REPORT by Harish Mambady Photos: Kishore Peraje and Kartik studio B.C.Road
ಸಾಮರಸ್ಯಕ್ಕಾಗಿ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ನಡೆದ ಪಾದಯಾತ್ರೆ ಮಾಣಿ ತಲುಪಿದೆ. ಬೆಳಗ್ಗೆ 9.30ಕ್ಕೆ ಫರಂಗಿಪೇಟೆಯಿಂದ ಆರಂಭಗೊಂಡು, ಮಧ್ಯಾಹ್ನ ಮೇಲ್ಕಾರ್ ನಲ್ಲಿ ಭೋಜನಕ್ಕಾಗಿ ತಂಗಿ ಬಳಿಕ ಅಲ್ಲಿಂದ ಸುಮಾರು ಒಂದು ಗಂಟೆ ವಿಶ್ರಾಂತಿ ಬಳಿಕ ಹೊರಟು ಸಂಜೆ 6 ಗಂಟೆಗೆ ಮಾಣಿ ಸಮೀಪ ನೇರಳಕಟ್ಟೆಯಲ್ಲಿ ನಡೆಯವ ಸಭಾ ಕಾರ್ಯಕ್ರಮ ವೇದಿಕೆ ಬಳಿ ಸಾಗಿತು.
ಜಾಥಾ ಬಿ.ಸಿ.ರೋಡ್ ಪ್ರವೇಶಿಸುತ್ತಿದ್ದಂತೆ ತಾಪಂ ಸದಸ್ಯ ಉಸ್ಮಾನ್ ಕರೋಪಾಡಿ ಅವರೂ ನಡಿಗೆಯಲ್ಲಿ ಸಚಿವರೊಂದಿಗೆ ಪಾಲ್ಗೊಂಡು ಸಾಥ್ ನೀಡಿದರು. ಸಚಿವ ರಮಾನಾಥ ರೈ ಅವರು ಫರಂಗಿಪೇಟೆಯಿಂದ ಮಾಣಿವರೆಗಿನ 24 ಕಿ.ಮೀ. ನಡಿಗೆಯ ಮೂಲಕವೇ ಸಾಗಿದರು. ಜಾಥಾದಲ್ಲಿ ಪಾಲ್ಗೊಂಡಿದ್ದ ಎಲ್ಲರಿಗೂ ಬಿಳಿಯ ಟೋಪಿ ನೀಡುವ ವ್ಯವಸ್ಥೆ ಮಾಡಲಾಗಿತ್ತು. ಬಂದವರೂ ಬಿಳಿಯ ದಿರಿಸುಗಳನ್ನು ಧರಿಸಿ, ಶಾಂತಿಯ ಸಂದೇಶ ಸಾರಿದರು.
ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಖುದ್ದು ಬಂಟ್ವಾಳದಲ್ಲಿ ಬೆಳಗ್ಗಿನಿಂದಲೇ ಹಾಜರಿದ್ದು, ಪರಿಶೀಲನೆಗಳನ್ನು ನಡೆಸುತ್ತಿದ್ದರು. ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಜಾಥಾ ನಡೆಯುವ ಜಾಗಗಳಲ್ಲಿ ಪರಿಶೀಲನೆ ನಡೆಸಿದರು. ನಾನಾ ಠಾಣೆಗಳ ಸರ್ಕಲ್ ಇನ್ಸ್‌ಪೆಕ್ಟರ್ ಗಳು, ಎಸ್.ಐ.ಗಳ ನೇತೃತ್ವದಲ್ಲಿ ಪೊಲೀಸರ ಪಡೆ ಹೆಜ್ಜೆ ಹೆಜ್ಜೆಗೂ ಕಂಡುಬಂದವು. ತೆರೆದ ವಾಹನಗಳಲ್ಲೂ ಪೊಲೀಸರು ಜಾಥಾ ನಡೆಯುವ ಜಾಗದಲ್ಲಿ ಮುಂಚಿತವಾಗಿ ಸಂಚರಿಸಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕ್ರಮ ಕೈಗೊಂಡರು.
