ಜನರ ತೆರಿಗೆ ಹಣವನ್ನು ಬಳಸಿ ಅಭಿವೃದ್ಧಿ ಕಾರ್ಯಗಳಿಗೆ ಬಳಸಲಾಗುತ್ತದೆ. ಕೆಲವೊಂದು ಬಾರಿ ಹಣ ಉಳಿದಿದೆ ಎಂದು ಹಿಂದೆ ಮುಂದೆ ನೋಡದೆ ಯೋಜನೆಗಳನ್ನು ರೂಪಿಸಲಾಗುತ್ತದೆ. ಆದರೆ ಹಾಗಾಗಲು ನನ್ನ ಅವಧಿಯಲ್ಲಿ ಬಿಡುವುದಿಲ್ಲ. ಜನರ ಹಣದ ಒಂದು ಪೈಸೆಯೂ ಪೋಲಾಗಲು ಬಿಡುವುದಿಲ್ಲ. ಶಾಂತಿ, ನೆಮ್ಮದಿಯ ಜೀವನದೊಂದಿಗೆ ಬಂಟ್ವಾಳವನ್ನು ಪ್ರಗತಿಪಥದಲ್ಲಿ ಮುನ್ನಡೆಸಲು ಮುಂದಡಿ ಇಟ್ಟಿದ್ದೇನೆ.
ಹೀಗಂದವರು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ.
ಶನಿವಾರ ಸಂಜೆ ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಪ್ರೆಸ್ ಕ್ಲಬ್ ಸಹಯೋಗದೊಂದಿಗೆ ಪ್ರೆಸ್ ಕ್ಲಬ್ ಕಚೇರಿಯಲ್ಲಿ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಮತ್ತು ಸಂವಾದ ಕಾರ್ಯಕ್ರಮದಲ್ಲಿ ತನ್ನ ಅನಿಸಿಕೆ ವ್ಯಕ್ತಪಡಿಸಿದ ಶಾಸಕ ರಾಜೇಶ್ ನಾಯ್ಕ್, ಕ್ಷೇತ್ರದ ಪ್ರಮುಖ ಕೇಂದ್ರವಾದ ಬಂಟ್ವಾಳದ ಕುರಿತು ತಜ್ಞರನ್ನು ಒಟ್ಟುಗೂಡಿಸಿ ಚಿಂತಕರ ಸಮಿತಿಯನ್ನು ರಚಿಸಲಾಗುವುದು. ಅವರ ಸಲಹೆ ಸೂಚನೆಗಳನ್ನೂ ಯೋಜನೆಗಳನ್ನು ರೂಪಿಸುವಾಗ ಪಡೆಯಲಾಗುವುದು. ದೂರದೃಷ್ಟಿ ಇಲ್ಲದೆ ನಾವು ಯೋಜನೆ ರೂಪಿಸಿದರೆ, ಅದು ವಿಫಲವಾಗುತ್ತದೆ. ಜನರ ದುಡ್ಡು ಪೋಲಾಗುತ್ತದೆ. ದುಡ್ಡು ಬಂದಿದೆ ಎಂದು ಏನೇನೋ ಮಾಡಿ ಹಾಕುವುದಲ್ಲ, ಹಾಗಾಗಲು ಬಿಡುವುದಿಲ್ಲ ಎಂದು ಹೇಳಿದರು.
ಬಂಟ್ವಾಳಕ್ಕೆ ಹಿಂದೆಯೇ ರೂಪಿಸಲಾದ ಒಳಚರಂಡಿ ಯೋಜನೆ ಹಾಗೂ ಅದರ ಎರಡನೇ ಹಂತದ ಕಾರ್ಯದ ಕುರಿತು ಪ್ರಸ್ತಾಪಿಸಿದ ಶಾಸಕರು, ಯೋಜನೆಯನ್ನು ಕಡಿಮೆ ವೆಚ್ಚದಲ್ಲಿ ಹೆಚ್ಚು ಲಾಭ ತರುವಂತೆ ರೂಪಿಸಬೇಕು, ಹಣವನ್ನು ನಿಗದಿಪಡಿಸುವಾಗ ಅದರಿಂದ ಜನರಿಗೇನಾದರೂ ಪ್ರಯೋಜನವಾಗುತ್ತದೆಯೇ ಎಂಬುದನ್ನು ಗಮನದಲ್ಲಿರಿಸಿಕೊಳ್ಳಬೇಕು. ಆದರೆ ಇಲ್ಲಿ ಹಲವು ಕೆಲಸಗಳು ಜನರನ್ನು ತಲುಪಲೇ ಇಲ್ಲ ಎಂದರು.
ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ, ತಾಪಂ ಜಾಗದಲ್ಲಿ ನಿರ್ಮಿಸಲು ಉದ್ದೇಶಿಸಿದ ಖಾಸಗಿ ಬಸ್ ನಿಲ್ದಾಣ ಸಹಿತ ಹಲವು ವಿಚಾರಗಳ ಕುರಿತು ಉತ್ತರಿಸಿದ ಶಾಸಕರು, ಮಿನಿ ವಿಧಾನಸೌಧ ಇರಬೇಕಾದಲ್ಲಿ ಬಸ್ ನಿಲ್ದಾಣ, ಬಸ್ ನಿಲ್ದಾಣ ಇರಬೇಕಾದಲ್ಲಿ ಮಿನಿ ವಿಧಾನಸೌಧ ನಿರ್ಮಾಣವಾಗಿದೆ. ಎಲ್ಲಿ ನಿರ್ಮಾಣಗೊಂಡರೆ ಜನರಿಗೆ ಹೆಚ್ಚು ಪ್ರಯೋಜನ ಎಂಬ ಕುರಿತು ವಿಶ್ಲೇಷಿಸದೆ ಯೋಜನೆಗಳನ್ನು ರೂಪಿಸಿದ ಫಲವಾಗಿ ಇಂದು ಉಪಯೋಗಶೂನ್ಯವಾಗುವಂತೆ ಭಾಸವಾಗುತ್ತದೆ. ಹೀಗಾಗಿ ಇರುವುದನ್ನು ಯಾವ ರೀತಿ ಸದ್ಪಳಕೆ ಮಾಡಿಕೊಳ್ಳುವುದು ಎಂಬುದನ್ನು ಇನ್ನು ಮೂರು ತಿಂಗಳಲ್ಲಿ ಅಧ್ಯಯನ ಮಾಡಿ ಮಾಹಿತಿ ನೀಡುತ್ತೇನೆ ಎಂದರು.
ಜನರಿಗೆ ಪ್ರತಿಯೊಂದೂ ಮಾಹಿತಿ:
ನಾನು ಮಾಡುವ ಪ್ರತಿಯೊಂದು ಕೆಲಸವನ್ನು ಪಾರದರ್ಶಕವಾಗಿಸುವೆ. ಪ್ರತಿಯೊಂದನ್ನೂ ಜನರಿಗೆ ತಲುಪಿಸುವ ಕಾರ್ಯ ನಡೆಸುವೆ ಎಂದ ಅವರು ಕ್ಷೇತ್ರದ ಕುರಿತು ವಿಧಾನಸಭೆ ಅಧಿವೇಶನದಲ್ಲಿ ಪ್ರಶ್ನೆಗಳನ್ನು ಎತ್ತಿರುವುದಾಗಿ ತಿಳಿಸಿದರು.
ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮೌನೇಶ ವಿಶ್ವಕರ್ಮ ಅಧ್ಯಕ್ಷತೆಯನ್ನು ವಹಿಸಿದ್ದರು. ಪ್ರೆಸ್ ಕ್ಲಬ್ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ ಶಾಸಕರನ್ನು ಅಭಿನಂದಿಸಿದರು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ವೆಂಕಟೇಶ ಬಂಟ್ವಾಳ ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ ಪತ್ರಕರ್ತ ಹರೀಶ ಮಾಂಬಾಡಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಪತ್ರಕರ್ತ ರತ್ನದೇವ ಪುಂಜಾಲಕಟ್ಟೆ ಕಾರ್ಯಕ್ರಮ ನಿರೂಪಿಸಿದರು.
Be the first to comment on "ಜನರ ತೆರಿಗೆ ಹಣದ ಒಂದು ಪೈಸೆಯೂ ಪೋಲಾಗಲು ಬಿಡುವುದಿಲ್ಲ: ರಾಜೇಶ್ ನಾಯ್ಕ್"