63 ವರ್ಷಗಳ ಯಕ್ಷೋಪಾಸನೆಗೆ ಸಂದ ಗೌರವ

www.bantwalnews.com

ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ಯಕ್ಷಗಾನ ಕಲಾವಿದ ಶಿವರಾಮ ಜೋಗಿ ಮನದಾಳದ ಮಾತು

ಇದು ನನ್ನ 63 ವರ್ಷಗಳ ಯಕ್ಷೆಪಾಸನೆಗೆ ಸಂದ ಗೌರವ.

ಶೇಣಿ ಗೋಪಾಲಕೃಷ್ಣ ಭಟ್ಟರ ಪ್ರಭಾವ, ಯಕ್ಷಗಾನದ ಪ್ರಸಿದ್ಧ ಕಲಾವಿದರ ಒಡನಾಟದೊಂದಿಗೆ ಪಕ್ವಗೊಂಡು ಸುದೀರ್ಘ ಅವಧಿಯಲ್ಲಿ ಯಕ್ಷಗಾನದ ರಂಗಸ್ಥಳದಲ್ಲಿ ಮಿಂಚುತ್ತಿರುವ ಕಲಾವಿದ ಶಿವರಾಮ ಜೋಗಿ ಅವರ ಮನದಾಳದ ಮಾತಿದು. ಹಿರಿಯ ಕಲಾವಿದರಿಗೆ  www.bantwalnews.com ಅಭಿನಂದನೆಗಳನ್ನು ಸಲ್ಲಿಸುತ್ತಿದೆ.

                                                                     

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ಕುರಿತು ಮಾಹಿತಿ ಲಭಿಸಿದಾಗ ಸಂತಸವಾಯಿತು. ನನ್ನ ಯಕ್ಷಪಯಣಕ್ಕೆ ದೊರಕಿದ ಮನ್ನಣೆ ಎಂದು ಭಾವಿಸಿದ್ದೇನೆ ಎಂದು ಜೋಗಿ ಹೇಳಿದರು.

ಬಿ.ಸಿ.ರೋಡಿನ ಗಾಣದಪಡ್ಪುವಿನಲ್ಲಿರುವ ಪುಂಜರಕೋಡಿ ಎಂಬಲ್ಲಿ ಜೋಗಿ ವಾಸ. ಮನೆಯ ಹೆಸರೂ ಯಕ್ಷದೀಪ. ಇಬ್ಬರು ಮಕ್ಕಳು.. 1954ರಿಂದಲೇ ಯಕ್ಷಗಾನ ರಂಗಸ್ಥಳಕ್ಕೆ ಕಾಲಿಟ್ಟ ಜೋಗಿ ಈಗಲೂ ಅದೇ ಹುಮ್ಮಸ್ಸಿನಲ್ಲಿ ದುಡಿಯುತ್ತಿದ್ದಾರೆ. ತನ್ನ ತಿರುಗಾಟದ ಕುರಿತು ಬಂಟ್ವಾಳನ್ಯೂಸ್ ಜೊತೆ ಅವರು ಹಂಚಿಕೊಂಡದ್ದು ಹೀಗೆ.

ಸಂಗೀತ ಕಲಿತಿದ್ದರು

1941, ಜೂನ್ 7ರಂದು ಜನಿಸಿದ ಶಿವರಾಮ ಜೋಗಿ (ತಂದೆ – ಗುರುವಪ್ಪ ಜೋಗಿ, ತಾಯಿ ಸೀತಮ್ಮ) ಬೆಳೆದದ್ದು, ಉಪ್ಪಿನಂಗಡಿ ಸಮೀಪ ಕಾಂಚನದಲ್ಲಿ 6ನೇ ತರಗತಿವರೆಗೆ ವಿದ್ಯಾಭ್ಯಾಸ ನಡೆಸುತ್ತಿದ್ದ ವೇಳೆಯೇ ಅಲ್ಲಿ ಸುಬ್ರಹ್ಮಣ್ಯ ಅಯ್ಯರ್ ಬಳಿ ಸಂಗೀತಾಭ್ಯಾಸ ನಡೆಸುತ್ತಿದ್ದರು. ಆಗಲೇ ಯಕ್ಷಗಾನದ ಸೆಳೆತ ಉಂಟಾಯಿತು. ಅಂದು ಪ್ರಸಿದ್ಧ ಹಾಸ್ಯಗಾರರಾಗಿದ್ದ ವಿಟ್ಲ ಗೋಪಾಲಕೃಷ್ಣ ಜೋಷಿ ಅವರ ಪರಿಚಯವಾಗಿ, ಅವರೇ ಕೂಡ್ಲು ಮೇಳಕ್ಕೆ ಜೋಗಿಯವರನ್ನು ಕರೆತಂದರು. ಆಗ ಅವರು 13ರ ಹರೆಯದ ಬಾಲಕ.

