ಕೌಟುಂಬಿಕ ಸಂಬಂಧಕ್ಕೂ ಪಾಶ್ಚಾತ್ಯರ ಕರಿನೆರಳು

ಮಾನವ ಸಂಬಂಧಗಳ ವಿಶ್ಲೇಷಣೆ ತುಂಬಾ ಸೂಕ್ಷ್ಮ ವಿಚಾರ. ಕೌಟುಂಬಿಕ ಭಿನ್ನಾಭಿಪ್ರಾಯ, ಪೂರ್ವಾಗ್ರಹಪೀಡಿತ ಮನಸ್ಸುಗಳಿಂದ ಸಂಬಂಧಗಳು ಹಳಸುತ್ತವೆ. ಜೊತೆಗೆ ಇಡೀ ವ್ಯವಸ್ಥೆಗೂ ಬುಡಮೇಲಾಗುತ್ತದೆ.

  • ಹರೀಶ ಮಾಂಬಾಡಿ
  • ಅಂಕಣ – ವಾಸ್ತವ at www.bantwalnews.com

ಇದೊಂದು ಪತ್ರಿಕಾ ವರದಿ. ಬಳಕೆದಾರರ ಪರ ಸದಾ ನಿಲ್ಲುವ ಹಿರಿಯ ಸ್ನೇಹಿತ ಡಿ.ಕೆ. ಭಟ್ ಮೊನ್ನೆ ಗಮನ ಸೆಳೆದಿದ್ದರು. ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿ ಪ್ರಕಟವಾಗಿದ್ದ (ಇತರೆಡೆಯೂ ಬಂದಿರುತ್ತೆ) ವರದಿ ಹೀಗಿತ್ತು. ಅದರ ಸಂಗ್ರಹಿತ ವಿವರ ಹೀಗಿದೆ.

ಜಾಹೀರಾತು

ಕೋಲ್ಕತ್ತದ ಹೈಕೋರ್ಟಿನ ಇತ್ತೀಚಿನ ಆದೇಶ ಸಾವಿರಾರು ವೃದ್ಧರ ಪಾಲಿಗೆ ಆಶಾಕಿರಣವಾಗಿದೆ. ಇದು ಮನೆಯಿಂದ ಹೊರ ಹಾಕಲ್ಪಟ್ಟ ವೃದ್ಧರಿಗೆ ಅನ್ವಯಿಸುತ್ತದೆ. ತಾವೇ ಕಟ್ಟಿದ ಮನೆಯಿಂದ, ತಮ್ಮದೇ ಮಕ್ಕಳು ಹೊರ ಹಾಕಿ, ವೃದ್ಧಾಶ್ರಮಕ್ಕೆ ಸೇರಿಸುವ ಪರಿಪಾಠ ಇಂದಿನ ದಿನಗಳಲ್ಲಿ ನಾವು ಕೇಳುತ್ತಿದ್ದೇವೆ. ಕೋಲ್ಕತ್ತಾ ಹೈಕೋರ್ಟು ಇಂಥ ವಿಚಾರವನ್ನು ತುಂಬಾ ಗಂಭೀರವಾಗಿ ತೆಗೆದುಕೊಂಡಿದೆ. ತನ್ನ ಹೆತ್ತವರ ಮನೆಯಲ್ಲಿ ಮಕ್ಕಳು ವಾಸಿಸುತ್ತಿದ್ದರೆ, ಅವರಿಗೆ ಗೌರವ ಕೊಡುವುದನ್ನು ಕಲೀಲಿ. ಇಲ್ಲವಾದರೆ ಬೇರೆ ಮನೆ ನೋಡಿಕೊಳ್ಳಿ ಎಂದು ಮಕ್ಕಳಿಗೆ ಹೈಕೋರ್ಟ್ ಸೂಚಿಸಿದೆ.

