ಗ್ರಾಮೀಣ ಸೊಗಡು, ನೈಸರ್ಗಿಕ ಸೊಬಗಿನ ಸಸ್ಯೋದ್ಯಾನ ನಿರ್ಮಾಣ

www.bantwalnews.com – ಸಂಪಾದಕ: ಹರೀಶ ಮಾಂಬಾಡಿ

ಜಾಹೀರಾತು
  • ಬಂಟ್ವಾಳ ತಾಲೂಕಿನ ವಗ್ಗ ಸಮೀಪ ಆಲಂಪುರಿಯ 23 ಎಕರೆಯಲ್ಲಿ ನಿರ್ಮಾಣವಾಗಲಿದೆ ಟ್ರೀಪಾರ್ಕ್
    ದ.ಕ.ಜಿಲ್ಲೆಯ ಪ್ರವಾಸೋದ್ಯಮ ಆಕರ್ಷಣೆಯ ಕೇಂದ್ರವಾಗಿ ರೂಪುಗೊಳ್ಳುವ ನಿರೀಕ್ಷೆ

ಅರಣ್ಯ ಇಲಾಖೆ ವತಿಯಿಂದ ಅರಣ್ಯ ಸಚಿವರೂ ಆಗಿರುವ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರ ಕಲ್ಪನೆಯ ಟ್ರೀಪಾರ್ಕ್ ಕಾವಳಪಡೂರು ಗ್ರಾಮದ ಆಲಂಪುರಿಯಲ್ಲಿ ಮೈದಳೆಯಲಿದೆ. ಫೆ.26ರಂದು ಕಾಮಗಾರಿಗೆ ಶಿಲಾನ್ಯಾಸ ನಡೆಯಿತು.

ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅರಣ್ಯ ಸಚಿವ ಬಿ.ರಮಾನಾಥ ರೈ, ರಾಜ್ಯದ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ತಲಾ ಒಂದರಂತೆ ’ಸಾಲುಮರ ತಿಮ್ಮಕ್ಕ ಉದ್ಯಾನವನ’ ನಿರ್ಮಿಸುವ ಮೂಲಕ ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿ ಎಂಬ ಬಗ್ಗೆ ಜನಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಕಾರಿ ಬ್ರಿಜೇಶ್ ಕುಮಾರ್ ಮಾತನಾಡಿ, ರಾಜ್ಯದಲ್ಲಿ ರೂ 32 ಕೋಟಿ ವೆಚ್ಚದಲ್ಲಿ 107 ವೃಕ್ಷೆದ್ಯಾನ ನಿರ್ಮಿಸಲಾಗುತ್ತಿದ್ದು, ಈಗಾಗಲೇ 53 ಉದ್ಯಾನವನ ಲೋಕಾರ್ಪಣೆಗೊಂಡಿದೆ ಎಂದು ಹೇಳಿದರು.

ಜಾಹೀರಾತು

ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷ ಬಿ.ಎಚ್.ಖಾದರ್, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಪಿಯೂಸ್ ಎಲ್.ರೊಡ್ರಿಗಸ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಿ.ಪದ್ಮಶೇಖರ ಜೈನ್, ಮಂಜುಳಾ ಮಾಧವ ಮಾವೆ, ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಬಿ.ಎಂ. ಅಬ್ಬಾಸ್ ಆಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮಿ ಸಿ.ಬಂಗೇರ, ಸದಸ್ಯೆ ಸ್ವಪ್ನಾ ವಿಶ್ವನಾಥ್ ಪೂಜಾರಿ, ಎಪಿಎಂಸಿ ಅಧ್ಯಕ್ಷ ಕೆ.ಪದ್ಮನಾಭ ರೈ, ಸದಸ್ಯ ಆಲೋನ್ಸ್ ಮಿನೇಜಸ್, ಬೂಡ ಅಧ್ಯಕ್ಷ ಸದಾಶಿವ ಬಂಗೇರ, ಕಾರಿಂಜ ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಿ.ಜಿನರಾಜ ಆರಿಗ, ನಾವೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗುಲಾಬಿ, ಗ್ರಾಮ ಅರಣ್ಯ ಸಮಿತಿ ಸಮಿತಿ ಅಧ್ಯಕ್ಷ ಉದಯ ಕುಮಾರ್, ಪ್ರಮುಖರಾದ ಮಾಣಿಕ್ಯರಾಜ್ ಜೈನ್, ಜನಾರ್ದನ ಚೆಂಡ್ತಿಮಾರ್, ಮುಖ್ಯ ಅರಣ್ಯ ಸಂರಕ್ಷಣಾಕಾರಿ ಡಾ.ಸಂಜಯ ಎಸ್.ಬಿಜ್ಜೂರು, ಉಪ ಅರಣ್ಯ ಸಂರಕ್ಷಣಾಕಾರಿ ಡಾ.ಕರಿಕಲನ್ ವಿ., ಸಹಾಯಕ ಅರಣ್ಯ ಸಂರಕ್ಷಣಾಕಾರಿ ಸತೀಶ್ ಬಾಬಾ ರೈ ಎಸ್.ಎನ್. ಮತ್ತಿತರರು ಇದ್ದರು. ವಲಯ ಅರಣ್ಯಾಕಾರಿ ಬಿ.ಸುರೇಶ್ ಸ್ವಾಗತಿಸಿದರು.  ಪ್ರಗತಿಪರ ಕೃಷಿಕ ಆದಿರಾಜ್ ಜೈನ್ ವಂದಿಸಿ ಕಾರ್ಯಕ್ರಮ ನಿರೂಪಿಸಿದರು.

ಯಾಕಾಗಿ ವೃಕ್ಷೆದ್ಯಾನ?

ಪಶ್ಚಿಮ ಘಟ್ಟಗಳ ರಕ್ಷಿತಾರಣ್ಯಗಳಾದ ಚಾರ್ಮಾಡಿ, ಶಿರಾಡಿ, ಕೊಡ್ಯಮಲೆ ಮೀಸಲು ಅರಣ್ಯಗಳು ನೋಡಲು ರುದ್ರರಮಣೀಯವಾಗಿದ್ದರೂ ಸಾರ್ವಜನಿಕರಿಗೆ ಪ್ರವೇಶ ನಿಷಿದ್ಧ. ಅಪರೂಪದ ಸಂದರ್ಭಗಳಲ್ಲೇನಾದರೂ ಇಲಾಖೆಯ ಅನುಮತಿ ಪಡೆದು ಪ್ರವೇಶ ಪಡೆಯಬಹುದಾದರೂ ಜನಸಾಮಾನ್ಯನಿಗೆ ಯಾವಾಗಲೂ ಇದರ ಉಪಯೋಗ ದೊರಕದು. ಬದಲಾಗುತ್ತಿರುವ ಕಾಲಘಟ್ಟದಲ್ಲಿ ನೈಸರ್ಗಿಕ ಸಂಪತ್ತಿನ ಉಪಯೋಗ, ವೈವಿಧ್ಯ, ಸಾಂಸ್ಕೃತಿಕ ಸೊಬಗಿನ ಘಟ್ಟಗಳನ್ನೇ ಯುವಪೀಳಿಗೆ ಹಾಗೂ ಶಾಲಾ ಮಕ್ಕಳು ಅನುಭವಿಸುವ ಸನ್ನಿವೇಶಗಳು ಕಡಿಮೆ. ಈ ಹಿನ್ನೆಲೆಯಲ್ಲಿ ಮಂಗಳೂರಿನ ಪಿಲಿಕುಳದಲ್ಲಿ ಡಾ.ಶಿವರಾಮ ಕಾರಂತ ಉದ್ಯಾನವನ ಇದ್ದಂತೆ ಬಂಟ್ವಾಳ ತಾಲೂಕಿನ ಕಾವಳಪಡೂರು ಗ್ರಾಮದ ಆಲಂಪುರಿಯಲ್ಲಿ ವೃಕ್ಷ ಉದ್ಯಾನವನ ನಿರ್ಮಿಸುವ ಯೋಚನೆಯನ್ನು ಸಚಿವ ಬಿ.ರಮಾನಾಥ ರೈ ಮಾಡಿದರು. ಇದಕ್ಕೆ ಜಮಖಂಡಿಯಲ್ಲಿ ಅಲ್ಲಿನ ಶಾಸಕ ಸಿದ್ದು ನ್ಯಾಮಗೌಡ ಅವರ ಮುತುವರ್ಜಿಯಲ್ಲಿ ನಿರ್ಮಾಣಗೊಂಡ ಸಸ್ಯೋದ್ಯಾನವೂ ಪ್ರೇರಣೆಯಾಗಿದೆ ಎನ್ನುತ್ತಾರೆ ಸಚಿವರು.

