ರಾಜ್ಯಕ್ಕೆ 19 ಮಂದಿ ಉಗ್ರರು ನುಸುಳಿದ್ದಾರೆ ಎಂದು ಹುಸಿ ಕರೆ ಮಾಡಿದ ಈಗ ಲಾರಿ ಚಾಲಕನಾಗಿ ಕೆಲಸ ಮಾಡುತ್ತಿರುವ ನಿವೃತ್ತ ಸೈನಿಕರೊಬ್ಬರನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ. 65 ರ ಹರೆಯದಸ್ವಾಮಿ ಸುಂದರ ಮೂರ್ತಿ ಬಂಧನಕ್ಕೊಳಗಾಗಿದ್ದು, ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದರು.ಉಗ್ರರು ನಸುಳಿರುವ ಕುರಿತು ಈ ವ್ಯಕ್ತಿ ಕರೆ ಮಾಡಿದ ಬೆನ್ನಲ್ಲೇ ಜಾಗೃತರಾದ ಕೋಲಾರ ಮತ್ತು ಬೆಂಗಳೂರು ಪೊಲೀಸರು ವಿಶೇಷ ತಂಡ ರಚಿಸಿ ಕಾರ್ಯಾಚರಣೆ ಗಿಳಿದಿದ್ದರು.
ಬೆಂಗಳೂರು ಹೊರವಲಯದ ಅವಲಹಳ್ಳಿ ಎಂಬಲ್ಲಿ ಸುಂದರ ಮೂರ್ತಿಯನ್ನು ಬಂಧಿಸಿದ್ದಾರೆ. ಸುಂದರಮೂರ್ತಿ ಅವರು 19 ಉಗ್ರರು ತಮಿಳುನಾಡಿನ ರಾಮಾನಾಥಪುರಂನಲ್ಲಿ ಅಡಗಿದ್ದಾರೆ ಎಂದು ಕರೆ ಮಾಡಿದ್ದರು. ಕರೆ ಬಂದ ಬಳಿಕ ಡಿಜಿ-ಐಜಿಪಿ ಅವರು ಎಲ್ಲಾ ಕಡೆಗಳಿಗೆ ಕರೆ ಮಾಡಿ ಭದ್ರತಾ ಕ್ರಮಗಳನ್ನು ಕೈಗೊಂಡಿದ್ದರು.
ಆದರೂ ಶ್ರೀಲಂಕಾದಲ್ಲಿ ಭಯೋತ್ಪಾದಕ ದಾಳಿಯ ನಂತರ ಉದ್ಭವಿಸಿರುವ ಆತಂಕ ಪರಿಸ್ಥಿತಿಯ ಹಿನ್ನ್ನೆಲೆಯಲ್ಲಿ ರಾಜ್ಯಾದ್ಯಂತ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಕರಾವಳಿ ಕಾವಲು ಪೊಲೀಸರಿಂದ ಸಮುದ್ರಗಸ್ತು ತೀವ್ರಗೊಂಡಿದೆ.
ಆಂತರಿಕ ಭದ್ರತಾ ವಿಭಾಗದ(ಐಎಸ್‌ಡಿ) ಡಿಜಿಪಿ ಎ.ಎಮ್.ಪ್ರಸಾದ್ ಹಾಗೂ ಎಡಿಜಿಪಿ ಸಿ.ಎಚ್ ಪ್ರತಾಪರೆಡ್ಡಿ ಅವರು ಉಡುಪಿಗೆ ಭೇಟಿ ನೀಡಿ ಸಮುದ್ರದಲ್ಲಿ ಇಂಟರ್‌ಸೆಪ್ಟರ್ ಬೋಟ್‌ನಲ್ಲಿ ಶುಕ್ರವಾರ ಪ್ಯಾಟ್ರೋಲಿಂಗ್ ನಡೆಸಿದ್ದರು.
ರಾಜ್ಯ ಕರಾವಳಿಯ ಮಂಗಳೂರಿನಿಂದ ಕಾರವಾರದ ತನಕ ಬಿಗಿ ಭದ್ರತೆ, ಸಮುದ್ರತೀರದ ಆಯಕಟ್ಟಿನ ಸ್ಥಳಗಳಲ್ಲಿ ಗಸ್ತು ಆರಂಭ ಸೇರಿದಂತೆ ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧರಿರುವಂತೆ ಅವರು ಕರಾವಳಿ ಕಾವಲು ಪಡೆಗೆ ಸೂಚನೆ ನೀಡಿದ್ದಾರೆ
Be the first to comment on "ಉಗ್ರರ ಕುರಿತು ಹುಸಿ ಕರೆ, ಆದರೂ ಹೈ ಅಲರ್ಟ್"