ಜಯಮಾಲಾ ಬಂಚಿ ಎಂಬ ನ್ಯಾಯಮೂರ್ತಿ ಈ ತೀರ್ಪು ನೀಡಿದವರು. ಸುಭಾಶ್ಚಂದ್ರ ಮತ್ತು ಬಿರತಿ ಹಲ್ದಾರ್ ಎಂಬ 24 ಪರಗಣದ ಉತ್ತರ ಭಾಗದ ನಿವಾಸಿಗಳು ತಮ್ಮ ಪುತ್ರ ಸುಭೇಂದು ಮತ್ತು ಸೊಸೆ ರಿಯಾ ಅವರಿಂದ ತೀವ್ರ ಕಿರುಕುಳ ಅನುಭವಿಸುತ್ತಿದ್ದರು. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರೂ ಸರಿಯಾಗಿ ಸ್ಪಂದಿಸುತ್ತಿರಲಿಲ್ಲ. ಹೀಗಾಗಿ ಹೈಕೋರ್ಟ್ ಮೊರೆ ಹೋಗಬೇಕಾಯಿತು.

ಜಾಹೀರಾತು

ಈ ತೀರ್ಪು ಸಾವಿರಾರು ವೃದ್ಧರಿಗೆ ಸಂತಸ ತಂದಿದ್ದಂತೂ ಹೌದು. ಇದೀಗ ಬಂಗಾಳದಲ್ಲಿರುವ ವೃದ್ಧಾಶ್ರಮದಲ್ಲಿ ವಾಸಿಸುತ್ತಿರುವವರು ತೀರ್ಪು ಓದಿ ತಮ್ಮ ಸ್ವಂತ ಜಾಗ, ಮನೆಯನ್ನು ಮಕ್ಕಳಿಂದ ಮರಳಿ ಪಡೆಯಲು ಹೊರಟಿದ್ದಾರೆ ಎಂದು ವರದಿ ಹೇಳುತ್ತದೆ. ದೇತನು ಹಜಾರಾ ಎಂಬ ವೃದ್ಧನ ಪತ್ನಿ ಮೃತರಾದ ಬಳಿಕ ಮಗ ಅವರನ್ನು ವೃದ್ಧಾಶ್ರಮಕ್ಕೆ ಹಾಕಿದ್ದ. ಈಗ ಅವರು ಮರಳಿ ಮನೆಯನ್ನು ಪಡೆಯಲು ಹೊರಟಿದ್ದಾರೆ. ಇನ್ನೋರ್ವ ಮಹಿಳೆ ಮಿನತಿ ಸಿಂಗ್ ಪತಿ ತೀರಿ ಹೋದ ಮೇಲೆ ಅವರ ಮಗ ಮನೆಯಿಂದ ಹೊರಹಾಕಿದ್ದ. ಇದೀಗ ಅವರೂ ತಮ್ಮ ಹಕ್ಕು ಸ್ಥಾಪಿಸಲು ಹೊರಟಿದ್ದಾರೆ. ತಮ್ಮ ಸಂಗಾತಿಗಳನ್ನು ಕಳೆದುಕೊಂಡ ಬಳಿಕ ವೃದ್ಧರನ್ನು ಮನೆಯಿಂದ ಹೊರ ಹಾಕುತ್ತಿರುವುದು ಪಟ್ಟಣಗಳಲ್ಲಿ ಹೆಚ್ಚಾಗುತ್ತಾ ಹೋಗುತ್ತಿದೆ ಎಂಬುದಂತೂ ಸತ್ಯ.

ಇಷ್ಟು ಮಾಹಿತಿ ಇಂಡಿಯನ್ ಎಕ್ಸ್ ಪ್ರೆಸ್ ವರದಿಯಲ್ಲಿದ್ದುದು. ಬಹುತೇಕ ಪಟ್ಟಣಗಳ ಸ್ಥಿತಿ ಹೀಗೇ ಇದೆ ಎಂಬುದು ಚಿಂತನಾರ್ಹ ವಿಚಾರ. ಹಾಗಾದರೆ ಹಳ್ಳಿಗಳ ಸ್ಥಿತಿ ಹೇಗಿದೆ?

