ರಾತ್ರಿಯಾದರೂ ನಿಲ್ಲದ ಮಳೆ, ಬಂಟ್ವಾಳದಲ್ಲಿ ನೆರೆ, ಉಪ್ಪಿನಂಗಡಿಯಲ್ಲಿ ಸಂಗಮ

ಕೊನೇ ಕ್ಷಣದ ಅಪ್ ಡೇಟ್ ಗಳೊಂದಿಗೆ ತಾಜಾ ಸುದ್ದಿ..  – ಸಂಪಾದಕ: ಹರೀಶ ಮಾಂಬಾಡಿ

ಜಾಹೀರಾತು
  • ಬಂಟ್ವಾಳದಲ್ಲಿ 10.4 ಮೀಟರ್ ನಲ್ಲಿ ಹರಿಯುತ್ತಿರುವ ನದಿ, ಮೂರು ಕಡೆ ಗಂಜಿಕೇಂದ್ರ ಸ್ಥಾಪನೆ
  • ಶಿರಾಡಿ ಘಾಟಿಯಲ್ಲಿ ಮಂಗಳವಾರ ರಾತ್ರಿ ಸಕಲೇಶಪುರ ತಾಲೂಕು ದೊಡ್ಡತಪ್ಪಲೆ ಬಳಿ ಗ್ಯಾಸ್ ಟ್ಯಾಂಕರ್ ಪ್ರಪಾತಕ್ಜೆ ಮಗುಚಿ ಅನಿಲ ಸೋರಿಕೆ.ವಾಹನ ಸಂಚಾರ ಪುನಃ ಸ್ಥಗಿತ.
  • ಉಪ್ಪಿನಂಗಡಿಯಲ್ಲಿ ನೇತ್ರಾವತಿ ಕುಮಾರಧಾರಾ ಸಂಗಮ
  • ಶೈಕ್ಷಣಿಕ ಸಂಸ್ಥೆಗಳಲ್ಲಿ ರಜೆ ಮುಂದುವರಿಕೆ: ನಾಳೆ ಸ್ವಾತಂತ್ರ್ಯ ದಿನಾಚರಣೆ ಹೆಚ್ಚಿನ ಶಾಲೆಗಳಲ್ಲಿ ಮಕ್ಕಳ ಗೈರಿನೊಂದಿಗೆ ಸಾಂಕೇತಿಕ ಆಚರಣೆ, ಸಾಂಸ್ಕೃತಿಕ ಕಾರ್ಯಕ್ರಮಗಳು ರದ್ದು.
  • ದ.ಕ. ಜಿಲ್ಲೆಯಾದ್ಯಂತ ಭಾರಿ ಮಳೆ, ರಾತ್ರಿಯಾದರೂ ನಿಂತಿಲ್ಲ.
  • PHOTOS: KISHORE PERAJE, DEEPAK SALYAN


ಮಂಗಳವಾರ ದಿನವಿಡೀ ಪೂರ್ಣಪ್ರಮಾಣದ ಮಳೆ ಹಾಗೂ ನೇತ್ರಾವತಿ ನದಿ ಸಮೃದ್ಧವಾಗಿ ಉಕ್ಕಿ ಹರಿದ ಪರಿಣಾಮ, ಬಂಟ್ವಾಳದ ಸುತ್ತಮುತ್ತಲಿನ ಪ್ರದೇಶಗಳು ಮುಳುಗಡೆಯಾಗಿದ್ದು, ಹಲವು ಮನೆಗಳು ಅಪಾಯದ ಅಂಚಿನಲ್ಲಿವೆ. ನೇತ್ರಾವತಿ ನದಿ ನೀರಿನ ಮಟ್ಟ ರಾತ್ರಿ 10 ಗಂಟೆಯ ವೇಳೆ 10.2 ಎಂದು ದಾಖಲಿಸಲಾಗಿದ್ದು, ಇದು ಮತ್ತಷ್ಟು ಏರುವ ಅಪಾಯದಲ್ಲಿದೆ.

ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ಮುಂದೆ ರಾತ್ರಿ 9-52 ಕ್ಕೆ ನೇತ್ರಾವತಿ ಮತ್ತು ಕುಮಾರಧಾರಾ ನದಿ ನೀರಿನ ಸಂಗಮವಾಯಿತು. ಈ ಹಿಂದೆ 2013 ಜುಲಾಯಿ 4 ಮತ್ತು ಅದಕ್ಕೂ ಮುನ್ನ 2008 ಆಗಸ್ಟ್ 13 ರಂದು ಆಗಿತ್ತು. ಈ ಸಂದರ್ಭ ದೇವಳದಲ್ಲಿ ಗಂಗಾಪೂಜೆ ನಡೆಯಿತು.

ಘಟ್ಟ ಪ್ರದೇಶಕ್ಕೆ ತೆರಳುವ ಎಲ್ಲ ಮಾರ್ಗಗಳಲ್ಲಿ ರಾತ್ರಿ ಸಂಚಾರ ಆತಂಕಕಾರಿಯಾಗಿದೆ. ಶಿರಾಡಿ ಘಾಟ್ ನಲ್ಲಿ ಈಗಲೂ ಗುಡ್ಡ ಕುಸಿತವಾಗುತ್ತಿದ್ದರೆ, ಗ್ಯಾಸ್ ಟ್ಯಾಂಕರ್ ಮಗುಚಿ ಬಿದ್ದಿದೆ. ಇತರ ರಸ್ತೆ ಸಂಚಾರವೂ ಸುಲಭವಾಗಿಲ್ಲ. ಒಂದು ರೀತಿಯಲ್ಲಿ ಬೆಂಗಳೂರು – ಮಂಗಳೂರು ಸಂಚಾರ ಸದ್ಯಕ್ಕಂತೂ ಅಪಾಯಕಾರಿಯಾಗಿ ಪರಿಣಮಿಸಿದೆ.

ಜಾಹೀರಾತು

ಈ ಹಿನ್ನೆಲೆಯಲ್ಲಿ ದ.ಕ.ಜಿಲ್ಲಾಧಿಕಾರಿ ಸಸಿಕಾಂತ ಸೆಂಥಿಲ್ ಸೂಚನೆಯಂತೆ ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ಮೂರು ಕಡೆ ಗಂಜಿಕೇಂದ್ರ ಸ್ಥಾಪಿಸಲು ನಿರ್ದೇಶಿಸಿದ್ದು, ನಾವೂರು, ಪಾಣೆಮಂಗಳೂರು ಮತ್ತು ಬಂಟ್ವಾಳದಲ್ಲಿ ವ್ಯವಸ್ಥೆ ಮಾಡಲಾಗಿದೆ. ರಾತ್ರಿ 10 ಗಂಟೆಗೆ ತುರ್ತು ಸ್ಥಿತಿ ನಿಭಾಯಿಸಲು ಸಭೆಯನ್ನೂ ನಡೆಸಿದ್ದು, ಪರಿಸ್ಥಿತಿ ಎದುರಿಸಲು ಸಕಲ ವ್ಯವಸ್ಥೆ ಮಾಡಲಾಗಿದೆ. ತುಂಬೆ, ಎಎಂಆರ್ ಅಣೆಕಟ್ಟಿನಿಂದ ಎಲ್ಲ ದ್ವಾರಗಳಲ್ಲೂ ನೀರು ಹೊರಬಿಡಲಾಗುತ್ತಿದೆ ಎಂದು ತಹಶೀಲ್ದಾರ್ ಪುರಂದರ ಹೆಗ್ಡೆ ತಿಳಿಸಿದ್ದಾರೆ.

ನೆರೆ ಎದುರಿಸಲು ಸಕಲ ಸಿದ್ಧತೆ, ಸರಳ ಸ್ವಾತಂತ್ರ್ಯ ದಿನಾಚರಣೆಗೆ ಸೂಚನೆ

ಜಾಹೀರಾತು

ಬಂಟ್ವಾಳ ಸಹಿತ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಪ್ರಳಯಸದೃಶ ಮಳೆಯಾಗುತ್ತಿದ್ದು, ನದಿಗಳು ಉಕ್ಕಿ ಹರಿಯುತ್ತಿವೆ. ಈ ಹಿನ್ನೆಲೆಯಲ್ಲಿ ಬುಧವಾರ ಸ್ವಾತಂತ್ರ್ಯ ದಿನಾಚರಣೆಯನ್ನು ಶಾಲೆಗಳಲ್ಲಿ ಸಾಂಕೇತಿಕವಾಗಿ ನಡೆಸುವಂತೆ ಸೂಚಿಸಲಾಗಿದೆ. ಮಕ್ಕಳ ಕಡ್ಡಾಯ ಹಾಜರಾತಿ ಬೇಕಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ ಸೆಂಥಿಲ್ ಸೂಚಿಸಿದ್ದಾರೆ.

