ದೀನದಲಿತರ, ಬಡವರ್ಗಗಳ, ಅಭ್ಯುದಯಕ್ಕಾಗಿ ,ಶೋಷಣೆ ಮುಕ್ತ ಸಮಾಜಕ್ಕಾಗಿ ಶ್ರಮಿಸಿರುವ ಕಮ್ಯುನಿಸ್ಟ್ ನೇತರರಾದ ಬಿ. ವಿಶ್ವನಾಥ್ ನಾಯಕ್ ಹಾಗೂ ಪಿ. ಸಂಜೀವ ಇವರುಗಳ ಆದರ್ಶ, ಆಲೋಚನೆಗಳು ಸದಾ ಕಾಲ ಜೀವಂತವಾಗಿರಬೇಕು ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ಹೇಳಿದರು.
ಕಮ್ಯೂನಿಸ್ಟ್ ಪಕ್ಷದ ಹಿರಿಯ ನಾಯಕರುಗಳಾದ ಬಿ.ವಿಶ್ವನಾಥ ನಾಯಕ್ ಮತ್ತು ಪಿ.ಸಂಜೀವ ರವರುಗಳ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ಭಾನುವಾರ ಬಿ.ಸಿ.ರೋಡ್ ಹೊಟೇಲ್ ರಂಗೋಲಿ ಸಭಾಂಗಣದಲ್ಲಿ ನಡೆದ ಭಾರತ ಕಮ್ಯೂನಿಸ್ಟ್ ಪಕ್ಷ(ಸಿಪಿಐ)ದ ದ.ಕ ಮತ್ತು ಉಡುಪಿ ಜಿಲ್ಲಾ ಸಮಿತಿ ಹಾಗೂ ಸಾರ್ವಜನಿಕ ಶ್ರದ್ಧಾಂಜಲಿ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಭೂ ಮಸೂದೆ ಕಾನೂನು ಜಾರಿಯಾದಾಗ ಈ ನಾಯಕರು ಗೇಣಿದಾರರ ಪರವಾಗಿದ್ದರು. ನಾನು ಮತ್ತು ಬಿ.ವಿಶ್ವನಾಥ ನಾಯಕ್ ಭೂಅಭಿವೃದ್ದಿ ಬ್ಯಾಂಕಿನ ನಿರ್ದೇಶಕರಾಗಿದ್ದಾಗ ಮತ್ತು ವಿಧಾನ ಸಭಾ ಚುನಾವಣೆಯಲ್ಲಿ ನಾವಿಬ್ಬರು ಸ್ಪರ್ಧಿಸಿದಾಗ ನಮ್ಮ ಸಂಬಂಧ, ಪ್ರೀತಿ ಗಟ್ಟಿಯಾಯಿತು. ಇವರು ಅಭಿಮಾನ ಮತ್ತು ಪ್ರೀತಿಯ ಸಂಕೇತವಾಗಿದ್ದರು. ಸರಳ, ಸಜ್ಜನಿಕೆಯ ವ್ಯಕ್ತಿಗಳಾಗಿದ್ದ ಇವರ ಆದರ್ಶ, ಆಲೋಚನೆ , ಯೋಜನೆ ಜೀವಂತವಾಗಿರಲಿ ಎಂದು ಅವರು ಹೇಳಿದರು.
