ನಮಗೆ ನಾಗರಿಕ ಪ್ರಜ್ಞೆ ಕಡಿಮೆಯೇ?

  • ಡಾ. ಅಜಕ್ಕಳ ಗಿರೀಶ ಭಟ್
  • ಅಂಕಣ: ಗಿರಿಲಹರಿ

www.bantwalnews.com

ಈಚಿನ ದಿನಗಳಲ್ಲಿ ಬೆಂಗಳೂರು ಮಳೆಯಿದಾಗಿ ಸುದ್ದಿಯಲ್ಲಿದೆ. ಹಲವರು ಪ್ರಾಣ ಕಳೆದುಕೊಂಡರು. ಇದು ಈಗ ಬೆಂಗಳೂರಿನಲ್ಲಿ ಆಗಿದೆ. ಸ್ವಲ್ಪ ಜೋರಾಗಿ ಮಳೆ ಬಂದರೆ ಮಂಗಳೂರು ಹಾಗೂ ಇತರ ನಗರಗಳಲ್ಲೂ, ಸಣ್ಣಪುಟ್ಟ ಪೇಟೆಗಳಿರುವ ತಾಲೂಕು ಕೇಂದ್ರಗಳಲ್ಲೂ ಇದೇ ಸಮಸ್ಯೆಯಾಗುವುದರಲ್ಲಿ ಸಂದೇಹವೇ ಇಲ್ಲ. ಇತ್ತೀಚಿನ ವರ್ಷಗಳಲ್ಲಿ ನಮ್ಮ ದಕ್ಷಿಣ ಕನ್ನಡದಲ್ಲಿ ಹಿಂದೆಯೆಲ್ಲ ಬರುತ್ತಿದ್ದ ಪ್ರಮಾಣದಲ್ಲಿ ಮಳೆ ಬರುತ್ತಿಲ್ಲ ಅನ್ನುವುದು ನಮ್ಮ ಪುಣ್ಯ! ಹಾಗಾಗಿ ನಮ್ಮ ನಗರಗಳು ಮಳೆಗಾಲದಲ್ಲಿ ತಕ್ಕಮಟ್ಟಿಗಾದರೂ ಸುರಕ್ಷಿತವಾಗಿ ಉಳಿದಿವೆ!

ತುಂಬ ಹಿಂದೆ ಹೋಗುವುದು ಬೇಡ. ಸುಮಾರು ಮೂವತ್ತು ವರ್ಷಗಳ ಹಿಂದಿನ ಮಳೆಗಾಲಗಳನ್ನು ನೆನಪು ಮಾಡಿಕೊಳ್ಳೋಣ. ಆಗೆಲ್ಲ ಪ್ರತಿ ಮಳೆಗಾಲದಲ್ಲೂ ಬಿ. ಸಿ. ರೋಡು ಬಳಿಯ ಬ್ರಹ್ಮರಕೂಟ್ಲುವಿನಲ್ಲಿ ನಮ್ಮ ಮಂಗಳೂರು ಬೆಂಗಳೂರು ಹೆದ್ದಾರಿಯಲ್ಲಿ ಪ್ರತಿ ವರ್ಷ ಎಂಬಂತೆ ಒಂದೆರಡು ದಿನಗಳ ಮಟ್ಟಿಗಾದರೂ ರಸ್ತೆಯ ಮೇಲೆ ನೇತ್ರಾವತಿ ನೆರೆ ನೀರು ಬಂದು ರಸ್ತೆ ಬಂದ್ ಆಗುತ್ತಿತ್ತು.