ಮಳೆಯಿಂದಾಗುವ ಹಾನಿಯನ್ನು ತಪ್ಪಿಸಲು ಪ್ರತಿಯೊಬ್ಬರೂ ಜಿಲ್ಲಾಡಳಿತದ ಜೊತೆ ಸಹಕಾರ ನೀಡಬೇಕು ಎಂದವರು ಮನವಿ ಮಾಡಿದರು.

ಜಾಹೀರಾತು

ಮಂಗಳವಾರ ಮಧ್ಯಾಹ್ನ ಬಂಟ್ವಾಳ ತಾಲೂಕು ವ್ಯಾಪ್ತಿಯ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿಯವರು ಅಧಿಕಾರಿಗಳಿಗೆಈ  ಸೂಚನೆ ನೀಡಿದರು. ಬಂಟ್ವಾಳದ ನೆರೆ ನಿರಾಶ್ರಿತರಿಗೆ ಹಾಗೂ ಅಪಾಯದಲ್ಲಿರುವ ಕುಟುಂಬಗಳಿಗೆ ಪಾಣೆಮಂಗಳೂರಿನ ಶಾರದಾ ಶಾಲೆಯಲ್ಲಿ ಗಂಜಿಕೇಂದ್ರ ತೆರೆಯುವಂತೆ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ಅಧಿಕಾರಿಗಳಿಗೆ ಸೂಚಿಸಿದರು.  ಗೂಡಿನ ಬಳಿ, ಕಂಚಿಕಾರ ಪೇಟೆ, ಆಲಡ್ಕ, ಮಿಲಿಟರಿ ಗ್ರೌಂಡ್ ನ ಪ್ರದೇಶಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿಯವರು ಮುಳುಗಡೆಯಾಗಿರುವ ಮನೆಗಳ ವಿವರ ಪಡೆದ ಅವರು, ನೆರೆ ಭೀತಿ ಇರುವ ಮನೆಗಳನ್ನು ತಕ್ಷಣ ಖಾಲಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇದೇ ವೇಳೆ ಸ್ಥಳೀಯರ ಜೊತೆ ಮಾತನಾಡಿದ ಜಿಲ್ಲಾಧಿಕಾರಿಯವರು, ಮುಂದಿನ ಎರಡು ಮೂರು ದಿನಗಳ ಕಾಲ ಮಳೆ ತೀವ್ರಗೊಳ್ಳುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಮನೆಗಳನ್ನು ತೆರವು ಗೊಳಿಸಿ, ಸಂಬಂಧಿಕರ ಮನೆಗಳಲ್ಲಿ ಆಶ್ರಯ ಪಡೆಯಿರಿ, ಅವಶ್ಯಕತೆ ಇದ್ದರೆ, ಜಿಲ್ಲಾಡಳಿತ ತೆರೆದಿರುವ ಗಂಜಿ ಕೇಂದ್ರದಲ್ಲಿ ಆಶ್ರಯ ಪಡೆಯಿರಿ ಹಾಗೂ  ಪ್ರಾಕೃತಿಕ ವಿಕೋಪದಿಂದ ಆಗುವ ಹಾನಿಯನ್ನು ತಪ್ಪಿಸಲು ಅಧಿಕಾರಿಗಳ ಜೊತೆ ಸಹಕಾರ ನೀಡುವಂತೆ ಅವರು ಮನವಿ ಮಾಡಿದರು. ಈ ಭಾಗದ ಜನರು ನೆರೆಯ ಬಗ್ಗೆ ಆತಂಕ ಪಡಬೇಕಾದ ಅವಶ್ಯಕತೆ ಇಲ್ಲ. ಜಿಲ್ಲಾಡಳಿತ ಸಕಲ ಸಿದ್ಧತೆ ನಡೆಸಿದ್ದು, ಸೂಕ್ತ ವ್ಯವಸ್ಥೆ ಮಾಡಲಾಗುವುದು ಎಂದರು.

