ದಕ್ಷಿಣ ಕನ್ನಡಕ್ಕೆ ಆಗಮಿಸುವವರು ಧರ್ಮಸ್ಥಳ, ಸುಬ್ರಹ್ಮಣ್ಯ, ಕಟೀಲು ಸಹಿತ ಹಲವು ತೀರ್ಥಕ್ಷೇತ್ರಗಳಿಗೆ ಭೇಟಿ ನೀಡುತ್ತಾರೆ. ಆದರೆ ದೇವಸ್ಥಾನಗಳ ಹತ್ತಿರ ಇರುವ ನದಿಯಲ್ಲಿ ನೀರಿನ ಕೊರತೆ ಇದೆ. ತೀರ್ಥಸ್ನಾನ ಮಾಡಲೂ ಅಸಾಧ್ಯವಾಗುವಂಥ ಪರಿಸ್ಥಿತಿ. ಜಿಲ್ಲೆಯಲ್ಲಿ ಬರದ ಪರಿಸ್ಥಿತಿ ಇರುವಾಗ ಊರಿಗೆ ಬಂದವರು ಏನು ಮಾಡುವುದು?
ಹೀಗಾಗಿಯೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೀರಿನ ಅಭಾವವಿದ್ದು, ನೇತ್ರಾವತಿಯಲ್ಲೂ ನೀರಿನ ಮಟ್ಟ ಗಣನೀಯವಾಗಿ ಇಳಿಕೆಯಾಗಿದೆ. ಆದುದರಿಂದ ಧರ್ಮಸ್ಥಳಕ್ಕೆ ಬರುವ ಯಾತ್ರಾರ್ಥಿಗಳು ಸ್ವಲ್ಪ ದಿನಗಳ ಮಟ್ಟಿಗೆ ಪ್ರವಾಸ ಮುಂದೂಡಿ ಎಂದು ಶ್ರೀ ಕ್ಷೇತ್ರದ ಧರ್ಮಾಧಿಕಾರಿ ಡಾ. ಡಿ. ವಿರೇಂದ್ರ ಹೆಗ್ಗಡೆ ಮನವಿ ಮಾಡಿದ್ದಾರೆ.
ಶುಕ್ರವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಧರ್ಮಸ್ಥಳದ ಧರ್ಮಾಧಿಕಾರಿ ‘ಬೇಸಿಗೆ ಬಿಸಿಲಿನಿಂದ ದೇಶಾದ್ಯಂತ ನೀರಿನ ಅಭಾವ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅದೇ ರೀತಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಜನತೆ ನೀರಿಗಾಗಿ ಪರಿತಪಿಸುತ್ತಿದ್ದಾರೆ. ಈಗಾಗಲೇ ರೇಶನಿಂಗ್ ಮೂಲಕ ಕುಡಿಯುವ ನೀರನ್ನು ಜಿಲ್ಲಾಡಳಿತ ನೀಡುತ್ತಿರುವುದೇ ಇದಕ್ಕೆ ಸಾಕ್ಷಿ. ಧರ್ಮಸ್ಥಳ ಕ್ಷೇತ್ರದಲ್ಲೂ ನೀರಿನ ಸಮಸ್ಯೆ ಉಲ್ಬಣಿಸಿದ್ದು, ಜತೆಗೆ ನೇತ್ರಾವತಿ ನದಿಯಲ್ಲೂ ನೀರಿನ ಹರಿವು ತೀವ್ರವಾಗಿ ಕಡಿಮೆಯಾಗುತ್ತಿದೆ. ಆದ್ದರಿಂದ ಭಕ್ತಾದಿಗಳು ಹಾಗೂ ಪ್ರವಾಸಿಗರು ಕೆಲ ದಿನಗಳ ಮಟ್ಟಿಗೆ ತಮ್ಮ ಪ್ರವಾಸವನ್ನು ಮುಂದೂಡಿ ಸಹಕರಿಸಿ ಎಂದು ಡಾ. ಡಿ. ವೀರೇಂದ್ರ ಹೆಗ್ಗಡೆ ವಿನಂತಿ ಮಾಡಿದ್ದಾರೆ.
Be the first to comment on "ನದಿಯಲ್ಲಿ ನೀರಿಲ್ಲ – ದ.ಕ.ಜಿಲ್ಲೆಗೆ ಬರುವ ಪ್ರವಾಸಿಗರೇ ಬರುವ ಮುನ್ನ ಯೋಚಿಸಿ"