ಮಂಗಳೂರಿಗೆ ಹೋಗಬೇಕಾದವರು ಮೆಲ್ಕಾರಿನಿಂದ ಎಡಗಡೆಗೆ ತಿರುಗಿ ಮುಡಿಪು ಕೊಣಾಜೆ ತೊಕ್ಕೊಟ್ಟು ರಸ್ತೆಯಲ್ಲಿ ಮಂಗಳೂರಿಗೆ ಹೋಗಬೇಕಾದ ಪರಿಸ್ಥಿತಿ ಉಂಟಾಗುತ್ತಿತ್ತು. ಬ್ರಹ್ಮರಕೂಟ್ಲುವಿನಲ್ಲಿ ಇಂಥ ನೆರೆಯಿಂದ ತಪ್ಪಿಸಿಕೊಳ್ಳಲು ಎತ್ತರದಲ್ಲಿ ರಸ್ತೆ ನಿರ್ಮಾಣ ಮಾಡಿ, ಅದು ಉದ್ಘಾಟನೆಗೊಂಡ ಬಳಿಕ ಕೆಳಗಿನ ಹಳೆ ರಸ್ತೆ ಮುಳುಗುವಷ್ಟು ನೀರು ಪ್ರಾಯಶಃ ನೇತ್ರಾವತಿಯಲ್ಲಿ ಬಂದಿಲ್ಲವೆನಿಸುತ್ತದೆ. ನೇತ್ರಾವತಿಯ ಬದಿಯಲ್ಲಿ ಮಳೆಗಾಲದಲ್ಲಿ ನೀರು ಆಶ್ರಯ ಪಡೆಯಲು ಅನುಕೂಲವಾಗುವಂತೆ ಇದ್ದ ತಗ್ಗಿನ ಪ್ರದೇಶಗಳೆಲ್ಲ ಕೆಂಪು ಮಣ್ಣಿನಿಂದ ಆವೃತವಾಗಿ ನೀರಿಗೆ ಕೇವಲ ನದಿಯೊಳಗಿನ ಜಾಗ ಮಾತ್ರ ಉಳಿದರೂ ಅದು ವಿನೀತವಾಗಿ ಅದರೊಳಗೇ ಹರಿಯುತ್ತಿದೆ.

ಅಷ್ಟರಮಟ್ಟಿಗೆ ಮಳೆಯೋ ನೀರಿನ ಹರಿವೋ ಕಡಿಮೆಯಾಗಿದೆ.

ಸಾಮಾನ್ಯವಾಗಿ ಜೋರು ಮಳೆ ಬಂದು ರಸ್ತೆಗಳಲ್ಲಿ ನೀರು ತುಂಬಿ ವಾಹನಗಳ ಓಡಾಟಕ್ಕೆ ತೊಂದರೆಯಾದಾಗ ಅಥವಾ ಯಾರಾದರೂ ಜೀವ ಕಳೆದುಕೊಂಡಾಗ ಸಂಬಂಧಿಸಿದ ನಗರಪಾಲಿಕೆಯನ್ನೋ ಕಾರ್ಪೊರೇಟರುಗಳನ್ನೋ ಅಧಿಕಾರಿಗಳನ್ನೋ ಬೈಯುತ್ತೇವೆ. ಅವರ ಹೊಣೆ ಇಲ್ಲವೆಂದಲ್ಲ. ಚರಂಡಿ ಕಾಮಗಾರಿಗಳು ನಡೆಯುವಾಗ ಸರಿಯಾಗಿ ಮೇಲ್ವಿಚಾರಣೆ ಮಾಡದೆ ಇರುವುದು, ಅನುಮತಿಯಿಲ್ಲದ ಕಟ್ಟಡಗಳ ಬಗ್ಗೆ ನಿರ್ಲಕ್ಷ್ಯ ತೋರುವುದು, ಅಂಗಡಿ ಮುಂಗಟ್ಟೆಗಳು ಅಕ್ರಮವಾಗಿ ವಿಸ್ತಾರಗೊಳ್ಳುವಾಗ ಕಣ್ಣು ಮುಚ್ಚಿಕೊಳ್ಳುವುದು ಹೀಗೆ ಹಲವು ಆರೋಪಗಳನ್ನು ಅವರ ಮೇಲೆ ಮಾಡಬಹುದು. ಆದರೂ ನಾಗರಿಕ ಸಮಾಜದ ಜವಾಬುದಾರಿ ಇಲ್ಲಿ ಕಡಿಮೆಯೇನಲ್ಲ.

