ಅಡ್ಯನಡ್ಕ ಜನತಾ ಪ್ರೌಢಶಾಲೆಯ ‘ಶ್ಯಾಮಲಾ ಇಕೋ ಕ್ಲಬ್’ ಮತ್ತು ಜನತಾ ಪ.ಪೂ.ಕಾಲೇಜಿನ ‘ವನಸಿರಿ ಇಕೋ ಕ್ಲಬ್’ ಇವುಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಜೂ.5ರಂದು ಜರುಗಿತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಪುತ್ತೂರು ಸಂತ ಫಿಲೋಮಿನಾ ಪದವಿ ಕಾಲೇಜಿನ ಸಸ್ಯಶಾಸ್ತ್ರ ಪ್ರಾಧ್ಯಾಪಕ ಡಾ.ಪ್ರಸನ್ನ ರೈ ಅವರು ಉಪನ್ಯಾಸ ನೀಡಿ, ಪರಿಸರವು ನಮಗೆ ನಾಯಕತ್ವದ ಹೊಣೆ ಮತ್ತು ಕರ್ತವ್ಯವನ್ನು ವಹಿಸಿಕೊಟ್ಟಿದೆ. ಪರಿಸರ ಸಂರಕ್ಷಣೆಯ ಜವಾಬ್ದಾರಿಯನ್ನು ನಿರ್ವಹಿಸುತ್ತಲೇ ಪರಿಸರ ಪ್ರಜ್ಞೆಯನ್ನು ರೂಢಿಸಿಕೊಳ್ಳಬೇಕು. ಭೌಗೋಳಿಕ ಪರಿಸರದ ಸ್ವಾಸ್ಥ್ಯ ಮತ್ತು ಸಮತೋಲನ ನಿಭಾಯಿಸುವಲ್ಲಿ ಎಚ್ಚರ ಹಾಗೂ ಕಳಕಳಿ ಹೊಂದಿರಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಅವರು ಜನತಾ ಪ.ಪೂ.ಕಾಲೇಜಿನ ಇಕೋ ಕ್ಲಬ್ ಮತ್ತು ಸಾಹಿತ್ಯ ಸಂಘ ಅಲ್ಲದೆ ಜನತಾ ಪ್ರೌಢಶಾಲೆಯ ಇಕೋ ಕ್ಲಬ್, ಸಾಹಿತ್ಯ ಸಂಘ, ವಿಜ್ಞಾನ ಸಂಘ, ಸಮಾಜ ವಿಜ್ಞಾನ ಸಂಘ, ಕ್ರೀಡಾ ಸಂಘ ಮತ್ತು ಗ್ರಾಹಕ ಸಂಘ ಇವುಗಳನ್ನು ಉದ್ಘಾಟಿಸಿದರು.
ಜನತಾ ವಿದ್ಯಾಸಂಸ್ಥೆಗಳ ಸಂಚಾಲಕಿ ಡಾ. ಅಶ್ವಿನಿ ಕೃಷ್ಣಮೂರ್ತಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಜಾಗತಿಕ ತಾಪಮಾನ ಏರಿಕೆ ಮತ್ತು ಪಾರಿಸರಿಕ ಪ್ರದೂಷಣೆಯಿಂದಾಗಿ ಜೀವಜಗತ್ತಿನ ಒಂದು ಭಾಗ ಅಳಿವಿನ ಸನ್ನಾಹದಲ್ಲಿದೆ. ಆದುದರಿಂದ ನಾವು ಇಂದು ಪರಿಸರ ಸಂರಕ್ಷಣೆಯ ಪಣತೊಡಬೇಕು ಎಂದರು.
ಜನತಾ ವಿದ್ಯಾಸಂಸ್ಥೆಗಳ ಆಡಳಿತಾಧಿಕಾರಿ ರಮೇಶ್ ಎಂ. ಬಾಯಾರ್, ಜನತಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಟಿ.ಆರ್ ನಾಯ್ಕ್ ಹಾಗೂ ಜನತಾ ಪ. ಪೂ.ಕಾಲೇಜಿನ ಪ್ರಾಂಶುಪಾಲ ಡಿ. ಶ್ರೀನಿವಾಸ್ ಮಾತನಾಡಿದರು. ಜೀವಶಾಸ್ತ್ರ ಉಪನ್ಯಾಸಕ ಹಾಗೂ ಇಕೋ ಕ್ಲಬ್ ಸಂಘಟಕ ರವಿಕುಮಾರ್ ಆರ್.ಎಸ್. ಅತಿಥಿಗಳನ್ನು ಪರಿಚಯಿಸಿದರು. ಶ್ಯಾಮಲ ಇಕೋ ಕ್ಲಬ್ ಮಾರ್ಗದರ್ಶಕ ಶಿಕ್ಷಕಿ ಕುಸುಮಾವತಿ ಮಾರ್ಗದರ್ಶನ ನೀಡಿದರು. ಅರ್ಥಶಾಸ್ತ್ರ ಉಪನ್ಯಾಸಕಿ ವೀಣಾ ಟಿ. ಹಾಗೂ ವಾಣಿಜ್ಯ ವಿಭಾಗದ ಉಪನ್ಯಾಸಕಿ ಅನಿತಾ ಬಿ. ಸಹಕರಿಸಿದರು.
ಪರಿಸರ ದಿನದ ಪ್ರಯುಕ್ತ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳು ಪರಿಸರ ಗೀತೆ, ಭಾಷಣ, ಸಮೂಹಗಾನ ನಡೆಸಿಕೊಟ್ಟರು. ಧನಂಜಯ ಸ್ವಾಗತಿಸಿ, ಚರಣ್ ರಾಜ್ ರೈ ವಂದಿಸಿದರು. ಕೃಷ್ಣ ಶರ್ಮ ಹಾಗೂ ಲಿಶ್ಮಿತ ಡಿಸೋಜ ನಿರೂಪಿಸಿದರು.
ಅಪರಾಹ್ನ ಸಂಸ್ಥೆಯ ವಠಾರದಲ್ಲಿ ವಿದ್ಯಾರ್ಥಿಗಳಿಂದ ಶಾಲಾ ವನ ಮತ್ತು ಕೈತೋಟ ನಿರ್ಮಾಣ ಹಾಗೂ ಗಿಡ ನೆಡುವ ಕಾರ್ಯಕ್ರಮ ನಡೆಯಿತು.
Be the first to comment on "ಅಡ್ಯನಡ್ಕ : ಪರಿಸರ ದಿನಾಚರಣೆ, ವಿವಿಧ ಸಂಘಗಳ ಉದ್ಘಾಟನೆ"