ಲೋಹಿತಾಶ್ವನ ಪಾತ್ರ:

ಕೂಡ್ಲು ಮೇಳದಲ್ಲಿ ಲೋಹಿತಾಶ್ವ (ಹರಿಶ್ಚಂದ್ರನ ಪುತ್ರ) ಪಾತ್ರ ನಿರ್ವಹಿಸುವ ಮೂಲಕ ಶಿವರಾಮ ಜೋಗಿ ರಂಗಸ್ಥಳದಲ್ಲಿ ಮೊದಲ ಹೆಜ್ಜೆಯಿಟ್ಟರು. ಹರಿಶ್ಚಂದ್ರನಾಗಿ ಶೇಣಿ ಗೋಪಾಲಕೃಷ್ಣ ಭಟ್ಟರು ಅಭಿನಯಿಸಿದ್ದು, ಅವರಿಗೆ ಮರೆಯಲಾರದ ಅನುಭವ. ಹಾಗೆಯೇ ಶೇಣಿ, ಜೋಷಿ ಮತ್ತು ಕುಡಾಣ ಗೋಪಾಲಕೃಷ್ಣ ಭಟ್ಟರ ಮಾರ್ಗದರ್ಶನದಲ್ಲಿ ಯಕ್ಷಗಾನದ ಪಟ್ಟುಗಳನ್ನು ಕಲಿತೆ ಎಂದು ಬಂಟ್ವಾಳನ್ಯೂಸ್ ಜೊತೆ ನೆನಪುಗಳನ್ನು ಮೆಲುಕು ಹಾಕಿದರು ಜೋಗಿ.

ಕೂಡ್ಲು ಮೇಳದಲ್ಲಿ 2 ವರ್ಷ, ಮೂಲ್ಕಿ ಮೇಳದಲ್ಲಿ ಎರಡು ವರ್ಷಗಳ ತಿರುಗಾಟದ ಬಳಿಕ ಸುರತ್ಕಲ್ ಮೇಳದಲ್ಲಿ ಜೋಗಿಯವರು ಸುದೀರ್ಘ 40 ವರ್ಷಗಳ ತಿರುಗಾಟ ನಡೆಸಿದ್ದಾರೆ. ಕರ್ಣಾಟಕ ಮೇಳದಲ್ಲಿ 2, ಮಂಗಳಾದೇವಿ ಮೇಳದಲ್ಲಿ 2, ಎಡನೀರು ಮೇಳದಲ್ಲಿ ಎರಡು ವರ್ಷ, ಕುಂಟಾರು ಮೇಳದಲ್ಲಿ 2 ವರ್ಷಗಳ ಬಳಿಕ ಹೊಸನಗರ ಮೇಳದಲ್ಲಿ 11 ವರ್ಷಗಳ ತಿರುಗಾಟ ನಡೆಸಿದ ಜೋಗಿ, ಇದೀಗ ಹನುಮಗಿರಿ ಮೇಳದ ತಿರುಗಾಟಕ್ಕೆ ತೆರಳಲಿದ್ದಾರೆ.

ಬಾಲಗೋಪಾಲ ವೇಷದಿಂದ ತೊಡಗಿ ಹಂತಹಂತವಾಗಿ ಮೇಲೇರಿ ಪೌರಾಣಿಕ, ಸಾಮಾಜಿಕ, ತುಳು ಪ್ರಸಂಗಗಳ ಬಹುತೇಕ ಎಲ್ಲ ಪಾತ್ರಗಳನ್ನು ಮಾಡಿರುವ ಜೋಗಿ, ಯಯಾತಿ, ಕುಮಾರ ರಾಮ, ಇಂದ್ರಜಿತು, ಹಿರಣ್ಯಾಕ್ಷ, ಹಿರಣ್ಯಕಶಿಪು, ಕಂಸ, ರಾವಣ, ಬಪ್ಪಬ್ಯಾರಿ, ತಾಮ್ರಧ್ವಜ ಮುಂತಾದ ಪಾತ್ರಗಳಲ್ಲಿ ಮಿಂಚಿದ್ದಾರೆ. ತುಳು ಪ್ರಸಂಗಗಳಲ್ಲಿ ಕೋಟಿಚೆನ್ನಯರ ಪಾತ್ರಗಳನ್ನು ನಿರ್ವಹಿಸಿರುವ ಜೋಗಿ, ಕಥಾನಾಯಕನ ಪಾತ್ರಕ್ಕೂ, ಖಳನಾಯಕನ ಪಾತ್ರಕ್ಕೂ ನ್ಯಾಯ ಒದಗಿಸುವ ಕೆಲವೇ ಕಲಾವಿದರ ಪೈಕಿ ಒಬ್ಬರು.

