1919ರಲ್ಲೇ ಆರಂಭವಾಯಿತು ಹಿಮ್ಮೇಳ ಕ್ಲಾಸು!

www.bantwalnews.com

ಜಾಹೀರಾತು

1918ನೇ ಇಸವಿ. ನಮ್ಮೂರಲ್ಲಂತೂ ಯಕ್ಷಗಾನ ಮನರಂಜನೆಗೂ, ಕಾಲಕ್ಷೇಪಕ್ಕೂ ಹಾಗೂ ಜನಸಾಮಾನ್ಯನ ಪೌರಾಣಿಕ ಜ್ಞಾನಭಂಡಾರ ವೃದ್ಧಿಗೂ ಬಹುದೊಡ್ಡ ಸಂಪನ್ಮೂಲ. ಹೀಗಾಗಿ ಕಲಾವಿದರಿಗೆ ಜವಾಬ್ದಾರಿಯೂ ಜಾಸ್ತಿ. ಕುಣಿತದ ಒಂದೊಂದು ಹೆಜ್ಜೆ, ಹಾಕುವ ಒಂದೊಂದು ತಾಳ, ಹಾಡು, ಲಯ ತಪ್ಪದಂತೆ ನೋಡಿಕೊಳ್ಳಲು ಸೀನಿಯರ್ ಗಳು ಇದ್ದೇ ಇರುತ್ತಿದ್ದರು. ರಂಗಸ್ಥಳದಲ್ಲಿ ತಪ್ಪಬಾರದು, ಜನರಿಗೆ ತಪ್ಪು ಸಂದೇಶ ಹೋಗಬಾರದು ಎಂಬ ಪ್ರಜ್ಞೆಯನ್ನು ಕಲಾವಿದನೂ ಹೊಂದಿರದಿದ್ದರೆ, ಚೌಕಿಯಲ್ಲಿ ಕ್ಲಾಸ್ ಆಗುತ್ತಿತ್ತು..!

ಜಾಹೀರಾತು

Mambady Narayana Bhagavata 1900 – 1990

ಅಂಥ ಹೊತ್ತಿನಲ್ಲೇ ಮಾಂಬಾಡಿ ನಾರಾಯಣ ಭಟ್ಟರು (18ರ ಹರೆಯ) ಸಂಗೀತಗಾರನಾಗಿ ಇಚಿಲಂಪಾಡಿ ಮೇಳ (ಅಂದಿನ ಪ್ರಸಿದ್ಧ ಮೇಳ)ಕ್ಕೆ ಪಾದಾರ್ಪಣೆ ಮಾಡಿದರು. ಮಾಯಿಪ್ಪಾಡಿಯಲ್ಲಿ ನಡೆದ ಆಟದಲ್ಲಿ ಜಾಗಟೆ ಹಿಡಿದ ನಾರಾಯಣರಿಗೆ ಮೇಳಕ್ಕೆ ಸೇರಿದ ಮೂರನೇ ದಿನವೇ ಮಧೂರಿನಲ್ಲಿ ಅಶ್ವಮೇಧ ಪ್ರಸಂಗದ ಆಟದ ಇಡೀ ರಾತ್ರಿಯ ಭಾಗವತಿಕೆ ಮಾಡಲು ಇಚ್ಲಂಪಾಡಿ ಮೇಳದ ಭಾಗವತರೂ ಮೇಳದ ಚುಕ್ಕಾಣಿ ಹಿಡಿದವರೂ ಆಗಿದ್ದ ಈಶ್ವರಪ್ಪಯ್ಯನವರು ಸೂಚಿಸಿದರು. ಇಡೀ ರಾತ್ರಿ ಮಾಂಬಾಡಿ ನಾರಾಯಣ ಭಟ್ಟರು ಪ್ರಸಂಗವನ್ನು ಯಶಸ್ವಿಯಾಗಿ ನಿರ್ವಹಿಸಿದರು. ಹೀಗೆ ಇಡೀ ವರ್ಷದ ತಿರುಗಾಟದಲ್ಲಿ ಮೇಳ ಪ್ರವೇಶಿಸಿದ ನಾರಾಯಣ ಭಟ್ಟರು ಮಾಂಬಾಡಿ ನಾರಾಯಣ ಭಾಗವತರು ಎಂದೇ ಹೆಸರು ಗಳಿಸತೊಡಗಿದರು. ಈ ಸಂದರ್ಭದಲ್ಲೇ ಭಾಗವತರನ್ನು ಹಲವರು ಕೇಳತೊಡಗಿದರು.