ಗುರುವಾರ ಮಂಗಳೂರಿನ ಬಿ.ಸಿ.ರೋಡಿನಲ್ಲಿ ಕೃಷಿ ಮೇಳ ಸಮಾರೋಪ (ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರವರ್ತಿತ) ಕಾರ್ಯಕ್ರಮಕ್ಕೆ ಹೋಗಿದ್ದೆ. ಯೋಜನೆಯ ಮುಖ್ಯಸ್ಥರಲ್ಲೊಬ್ಬರಾದ ಡಾ.ಎಲ್.ಎಚ್.ಮಂಜುನಾಥ್ ಬಹಳ ಮಾರ್ಮಿಕ ಮಾತೊಂದನ್ನು ಹೇಳಿದ್ದರು. ವಿಷಯ ತುಂಬಾ ಹಳೆಯದು. ಆದರೆ ಅವರು ಹೇಳಿದ ವಿಚಾರ ಚಿಂತನಾರ್ಹ. ಅದೇನೆಂದರೆ ಕೃಷಿ ಚಟುವಟಿಕೆ ಇಂದು ಉಳಿಯಬೇಕಿದ್ದರೆ, ತಮ್ಮ ಒಬ್ಬ ಮಗ, ಮಗಳನ್ನಾದರೂ ಮನೆಯಲ್ಲೇ ಸಂಬಳ ಕೊಟ್ಟು ಉಳಿಸಿಕೊಳ್ಳಬೇಕು!. ಕೃಷಿ ಮಾಡುವ ಮಕ್ಕಳು ಕೆಲಸಕ್ಕೆ ಬಾರದವರು ಎಂಬ ಭಾವನೆ ತಂದೆ, ತಾಯಿಯಲ್ಲಿದೆ, ಅದನ್ನು ಹೋಗಲಾಡಿಸಬೇಕು.

ಜಾಹೀರಾತು

ಡಾ. ಎಲ್.ಎಚ್. ಮಂಜುನಾಥ್ ಇಂಥ ವಾದಸರಣಿಯನ್ನು ಮಂಡಿಸುತ್ತಿದ್ದಾಗ ಸಭೆಯಲ್ಲಿದ್ದ ಹಲವು ಪ್ರೇಕ್ಷಕರು ತಲೆದೂಗುತ್ತಿದ್ದುದನ್ನು ಗಮನಿಸಿದೆ. ನೀವೇನಂತೀರೋ ಗೊತ್ತಿಲ್ಲ. ಆದರೆ ಡಾ. ಮಂಜುನಾಥ್ ಹೇಳಿದ ಒಂದು ವಿಚಾರ ಗಮನ ಸೆಳೆಯಿತು. ಇಂಗ್ಲೆಂಡ್ ನಲ್ಲಾದರೆ ವೃದ್ಧರನ್ನು ಸರಕಾರವೇ ಸಾಕುತ್ತದೆ. ಇಲ್ಲಿ ಹಾಗಲ್ಲ, ಮಕ್ಕಳೊಂದಿಗೆ ಇರಬೇಕು. ಅದಕ್ಕಾಗಿ ಮಕ್ಕಳು ಮನೆಯಲ್ಲಿರಬೇಕು. ಕೃಷಿಯನ್ನೇ ಉದ್ಯೋಗವನ್ನಾಗಿಸಲು ಮಕ್ಕಳಿಗೆ ಸಂಬಳ (ಅದರರ್ಥ ಆರ್ಥಿಕವಾಗಿ ಗಟ್ಟಿಯಾಗಬೇಕು ಎಂದು) ಕೊಟ್ಟು ಮನೆಯಲ್ಲಿ ಉಳಿಸಬೇಕು. ಇಂದು ಕೃಷಿ ಉಳಿಯಬೇಕಾದರೆ, ಯುವ ಪೀಳಿಗೆ ಕೃಷಿ ಮಾಡುವ ತಂದೆ ತಾಯಿ ಜೊತೆ ವಾಸಿಸಬೇಕು ಎಂದರು.