ನಾಗರಿಕ ಪ್ರಜ್ಞೆ ಅನ್ನುವ ಪದವನ್ನು ನಾವು ಆಗಾಗ ಕೇಳುತ್ತೇವೆ. ನಗರ ಎನ್ನುವ ಪದಕ್ಕೂ ನಾಗರಿಕ ಎನ್ನುವ ಪದಕ್ಕೂ ಸಂಬಂಧವಿದೆ ಅಂತ ನೋಡಿದ ಕೂಡಲೇ ಯಾರಿಗಾದರೂ ಗೊತ್ತಾಗುತ್ತದೆ. ಬಹುಶಃ ಹೀಗಾಗಿಯೇ ನಾಗರಿಕ ಪ್ರಜ್ಞೆ ಹೆಚ್ಚು ಮುಖ್ಯವಾಗುವುದು ನಗರದಲ್ಲಿಯೇ. ನಮಗೆ ಸಹಜವಾಗಿಯೇ ನಾಗರಿಕ ಪ್ರಜ್ಞೆ ಕಡಿಮೆ ಅಂತ ತೋರುತ್ತದೆ.

ಉದಾಹರಣೆಗೆ ಗಮನಿಸಿ. ನಮ್ಮ ಬಿ.ಸಿ.ರೋಡಿನ ಪೇಟೆಯ ಕೆಲವು ಕಡೆಗಳಲ್ಲಿ ತ್ಯಾಜ್ಯಗಳನ್ನು ಹಾಕಲು ಹಿಂದೆ ಕಸದ ತೊಟ್ಟಿಗಳಿದ್ದವು. ಈಗ ಮನೆಮನೆಗಳಿಂದಲೂ ಅಂಗಡಿ ಹೋಟೆಲುಗಳಂಥ ಕಡೆಗಳಿಂದಲೂ ಕಸ ಸಂಗ್ರಹಿಸಲು ಪುರಸಭೆಯೇ ವ್ಯವಸ್ಥೆ ಮಾಡಿರುವುದರಿಂದ ಆ ತೊಟ್ಟಿಗಳಿಲ್ಲ. ಆದರೆ ಇಲ್ಲಿ ಕಸ ಹಾಕಬಾರದು ಅನ್ನುವ ಫಲಕಗಳನ್ನು ಅಳವಡಿಸಿದಲ್ಲಿ ಕೂಡ ಹಳೇ ಅಭ್ಯಾಸದಂತೆ ಜನರು ತ್ಯಾಜ್ಯಗಳನ್ನು ತಂದು ಎಸೆಯುತ್ತಾರೆ. ಅದೂ ಕೂಡ ನಿರ್ದಿಷ್ಟವಾದ ಸೀಮಿತ ಜಾಗದಲ್ಲಿ ಹಾಕುವ ಬದಲು ವಾಹನದಲ್ಲಿ ಹೋಗುತ್ತಲೇ ಎಸೆಯುತ್ತಾರೆ.

ಅದು ಒಂದಷ್ಟು ಜಾಗದಲ್ಲಿ ಹರಡಿ ಬೀಳುತ್ತದೆ. ಕೊಳೆಯುವ ತ್ಯಾಜ್ಯ, ಪ್ಲಾಸ್ಟಿಕ್ ತ್ಯಾಜ್ಯ ಇವನ್ನೆಲ್ಲ ಪ್ರತ್ಯೇಕವಾಗಿ ಇಡಬೇಕು ಎಂದು ಎಷ್ಟೇ ಪ್ರಚಾರಾಂದೋಲನಗಳನ್ನು ಮಾಡಿದರೂ ಜನರು ಪ್ಲಾಸ್ಟಿಕ್ ಲಕೋಟೆಗಳನ್ನು ತರಕಾರಿ ತ್ಯಾಜ್ಯಗಳನ್ನು, ಮಾಂಸದ ತ್ಯಾಜ್ಯಗಳನ್ನು ತಂದು ಒಟ್ಟೊಟ್ಟಿಗೇ ಎಸೆಯುತ್ತಾರೆ. ಇದಕ್ಕೆ ಏನು ಮಾಡುತ್ತೀರಿ? ಹೀಗೆ ಕಸ ತಂದು ಹಾಕುವವರು ಯಾರೂ ನೋಡದಾಗ ಹಾಕುವುದೇನಲ್ಲ. ಆದರೂ ಕೆಲವು ಕಡೆ ಪೋಲಿಸ್ ಇಲಾಖೆ ಅಳವಡಿಸಿದ ಕಣ್ಗಾವಲು ಕ್ಯಾಮರಾದಲ್ಲಿ ಹೀಗೆ ಕಸ ಬಿಸಾಡುವವರು ಸೆರೆಯಾದರೆ ಅಂಥ ಚಿತ್ರಗಳನ್ನು ದೊಡ್ಡದಾಗಿ ಫ್ಲೆಕ್ಸ್ ಮಾಡಿ ಹಾಕಲು ಪುರಸಭೆ ಕ್ರಮ ಕೈಗೊಂಡರೆ ಪ್ರಯೋಜನ ಆದೀತೇನೋ.