‘ಕ್ಲಾಸ್ ಮಾಡ್ತೀರಾ?’

1919ರಲ್ಲಿ ಮಾಂಬಾಡಿ ಭಾಗವತರಿಗೂ 19ರ ಹರೆಯ. ಒಂದು ವರ್ಷದ ತಿರುಗಾಟವೂ ಆಗಿತ್ತು. ಇಂದಿಗೆ ಸರಿಯಾಗಿ 98 ವರ್ಷದ ಮೊದಲು ಮಾಂಬಾಡಿ ಮನೆತನದ ಹಿಮ್ಮೇಳ ತರಗತಿಗಳು ಆರಂಭಗೊಂಡವು ಎಂದು ಹೇಳಬಹುದು. ಮಾಂಬಾಡಿ ಭಾಗವತರ ಬಳಿಕ ಅದನ್ನು ಮುಂದುವರಿಸುತ್ತಿರುವವರು ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರು. ಹೀಗೆ ಮಾಂಬಾಡಿ ಮನೆತನದಿಂದ ಯಕ್ಷಗಾನ ಹಿಮ್ಮೇಳ ತರಗತಿ ನಿರಂತರವಾಗಿಯೇ ಮುಂದವರಿಯುತ್ತಿರುವುದು ಇಲ್ಲಿ ಉಲ್ಲೇಖನೀಯ.

ಜಾಹೀರಾತು

ಹಿಮ್ಮೇಳ ತರಗತಿ ಆರಂಭಗೊಂಡದ್ದು ಹೀಗೆ. ಮಾಂಬಾಡಿ ಭಾಗವತರ ಹೆಸರು ಆಗ ಹತ್ತೂರಲ್ಲೆಲ್ಲ ಪಸರಿಸಿತ್ತು. ಯಕ್ಷಗಾನ ಅಭ್ಯಾಸ ಆಸಕ್ತರೂ ಅಧಿಕ ಸಂಖ್ಯೆಯಲ್ಲಿ ಇದ್ದರು. ಅದೇ ಹೊತ್ತಿನಲಲಿ ಆರ್ಯಾಪು ಪಂಜದ ಕುಂಭ ಪೆರ್ಗಡೆ ಪಟೇಲರು ತಮ್ಮ ಮಗನಿಗೆ ಯಕ್ಷಗಾನ ಹಾಡುಗಾರಿಕೆ ಕಲಿಸಬೇಕು ಎಂದು ಮಾಂಬಾಡಿ ಭಾಗವತರ ಬಳಿ ಕೇಳಿಕೊಂಡರು. ಮಾಂಬಾಡಿ ಕ್ಲಾಸುಗಳು ಅಲ್ಲಿ ಆರಂಭಗೊಂಡವು.

ಇದೇ ಹೊತ್ತಿನಲ್ಲಿ ಊರವರ ಪ್ರೋತ್ಸಾಹದಿಂದ ಸಂಟ್ಯಾರಿನಲ್ಲಿ ಯಕ್ಷಗಾನ ಕಲಾಶಾಲೆ ಆರಂಭಗೊಂಡಿತು. ಅಲ್ಲಿ ಮಾಂಬಾಡಿ ಭಾಗವತರು ಹಿಮ್ಮೇಳ ತರಗತಿ ನಡೆಸುತ್ತಿದ್ದರು. ಇದೇ ಹೊತ್ತಿನಲ್ಲಿ ಮಾಂಬಾಡಿಯವರಿಗೆ ಕಟೀಲು ಮೇಳದಿಂದ ಕರೆ ಬಂತು!