ಇಂದು ಕೃಷಿಗೆ ಆಸಕ್ತಿ ಕಡಿಮೆಯಾಗುತ್ತಿದೆ. ಎಲ್ಲರೂ ಪಟ್ಟಣಗಳತ್ತ ವಲಸೆ ಹೋಗುತ್ತಿದ್ದಾರೆ ಎಂಬ ಮಾತು ಸರ್ವವಿದಿತ. ಪಟ್ಟಣಗಳಿಗೆ ಹೋಗುವುದೂ ಅನಿವಾರ್ಯತೆಯ ಒಂದು ಭಾಗವಾಗಿರಬಹುದು. ಏಕೆಂದರೆ ಕೃಷಿ ಮಾಡುವಾತ ಎಂದರೆ ಓದಿನಲ್ಲಿ ಹಿಂದುಳಿದವನು ಮಾಡುವ ಕೆಲಸ ಎಂಬ ಭಾವನೆ ಬಲವಾಗಿ ಬೇರೂರಿದೆ. ಸಾಮಾನ್ಯವಾಗಿ ಹಲವಾರು ವರ್ಷಗಳಿಂದ ನಡೆಯುತ್ತಾ ಬಂದಿರುವುದೂ ಅದೇ. ಅದರಲ್ಲೂ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಅಡಕೆ ಕೃಷಿ ಹಾಗೂ ಭತ್ತದ ಕೃಷಿ ನಡೆಸುವವರ ಸಂಖ್ಯೆ ಜಾಸ್ತಿ. ಒಂದೋ ದೊಡ್ಡ ಜಮೀನುದಾರರು ಅಥವಾ ಸಣ್ಣ ಹಿಡುವಳಿದಾರರು ಅಲ್ಲಿರುತ್ತಾರೆ. ಐದೆಕರೆ ಜಮೀನು ಹೊಂದಿದಾತನೂ ಐದಂಕಿ ಸಂಬಳ ಪಡೆಯುವವನಿಗಿಂತ ಉತ್ತಮ ಜೀವನಮಟ್ಟದಲ್ಲಿ ವಾಸಿಸಬಹುದು ಎಂದು ಯೋಚಿಸುವ ಮನೋಸ್ಥಿತಿ ಈಗಿಲ್ಲ. ಏಕೆಂದರೆ ಕೃಷಿಯಲ್ಲಾಗುವ ವೈಪರೀತ್ಯಗಳು, ಬೆಲೆ ಸ್ಥಿರತೆ ಇಲ್ಲದೇ ಇರುವುದು ಹಾಗೂ ವಿಪರೀತವಾಗಿ ಬೆಳೆದಿರುವ ರಿಯಲ್ ಎಸ್ಟೇಟ್ ವ್ಯವಹಾರ ಕೃಷಿಕನನ್ನು ನುಂಗಿ ನೀರು ಕುಡಿದಿದೆ. ಹೀಗಾಗಿ ಮನೆಯಲ್ಲಿ ಯಾವ ಮಕ್ಕಳು ತೋಟ, ಗದ್ದೆ ನೋಡಿಕೊಂಡು ಕುಳಿತಿರುತ್ತಾರೆ. ತಂದೆ ತಾಯಿಯೂ ಅದನ್ನೇ ಯೋಚಿಸುತ್ತಾರೆ. ತಮ್ಮ ಮಕ್ಕಳನ್ನು ತೋಟಕ್ಕೆ ಹೋಗಲು ಬಿಡುವುದೇ ಇಲ್ಲ. ಹೋಗುವವನನ್ನೂ ತಡೆದು ಕುಳ್ಳಿರಿಸಿ, ಓದು, ಟ್ಯೂಶನ್ ಗೆ ಹೋಗು ಎನ್ನುತ್ತಾರೆ. ದಶಕಗಳ ಹಿಂದೆ ತೋಟಕ್ಕೆ ಹೋಗಿ ಅಲ್ಲಿನ ಕೆಲಸ ಕಾರ್ಯಗಳನ್ನು ಮಾಡಿ, ಬಿಡುವಾದಾಗ ಓದಿ ಉತ್ತಮ ಅಂಕಗಳನ್ನು ಗಳಿಸುತ್ತಿದ್ದ ಜೀವನಶೈಲಿ ಇಂದು ಬದಲಾಗಿದೆ. ತೋಟಕ್ಕೆ ಹೋಗುವಾತ, ದನದ ಕೊಟ್ಟಿಗೆಯಲ್ಲಿ ಸಗಣಿ ಗೊಬ್ಬರದೊಂದಿಗೆ ಕೆಲಸ ಮಾಡುವಾತ ದಡ್ಡ, ಕೆಲಸಕ್ಕೆ ಬಾರದವ, ಪ್ರಯೋಜನ ಇಲ್ಲದವ ಎಂಬ ಮಾತು ಮನೆಯವರಿಂದಲೇ ಕೇಳಿ ಬರುತ್ತದೆ. ತಂದೆ, ತಾಯಿಯೇ ಒಬ್ಬ ಮಗ/ಳು ದೂರದೂರಲ್ಲಿಯೋ, ಪರದೇಶದಲ್ಲೋ ದೊಡ್ಡ ಕೆಲಸದಲ್ಲಿದ್ದಾನೆ/ಳು ಎಂದು ಕಣ್ಣಿಗೆ ವರ್ಷಕ್ಕೊಮ್ಮೆ ಕಾಣಿಸುವ ಮಗ/ಳು ತಮ್ಮೊಡನಿದ್ದು, ಕೃಷಿಯೋ ಮತ್ತೊಂದು ಚಟುವಟಿಕೆಯಲ್ಲಿ ತೊಡಗಿಸಿಕೊಂಡರೆ, ಇವನು ಉಪಯೋಗಶೂನ್ಯ ಎಂಬಂತೆ ಹಳಿಯುತ್ತಿರುತ್ತಾರೆ. ಅವರು ಬೇಸರದಿಂದಲೋ, ಪ್ರೀತಿಯಿಂದಲೋ ಹೇಳುತ್ತಿರಬಹುದು. ಆದರೆ, ಮಕ್ಕಳು ಹಾಗೂ ಹೆತ್ತವರ ಮಧ್ಯೆ ಅಂತರ ಬೆಳೆಯುತ್ತದೆ. ಇಂದು ಅದೆಷ್ಟೋ ಕೃಷಿ ಕುಟುಂಬಗಳ ಮನೆ, ಮನೆತನಗಳನ್ನೇ ನೋಡಿ, ವೃದ್ಧರು ಮನೆಯಲ್ಲಿರುತ್ತಾರೆ, ಮಕ್ಕಳು ಯಾವುದೋ ಊರಲ್ಲಿರುತ್ತಾರೆ. ಮನೆಯಲ್ಲಿ ಹೇರಳವಾದ ಕೃಷಿ ಸಂಪತ್ತಿದ್ದರೂ ಮಕ್ಕಳು ತಂದೆ, ತಾಯಿ ಜೊತೆ ಕೃಷಿ ಮಾಡಿಕೊಂಡು ಯಾಕೆ ಉಳಿದಿಲ್ಲ? ಕೃಷಿ ಚಟುವಟಿಕೆ ಇಂದು ಕುಂಠಿತವಾಗಲು ಇದೂ ಒಂದು ಕಾರಣ.