ನಿಜ, ಕೆಲವು ಪ್ರದೇಶಗಳಿಗೆ ಪುರಸಭೆಯ ಕಸ ಸಂಗ್ರಹಣಾ ವಾಹನ ಬರದೇ ಇರಬಹುದು. ಅಂಥ ಪ್ರದೇಶದವರು ಹೀಗೆ ಹಳೇ ನೆನಪಿನಲ್ಲಿ ಅಲ್ಲಲ್ಲಿ ಹಾಕುವ ಬದಲು ಕೊನೇಪಕ್ಷ ವಾರಕ್ಕೊಮ್ಮೆ ತಮ್ಮ ತ್ಯಾಜ್ಯವನ್ನು ತಂದು, ಯಾವಾಗಲೂ ರೈಲ್ವೇ ಸ್ಟೇಶನ್ನಿಗೆ ಹೋಗುವ ರಸ್ತೆಯಲ್ಲಿ ನಿಂತಿರುವ ತ್ಯಾಜ್ಯದ ವಾಹನದಲ್ಲಿಯೇ ಹಾಕಿ ಹೋಗಬಹುದಲ್ಲವೇ?
ರಸ್ತೆಬದಿಯ ಈ ಮಿಶ್ರ ತ್ಯಾಜ್ಯದ ದುರ್ವಾಸನೆಯಂತೂ ಹೇಳತೀರದು. ಈಗ ಮಲಹೊರುವ ಪದ್ಧತಿ ನಿಷೇಧವಾಗಿದೆ. ಆದರೆ ಈ ತ್ಯಾಜ್ಯದ ರಾಶಿ ಅದಕ್ಕಿಂತ ಕಡಿಮೆ ಅಸಹ್ಯವೇನೂ ಅಲ್ಲ. ರೋಗಕಾರಕವೂ ಇದ್ದೀತು. ಅದನ್ನೂ ಕೈಯಲ್ಲೇ ಕಾರ್ಮಿಕರು ಎತ್ತುತ್ತಾರೆ. ಎಂಥೆಂಥ ಸಂಕೀರ್ಣ ಕೆಲಸಗಳನ್ನು ಯಂತ್ರಗಳು ಮಾಡುವ ಈ ದಿನಗಳಲ್ಲಿ, ಎಲ್ಲದಕ್ಕೂ ಯಂತ್ರಗಳನ್ನು ಬಳಸುವ ನಾವು ಇಂಥ ತ್ಯಾಜ್ಯಗಳನ್ನು ಎತ್ತಿ ಲಾರಿಗಳಲ್ಲಿ ತುಂಬಿಸಲು ಪೂರ್ಣ ಪ್ರಮಾಣದಲ್ಲಿ ಯಂತ್ರಗಳನ್ನೇಕೆ ಬಳಸಬಾರದು?