ಕಟೀಲು ದೇವಸ್ಥಾನದ ಮೊಕ್ತೇಸರರಾಗಿದ್ದ ಕೋಟಿ ಶೆಟ್ಟರು ತಾಳಮದ್ದಳೆಯೊಂದನ್ನು ಕಟೀಲಿನಲ್ಲಿ ಏರ್ಪಡಿಸಿದರು. ಕೋಟಿ ಶೆಟ್ಟರೇ ಮದ್ದಳೆ ನುಡಿಸಿದರೆ, ಮಾಂಬಾಡಿಯವರು ಭಾಗವತರು. ಬಳಿಕ ಆ ವರ್ಷ ಕಟೀಲು ಮೇಳದ ಭಾಗವತಿಕೆಯನ್ನು ಮಾಂಬಾಡಿ ನಾರಾಯಣ ಭಾಗವತರು ನಿರ್ವಹಿಸಿದರು. ಹೇಳಿಕೇಳಿ ಕಟೀಲ್ದಪ್ಪೆಯ ಪರಮ ಭಕ್ತರು ಅವರು. ದೇವಿ ಮೇಲೆ ಭಾರ ಹಾಕಿ ತಿರುಗಾಟ ನಡೆಸಿದರು.

ಜಾಹೀರಾತು

ಹೀಗಿದ್ದಾಗಲೇ ಒಂದು ಘಟನೆ ನಡೆಯಿತು.

ತಿರುಗಾಟ, ಅನಾರೋಗ್ಯದಿಂದ ಮಾಂಬಾಡಿಯವರ ಸ್ವರ ಕೆಟ್ಟಿತು. ಹೀಗಾಗಿ ಮನೆಯಲ್ಲಿ ಅವರು ವಿಶ್ರಾಂತಿ ಪಡೆಯುತ್ತಿದ್ದರು. ಹೀಗಿದ್ದಾಗ ಮಂಕುಡೆಯಲ್ಲಿ ಕೃಷ್ಣ ಆಚಾರ್ಯ ಎಂಬವರು ಕಟೀಲು ಮೇಳದ ಆಟ ಆಡಿಸಲು ಮನಸ್ಸು ಮಾಡಿದರು. ಭಾಗವತಿಕೆಗೆ ಮಾಂಬಾಡಿಯವರೇ ಬೇಕು, ಅವರನ್ನೇ ಕರೆಸಿ ಎಂದು ಹೇಳಿದರು. ಸರಿ, ಮೇಳದ ಯಜಮಾನರು ಮಾಂಬಾಡಿ ಮನೆಗೆ ಬಂದು ಅಸೌಖ್ಯದಿಂದಿದ್ದ ಭಾಗವತರ ಮನವೊಲಿಸಿದರು. ಹಾಗೆ ಆಟಕ್ಕೆ ಹೋದಾಗ ಸ್ವರವಿಲ್ಲದೆ ಕಷ್ಟಪಟ್ಟರು. ಅಂದು ಪ್ರದರ್ಶನ ನೋಡಿದ ಜನರು ಇದೇನು ಭಾಗವತರ ಸ್ವರ ಹೀಗಾದದ್ದು ಎಂದು ಆಶ್ಚರ್ಯಪಟ್ಟರಂತೆ.

ಮರುದಿನ ಮಾಂಬಾಡಿಯವರ ಗುರುಗಳೂ ಆದ ಈಶ್ವರಪ್ಪಯ್ಯನವರು ಇದ್ದ ಇಚ್ಲಂಪಾಡಿ ಮೇಳದೊಂದಿಗೆ ಜೋಡಾಟ ನಿಗದಿಯಾಗಿತ್ತು. ಮೊದಲೇ ಸ್ವರವಿಲ್ಲ. ಮೇಲಾಗಿ ಗುರುಗಳ ಜೊತೆ ಜೋಡಾಟ ಬೇರೆ. ಕಟೀಲು ಶ್ರೀ ದುರ್ಗಾಪರಮೇಶ್ವರಿ ಮೇಲೆ ಭಾರ ಹಾಕಿ ಯುವ ಭಾಗವತ (ಆಗಿನ್ನೂ 21ರ ಹರೆಯ) ಮಾಂಬಾಡಿ ನಾರಾಯಣ ಭಟ್ಟರ ಭಾಗವತಿಕೆ. ಜೋಡಾಟ ಯಶಸ್ವಿಯಾಯಿತು. ಇದು ಮತ್ತೆ ಅವರು ಇಚ್ಲಂಪಾಡಿ ಮೇಳಕ್ಕೆ ಹೋಗಲು ಕಾರಣವಾಯಿತು.