ಮೇಲೆ ಪ್ರಸ್ತಾಪಿಸಿದ ಎರಡೂ ಸಬ್ಜೆಕ್ಟುಗಳು ಬೇರೆ ಬೇರೆ. ಮೊದಲನೇಯದ್ದು ಮನೆಯಿಂದ ತಂದೆ ತಾಯಿಯರನ್ನು ನಿರ್ದಾಕ್ಷಿಣ್ಯವಾಗಿ ಹೊರ ಹಾಕುವ ಮಕ್ಕಳು, ಅಂಥವರಿಗೆ ಚಾಟಿ ಬೀಸಿದ ಹೈಕೋರ್ಟು ವರದಿ. ಎರಡನೇಯದ್ದು ಕೃಷಿ ಮಾಡುವ ಮಕ್ಕಳನ್ನು ಕಡೆಗಣಿಸದೆ, ಅವರು ನಮ್ಮ ಸಂಪತ್ತು ಎಂದು ತಂದೆ ತಾಯಿಯೂ ಯೋಚಿಸಬೇಕಾದ ವಿಚಾರ. ಆದರೆ ಇವೆರಡೂ ವಿಚಾರಗಳಿಗೆ ಸಾಮ್ಯತೆ ಇರೋದು ಹೆತ್ತವರು-ಮಕ್ಕಳ ಸಂಬಂಧ.

ಜಾಹೀರಾತು

ಸಮೀಕ್ಷೆಗಳು ದಿನಕ್ಕೊಂದು ರಿಪೋರ್ಟ್ ಕೊಡಬಹುದು. ಆದರೆ ಇಂದು ವೃದ್ಧಾಶ್ರಮಗಳಿಗೆ ಭಾರೀ ಬೇಡಿಕೆ ಬರುತ್ತಿರುವುದಂತೂ ಸತ್ಯ. ಕೆಲ ವರ್ಷಗಳ ಹಿಂದೆ ಐದಾರು ಮಕ್ಕಳಿದ್ದ ತಾಯಿಯೊಬ್ಬರನ್ನು ವೃದ್ಧಾಶ್ರಮಕ್ಕೆ ಹಾಕುವ ಕುರಿತು ಮಕ್ಕಳೇ ಚಿಂತಿಸುತ್ತಿದ್ದರು. ಕಾರಣ, ಅವರನ್ನು ನೋಡಿಕೊಳ್ಳಲು ಪುರುಸೊತ್ತು ಇಲ್ಲದೇ ಇರುವಂಥಾದ್ದು. ಈಗ ಹರೆಯಕ್ಕೆ ಕಾಲಿಡುತ್ತಿರುವ ಮಕ್ಕಳ ತಂದೆ, ತಾಯಿಯಂದರು ಹೀಗೆ ಮಾಡಿದರೆ, ಮುಂದೆ ಅವರ ಗತಿ?