ಫರಂಗಿಪೇಟೆಯಿಂದ ಹೆಜ್ಜೆ ಹಾಕಿಕೊಂಡು ಬಂದ ನಟ ಪ್ರಕಾಶ್ ರೈ ಅವರು ಮಾರಿಪಳ್ಳ ಜಂಕ್ಷನ್‌ನಲ್ಲಿ ಕಾರು ಹತ್ತಿ ಮಂಗಳೂರಿನತ್ತ ಪ್ರಯಾಣ ಬೆಳೆಸಿದರು. ಸಂಜೆ ಸಮಾವೇಶಕ್ಕೆ ಅವರು ಆಗಮಿಸುವ ಕಾರಣ ವಿಶ್ರಾಂತಿಗಾಗಿ ಅವರು ತೆರಳಿದ್ದರು.
ಫರಂಗಿಪೇಟೆಯಿಂದ ಬೆಳಗ್ಗೆ ನಾಡಗೀತೆ ಹಾಡಿದ ಬಳಿಕ 9.30ಕ್ಕೆ ಶಾಂತಿದೂತ ಪಾರಿವಾಳವನ್ನು ಹಾರಿಸಿ, ಬೆಲೂನುಗಳನ್ನು ಆಗಸದೆತ್ತರಕ್ಕೆ ಸಾಗುವಂತೆ ಮಾಡಿ ಬಹುಭಾಷಾ ಚಿತ್ರನಟ ಪ್ರಕಾಶ್ ರೈ, ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ಮಾಜಿ ಸಚಿವ ಅಮರನಾಥ ಶೆಟ್ಟಿ, ಸಿಪಿಎಂ ಮುಖಂಡ ಶ್ರೀರಾಮರೆಡ್ಡಿ, ಸಿಪಿಐ ರಾಜ್ಯ ಕಾರ್ಯದರ್ಶಿ ಸಿದ್ಧನಗೌಡ ಪಾಟೀಲ, ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಸಹಿತ ಪ್ರಮುಖ ಗಣ್ಯರು ಪಾದಯಾತ್ರೆಗೆ ಸಾಂಕೇತಿಕವಾಗಿ ಚಾಲನೆ ನೀಡಿದರು.
ಅಲ್ಲಲ್ಲಿ ಟೆಂಟ್ ಹಾಕಿಕೊಂಡು ನೀರು, ಮಜ್ಜಿಗೆ, ಕಲ್ಲಂಗಡಿ ಹಣ್ಣುಗಳನ್ನು ವಿತರಿಸುವ ವ್ಯವಸ್ಥೆ ಮಾಡಲಾಯಿತು. ಫರಂಗಿಪೇಟೆಯಲ್ಲಿ ಉಪಾಹಾರದ ವ್ಯವಸ್ಥೆ ಇದ್ದರೆ, ಅದಾದ ಬಳಿಕ ಮಾರಿಪಳ್ಳ ತಲುಪುತ್ತಿದ್ದಂತೆಯೇ ವಾಹನಗಳಲ್ಲಿ ಮಿನರಲ್ ವಾಟರ್ ಬಾಟಲಿಗಳನ್ನು ಕಾಲ್ನಡಿಗೆಯಲ್ಲಿ ಸಾಗುವವರಿಗೆ ಒದಗಿಸಲಾಯಿತು. ಬ್ರಹ್ಮರಕೂಟ್ಲುವಿನಲ್ಲಿ ಪಾನೀಯ ವ್ಯವಸ್ಥೆ, ತುಂಬೆಯಲ್ಲಿ ಕಲ್ಲಂಗಡಿ ಹಣ್ಣುಗಳನ್ನು ಕತ್ತರಿಸಿ ಕೊಡಲಾಯಿತು. ಕಾಲ್ನಡಿಗೆ ಬಿ.ಸಿ.ರೋಡ್ ನ ಕೈಕಂಬ ಕ್ರಾಸ್ ತಲುಪುತ್ತಿದ್ದಂತೆ ಮಜ್ಜಿಗೆ ಕೌಂಟರ್ ಕಂಡುಬಂತು. ಎಲ್ಲರಿಗೂ ಮಜ್ಜಿಗೆ ಪ್ಯಾಕೆಟ್ ವಿತರಿಸಲಾಯಿತು.