ಜಾಹೀರಾತು

ಮರು ವರ್ಷ ಇಚ್ಲಂಪಾಡಿ ಮೇಳದಲ್ಲಿ ಪ್ರಧಾನ ಭಾಗವತರಾಗಿ ಮಾಂಬಾಡಿಯವರನ್ನು ನಿಯುಕ್ತಿಗೊಳಿಸಲಾಯಿತು. ಒಂದು ವರ್ಷ ಮೇಳದಲ್ಲಿ ತಿರುಗಾಟ ನಡೆಸಿದರು. ಅದಾಗಲೇ ಕೇವಲ ಭಾಗವತಿಕೆ ಮಾಡಿದರೆ ಸಾಲದು ಇನ್ನೂ ಕಲಿಯುವುದು ಬಹಳ ಇದೆ ಎಂದು ಮಾಂಬಾಡಿಯವರಿಗೆ ಅನಿಸಿತು. ಹೀಗಾಗಿ ಮುಂದಿನ ವರ್ಷ ತಿರುಗಾಟಕ್ಕೆಹೋಗದೆ ಅಭ್ಯಾಸಕ್ಕೆ ಮನ ಮಾಡಿದರು. ಪುತ್ತೂರಿನಲ್ಲಿ ಪಿಟೀಲು ಪುಟ್ಟಣ್ಣ ಎಂಬವರು ಆಗ ಇದ್ದರು. ಅವರ ಬಳಿ ಸಂಗೀತಾಭ್ಯಾಸ ನಡೆಸಿದರು. ಅದೇ ಹೊತ್ತಿನಲ್ಲಿ ಯಕ್ಷಗಾನ ತರಗತಿಗಳನ್ನು ನಡೆಸುತ್ತಿದ್ದರು. ಆಗ ಪುತ್ತೂರಿನಲ್ಲಿ ಮಾಂಬಾಡಿ ಕ್ಲಾಸ್ ನಡೆಯುತ್ತಿತ್ತು!

ಹಾಗೆ ನೋಡಿದರೆ, ಮಾಂಬಾಡಿಯವರು ಸಂಗೀತ ಕಲಿಯಲು ಪ್ರೋತ್ಸಾಹ ನೀಡಿದ್ದು ಇಚ್ಲಂಪಾಡಿ ಮೇಳದ ಯಜಮಾನ ಕೋಟ್ಯಣ್ಣ ಆಳ್ವರು. ಹೀಗಾಗಿ ತಮ್ಮ ಮೇಳಕ್ಕೇ ಮತ್ತೆ ಬರಬೇಕು ಎಂದು ಒತ್ತಾಯಪೂರ್ವಕವಾಗಿ ಮಾಂಬಾಡಿ ಭಾಗವತರನ್ನು ಕರೆತಂದರು. ಮತ್ತೆ ಇಚ್ಲಂಪಾಡಿ ಮೇಳ ಸೇರಿದ ಮೇಲೆ 1928ರವರೆಗೆ ಮುಖ್ಯ ಭಾಗವತರಾಗಿ ಕಲಾಸೇವೆ ಮಾಡಿದರು.

ಇಚ್ಲಂಪಾಡಿ ಮೇಳ ಅಂದು ಹೇಗಿತ್ತು ಗೊತ್ತಾ?

