ಒಂದೆಡೆ ಧಾರಾಕಾರ ಮಳೆ, ಮತ್ತೊಂದೆಡೆ ಕುಸಿಯಿತು ಮೂಲರಪಟ್ನ ಸೇತುವೆ

www.bantwalnews.comಸಂಪಾದಕ: ಹರೀಶ ಮಾಂಬಾಡಿ

ಇದು ಕಾಕತಾಳೀಯವೋ, ಬೇರೇನಾದರು ಕಾರಣವಿದೆಯೋ ಎಂಬುದನ್ನು ತನಿಖೆ ನಡೆಸಬೇಕಾದವರು ಅಧಿಕಾರಿಗಳು, ಜನಪ್ರತಿನಿಧಿಗಳು. ಬಸ್ಸೊಂದು ಆಗ ತಾನೇ ಬಂದು ತೆರಳಿದ ನಂತರ ಯಾರಿಗೂ ಪ್ರಾಣಾಪಾಯವಾಗದೇ ಉಳಿದದ್ದಕ್ಕೆ ದೇವರಿಗೇ ಥ್ಯಾಂಕ್ಸ್ ಹೇಳಬೇಕಷ್ಟೇ. ಏಕೆಂದರೆ ಫಲ್ಗುಣಿ ನದಿಗೆ ಅಡ್ಡಲಾಗಿ ಹಾಕಿದ ಸೇತುವೆಯ ಎಂಟು ಅಂಕಣಗಳಲ್ಲಿ ಎರಡು ಕುಸಿದುಬಿದ್ದ ಸುದ್ದಿ ಸೋಮವಾರ ಸಂಜೆಯಿಂದ ಹರಿದಾಡತೊಡಗಿದಾಗ ಯಾರೂ ನಂಬಲಿಲ್ಲ. ಆದರೆ ಹೌದು. ಮೂಲರಪಟ್ನ ಸೇತುವೆ ಕುಸಿದಿದೆ. ರಸ್ತೆ ಸಾರಿಗೆಗೆ ಆಧಾರವಾಗಿ, ಊರುಗಳನ್ನು ಬೆಸೆಯುವ ಕೊಂಡಿ ಕಳಚಿಬಿದ್ದಿದೆ. ಲೋಕೋಪಯೋಗಿ ಇಲಾಖೆಯ ಮಂಗಳೂರು ಉಪವಿಭಾಗ ವ್ಯಾಪ್ತಿಗೆ ಸೇತುವೆ ಒಳಪಡುತ್ತದೆ. ಸೇತುವೆಯ ಒಂದು ಬದಿ ಬಂಟ್ವಾಳ ತಾಲ್ಲೂಕಿನ ಅರಳ ಗ್ರಾಮದಲ್ಲಿದ್ದರೆ, ಇನ್ನೊಂದು ಭಾಗ ಮಂಗಳೂರು ತಾಲ್ಲೂಕಿನ ಮುತ್ತೂರು ಭಾಗದಲ್ಲಿದೆ.

ಏನಾಯಿತು?

ಸೋಮವಾರ ಸಂಜೆ 6.15ಕ್ಕೆ ಬಂಟ್ವಾಳ ತಾಲೂಕಿನ ಸೊರ್ನಾಡು ಮತ್ತು ಮಂಗಳೂರು ತಾಲೂಕಿನ ಕುಪ್ಪೆಪದವು ಸಂಪರ್ಕಿಸುವ ಸೇತುವೆ ತುಂಬಿ ಹರಿಯುತ್ತಿರುವ ಫಲ್ಗುಣಿ ನದಿಗೆ ಕುಸಿದುಬಿತ್ತು. ಮಂಗಳೂರು ಭಾಗಕ್ಕೆ ಸೇರಿದ 2 ಮತ್ತು 3ನೇ ಅಂಕಣ ಕುಸಿದುಬಿದ್ದಿದೆ. ಈ ಹೊತ್ತಿನಲ್ಲಿ ಬಂಟ್ವಾಳದ ಭಾಗವೂ ಮುರಿದಿದೆ. ಘಟನೆ ನಡೆಯುವ ಕೆಲ ಕ್ಷಣಗಳ ಮೊದಲು ಅದ್ಯಪಾಡಿಗೆ ತೆರಳುವ ಬಸ್ ಸೇತುವೆ ದಾಟಿದ ಕಾರಣ ಯಾವುದೇ ಅನಾಹುತ ಸಂಭವಿಸಲಿಲ್ಲ. ಹಾಗೂ ಯಾವುದೇ ವಾಹನಗಳೂ ಆ ಸಂದರ್ಭ ಓಡಾಡುತ್ತಿರಲಿಲ್ಲ. ಸೊರ್ನಾಡಿನಿಂದ ಗುರುಪುರಕ್ಕೆ ಈ ಮಾರ್ಗ ಹತ್ತಿರವಾಗಿತ್ತು.