ರಸ್ತೆಯನ್ನು ಪ್ಲಾಸ್ಟಿಕ್‌ಮಯಗೊಳಿಸುವಲ್ಲಿ ಕೆಲವು ಅಂಗಡಿ ಮಾಲಿಕರೂ ತಮ್ಮ ಕೊಡುಗೆಯನ್ನು ನೀಡುತ್ತಾರೆ. ಅದರ ಜೊತೆಗೇ ಚರಂಡಿಯಲ್ಲಿ ನೀರು ಹರಿದು ಹೋಗಲು ಜಾಗವಿಲ್ಲದಂತೆಯೂ ಮಾಡುತ್ತಾರೆ. ಬಿ.ಸಿ.ರೋಡಿನಲ್ಲಿ ಅಂಗಡಿಯವರು ಹೀಗೆ ಮಾಡುವುದು ಇತ್ತೀಚೆಗೆ ಅಷ್ಟಾಗಿ ಕಾಣುತ್ತಿಲ್ಲ. ಆದರೆ ಬೆಂಗಳೂರು ಪೇಟೆಯಲ್ಲಿ ಇದನ್ನು ನಾನು ಇತ್ತೀಚೆಗೂ ಗಮನಿಸಿದ್ದೇನೆ.

ಅದರಲ್ಲೂ ಮುಖ್ಯವಾಗಿ ಫ್ಯಾನ್ಸಿ ಅಂಗಡಿಗಳ ಎದುರು ನೋಡಿದರೆ ಯಾವುದೋ ಆಟಿಕೆ ಇತ್ಯಾದಿ ಸಾಮಾನುಗಳನ್ನು ಪ್ಯಾಕ್ ಮಾಡಿದ ಪ್ಲಾಸ್ಟಿಕ್ ಕವರುಗಳಂಥ ತ್ಯಾಜ್ಯಗಳು ರಸ್ತೆಯಲ್ಲಿಯೇ ಕಾಣುತ್ತವೆ. ಅವನ್ನೆಲ್ಲ ಕೆಲವು ಅಂಗಡಿಯವರು ಸಂಜೆಯಾಗುವಾಗ ಗುಡಿಸಿ ವಿಲೇವಾರಿ ಮಾಡುತ್ತಾರೆ ಎಂದು ನಾವು ಉದಾರವಾಗಿ ಅಂದುಕೊಂಡರೂ ಅವುಗಳಲ್ಲಿ ಬಹಳಷ್ಟು ಕಸ ಗಾಳಿಗೋ ಪಾದಚಾರಿಗಳ ಕಾಲಿಗೋ ಸಿಕ್ಕಿ ರಸ್ತೆಯಲ್ಲಿ ಅಷ್ಟುದೂರ ಸಂಚರಿಸಿ ಆಗಿರುತ್ತದೆ. ಇಷ್ಟಿಷ್ಟು ದಪ್ಪದ ಕಾಂಕ್ರೀಟು ಹಾಕಿ ಚರಂಡಿಗಳನ್ನು ಅತ್ಯುತ್ತಮವಾಗಿ ನಿರ್ಮಾಣ ಮಾಡಿದರೂ ಇಂಥ ತ್ಯಾಜ್ಯಗಳಿಂದ ಚರಂಡಿಗಳು ಒಂದೇ ವರ್ಷದಲ್ಲಿ ಭರ್ತಿಯಾಗಿ ಹರಿವ ನೀರನ್ನು ನಿಲ್ಲಿಸಿ, ಕಾಂಕ್ರೀಟು ಅಥವಾ ಡಾಮರು ರಸ್ತೆಯಲ್ಲೇ ನೀರಿಂಗಿಸುವ ಯೋಜನೆಯೋ ಎಂಬಂತೆ ಗೋಚರವಾಗುತ್ತದೆ.

ಇನ್ನು ಕೆಲವರಿದ್ದಾರೆ. ತಮ್ಮ ಮನೆ ಆವರಣದಲ್ಲಿರುವ ಬೇಡದ ಕಳೆ, ಗಿಡಗಂಟಿಗಳನ್ನು ತೆಗೆದು ನೀರು ಹರಿವ ತೋಡಿಗೆ ಹಾಕಿ ಬಿಡುತ್ತಾರೆ. ತಮ್ಮ ಅಂಗಳದಲ್ಲೇ ತೆಂಗಿನಮರವಿದ್ದರೂ ಅದರ ಬುಡಕ್ಕೆ ಇಂಥ ಗೊಬ್ಬರವನ್ನು ಹಾಕರು.