ಜಾಹೀರಾತು

ಕುಂಬಳೆ ಗುಂಡ – ರಾಜವೇಷ. ಕೋಲುಳಿ ಸುಬ್ಬ – ಬಣ್ಣದ ವೇಷ. ಹೊಸದುರ್ಗ ಸುಬ್ರಾಯ, ಬೇಳಿಂಜ ಅಪ್ಪು ಹಾಸ್ಯಗಾರರು, ಮಧೂರು ತಿಮ್ಮಪ್ಪ ಆಗ ಪ್ರಸಿದ್ಧ ಅರ್ಥಧಾರಿಗಳು, ವೇಷಧಾರಿಗಳು. ಪೊಳಲಿ ಶ್ಯಾಮ ಮದ್ಲೆಗಾರರು ಹಲವು ಪುರಸ್ಕಾರಗಳನ್ನು ಪಡೆದವರು. ಅಂದು ಮರಕಾಲು ಕುಣಿತ, ಮಂಚಕುಣಿತ (ಚಪ್ಪರ ಕುಣಿತ) ಎಂಬ ನಾಟ್ಯಪ್ರಕಾರಗಳನ್ನು ಪ್ರದರ್ಶಿಸುತ್ತಿದ್ದರಂತೆ. ಬಳಿಕ ಅಳಿಕೆ ರಾಮಯ್ಯ ರೈಗಳು ಇಚ್ಲಂಪಾಡಿ ಮೇಳದಲ್ಲಿ ರಂಗಪ್ರವೇಶ ಮಾಡಿದರು. ಅವರಿಗೆ ಗೆಜ್ಜೆ ಕೊಟ್ಟು ಹರಸಿದ್ದೂ ಮಾಂಬಾಡಿ ಭಾಗವತರು. ಆ ದಿನಗಳಲ್ಲೇ ಭಾಗವತರಿಗೆ ಚಿನ್ನದ ಬಳೆಗಳನ್ನಿತ್ತು ಸನ್ಮಾನವನ್ನೂ ಮಾಡಲಾಯಿತು. ಅದಾದ ಬಳಿಕ ಮೇಳ ನಿಂತು ಹೋಯಿತು. ಮಾಂಬಾಡಿಯವರೂ ಇನ್ನೊಂದು ಮೇಳ ಹುಡುಕಿಕೊಂಡು ಹೋಗಲಿಲ್ಲ. ಆದರೆ ಆಹ್ವಾನವಿದ್ದರೆ ತಾಳಮದ್ದಳೆ, ಯಕ್ಷಗಾನ ಕೂಟಗಳಿಗೆ ಹೋಗುತ್ತಿದ್ದರು. ಅದೇ ಸಂದರ್ಭ ಕಾಸರಗೋಡು ಸಮೀಪ ಕೋರಕ್ಕೋಡು ಎಂಬಲ್ಲಿ ಏಳು ದಿನಗಳ ದೇವಿ ಮಹಾತ್ಮೆ ಪ್ರಸಂಗ ಆಡುವುದು ಎಂದು ನಿಶ್ಚಯಿಸಲಾಯಿತು.

ಏಳು ದಿನಗಳ ದೇವಿ ಮಹಾತ್ಮೆ ಹೇಗಿತ್ತು ?

ಆಗ ಇಸವಿ 1930. ಭಾಗವತರಿಗೂ 30 ವರ್ಷವಾಗಿತ್ತು!

ಜಾಹೀರಾತು

(ಮುಂದಿನ ಭಾಗಕ್ಕೆ)

ಕಳೆದ ಸಂಚಿಕೆಯ ಲೇಖನಕ್ಕೆ ಕ್ಲಿಕ್ ಮಾಡಿರಿ:

ಮೇಳ ಸೇರುವಾಗಲೇ 15 ಪ್ರಸಂಗ ಕಂಠಪಾಠವಿತ್ತು!!

ಜಾಹೀರಾತು

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು

About the Author

Harish Mambady
ಕಳೆದ 22 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.

Be the first to comment on "1919ರಲ್ಲೇ ಆರಂಭವಾಯಿತು ಹಿಮ್ಮೇಳ ಕ್ಲಾಸು!"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*