಿಸಿರುವುದು, ಇಲ್ಲಿನ ಅಚ್ಚುಗಟ್ಟುತನಕ್ಕೆ ದೊರಕಿರುವ ಐಎಸ್‍ಓ ಮಾನ್ಯತೆಗಿಂತಲೂ ದೊಡ್ಡ ಪ್ರಮಾಣಪತ್ರ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದು.

ಆದಿಗೋಕರ್ಣ ಸಂರಕ್ಷಣಾ ಪುನರ್ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ನಂದಿಮಂಟಪದಲ್ಲಿ ವಿಸ್ತಾರ ರಜತದ್ವಾರದ ಮೊದಲ ಹಂತದ ಕಾಮಗಾರಿ 70 ಲಕ್ಷ ರೂಪಾಯಿ ವೆಚ್ಚದಲ್ಲಿ ಪೂರ್ಣಗೊಂಡಿದೆ. ಅಂತೆಯೇ ಗರ್ಭಗುಡಿಗೆ ಕೂಡಾ ಅಷ್ಟೇ ವೆಚ್ಚದಲ್ಲಿ ರಜತ ದ್ವಾರ ನಿರ್ಮಿಸಲಾಗಿದೆ.

ಅತ್ಯಾಧುನಿಕ ಬಾಯ್ಲರ್ ವ್ಯವಸ್ಥೆ ಕಲ್ಪಿಸಿ, ಶುಚಿ ರುಚಿಯಾದ ಅಮೃತಾನ್ನ ಪ್ರಸಾದ ಭೋಜನ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದ್ದು, 40 ಲಕ್ಷಕ್ಕೂ ಹೆಚ್ಚು ಭಕ್ತರು ಪ್ರಸಾದ ಭೋಜನ ಸ್ವೀಕರಿಸಿದ್ದಾರೆ. ಮಧ್ಯಾಹ್ನ ಹಾಗೂ ರಾತ್ರಿ ಹೀಗೆ ಎರಡು ಹೊತ್ತು ಉಚಿತ ಪ್ರಸಾದ ಭೋಜನ ಇರುವ ಜಿಲ್ಲೆಯ ಪ್ರಥಮ ದೇಗುಲ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ಸಾಮಾಜಿಕವಾಗಿಯೂ ಹತ್ತುಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಕಳೆದ ನಾಲ್ಕು ವರ್ಷಗಳಲ್ಲಿ 75 ಲಕ್ಷಕ್ಕೂ ಅಧಿಕ ಬಡವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗಿದೆ. ಬೇಸಿಗೆಯಲ್ಲಿ ನೀರಿನ ಕೊರತೆ ಎದುರಿಸುತ್ತಿರುವ ಗ್ರಾಮಗಳ ಜನತೆಯ ಸಂಕಷ್ಟಕ್ಕೆ ಸ್ಪಂದಿಸಿ ಜೀವಜಲ ಉಚಿತ ವಿತರಣಾ ಸೇವೆ ಒದಗಿಸಲಾಗುತ್ತಿದೆ. ಸ್ಥಳೀಯ ಅನಾರೋಗ್ಯಪೀಡಿತರಿಗೆ ವೈದ್ಯಕೀಯ ನೆರವು, ಆರ್ಥಿಕವಾಗಿ ಹಿಂದುಳಿದ ವಧೂವರರಿಗೆ ಉಚಿತ ವಿವಾಹ ವ್ಯವಸ್ಥೆ ಶ್ರೀಕ್ಷೇತ್ರದ ಮಾನವೀಯ ಕಾರ್ಯಗಳಿಗೆ ಕೆಲ ನಿದರ್ಶನ ಎಂದು ಹೇಳಿದರು.

ಗೋಕರ್ಣ ದೇವಾಲಯದ ಪದನಿಮಿತ್ತ ಆಡಳಿತಾಧಿಕಾರಿ ಜಿ.ಕೆ.ಹೆಗಡೆ, ಶಿವಪದ ವೇದಿಕೆ ಪದಾಧಿಕಾರಿಗಳಾದ ಡಾ.ಶೀಲಾ ಹೊಸಮನೆ, ಡಾ.ಎಂ.ಜಿ.ಉಪಾಧ್ಯಾಯ, ಮಹೇಶ್ ಶೆಟ್ಟಿ, ರಮೇಶ್ ಪಂಡಿತ್ ಉಪಸ್ಥಿತರಿದ್ದರು.

 

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts