www.bantwalnews.com – ಸಂಪಾದಕ: ಹರೀಶ ಮಾಂಬಾಡಿ
- ದ.ಕ, ಉಡುಪಿ ಜಿಲ್ಲೆಗಳಲ್ಲಿ 320 ಹೆಕ್ಟೇರ್ ಪ್ರದೇಶದಲ್ಲಿ ತಾಳೆ: ಡಾ. ಎಚ್.ಪಿ.ಮಹೇಶ್ವರಪ್ಪ
- ದ.ಕ.ಜಿಲ್ಲಾ ತಾಳೆ ಬೆಳೆಗಾರರ ಸಭೆ, ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸಮಿತಿ ರಚನೆ
ದ.ಕ.ಜಿಲ್ಲೆಯಲ್ಲಿ 210 ಹಾಗೂ ಉಡುಪಿ ಜಿಲ್ಲೆಯಲ್ಲಿ 110 ಹೆಕ್ಟೇರ್ ಪ್ರದೇಶದಲ್ಲಿ ತಾಳೆ ಬೆಳೆ ಬೆಳೆಸಲಾಗುತ್ತಿದ್ದು, ಇದನ್ನು ಇನ್ನಷ್ಟು ವಿಸ್ತರಿಸಲು ರೈತರು ಮುಂದಾಗಬೇಕು ಎಂದು ಕಾಸರಗೋಡು ಸಿಪಿಸಿಆರ್‌ಐನ ತೋಟಗಾರಿಕಾ ಬೆಳೆಗಳ ಪ್ರಾಯೋಜನಾ ಸಂಯೋಜಕ ಡಾ. ಎಚ್.ಪಿ. ಮಹೇಶ್ವರಪ್ಪ ಹೇಳಿದ್ದಾರೆ.
ಪಾಣೆಮಂಗಳೂರು ಸಮೀಪದ ಮೇಲ್ಕಾರ್‌ನಲ್ಲಿ ಸೋಮವಾರ ಜಿಲ್ಲೆಯ ತಾಳೆ ಬೆಳೆಗಾರರು ಮತ್ತು ತೋಟಗಾರಿಕಾ ಇಲಾಖೆಯ ಸಹಯೋಗದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ತಾಳೆ ಬೆಳೆಗಾರರ ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ತಾಳೆ ಬೆಳೆಗಾರರ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಸಮಿತಿಯೊಂದನ್ನು ರಚಿಸಬೇಕು. ಅಡಿಕೆ ಬೆಳೆಗೆ ಪರ್ಯಾಯವಾಗಿ ಎಣ್ಣೆ ತಾಳೆ ಬೆಳೆಯನ್ನು ಬೆಳೆಸಬೇಕೆಂದು ಸಲಹೆ ನೀಡಿದ ಅವರು, ಎಣ್ಣೆ ತಾಳೆ ಬೆಳೆಗಾರರನ್ನು ಒಗ್ಗೂಡಿಸಿ ಈ ಬೆಳೆಯನ್ನು ಅಭಿವೃದ್ಧಿ ಪಡಿಸಬೇಕೆಂದರು. ತಾ.ಪಂ.ಸದಸ್ಯ ಸಂಜೀವ ಪೂಜಾರಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು.
ಅತಿಥಿಯಾಗಿ ಭಾಗವಹಿಸಿದ್ದ ಕ್ಯಾಂಪ್ಕೊ ಮಾಜಿ ಅಧ್ಯಕ್ಷ ಕೊಂಕೊಡಿ ಪದ್ಮನಾಭ ಮಾತನಾಡಿ, ಸಹಕಾರಿ ತತ್ವದಡಿ ರೈತರು ಪಾಮ್ ಬೆಳೆಯಬೇಕು. ರೈತರು, ಜನಪ್ರತಿನಿಧಿಗಳನ್ನೊಳಗೊಂಡ ನಿಯೋಗ ಪ್ರಧಾನಿ ಮೋದಿ ಹಾಗೂ ಕೇಂದ್ರ ಕೃಷಿ ಸಚಿವರನ್ನು ಭೇಟಿಯಾಗಿ ರೈತ ಸ್ನೇಹಿ ಯೋಜನೆಯಡಿ ವಿಶೇಷ ಅನುದಾನವನ್ನು ಕೋರಬೇಕು. ಈ ನಿಟ್ಟಿನಲ್ಲಿ ತಾನು ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಮಂಗಳೂರು ತೋಟಗಾರಿಕಾ ಉಪನಿರ್ದೇಶಕ ಎಚ್ ಅರ್ ನಾಯಕ್ ಮಾತನಾಡಿ, ಜಿಲ್ಲೆಯಲ್ಲಿ ತಾಳೆ ಬೆಳೆಯ ವಿಸ್ತೀರ್ಣವನ್ನು ಹೆಚ್ಚಿಸಿ ರೈತ ಉತ್ಪಾದಕ ಸಂಘವನ್ನು ಸ್ಥಾಪಿಸುವುದರೊಂದಿಗೆ ರೈತರು ಸ್ವಾವಲಂಬಿಗಳಾಗಬೇಕೆಂದರಲ್ಲದೆ, ಈ ಕುರಿತು ಸರಕಾರದಿಂದ ದೊರಕುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ನೂತನ ತಾಳೆ ಬೆಳೆಗಾರರ ಜಿಲ್ಲಾ ಸಮಿತಿಯನ್ನು ರಚಿಸಲಾಯಿತು. ಉಡುಪಿ ಮತ್ತು ಶಿವಮೊಗ್ಗ ಜಿಲ್ಲಾ ತಾಳೆ ಬೆಳೆಗಾರರ ಸಂಘದ ಪದಾಧಿಕಾರಿಗಳೂ ಪಾಲ್ಗೊಂಡಿದ್ದರು.
ಮಡಿಕೇರಿ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಲೀನಾ, ಉಡುಪಿಜಿಲ್ಲೆಯ ತಾಳೆ ಬೆಳಗಾರರ ಸಂಘದ ಅದ್ಯಕ್ಷ ಕೆ.ನರಸಿಂಹ ನಾಯಕ್, ಜಿಕ್ಕಮಂಗಳೂರು ಜಿಲ್ಲೆಯ ತಾಳೆ ಬೆಳೆಗಾರರ ಸಂಘದ ಅಧ್ಯಕ್ಷ ರತ್ನಾಕರ ಜಿ.ಎನ್. ಮತ್ತಿತರರು ಉಪಸ್ಥಿತರಿದ್ದರು. ಸಂಯೋಜಕ ವಸಂತ ಭಟ್ ಪ್ರಸ್ತಾವಿಸಿದರು. ತೋಟಗಾರಿಕಾ ಸಹಾಯಕ ನಿರ್ದೇಶಕ ದಿನೇಶ್ ಸ್ವಾಗತಿಸಿ ವಂದಿಸಿದರು.
Be the first to comment on "ಅಡಿಕೆಗೆ ಪರ್ಯಾಯವಾಗಿ ತಾಳೆ ಬೆಳೆಯಲು ಸಲಹೆ"