ಕಾಲ್ನಡಿಗೆ ಮೇಲ್ಕಾರ್ ತಲುಪುವಾಗ ಮಧ್ಯಾಹ್ನ 2.30 ಆಗಿತ್ತು. ಜಾಥಾದಲ್ಲಿ ಬಂದ ಕಾರ್ಯಕರ್ತರು ಅದಾಗಲೇ ಬಳಲಿದವರು ಮಧ್ಯಾಹ್ನದ ಭೋಜನ ಸವಿದು ರಿಫ್ರೆಶ್ ಆದರು. ಸುಮಾರು ಒಂದು ಗಂಟೆ ಬ್ರೇಕ್ ಬಳಿಕ ಜಾಥಾ ಕಲ್ಲಡ್ಕ ಮೂಲಕ ಮಾಣಿಗೆ ಹೊರಟಿತು.
ಹೆಜ್ಜೆ ಹಾಕಿದ ಗಣ್ಯರು:
ಆಹಾರ ಸಚಿವ ಯು.ಟಿ.ಖಾದರ್, ವಿಧಾನ ಪರಿಷತ್‌ನ ಮುಖ್ಯ ಸಚೇತಕ ಐವನ್ ಡಿಸೋಜ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಪಿಯೂಸ್ ಎಲ್. ರೋಡ್ರಿಗಸ್, ಶಾಸಕರಾದ ಅಭಯಚಂದ್ರ ಜೈನ್, ಶಕುಂತಳಾ ಶೆಟ್ಟಿ, ವಸಂತ ಬಂಗೇರ, ಜೆ.ಆರ್.ಲೋಬೊ, ಮೊಯ್ದೀನ್ ಬಾವ, ಜಿ.ಪಂ. ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಪದ್ಮಶೇಖರ ಜೈನ್, ಎಂ.ಎಸ್. ಮುಹಮ್ಮದ್, ಮಮತಾ ಗಟ್ಟಿ, ಮಂಜುಳಾ ಮಾಧವ ಮಾವೆ, ಶಾಹುಲ್ ಹಮೀದ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಶೇಖರ್ ಜೈನ್, ಜೆಡಿಎಸ್ ಮುಖಂಡ ಬಿ.ಮೋಹನ್, ಸಿಪಿಎಂ ಮುಖಂಡ ಶ್ರೀರಾಮರೆಡ್ಡಿ, ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಜಿ.ಎ. ಬಾವ, ಮೊಹಮ್ಮದ್ ಹನೀಫ್, ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ, ಬುಡಾ ಅಧ್ಯಕ್ಷ ಸದಾಶಿವ ಬಂಗೇರ, ಗೇರು ನಿಗಮ ಅಧ್ಯಕ್ಷ ಬಿ.ಎಚ್. ಖಾದರ್, ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಅಲಿ, ಸದಸ್ಯ ಪ್ರಭಾಕರ ಪ್ರಭು, ಮೇಯರ್ ಕವಿತಾ ಸನಿಲ್, ಉಪಮೇಯರ್ ರಜನೀಶ್, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲಿಯಾನ್, ಮಾಜಿ ಜಿ.ಪಂ. ಸದಸ್ಯ ಉಮರ್ ಫಾರೂಕ್, ಬಿ.ಕೆ. ಇದಿನಬ್ಬ ಕಲ್ಲಡ್ಕ, ಬಿ.ಶೇಖರ್, ರಾಮಣ್ಣ ವಿಟ್ಲ, ಸಂಜೀವ ಬಂಗೇರ, ಬಾಬು ಭಂಡಾರಿ, ಬಿ.ನಾರಾಯಣ, ಮಲ್ಲಿಕಾ ಶೆಟ್ಟಿ, ಜಯಂತಿ ಪೂಜಾರಿ, ವಕ್ಫ್ ಜಿಲ್ಲಾಧ್ಯಕ್ಷ ಕಣಚೂರು ಮೋನು, ಹೇಮನಾಥ ಶೆಟ್ಟಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ, ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರು, ಬಂಟ್ವಾಳ ತಾಪಂ, ಪುರಸಭಾ ಸದಸ್ಯರು ಮತ್ತಿತರು ಪ್ರಮುಖರು ಸಚಿವರೊಂದಿಗೆ ಹೆಜ್ಜೆ ಹಾಕಿದರು.
Be the first to comment on "ಸೌಹಾರ್ದತೆ ಸಾರುವ ಸಾಮರಸ್ಯದ ನಡಿಗೆ ತಲುಪಿದೆ ಮಾಣಿ"