ಜಾಹೀರಾತು

ಎಲ್ಲಿದೆ:
ಸಮುದ್ರಮಟ್ಟದಿಂದ ಎತ್ತರದಲ್ಲಿರುವ ಆಲಂಪುರಿ ಬಂಟ್ವಾಳದಿಂದ ಬೆಳ್ತಂಗಡಿ ಕಡೆ ಸಾಗುವ ರಸ್ತೆ ಸನಿಹ ದೊರಕುತ್ತದೆ. ಇತಿಹಾಸ ಪ್ರಸಿದ್ಧ ಕಾರಿಂಜೇಶ್ವರ ದೇವಸ್ಥಾನ ಇಲ್ಲಿರುವ ಕಾರಣ ಕ್ಷೇತ್ರ ದರ್ಶನಕ್ಕೆ ಬಂದವರು ಟ್ರೀ ಪಾರ್ಕ್‌ಗೂ ಭೇಟಿ ನೀಡಬಹುದು. ದಕ್ಷಿಣ ಕನ್ನಡ ಜಿಲ್ಲೆ ಪ್ರವಾಸಕ್ಕೆ ಬರುವವರಿಗೂ ಟ್ರೀ ಪಾರ್ಕ್ ವೀಕ್ಷಿಸಬಹುದು.

ಏನೇನಿರುತ್ತದೆ:
ಟ್ರೀ ಪಾರ್ಕ್‌ನಲ್ಲಿ ಪಶ್ಚಿಮ ಘಟ್ಟ ವ್ಯಾಪ್ತಿಯ ಸಸ್ಯಸಂಕುಲ ಮತ್ತು ಗ್ರಾಮೀಣ ಜೀವನ ಶೈಲಿಯನ್ನು ಪರಿಚಯಿಸಲಾಗುತ್ತದೆ. 23 ಎಕ್ರೆ ಪ್ರದೇಶ ವಿಸ್ತಾರದಲ್ಲಿ ನಕ್ಷತ್ರವನ, ನವಗ್ರಹವನ, ಸೀತಾಅಶೋಕವನ, ರಾಶಿವನ, ಬಿಲ್ವವನ, ನಾಗಸಂಪಿಗೆವನ ಹೀಗೆ ಹಲವು ಬಗೆಯ ಔಷಯ ಹಾಗೂ ಪಾರಂಪರಿಕ ಸಸ್ಯಗಳ ಪರಿಚಯಾತ್ಮಕ ವನಗಳು, ಕುಂಬಾರಿಕೆ, ನೇಕಾರಿಕೆ, ಗಾಣದ ವೃತ್ತಿ ಹೀಗೆ ದಕ್ಷಿಣ ಕನ್ನಡ ಜಿಲ್ಲೆಯ ಪಾರಂಪರಿಕ ವೃತ್ತಿಕೌಶಲಗಳ ಪ್ರಾತ್ಯಕ್ಷಿಕೆಗಳನ್ನು ಕಾಣಸಿಗಲಿದೆ.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು

About the Author

Bantwal News
2016 ನವೆಂಬರ್ 10ರಂದು ಆರಂಭಗೊಂಡ ಬಂಟ್ವಾಳದ ಮೊದಲ ವೆಬ್ ಪತ್ರಿಕೆ ಇದು. 25 ಲಕ್ಷಕ್ಕಿಂತಲೂ ಅಧಿಕ ಮಂದಿ ಕೇವಲ 45 ತಿಂಗಳಲ್ಲೇ ಓದಿದ ಜಾಲತಾಣವಿದು. ಸಂಪಾದಕ: ಹರೀಶ ಮಾಂಬಾಡಿ. ಬ್ರೇಕಿಂಗ್ ನ್ಯೂಸ್ ಧಾವಂತದಲ್ಲಿ ಅವಸರದ ಸುದ್ದಿ ಕೊಡದೆ, ಮಾಹಿತಿ ಖಚಿತಗೊಂಡ ಬಳಿಕವಷ್ಟೇ ಪ್ರಕಟಿಸಲಾಗುತ್ತದೆ. ಅತಿರಂಜಿತ ಸುದ್ದಿ ಇಲ್ಲಿಲ್ಲ. ಇದು www.bantwalnews.com ಧ್ಯೇಯ.

Be the first to comment on "ಗ್ರಾಮೀಣ ಸೊಗಡು, ನೈಸರ್ಗಿಕ ಸೊಬಗಿನ ಸಸ್ಯೋದ್ಯಾನ ನಿರ್ಮಾಣ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*