ಎಐಟಿಯುಸಿ ರಾಜ್ಯಾಧ್ಯಕ್ಷ ಎಚ್.ವಿ. ಅನಂತ ಸುಬ್ಬರಾವ್ ಮಾತನಾಡಿ ದ.ಕ ಜಿಲ್ಲೆಯ ರೈತ ಕಾರ್ಮಿಕ ಚಳುವಳಿಗಳ ರೂವಾರಿಗಳಾದ ಇವರೀರ್ವರು ತನ್ನ ವೈಯಕ್ತಿಕ ಬದುಕಿಗಿಂತ ಸಾರ್ವಜನಿಕರ ಬದುಕಿಗೆ ಪ್ರಾಮುಖ್ಯತೆ ಕೊಟ್ಟವರು. ಭೂಸುಧಾರಣಾ ಚಳುವಳಿಯಲ್ಲಿ ಉಳುವವನೇ ಹೊಲದೊಡೆಯ ಕಾನೂನು ಜಾರಿಗಾಗಿ ನ್ಯಾಯಕ್ಕನುಗುಣವಾಗಿ ಹೋರಾಡಿ ಗೇಣಿದಾರರಿಗೆ ಭೂಮಿ ತೆಗೆಸಿಕೊಟ್ಟವರು. ರೈತಾಪಿ ಕೃಷಿಕೂಲಿ, ಬೀಡಿ ಕಾರ್ಮಿಕರ ಬದುಕನ್ನು ಹಸನಾಗಿಸಲು ಇವರೀರ್ವರ ಹೋರಾಟ ಅವಿಸ್ಮರಣೀಯ. ಇವರ ಆದರ್ಶಗಳನ್ನು ಪಾಲಿಸುವುದೇ ಇವರಿಗೆ ನೀಡುವ ನಿಜವಾದ ನುಡಿನಮನ ಎಂದರು.
ಸಭೆಯಲ್ಲಿ ಸಿಪಿಎಂ ಮುಂದಾಳು ಯಾದವ ಶೆಟ್ಟಿ, ವಾಸು ಗಟ್ಟಿ, ಸಿಪಿಐ ಕಾಸರಗೋಡು ಜಿಲ್ಲಾ ಸಹಕಾರ್ಯದರ್ಶಿ ಬಿ.ವಿ.ರಾಜನ್, ಬೂಡಾ ಅಧ್ಯಕ್ಷ ಸದಾಶಿವ ಬಂಗೇರ, ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ವಕೀಲ ಅಶ್ವನಿಕುಮಾರ್ ರೈ, ಮಂಗಳೂರು ಗಾಳದ ಕೊಂಕಣಿ ಅಭ್ಯುದಯ ಸಂಘದ ಪ್ರ.ಕಾರ್ಯದರ್ಶಿ ಕೋಡಿ ಜಯ ನಾಯಕ್, ಪಿ.ಸಂಜೀವರ ಪುತ್ರ ಯೋಗೀಶ್ ಕುಮಾರ್ ಮುಂತಾದವರು ನುಡಿ-ನಮನ ಸಲ್ಲಿಸಿದರು.
ವೇದಿಕೆಯಲ್ಲಿ ತಾಲೂಕು ಪಂಚಾಯತ್ ಉಪಾಧ್ಯಕ್ಷ ಅಬ್ಬಾಸ್ ಆಲಿ ಉಪಸ್ಥಿತರಿದ್ದರು. ಸಿಪಿಐ ಜಿಲ್ಲಾ ಸಹಕಾರ್ಯದರ್ಶಿ ಬಿ.ಶೇಖರ್ ಅಧ್ಯಕ್ಷತೆ ವಹಿಸಿದ್ದರು.
ಸಿಪಿಐ ಜಿಲ್ಲಾ ಸಹಕಾರ್ಯದರ್ಶಿ ವಿ.ಎಸ್.ಬೇರಿಂಜ ಪ್ರಸ್ತಾವನೆಯೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ಪಕ್ಷದ ಜಿಲ್ಲಾ ಮುಖಂಡರಾದ ಸುರೇಶ್ ಕುಮಾರ್ ವಂದಿಸಿದರು.
Be the first to comment on "ಶೋಷಣೆಮುಕ್ತ ಸಮಾಜಕ್ಕೆ ವಿಶ್ವನಾಥ ನಾಯಕ್, ಪಿ.ಸಂಜೀವ ಶ್ರಮ: ರಮಾನಾಥ ರೈ"