ಪಾಣೆಮಂಗಳೂರು, ಬಡ್ಡಕಟ್ಟೆ, ಮಿಲಿಟರಿ ಗ್ರೌಂಡ್, ಆಲಡ್ಕ, ಜಕ್ರಿಬೆಟ್ಟು ಬಸ್ತಿಪಡ್ಪು, ಕಂಚಿಕಾರ ಪೇಟೆ, ನಂದಾವರ, ಸಜೀಪಮುನ್ನೂರು ಮೊದಲಾದೆಡೆ ತಗ್ಗು ಪ್ರದೇಶಗಳಿಗೆ ನೆರೆ ನೀರು ನುಗ್ಗಿರುವ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿಯವರು ಇನ್ನು ನೆರೆ ಹೆಚ್ಚಾಗುವ ಸಾಧ್ಯತೆಯಿದ್ದು, ಮುಂಜಾಕೃತಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ, ಮುಖ್ಯಾಧಿಕಾರಿ ರೇಖಾ ಜೆ.ಶೆಟ್ಟಿ, ತಾಲ್ಲೂಕು ಪ್ರಥಮ ದರ್ಜೆ ಸಹಾಯಕ ರಾಜ್ ಕುಮಾರ್, ಉಪತಹಶೀಲ್ದಾರ್ ರಾಜೇಶ್ ನಾಯ್ಕ್ , ಪಾಣೆಮಂಗಳೂರು ಹೋಬಳಿ, ಕಂದಾಯ ನಿರೀಕ್ಷಕ ರಾಮ ಕಾಟಿ ಪಳ್ಳ , ಆಡಳಿತ ಶಾಖೆಯ ಸೀತಾರಾಮ ಕಮ್ಮಾಜೆ , ಪ್ರಕೃತಿ ವಿಕೋಪ ಅಧಿಕಾರಿ ವಿಷು ಕುಮಾರ್ , ಸಿಬಂದಿ ಸದಾಶಿವ ಕೈಕಂಬ. ಶೀತಲ್, ಲಕ್ಷ್ಮಣ್ ಸುಂದರ, ಸಿಬಂದಿ ಯಶೋದ, ಬಂಟ್ವಾಳ ನಗರ ಠಾಣಾ ಸಿಬ್ಬಂದಿ, ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಈ ಸಂದರ್ಭ ಹಾಜರಿದ್ದರು.

