ಇಡೀ ದಿನ ಪ್ರತಿಭಟನೆ, ಚರ್ಚೆ, ಆರೋಪ, ಪ್ರತ್ಯಾರೋಪಕ್ಕೆ ವೇದಿಕೆಯಾದ ಇಂದಿರಾ ಕ್ಯಾಂಟೀನ್ ಕಾಂಪೌಂಡ್ ವಿವಾದ
ಬಿ.ಸಿ.ರೋಡ್ ಇಂದಿರಾ ಕ್ಯಾಂಟೀನ್ ಕಾಂಪೌಂಡ್ ಗೋಡೆ ನಿಗದಿಯಾದ ಜಾಗಕ್ಕಿಂತ ಮುಂದೆ ಕಟ್ಟೋದು ಯಾಕೆ – ಬಿಜೆಪಿ
ಗೋಡೆ ಕಟ್ಟುವುದಕ್ಕೆ ವಿರೋಧ ವ್ಯಕ್ತಪಡಿಸುವುದರ ಮೂಲಕ ಬಡವರ ಹಸಿವು ನೀಗಿಸುವ ಇಂದಿರಾ ಕ್ಯಾಂಟೀನ್ ಆರಂಭಕ್ಕೆ ಅಡ್ಡಿ -ಕಾಂಗ್ರೆಸ್
ಇಲ್ಲೇನಾಗುತ್ತಿದೆ? ಯಾಕೆ ಇಷ್ಟೊಂದು ಬೊಬ್ಬೆ ಹಾಕುತ್ತಿದ್ದಾರೆ? ಇವರು ತಮ್ಮ ಕಾಲದಲ್ಲಿ ಹೀಗೆ ಮಾಡಿಲ್ಲವೇ, ಅವರು ತಮ್ಮ ಕಾಲದಲ್ಲಿ ಹಾಗೆ ಮಾಡಿಲ್ಲವೇ ಎನ್ನುತ್ತಿದ್ದಾರಲ್ಲ? – ರಸ್ತೆಯಲ್ಲಿ ನಡೆದುಕೊಂಡು ಹೋಗುವ ಜನಸಾಮಾನ್ಯ.
ಬಿ.ಸಿ.ರೋಡ್ ಇಂದಿರಾ ಕ್ಯಾಂಟೀನ್ ಆವರಣ ಗೋಡೆ ವಿಚಾರ ಇಂದು ಕಾಂಗ್ರೆಸ್ ಮತ್ತು ಬಿಜೆಪಿ ಎದುರುಬದುರು ಘೋಷಣೆ ಕೂಗುವಷ್ಟರ ಮಟ್ಟಿಗೆ ಮುಂದುವರಿಯಿತು. ಒಂದು ಹಂತದಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತದೆ ಎಂಬ ಸನ್ನಿವೇಶ ಬಂದಾಗ ಪೊಲೀಸರು ಜಾಣ್ಮೆಯಿಂದ ಪರಿಸ್ಥಿತಿಯನ್ನು ನಿಭಾಯಿಸಿದರು.
ಇದಕ್ಕೂ ಮುನ್ನ ಬಿಜೆಪಿ ಪಕ್ಷದ ಮುಖಂಡರು ಶಾಸಕರ ನೇತೃತ್ವದಲ್ಲಿ ಆಡಳಿತ ಪಕ್ಷ, ಪುರಸಭೆಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಪುರಸಭಾ ಸದಸ್ಯ ಗೋವಿಂದ ಪ್ರಭು, ಬಿಜೆಪಿ ಕ್ಷೇತ್ರಾಧ್ಯಕ್ಷ ದೇವದಾಸ ಶೆಟ್ಟಿ ಬೆಳಗ್ಗೆಯೇ ಕ್ಯಾಂಟೀನ್ ಮುಂದೆ ಧರಣಿ ಕುಳಿತರೆ, ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರನ್ನು ಸೇರಿಕೊಂಡರು. ಏರಿದ ಧ್ವನಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಸಂದರ್ಭ ಅವರ ಮನವೊಲಿಸಲು ಎಎಸ್ಪಿ ಋಷಿಕೇಶ್, ಎಸ್ಸೈ ಚಂದ್ರಶೇಖರ್, ತಹಶೀಲ್ದಾರ್ ಪುರಂದರ ಹೆಗ್ಡೆ ಸಹಿತ ಅಧಿಕಾರಿಗಳು ಆಗಮಿಸಿದರೂ ಸಮರ್ಪಕ ಉತ್ತರವನ್ನು ನೀಡುವವರೆಗೂ ಕದಲುವುದಿಲ್ಲ, ಏನಿದ್ದರೂ ವಿಷಯವೇನೆಂದು ಜನರಿಗೆ ಗೊತ್ತಾಗಬೇಕು ಎಂದು ಶಾಸಕ ಹೇಳಿದರು. ಕೊನೆಗೆ ಸಹಾಯಕ ಕಮೀಷನರ್ ಆಗಮಿಸಿ ಮಿನಿ ವಿಧಾನಸೌಧದೊಳಗೆ ಕಚೇರಿಯಲ್ಲಿ ಕುಳಿತು ಮಾತುಕತೆ ಮಾಡೋಣ ಎಂದು ಅವರನ್ನು ಕರೆದಾಗ ಶಾಸಕರು, ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕರ್ತರು ತಹಶೀಲ್ದಾರ್ ಕೊಠಡಿಗೆ ತೆರಳಿದರು. ಈ ಸಂದರ್ಭ ಜನಪ್ರತಿನಿಧಿಗಳು, ಅಧಿಕಾರಿಗಳು ಮಾತ್ರ ಇಲ್ಲಿದ್ದರೆ ಸಾಕು, ಮಾಧ್ಯಮಗಳಿಗೆ ಪ್ರವೇಶವಿಲ್ಲ ಎಂದು ಸಹಾಯಕ ಕಮೀಷನರ್ ತಿಳಿಸಿದ ಕಾರಣ, ಮಾತುಕತೆ ವಿಚಾರಗಳು ಸಾರ್ವಜನಿಕರಿಗೆ ಅಲಭ್ಯವಾದವು. ಪ್ರತಿಭಟನೆ ಸಂದರ್ಭ ಬಿಜೆಪಿ ಮುಖಂಡರಾದ ಗೋವಿಂದ ಪ್ರಭು, ದೇವದಾಸ ಶೆಟ್ಟಿ, ರವೀಂದ್ರ ಕಂಬಳಿ, ರಾಮದಾಸ ಬಂಟ್ವಾಳ, ಜಿ.ಆನಂದ, ಉದಯಕುಮಾರ್ ರಾವ್, ರಮಾನಾಥ ರಾಯಿ, ಸೀತಾರಾಮ ಪೂಜಾರಿ, ಗಣೇಶ್ ರೈ ಮಾಣಿ, ಗುರುದತ್ತ್ ಮೊದಲಾದವರು ಉಪಸ್ಥಿತರಿದ್ದರು.