ಅಜ್ಜಿ ಅಥವಾ ಅಜ್ಜ ಮೊಮ್ಮಕ್ಕಳ ಮೂಲಕ ಮಕ್ಕಳನ್ನೂ ಬೆಸೆಯುವವರು. ಇವರಿಂದಲೇ ಮೊಮ್ಮಕ್ಕಳನ್ನು ಪ್ರತ್ಯೇಕಿಸಿದರೆ? ಹೀಗೊಂದು ಪ್ರಸಂಗ ನೋಡಿ. ವೃದ್ಧೆಯೊಬ್ಬರು ತಮ್ಮ ಸಂಬಂಧಿಕರ ಮನೆಗೆ ಬಂದಿದ್ದರು. ಅವರ ಮಗಳ ಮಗ ಪಕ್ಕದೂರಲ್ಲೇ ಇದ್ದ. ವೃದ್ಧೆಗೋ ತಮ್ಮ ಮೊಮ್ಮಗನನ್ನ ನೋಡುವ ಬಯಕೆ. ಇದಕ್ಕಾಗಿ ತಾವಿದ್ದ ಮನೆಯಲ್ಲಿ ಮೊಮ್ಮಗನ ಗುಣಗಾನ ಮಾಡುತ್ತಿದ್ದರು. ಈ ಸಂದರ್ಭ ಮನೆಯವರು ಮೊಮ್ಮಗನಿಗೆ ಕರೆ ಮಾಡಿ, ನಿನ್ನ ಅಜ್ಜಿ ನಿನ್ನನ್ನು ಬಹಳವಾಗಿ ನೆನಪಿಸುತ್ತಾರೆ, ಒಮ್ಮೆ ಬಂದು ಹೋಗು ಎಂದು ಹೇಳಿದರು. ಆದರೆ ಆತ ಬರಲೇ ಇಲ್ಲ. ಇಬ್ಬರನ್ನೂ ಪ್ರತ್ಯೇಕಿಸುವಂತೆ ಮಾಡಿದ್ದು ಯಾವ ಶಕ್ತಿ? ನೀವೇ ಊಹಿಸಿ.

ಅದೇ ಮೊಮ್ಮಗ ಮತ್ತೆ ಬಂದದ್ದು ಅಜ್ಜಿಯ ಉತ್ತರಕ್ರಿಯೆಗಾಗಿ. ಅಲ್ಲೂ ಆಗ ಮೊಬೈಲ್ ನಲ್ಲಿ ಫೊಟೋ ತೆಗೆದುಕೊಳ್ಳುತ್ತಾ, ವಾಟ್ಸಾಪುಗಳಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದ. ಈ ಮೊಮ್ಮಗನಿಗೆ ಅಜ್ಜಿ ಕುರಿತು ಪ್ರೀತಿ ಇರಲೇ ಇಲ್ಲವೇ, ಈ ಭಾವನೆ ಬೇರೂರಲು ಯಾವ ಶಕ್ತಿ ಕಾರಣವಾಯಿತು?

ಜಾಹೀರಾತು

ಇನ್ನೊಂದು ಕತೆ ಇಲ್ಲಿದೆ. ಇದು ತೀರಾ ಉಲ್ಟಾ.

