www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಕಲ್ಲಡ್ಕದಿಂದ ನೆಟ್ಲ ಕಡೆಗೆ ತೆರಳುವ ರಸ್ತೆಯಲ್ಲಿ ಬಲ್ಲೆಕೋಡಿ ಪಕ್ಕ ಇರುವ ರೈಲ್ವೆ ಕೆಳಸೇತುವೆಗೆ ಎರಡೂ ಬದಿಗಳಿಂದ ತಲುಪುವ ರಸ್ತೆಯ ಸಮಸ್ಯೆ ಇದು. ಮಂಗಳವಾರ ಬೆಳಗ್ಗೆ ಬಸ್ಸೊಂದು ಇದೇ ರಸ್ತೆಯ ಹೊಂಡಕ್ಕೆ ಹೂತುಹೋಗಿ ಶಾಲಾ ಮಕ್ಕಳ ಕ್ಲಾಸು ತಪ್ಪಿದರೆ, ವಾಹನ ಸವಾರರು ಪರಿಪಾಡಲು ಪಡಬೇಕಾಯಿತು. ಕಳೆದ ಕೆಲ ದಿನಗಳಿಂದ ಕೆಸರುಮಿಶ್ರಿತ ರಸ್ತೆಯಲ್ಲಿ ಓಡಾಡುವ ಅನಿವಾರ್ಯತೆ ಹಳ್ಳಿ ಜನರಿಗಿದೆ.
ಕಲ್ಲಡ್ಕದಿಂದ ವಿಟ್ಲಕ್ಕೆ ತೆರಳುವ ರಸ್ತೆಯ ಕುಂಟಿಪಾಪು ಕ್ರಾಸ್ ಮೂಲಕವಾಗಿ ಬಲಕ್ಕೆ ತಿರುಗಿದರೆ ರೈಲ್ವೆ ಮಾರ್ಗವೊಂದು ಅಡ್ಡಲಾಗಿ ಸಿಗುತ್ತದೆ. ರೈಲ್ವೆ ಗೇಟ್ ಈಗ ಶಾಶ್ವತವಾಗಿ ಮುಚ್ಚಿದೆ. ಅಲ್ಲಿನ ರಸ್ತೆಯ ಸಂಪರ್ಕವನ್ನೂ ಕಡಿತ ಮಾಡಲಾಗಿದೆ. ಕೆಳಗೆ ರೈಲು ಹೋಗುತ್ತಿದ್ದರೂ ಮೇಲೆ ಸೇತುವೆಯ ಮೂಲಕ ಇತರ ವಾಹನಗಳು ನಿರಾತಂಕವಾಗಿ ಸಾಗಬಹುದು ಎಂಬ ಉದ್ದೇಶದಿಂದ ನಿರ್ಮಿಸಿದ ಸೇತುವೆಯನ್ನು ಚುನಾವಣೆಗೆ ಮುನ್ನ ವಾಹನ ಸಂಚಾರಕ್ಕೆ ಮುಕ್ತ ಮಾಡಲಾಯಿತು. ಆದರೆ ಅಲ್ಲಿಗೆ ತಲುಪಲು ಧೂಳುಮಿಶ್ರಿತ ರಸ್ತೆಯೇ ಗತಿ ಎಂಬಂತಾಯಿತು. ಸಾರ್ವಜನಿಕರು ಇಂದು ಅಥವಾ ನಾಳೆ ಸರಿಯಾಗಬಹುದು ಎಂದು ಅಡ್ಜ್ ಜಸ್ಟ್ ಮಾಡಿಕೊಂಡು ಬರುತ್ತಿದ್ದುದನ್ನು ಜನರೂ ಒಪ್ಪಿಕೊಂಡು ಬಿಟ್ಟಿದ್ದಾರೆ ಎಂದು ಭಾವಿಸಲಾಯಿತೋ ಏನೋ, ಧಾರಾಕಾರ ಮಳೆಗೆ ಕೆಸರುಮಿಶ್ರಿತ ಸಂಪರ್ಕ ರಸ್ತೆಯಲ್ಲಿ ಹೊಂಡಗಳು ಎದ್ದಿವೆ. ವಾಹನ ಸಂಚಾರ ಹಾಗೂ ನಡೆದಾಡಲು ಇಲ್ಲಿ ಪ್ರಯಾಸಪಡುವಂತಾಗಿದೆ. ನೆಟ್ಲ ಶ್ರೀ ನಿಟಿಲಾಕ್ಷ ದೇವಸ್ಥಾನ, ಸಹಿತ ಸಾಲೆತ್ತೂರು, ಬೋಳಂತೂರು, ಬಲ್ಕಟ್ಟ, ಮಂಚಿ ಕಡೆಗಳಿಗೆ ಕಲ್ಲಡ್ಕದಿಂದ ಹೋಗಬೇಕಾದರೆ ಈ ರಸ್ತೆ ಅನುಕೂಲ. ದಿನವೊಂದಕ್ಕೆ ನೂರಾರು ವಾಹನಗಳು ಸಂಚರಿಸುವ ಈ ರಸ್ತೆ ಹೆಸರಿಗಷ್ಟೇ ಹಳ್ಳಿ ರಸ್ತೆ.
Be the first to comment on "ಸೇತುವೆ ತಲುಪುವ ರಸ್ತೆ ಹೇಗಿದೆ ಗೊತ್ತಾ?"