ಜಾಹೀರಾತು

ಆಲಡ್ಕ ಮಿಲಿಟರಿ ಗ್ರೌಂಡ್ ನಲ್ಲಿ ನೆರೆಯಿಂದಾಗಿ ಮುಳುಗಡೆಯಾಗುವ ೧೭ ಮನೆಗಳಿಗೆ ಶಾಶ್ವತ ಪರಿಹಾರ ಒದಗಿಸಲು ಪ್ರಯತ್ನ ನಡೆಸುವುದಾಗಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಗುತ್ತು ಹೇಳಿದ್ದಾರೆ.ಬಂಟ್ವಾಳದ ನೆರೆಪೀಡಿತ ಪ್ರದೇಶಗಳಿಗೆ ಮಂಗಳೂರು ಸಹಾಯಕ ಆಯುಕ್ತ ರೇಣುಕಾ ಪ್ರಸಾದ್ ಹಾಗೂ ತಹಶೀಲ್ದಾರ್ ಪುರಂದರ ಹೆಗ್ಡೆ ಜೊತೆ ಭೇಟಿ ನೀಡಿದ ಅವರು, ಆಲಡ್ಕದಲ್ಲಿ ನೆರೆ ಸಂತ್ರಸ್ತರ ಜೊತೆ ಮಾತನಾಡಿದರು. ಕಳೆದ ೧೫ ವರ್ಷಗಳಿಂದ ಮಳೆಗಾಲದಲ್ಲಿ ಆತಂಕದಲ್ಲೇ ದಿನ ಕಳೆಯಬೇಕಾಗುತ್ತದೆ ಎಂಬ ಸ್ಥಳೀಯರ ಮನವಿಗೆ ಸ್ಪಂದಿಸಿದ ಶಾಸಕರು, ನೆರೆ ಪೀಡಿತ ಪ್ರದೇಶಗಳಲ್ಲಿ ಕಾನೂನಾತ್ಮಕವಾಗಿ ಮನೆ ಹೊಂದಿವರಿಗೆ ಬದಲಿ ಜಮೀನು ಹಾಗೂ ಸರ್ಕಾರದ ವತಿಯಿಂದ ಮನೆ ಒದಗಿಸುವ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಪಾಣೆಮಂಗಳೂರು ಗೂಡಿನ ಬಳಿ, ಬಡ್ಡಕಟ್ಟೆ, ಬಸ್ತಿಪಡ್ಪು, ಜಕ್ರಿಬೆಟ್ಟು ಮೊದಲಾದ ನೆರೆಪೀಡಿತ ಪ್ರದೇಶಗಳಿಗೆ ಅವರು ಭೇಟಿ ನೀಡಿದ ಅವರು, ಮುನ್ನೆಚ್ಚರಿಕೆ ಕ್ರಮವಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು, ಹಾಗೂ ನಿರಾಶ್ರಿತರಿಗೆ ಗಂಜಿಕೇಂದ್ರಗಳಲ್ಲಿ ಯಾವುದೇ ಕೊರತೆಯಾಗದಂತೆ ನಿಗಾವಹಿಸುವಂತೆ ಸೂಚಿಸಿದರು.ಪುರಸಭಾ ಸದಸ್ಯ ಗೋವಿಂದ ಪ್ರಭು, ಶಿವಪ್ರಸಾದ್ ಬಂಟ್ವಾಳ, ಕಂದಾಯ ನಿರೀಕ್ಷಕ ರಾಮ ಕಾಟಿ ಪಳ್ಳ , ಆಡಳಿತ ಶಾಖೆಯ ಸೀತಾರಾಮ ಕಮ್ಮಾಜೆ , ಪ್ರಕೃತಿ ವಿಕೋಪ ಅಧಿಕಾರಿ ವಿಷು ಕುಮಾರ್ ಸಿಬಂದಿ ಸದಾಶಿವ ಕೈಕಂಬ. ಶೀತಲ್, ಲಕ್ಷ್ಮಣ್ ಸುಂದರ, ಸಿಬಂದಿ ಯಶೋದ, ಬಂಟ್ವಾಳ ನಗರ ಠಾಣಾ ಸಿಬ್ಬಂದಿ, ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಈ ಸಂದರ್ಭ ಹಾಜರಿದ್ದರು.

ಬಂಟ್ವಾಳ ಹಳೇ ಪ್ರವಾಸಿ ಮಂದಿರ, ಪಾಣೆಮಂಗಳೂರು ಶಾರದಾ ಹೈಸ್ಕುಲು ಮತ್ತು ನಾವೂರು ಶಾಲೆಗಳಲ್ಲಿ ಗಂಜಿ ಕೇಂದ್ರ ತೆರೆಯಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಯ ಮೇಲ್ಕಾರ್ ಸೇರಿದಂತೆ ತಾಲೂಕಿನ ಹಲವು ರಸ್ತೆಗಳಲ್ಲಿ ಟ್ರಾಫಿಕ್ ಜಾಮ್, ಸಣ್ಣಪುಟ್ಟ ಅಪಘಾತಗಳು ಉಂಟಾದವು.

ಬಂಟ್ವಾಳದ ನೆರೆಪೀಡಿತ ಪ್ರದೇಶಗಳಿಗೆ ಮಾಜಿ ಸಚಿವ ಬಿ.ರಮಾನಾಥ ರೈ ಸಹಿತ ಕಾಂಗ್ರೆಸ್ ಪಕ್ಷದ ಮುಖಂಡರು ಭೇಟಿ ನೀಡಿದರು. ಈ ಸಂದರ್ಭ ಸೂಕ್ತ ಪರಿಹಾರ ಕ್ರಮ ಕೈಗೊಳ್ಳುವಂತೆ ಮಾಜಿ ಸಚಿವರು ಅಧಿಕಾರಿಗಳಿಗೆ ತಿಳಿಸಿದರು. ನೆರೆ ಪೀಡಿತ ಪ್ರದೇಶಗಳಲ್ಲಿರುವ ಜನರ ಅಹವಾಲುಗಳನ್ನು ರಮಾನಾಥ ರೈ ಆಲಿಸಿದರು.

 

 

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ರಾತ್ರಿಯಾದರೂ ನಿಲ್ಲದ ಮಳೆ, ಬಂಟ್ವಾಳದಲ್ಲಿ ನೆರೆ, ಉಪ್ಪಿನಂಗಡಿಯಲ್ಲಿ ಸಂಗಮ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*