ಅದೊಂದು ದೊಡ್ಡ ಕೃಷಿ ಕುಟುಂಬ. ಗಂಡು ಮಕ್ಕಳು ನಾಲ್ಕೈದು. ಅವರಲ್ಲಿ ಕೆಲವರು ಉದ್ಯೋಗಕ್ಕೆ ಸೇರಿಕೊಂಡರೆ, ಒಂದಿಬ್ಬರು ತಂದೆಯೊಂದಿಗೆ ಕೃಷಿಗೆ ಕೈಜೋಡಿಸಿದರು. ಹಾಗೆ ನೋಡಿದರೆ, ಹೊರಗಿನ ಉದ್ಯೋಗಕ್ಕಿಂತ ಕೃಷಿಯಲ್ಲೇ ಹೆಚ್ಚಿನ ಆದಾಯ ಗಳಿಸುವಂಥ ವ್ಯವಸ್ಥೆ. ಆದರೆ ಮನೆಯಲ್ಲಿ ಉಳಿದ ಮಕ್ಕಳಿಗೆ ಮೂರು ಕಾಸಿನ ಬೆಲೆ ಇಲ್ಲ. ಲೆಕ್ಕ ವ್ಯವಹಾರವೆಲ್ಲಾ ತಂದೆ ಬಳಿ. ಪ್ರತಿಯೊಂದಕ್ಕೂ ತಂದೆ ಬಳಿ ಕೈಚಾಚಬೇಕು. ಎಲ್ಲವೂ ನನ್ನ ನಂತರ ನಿನ್ನದಲ್ಲಾ ಈಗ್ಯಾಕೆ ಕೇಳೋದು ಎಂಬ ಉತ್ತರ ಬೇರೆ. ತನ್ನ ಮದುವೆ ಬಿಡಿ, ತನ್ನ ಮಕ್ಕಳ ಮದುವೆಗೂ ತಂದೆ ಬಳಿ ಕೈಚಾಚುವ ಸ್ಥಿತಿ. ಹೀಗಿದ್ದರೆ ಹೆತ್ತವರ ಹಾಗೂ ಮಕ್ಕಳ ಸಂಬಂಧ ಹೇಗೆ ಚೆನ್ನಾಗಿರುತ್ತದೆ?

ಇಂದು ವಯಸ್ಸಾದವರು ವೃದ್ಧಾಶ್ರಮಗಳಿಗೆ ಹೋಗಿ ಕೂರಲೇಬೇಕು ಎಂದೇನಿಲ್ಲ. ಮಕ್ಕಳು ವರ್ಷಕ್ಕೊಮ್ಮೆ ಮುಖ ದರ್ಶನ ಮಾಡುತ್ತಾರೆ ಎಂದಾದರೆ ತಂದೆ ತಾಯಿ ಇರುವ ಜಾಗವೇ ವೃದ್ಧಾಶ್ರಮ. ನಮ್ಮ ಧೋರಣೆಗಳು ಬದಲಾದರೆ ಪ್ರೀತಿ ವಿಶ್ವಾಸ ತಾನಾಗಿಯೇ ವೃದ್ಧಿಸುತ್ತದೆ, ಸಂಬಂಧಗಳನ್ನು ಬೆಸೆಯುತ್ತದೆ. ಜೀವನಶೈಲಿ ಬದಲಾಗುವುದಕ್ಕೂ ಮಾನವ ಸಂಬಂಧಕ್ಕೂ ವ್ಯತ್ಯಾಸವಿದೆ. ಕೃಷಿಪ್ರಧಾನ ವ್ಯವಸ್ಥೆ ಮಾನವ ಸಂಬಂಧಗಳನ್ನು ಬೇರ್ಪಡಿಸುವುದಿಲ್ಲ ಎಂಬುದಂತೂ ಸತ್ಯ.

ಜಾಹೀರಾತು

ಈ ವಿಷಯದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಲು ನಿಮಗೆ ಬಂಟ್ವಾಳ ನ್ಯೂಸ್ ವೇದಿಕೆ ಕಲ್ಪಿಸುತ್ತದೆ. ನಿಮ್ಮ ಅಭಿಪ್ರಾಯವನ್ನು 50 ಶಬ್ದಗಳ ಮಿತಿಯಲ್ಲಿ ಬರೆದು, ಹೆಸರು, ವಿಳಾಸ, ದೂರವಾಣಿ ಸಂಖ್ಯೆಯೊಂದಿಗೆ ಈ ಮೈಲ್ ಮಾಡಿ: bantwalnews@gmail.com

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Harish Mambady
ಕಳೆದ 26 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.

Be the first to comment on "ಕೌಟುಂಬಿಕ ಸಂಬಂಧಕ್ಕೂ ಪಾಶ್ಚಾತ್ಯರ ಕರಿನೆರಳು"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*