ಶೇಣಿ ಗೋಪಾಲಕೃಷ್ಣರ ಬಪ್ಪಬ್ಯಾರಿ ಪಾತ್ರ ಫೇಮಸ್. ಅದಕ್ಕಾಗಿಯೇ ದೂರದೂರಿನಿಂದ ಆಟಕ್ಕೆ ಬರುವವರು ಇರುತ್ತಿದ್ದರು. ಶಿವರಾಮ ಜೋಗಿಯವರ ಬಪ್ಪಬ್ಯಾರಿಯಲ್ಲೂ ಶೇಣಿ ಗೋಪಾಲಕೃಷ್ಣ ಭಟ್ಟರ ಪ್ರಭಾವ ಇದೆ. ಅದು ಹೌದು ಎನ್ನುತ್ತಾರೆ ಜೋಗಿ. ನಾನು ಎಷ್ಟಾದರೂ ಶೇಣಿ ಶಿಷ್ಯ ಅಲ್ಲವೇ? ನನ್ನ ಭಾಗ್ಯವೆಂದರೆ ಶೇಣಿ ಅವರನ್ನು ಹತ್ತಿರದಿಂದ ನೋಡಿ, ಅವರಲ್ಲಿ ಕಲಿಯುವ ಅವಕಾಶ ದೊರಕಿದ್ದು. ಉತ್ತಮೋತ್ತಮ ಕಲಾವಿದರ ಸಂಪರ್ಕದಿಂದಾಗಿಯೇ ಇಂದಿಗೂ ಯಕ್ಷಗಾನದಲ್ಲಿ ಉಳಿಯಲು ಸಾಧ್ಯವಾಯಿತು ಎಂದು ವಿನಮ್ರರಾಗುತ್ತಾರೆ ಜೋಗಿ.

ಹಾಗೆ ನೋಡಿದರೆ ಶಿವರಾಮ ಜೋಗಿ ರಂಗಸ್ಥಳಕ್ಕಿಳಿದ ಮೇಲೆ ಆಟದಕ್ಕೊಂದು ಬೇರೆಯದ್ದೇ ಆದ ಹೊಳಪು ಸಿಗುತ್ತದೆ, ಅವರ ಗಾಂಭೀರ್ಯದ ನಡೆ, ನುಡಿ, ಪಾತ್ರಕ್ಕೊಪ್ಪುವ ಮಾತುಗಾರಿಕೆ, ಹದವಾದ ಹೆಜ್ಜೆಗಾರಿಕೆ ಜೋಗಿಯವರ ಪ್ಲಸ್ ಪಾಯಿಂಟ್.

ದ.ಕ.ಜಿಲ್ಲಾ ರಾಜ್ಯೋತ್ಸವ, ಕೀಲಾರು ಪ್ರತಿಷ್ಠಾನ, ಶೇಣಿ, ಕುರಿಯ ಪ್ರಶಸ್ತಿಗಳ ಸಹಿತ ಹಲವಾರು ಪ್ರಶಸ್ತಿಗಳು, ಸನ್ಮಾನಗಳು ಜೋಗಿ ಅವರಿಗೆ ದೊರಕಿವೆ. ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಅರ್ಹವಾಗಿಯೇ ಶಿವರಾಮ ಜೋಗಿ ಪಾಲಿಗೆ ದೊರಕಿದೆ.

(ಚಿತ್ರಕೃಪೆ: ಕಿರಣ್ ವಿಟ್ಲ ಮತ್ತು ರಾಮ್ ನರೇಶ ಮಂಚಿ)

 

ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Harish Mambady
ಕಳೆದ 26 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.

Be the first to comment on "63 ವರ್ಷಗಳ ಯಕ್ಷೋಪಾಸನೆಗೆ ಸಂದ ಗೌರವ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*