Editor: Harish Mambady
ಮಳೆಗಾಲಕ್ಕೆ ಮುನ್ನ ಎಲ್ಲೆಲ್ಲಿ ಚರಂಡಿ ಇದೆಯೋ ಅಲ್ಲೆಲ್ಲ ಹೂಳೆತ್ತದ ಪರಿಣಾಮವನ್ನು ಬುಧವಾರ ಬಂಟ್ವಾಳ ಪುರಸಭಾ ವ್ಯಾಪ್ತಿಯ ಜನತೆ ಅನುಭವಿಸಬೇಕಾಯಿತು. ಬಂಟ್ವಾಳ, ಬಿ.ಸಿ.ರೋಡಿನ ರಸ್ತೆ, ಮನೆಗಳ ಪಕ್ಕ ಹೊಳೆಯಂತೆ ನೀರು ಹರಿದಿದ್ದು, ಧಾರಾಕಾರ ಮಳೆಯ ಪರಿಣಾಮ ನೂರಾರು ಮಂದಿ ಸಂಕಷ್ಟಕ್ಕೀಡಾದರು.
ಕಳೆದ ಕೆಲ ದಿನಗಳಿಂದ ಸುರಿತ್ತಿರುವ ಮಳೆ ಬುಧವಾರ ತೀವ್ರಗೊಂಡಿದ್ದು, ಬಂಟ್ವಾಳ ಮತ್ತು ಬಿ.ಸಿ.ರೋಡಿನ ಹಲವೆಡೆ ಕೃತಕ ನೆರೆ ಕಾಣಿಸಿಕೊಂಡಿದೆ. ಬಿ.ಸಿ.ರೋಡಿನ ಬಸ್ ನಿಲ್ದಾಣದ ಹಿಂಬದಿಯ ರಸ್ತೆ ಸಂಪೂರ್ಣ ಹೊಳೆಯಂತಾಗಿದ್ದು, ಮೊಣಕಾಲಿನವರೆಗೆ ನೀರು ತುಂಬಿದೆ. ಇದರಿಂದ ಆಸುಪಾಸಿನ ಸುಮಾರು ನಲ್ವತ್ತಕ್ಕೂ ಅಧಿಕ ಮಳಿಗೆ, ಮನೆಗಳಿಗೆ ತೆರಳುವವರು ತೊಂದರೆ ಅನುಭವಿಸುವಂತಾಗಿದೆ. ಬಂಟ್ವಾಳ ಪುರಸಭಾ ವ್ಯಾಪ್ತಿಯ ಬಿ.ಮೂಡ ಮತ್ತು ಅಮ್ಟಾಡಿ ಗ್ರಾಪಂ ವ್ಯಾಪ್ತಿಗೊಳಪಡುವ ಭಂಡಾರಿಬೆಟ್ಟು ಎಂಬಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿದೆ.
ಮಳೆ ನೀರು ಸರಾಗವಾಗಿ ಹರಿದುಹೋಗಲು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಈ ಸಮಸ್ಯೆ ಉದ್ಭವವಾಗಿದೆ. ವಸತಿ ಸಮುಚ್ಛಯಗಳ ಪಕ್ಕ ನೀರು ಕೆರೆಯಂತೆ ಕಂಡುಬಂದಿತ್ತು. ಬಿ.ಸಿ.ರೋಡಿನಿಂದ ಬಂಟ್ವಾಳ ಬೈಪಾಸ್ ಕಡೆಗೆ ಹೋಗುವ ರಸ್ತೆಯ ಪಕ್ಕ ಈ ಸಮಸ್ಯೆ ಉದ್ಭವವಾಗಿದ್ದು, ಅಲ್ಲಿಂದ ಸಂಪರ್ಕಿಸುವ ಹಲವಾರು ಮನೆಗಳಿಗೆ ತೆರಳುವವರು ತೀವ್ರ ತೊಂದರೆ ಅನುಭವಿಸಿದರು. ಶಾಲೆಯಿಂದ ಮರಳಿ ಬರುವ ಮಕ್ಕಳು ತಮ್ಮ ಮನೆಗಳಿಗೆ ತೆರಳಲು ಪ್ರಯಾಸಪಡುವ ಸ್ಥಿತಿ ಉದ್ಭವವಾಯಿತು.