ಸೇತುವೆ ಕುಸಿದ ಕಾರಣ ಸೊರ್ನಾಡು – ಗುರುಪುರ ಮಾರ್ಗ ಬಂದ್ ಆಗಿದೆ.

ಎಂಟು ಅಂಕಣಗಳು (ಕಂಬ) ಹೊಂದಿರುವ ಸೇತುವೆ ಕುಸಿದು ಬಿದ್ದುದನ್ನು ಗಮನಿಸಿದ ಸ್ಥಳೀಯರು ಕೂಡಲೇ ಬಂಟ್ವಾಳ ಪೊಲೀಸರಿಗೆ ಮಾಹಿತಿ ನೀಡಿದರು. ತಕ್ಷಣವೇ ಎರಡೂ ಕಡೆಗಳ ಸಂಚಾರ ನಿರ್ಭಂಧಿಸಲಾಯಿತು. ಹೀಗಾಗಿ ಇನ್ನು ಕೆಲ ತಿಂಗಳುಗಳ ಕಾಲವಂತೂ ಅರಳ, ಮೂಲರಪಟ್ನ, ಬಡಗಬೆಳ್ಳೂರು, ಕೊತ್ತೂರು, ಮುತ್ತೂರು ಪ್ರದೇಶಗಳ ನೂರಾರು ಜನರು ನಿತ್ಯ ಕೆಲಸಗಳಿಗೆ ಬಂಟ್ವಾಳ, ಮಂಗಳೂರುಗಳಿಗೆ ತೆರಳಲು ಸುತ್ತು ಬಳಸುವ ದಾರಿಯನ್ನು ಹಿಡಿಯಲೇಬೇಕಾಗುತ್ತದೆ.

ಧಾರಾಕಾರ ಮಳೆಗೆ ಸೇತುವೆ ಕುಸಿದಿದೆ ಎನ್ನಲಾಗುತ್ತಿದ್ದರೂ ಅದರ ಅಂಕಣಗಳು ಶಿಥಿಲಗೊಂಡಿರುವುದು ಕುಸಿತಕ್ಕೆ ಕಾರಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿರುವ ಸ್ಥಳೀಯ ಶಾಸಕರಾದ ರಾಜೇಶ್ ನಾಯ್ಕ್ ಮತ್ತು ವೈ.ಭರತ್ ಶೆಟ್ಟಿ ಬದಲಿ ವ್ಯವಸ್ಥೆಯಾಗುವವರೆಗೆ ಸಹಕರಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಈ ಘಟನೆಯಿಂದ ಬಂಟ್ವಾಳ ತಾಲೂಕಿನ ಬಡಬೆಳ್ಳೂರು, ಅರಳ ಹಾಗೂ ಮುತ್ತೂರು ಕೊಳವೂರು ಸಂಪರ್ಕ ನೇರವಾಗಿ ಕಡಿದುಹೋಗಿದ್ದರೆ, ಸೋರ್ನಾಡಿನಿಂದ ಕುಪ್ಪೆಪದವಿಗೆ ಸಂಚರಿಸುವವರೆಲ್ಲ ದಿಕ್ಕು ಬದಲಾಯಿಸಬೇಕಾಗಿದೆ. ಬಂಟ್ವಾಳ ತಾಲೂಕಿನ ಸೊರ್ನಾಡಿನಿಂದ ಮಂಗಳೂರಿನ ಕುಪ್ಪೆಪದವು, ಕೈಕಂಬ, ಕಟೀಲು, ಇರುವೈಲು, ಎಡಪದವು, ಗಂಜೀಮಠ ಕಡೆಗಳಿಗೆ ಈ ಹಳ್ಳಿ ಮಾರ್ಗ ಸಹಕಾರಿಯಾಗಿತ್ತು.