ಇನ್ನು ಪ್ಲಾಸ್ಟಿಕನ್ನು ತೋಡಿಗೆ ಎಸೆಯುವವರ ಬಗ್ಗೆ ಕೇಳುವುದೇ ಬೇಡ. ನೇತ್ರಾವತಿ ಸೇತುವೆಯಲ್ಲಿ ಹೋಗುವಾಗ ಕೆಲವು ಖಾಸಗಿ ಬಸ್ಸಿನವರು ತಮ್ಮ ದೇವರ ಪಟದ ಹಿಂದಿನ ದಿನದ ನಿರ್ಮಾಲ್ಯ ಹೂವನ್ನು ಪ್ಲಾಸ್ಟಿಕ್ ತೊಟ್ಟೆ ಸಹಿತ ಎಳೆದು ಬಿಸಾಡುವುದನ್ನು ನೀವೂ ನೋಡಿರಬಹುದು.

ಸ್ವಲ್ಪ ಪ್ರಮಾಣದ ಕಸ ಆಗುವುದಾದರೆ ಉಳಿದ ಬಹುತೇಕ ಕಸ ನಾವು ಮಾಡುವುದು. ಒಂದು ಉದಾಹರಣೆ ನೀಡುತ್ತೇನೆ. ಕಾಲೇಜುಗಳ ತರಗತಿ ಕೋಣೆಗಳಲ್ಲಿ ಧೂಳು, ಮರಳು ಸಹಜವಾಗಿ ಚಪ್ಪಲಿಗಳ ಮೂಲಕ ಬರಬಹುದು.

ಆದರೆ ಅಲ್ಲಿ ಚಾಕಲೇಟು ಸಿಪ್ಪೆಗಳು ಅಥವಾ ಕಾಗದದ ತುಂಡುಗಳು ಇದ್ದರೆ ಆಗ ಅಂಥ ಕಸ ಆದದ್ದಲ್ಲ, ಬದಲಾಗಿ ಮಾಡಿದ್ದು. ಹೀಗೆ ಕಸ ಮಾಡುವುದನ್ನು ನಾವು ಎಲ್ಲಾ ಕಡೆ ಸಾಧ್ಯವಿದ್ದಷ್ಟು ಕಡಿಮೆ ಮಾಡಿದರೆ ನಮ್ಮ ನಾಗರಿಕ ಪ್ರಜ್ಞೆ ಹೆಚ್ಚು ನಾಗರಿಕವಾದದ್ದು ಎನ್ನಬಹುದು.

About the Author

Dr. Ajakkala Girish Bhat
ವೃತ್ತಿಯಲ್ಲಿಕನ್ನಡ ಬೋಧಕ. ಬಂಟ್ವಾಳ ಸರಕಾರಿ ಪದವಿ ಕಾಲೇಜು ಪ್ರಾಂಶುಪಾಲ. ಇಂಗ್ಲಿಷನ್ನುಪಳಗಿಸೋಣ, ಬುದ್ಧಿಜೀವಿ ವರ್ಸಸ್ ಬೌದ್ಧಿಕ ಸ್ವಾತಂತ್ರ್ಯ, ಅಸತ್ಯ ಅಥವಾ ಸತ್ಯ?, ಮುಂತಾದ ಹದಿನಾರು ಪುಸ್ತಕಗಳು ಪ್ರಕಟವಾಗಿವೆ. ವಿವಿಧ ಗೋಷ್ಠಿ, ಸಮ್ಮೇಳನಗಳಲ್ಲಿ ಪ್ರಬಂಧ, ವಿಚಾರ ಮಂಡಿಸಿದ್ದಾರೆ.

Be the first to comment on "ನಮಗೆ ನಾಗರಿಕ ಪ್ರಜ್ಞೆ ಕಡಿಮೆಯೇ?"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*