ಸಂಜೆಯಾಗುತ್ತಲೇ ಕಾಂಗ್ರೆಸ್ ಜೆಡಿಎಸ್ ಪಕ್ಷಗಳ ಕಾರ್ಯಕರ್ತರು ಮಾಜಿ ಸಚಿವ ರಮಾನಾಥ ರೈ ನೇತೃತ್ವದಲ್ಲಿ ಆಗಮಿಸಿ ಘೋಷಣೆಗಳನ್ನು ಕೂಗುತ್ತಾ ವಾತಾವರಣವನ್ನು ಮತ್ತಷ್ಟು ಬಿಗುವಾಗಿಸಿದರು. ಈ ವೇಳೆ ಬಿಜೆಪಿ ಕಾರ್ಯಕರ್ತರೂ ಕಾಂಗ್ರೆಸ್ ಕಾರ್ಯಕರ್ತರಿದ್ದೆಡೆ ಆಗಮಿಸಿ ಘೋಷಣೆ ಕೂಗಿದರು. ಪರಿಸ್ಥಿತಿ ಕೈಮೀರುವ ಮೊದಲೇ ಪೊಲೀಸರು ತಿಳಿಗೊಳಿಸಿದರು.ಇದೇ ವೇಳೆ ಮಾಜಿ ಸಚಿವರು ಸುದ್ದಿಗಾರರೊಂದಿಗೆ ಬಿಜೆಪಿಯ ಪ್ರತಿಭಟನೆಯನ್ನು ಟೀಕಿಸಿದರು. ಕಾಂಗ್ರೆಸ್ ವತಿಯಿಂದ ಜಿಪಂ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಎಂ.ಎಸ್.ಮಹಮ್ಮದ್, ಪದ್ಮಶೇಖರ ಜೈನ್, ಮಂಜುಳಾ ಮಾಧವ ಮಾವೆ, ತಾಪಂ ಉಪಾಧ್ಯಕ್ಷ ಅಬ್ಬಾಸ್ ಆಲಿ, ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕುಲಾಲ್, ಬುಡಾ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಪ್ರಮುಖರಾದ ಮಾಯಿಲಪ್ಪ ಸಾಲಿಯಾನ್, ಯೂಸುಫ್ ಕರಂದಾಡಿ, ವಾಸು ಪೂಜಾರಿ, ಮಲ್ಲಿಕಾ ಶೆಟ್ಟಿ, ಜಯಂತಿ ಪೂಜಾರಿ, ಪುರಸಭೆ ಸದಸ್ಯರು, ಜೆಡಿಎಸ್ ಪ್ರಮುಖರಾದ ಬಿ.ಮೋಹನ್, ಮಹಮ್ಮದ್ ಶಫಿ, ಹಾರೂನ್ ರಶೀದ್, ಅಬುಬಕ್ಕರ್ ಮತ್ತಿತರರು ಇದ್ದರು.
ಬಿ.ಸಿ.ರೋಡಿನಲ್ಲಿ ಇಷ್ಟೆಲ್ಲ ಘಟನೆಗಳು ನಡೆಯುತ್ತಿರುವ ಸಂದರ್ಭ ಬೇರೆ ಬೇರೆ ಕಡೆಯಿಂದ ಆಗಮಿಸುವವರು ಅಲ್ಲೇನಾಗುತ್ತಿದೆ ಎಂದು ಕುತೂಹಲದಿಂದ ಇಣುಕುತ್ತಿದ್ದರು.
ಪ್ರತಿಭಟನಾಕಾರರ ಮನವೊಲಿಸಲು ಬಂಟ್ವಾಳ ಎಎಸ್ಪಿ ಋಷಿಕೇಶ್ ಸೋನಾವಣೆ, ವೃತ್ತನಿರೀಕ್ಷಕ ಟಿ.ಡಿ.ನಾಗರಾಜ್, ಎಸ್.ಐ.ಗಳಾದ ಚಂದ್ರಶೇಖರ್, ಹರೀಶ್, ಪ್ರಸನ್ನ ಸೇರಿದಂತೆ ಪೊಲೀಸ್ ಪಹರೆಯೇ ಅಲ್ಲಿತ್ತು. ಬಂಟ್ವಾಳ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದರು.
Be the first to comment on "ಒಂದು ಗೋಡೆ, ಎರಡು ಪಕ್ಷ, ದಿನವಿಡೀ ಆರೋಪ, ಪ್ರತ್ಯಾರೋಪ"