ಮೇಲ್ಕಾರ್ ಸಹಿತ ಹಲವೆಡೆ ಮಳೆಯಿಂದ ಸಮಸ್ಯೆಗಳು ಉದ್ಭವವಾಗಿವೆ.. ಪೂಂಜರಕೋಡಿ ಚಂದ್ರಶೇಖರ ಆಚಾರ್ಯ ಮನೆ ಬಳಿ ಗುಡ್ಡ ಜರಿದು ಬೈಕ್ ಗೆ ಹಾನಿಯಾಗಿದೆ. ಬಿ.ಸಿ.ರೋಡ್ ಸ್ಟೇಟ್ ಬ್ಯಾಂಕ್ ಎದುರು ಎಂದಿನಂತೆಯೇ ನೀರು ನಿಂತಿದ್ದರೆ, ಫ್ಲೈಓವರ್ ಅಡಿಯೂ ಕೊಳದಂಥ ಸ್ಥಿತಿ ಉದ್ಭವವಾಗಿತ್ತು. ಬಿ.ಸಿ.ರೋಡಿನ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದ್ದರೆ, ರಸ್ತೆ ಪಕ್ಕ, ಬಸ್ ನಿಲ್ದಾಣ ಪಕ್ಕ ಕೆಸರು ರಾಡಿಯಾಗಿದ್ದು, ಪ್ರಯಾಣಿಕರು ನಿಲ್ಲಲು ಪ್ರಯಾಸಪಡಬೇಕಾಯಿತು.
ನೀರು ನುಗ್ಗಿದ ಪ್ರದೇಶಗಳಿಗೆ ಬಂಟ್ವಾಳ ತಹಶೀಲ್ದಾರ್ ಸಂತೋಷ್, ತಹಶೀಲ್ದಾರ್ ಸಂತೋಷ್ ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ ನವೀನ್ ಬೆಂಜನಪದವು , ಪುರಸಭೆಯ ಅಧ್ಯಕ್ಷ ರಾಮಕೃಷ್ಣ ಆಳ್ವ, ಪುರಸಭಾ ಸದಸ್ಯರಾದ ಜಗದೀಶ ಕುಂದರ್ , ದೇವದಾಸ ಶೆಟ್ಟಿ, ಗಂಗಾದರ್ ಇಂಜಿನಿಯರ್ ಡೊಮಿನಿಕ್ ಡಿ ಮಿಲ್ಲೋ , ಗ್ರಾಮ ಲೆಕ್ಕಾಧಿಕರಿ ಶಿವಾನಂದ ನಾಟೇಕಾರ್ ಸಿಬ್ಬಂದಿ ಸದಾಶಿವ ಕೈಕಂಬ .ಶಿವ ಪ್ರಸಾದ ಬಂಟ್ವಾಳ, ಅಗ್ನಿ ಶಾಮಕ ದಳ ಸಿಬ್ಬಂದಿ ಸ್ಥಳದಲ್ಲಿ ದ್ದು ಮುನ್ನೇಚರಿಕಾ ಕ್ರಮಗಳನ್ಮು ಕೈಗೊಂಡರು. ಪುರಸಭಾ ಇಲಾಖೆ ಜೆಸಿಬಿಗಳನ್ನು ಬಳಸಿ ಚರಂಡಿ ಹೂಳೆತ್ತುವ ಕೆಲಸ ಮಾಡಲಾಯಿತು.
Be the first to comment on "ಬಂಟ್ವಾಳ, ಬಿ.ಸಿ.ರೋಡಿನಲ್ಲಿ ಕೃತಕ ನೆರೆ, ಮನೆಗಳಿಗೆ ನುಗ್ಗಿದ ನೀರು"