ಸದ್ಯಕ್ಕೆ ಸೇತುವೆಯ ಮಂಗಳೂರು ಮತ್ತು ಬಂಟ್ವಾಳ ಕಡೆ ಎರಡೂ ಕಡೆ ಬ್ಯಾರಿಕೇಡ್ ಹಾಕಲಾಗಿದೆ. ಅಕ್ಕಪಕ್ಕದ ಅಂಕಣವೂ ಕುಸಿತದ ಭೀತಿಯಲ್ಲಿರುವ ಕಾರಣ ವಾಹನ ಸಂಚಾರ ಕಷ್ಟಸಾಧ್ಯ.

ಮೂಲರಪಟ್ನದಲ್ಲಿ ಸೇತುವೆ ಕುಸಿದ ಹಿನ್ನೆಲೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭ ಕ್ಷೇತ್ರ ಬಿಜೆಪಿ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ, ತಾಪಂ ಸದಸ್ಯ ಪ್ರಭಾಕರ ಪ್ರಭು, ಪುರುಷೋತ್ತಮ ಶೆಟ್ಟಿ, ಗೋವಿಂದ ಪ್ರಭು, ಗಣೇಶ್ ರೈ ಮಾಣಿ, ಪವನ್ ಕುಮಾರ್ ಶೆಟ್ಟಿ, ದೇವಪ್ಪ ಪೂಜಾರಿ, ರಮಾನಾಥ ರಾಯಿ ಮೊದಲಾದವರು ಉಪಸ್ಥಿತರಿದ್ದರು. ಲೋಕೋಪಯೋಗಿ ಇಂಜಿನಿಯರ್ ಎಇಇ ವೈ.ಉಮೇಶ್ ಭಟ್ ಅವರೊಂದಿಗೆ ಮಾತನಾಡಿ, ಮಾಹಿತಿ ಪಡೆದ ರಾಜೇಶ್ ನಾಯ್ಕ್, ಮಂಗಳವಾರ ಮತ್ತೆ ಘಟನೆಯ ನಂತರ ಬದಲಿ ವ್ಯವಸ್ಥೆ ಕುರಿತು ಮಾತುಕತೆ, ಪರಿಶೀಲನೆ ನಡೆಸುವುದಾಗಿ ತಿಳಿಸಿದರು. ತಾಪಂ ಇಒ ರಾಜಣ್ಣ ಮತ್ತಿತರರು ಈ ಸಂದರ್ಭ ಪೂರಕ ಮಾಹಿತಿ ನೀಡಿದರು.

ಸ್ಥಳಕ್ಕೆ ಮಂಗಳೂರು ಉತ್ತರ ಶಾಸಕ ವೈ. ಭರತ್ ಶೆಟ್ಟಿ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೇ ವೇಳೆ ಮಾಜಿ ಸಚಿವ ಬಿ.ರಮಾನಾಥ ರೈ ಅವರೂ ಸ್ಥಳಕ್ಕೆ ಭೇಟಿ ನೀಡಿದರು.

ಮೂಲರಪಟ್ನದಲ್ಲಿ ಸೇತುವೆ ಕುಸಿದ ಹಿನ್ನೆಲೆಯಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭ ಜಿಪಂ ಸದಸ್ಯ ಚಂದ್ರಪ್ರಕಾಶ ಶೆಟ್ಟಿ, ತಾಪಂ ಉಪಾಧ್ಯಕ್ಷ ಅಬ್ಬಾಸ್ ಆಲಿ, ಬೇಬಿ ಕುಂದರ್, ಜಗದೀಶ ಕುಂದರ್, ಶಬೀರ್ ಸಿದ್ದಕಟ್ಟೆ, ಡೆನ್ಜಿಲ್ ನೊರೊನ್ಹ, ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.

ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಒಂದೆಡೆ ಧಾರಾಕಾರ ಮಳೆ, ಮತ್ತೊಂದೆಡೆ ಕುಸಿಯಿತು ಮೂಲರಪಟ್ನ ಸೇತುವೆ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*