www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಖ್ಯಾತ ಫೊಟೋಜರ್ನಲಿಸ್ಟ್ ಗಳಲ್ಲಿ ಓರ್ವರಾದ ಕೇಶವ ವಿಟ್ಲ ಇನ್ನಿಲ್ಲ. ಸೋಮವಾರ ಬೆಳಗ್ಗೆ ಅವರು ನಿಧನಹೊಂದಿದ್ದಾರೆ. ಬಂಟ್ವಾಳ ತಾಲೂಕಿನ ವಿಟ್ಲದವರಾದ ಅವರು ನಾನಾ ಪತ್ರಿಕೆಗಳಲ್ಲಿ ಕೆಲಸ ಮಾಡಿದವರು. 57ರ ಹರೆಯದ ಅವರು ಮುಂಗಾರು ಪತ್ರಿಕೆ ಮೂಲಕ ಪತ್ರಿಕಾ ಛಾಯಾಗ್ರಾಹಕರಾಗಿ ವೃತ್ತಿಜೀವನ ಆರಂಭಿಸಿದವರು. ಬೆಂಗಳೂರಿನ ಇಂಡಿಯನ್ ಎಕ್ಸ್ ಪ್ರೆಸ್ ಬಳಗದಲ್ಲಿ ಸುದೀರ್ಘ ಕಾಲ ಕರ್ತವ್ಯ ಸಲ್ಲಿಸಿದ ಬಳಿಕ ಹವ್ಯಾಸಿ ಛಾಯಾಗರಾಹಕರಾಗಿ ನಾನಾ ಪತ್ರಿಕೆಗಳಿಗೆ ಫೊಟೋಗಳನ್ನು ಒದಗಿಸುತ್ತಿದ್ದರು. ಪತ್ರಿಕಾ ಛಾಯಾಗ್ರಾಹಕರಾಗಿರುವುದರ ಒಟ್ಟಿಗೆ ಸಂವೇದನಾಶೀಲ ವ್ಯಕ್ತಿತ್ವದವರಾಗಿದ್ದ ಕೇಶವ್, ಬದುಕಿನ ಹಲವು ಸೂಕ್ಷ್ಮಗಳನ್ನು ತನ್ನ ಫೊಟೋಗಳ ಮೂಲಕ ತೆರೆದಿಡುತ್ತಿದ್ದರು.
‘ಮುಂಗಾರು’ ಪತ್ರಿಕೆ ಮೂಲಕ 1984ರಲ್ಲಿ (ಜನನ: 1961) ಪತ್ರಿಕಾ ಛಾಯಾಗ್ರಹಣ ಆರಂಭಿಸಿದ್ದ ಕೇಶವ್, ಕ್ಯಾಮೆರಾ ಕಣ್ಣಿನಿಂದ ಹೊಸ ಲೋಕ ತೋರಿಸಿಕೊಟ್ಟಿದ್ದ ಕೇಶವ ವಿಟ್ಲ Facets of Karnataka – A Pictorial Journey ಕೃತಿಯ ಮೂಲಕ ಕರ್ನಾಟಕದ ಹೊಸ ಒಳನೋಟಗಳನ್ನು ಸೆರೆಹಿಡಿದಿದ್ದರು. ರಾಜ್ಯ ಪ್ರವಾಸೋದ್ಯಮ ಇಲಾಖೆ ಈ ಸಂಪುಟವನ್ನು ಪ್ರಕಟಿಸಿತ್ತು.
ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದಿಂದ ಶ್ರೇಷ್ಠ ಸುದ್ದಿ ಛಾಯಾಗ್ರಾಹಕ ಪ್ರಶಸ್ತಿ , ಬೆಂಗಳೂರು ಪ್ರೆಸ್ ಕ್ಲಬ್‍ನ ಜೀವಮಾನ ಸಾಧನೆಗಾಗಿ ಪ್ರಶಸ್ತಿ , ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ , ಬಲಿಯೇಂದ್ರ ಪುರಸ್ಕಾರ , ತುಳುನಾಡ ಸಿರಿ ಪ್ರಶಸ್ತಿ ಪುರಸ್ಕೃತರಾಗಿರುವ ಕೇಶವ ವಿಟ್ಲ ಅವರು ಹಲವು ಏಕವ್ಯಕ್ತಿ ಛಾಯಾಚಿತ್ರ ಪ್ರದರ್ಶನಗಳನ್ನು ಆಯೋಜಿಸಿದ್ದರು.
ಅವರ ಬಗ್ಗೆ ಮತ್ತಷ್ಟು :
ಜಗದೀಶ್ ಅಮ್ಮುಂಜೆ ಸ್ಮಾರಕ ಪ್ರಶಸ್ತಿಗೆ ಛಾಯಗ್ರಾಹಕ ಕೇಶವ ವಿಟ್ಲ ಆಯ್ಕೆ
Be the first to comment on "ಖ್ಯಾತ ಛಾಯಾಚಿತ್ರ ಪತ್ರಕರ್ತ ಕೇಶವ ವಿಟ್ಲ ಇನ್ನಿಲ್ಲ"