ಬಿ.ಸಿ.ರೋಡ್‌ನ ಮಿನಿ ವಿಧಾನಸೌಧದ ಎದುರು ಇರುವ ನೆಮ್ಮದಿ ಕೇಂದ್ರದಲ್ಲಿ ಆಧಾರ್ ಟೋಕನ್ ಗಾಗಿ ಮಂಗಳವಾರ ಬೆಳಗ್ಗೆ ಸುಮಾರು 8ರಿಂದಲೇ ಜನರು ಸಾಲುಗಟ್ಟಿ ನಿಲ್ಲುವ ದೃಶ್ಯ ಕಂಡುಬಂತು.
ಶುಕ್ರವಾರ, ಶನಿವಾರ, ಭಾನುವಾರ, ಸೋಮವಾರ ರಜಾದಿನಗಳಿದ್ದ ಕಾರಣ, ಈ ಜನಜಂಗುಳಿ ಇತ್ತು. ಇದೇ ಹೊತ್ತಿನಲ್ಲಿ ಮಳೆಯೂ ಸುರಿದು ಕೆಸರಿನಲ್ಲೇ ನಿಂತಿರುವ ಜನರಿಗೆ ಮತ್ತಷ್ಟು ತಲೆನೋವು ತಂದಿತು.
ಅಧಾರ್ ಕಾರ್ಡಗಾಗಿ ಛಾಯಾಚಿತ್ರ ತೆಗೆಯಲು, ಇದಕ್ಕಾಗಿ ಟೋಕನ್ ಪಡೆಯಲು ಮತ್ತು ಪಹಣಿ ಪತ್ರ ಮತ್ತಿತರ ದಾಖಲೆ ಪತ್ರಗಳನ್ನು ಪಡೆಯಲು , ಅರ್ಜಿ ಸಲ್ಲಿಕೆಗಾಗಿ ಜನರು ಮೈಲುದ್ದಕ್ಕೆ ಸಾಲುಗಟ್ಟಿ ನಿಲ್ಲಬೇಕಾಯಿತು. ವೃದ್ಧರು, ನಿಶ್ಯಕ್ತರಿಗೆ ಕ್ಯೂ ಇಲ್ಲ ಎಂಬ ನಿಯಮವೂ ಇಲ್ಲಿಗೆ ಲಾಗೂ ಆಗದ ಕಾರಣ ಎಲ್ಲರೂ ಕೊಡೆ ಹಿಡಿದು ನಿಲ್ಲುವ ದೃಶ್ಯ ಕಂಡುಬಂತು.
ಬೆಳಗ್ಗೆ ಸುಮಾರು ೧೧.೩೦ರವರೆಗೂ ಇದ್ದ ಸಾಲು ಬಳಿಕ ನಿಧಾನವಾಗಿ ಕರಗತೊಡಗಿತು. ತಾಲೂಕಿನ ಬಂಟ್ವಾಳ ಮತ್ತು ಪಾಣೆಮಂಗಳೂರು ಹೋಬಳಿಗೆ ಸಂಬಂಧಿಸಿ ಎರಡು ಪ್ರತ್ಯೇಕ ನೆಮ್ಮದಿ ಕೇಂದ್ರಗಳಿದ್ದರೂ ಈ ಪೈಕಿ ಪಾಣೆಮಂಗಳೂರು ಕೇಂದ್ರದಲ್ಲಿ ನೆಟ್ ವರ್ಕ್ ಸಮಸ್ಯೆಯಿಂದ ಆಧಾರ್ ನ ಪ್ರಕ್ರಿಯೆ ನಡೆಸಲೂ ತೊಡಕಾಯಿತು.
ಆಧಾರ್ ಪ್ರಕ್ರಿಯೆಗೆ ಎರಡೂ ಕೇಂದ್ರದಲ್ಲಿ ಒಂದೊಂದೇ ಕಂಪ್ಯೂಟರ್ ಇರುವುದರಿಂದ ಜನರು ಕೆಲವೊಮ್ಮೆ ಸಂಜೆಯವರೆಗೂ ಸಾಲು ನಿಂತಿರುತ್ತಾರೆ. ಅದಕ್ಕಾಗಿ ಕೇಂದ್ರದ ಸಿಬ್ಬಂದಿ ಆಧಾರ್ ಮಾಡಿಸಲೆಂದು ಬರುವ ಜನರಿಗೆ ವಿವಿಧ ದಿನಾಂಕ ನಮೂದಿಸಿ ಟೋಕನ್ ನೀಡುವ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಆ ದಿನದಂದು ಕೊಟ್ಟಿರುವ ನಿಗದಿತ ಸಂಖ್ಯೆಗಷ್ಟೆ ಆಧಾರ್ ಪ್ರಕ್ರಿಯೇ ನಡೆಸಲಾಗುತ್ತಿದೆ. ಇಲ್ಲಿನ ಆಧಾರ್ ಕೇಂದ್ರಕ್ಕೆ ಹೆಚ್ಚುವರಿ ಕಂಪ್ಯೂಟರ್,ಸಿಬ್ಬಂದಿಗಳ ನೇಮಕಕ್ಕೆ ಹಲವು ಸಮಯದಿಂದ ಸಾರ್ವಜನಿಕರಿಂದ ಕೂಗು ಕೇಳುತ್ತಿದ್ದರೂ ಅದು ಈಡೇರಿಲ್ಲ. ಗ್ರಾಮಮಟ್ಟದಲ್ಲಿ ಈ ಪ್ರಕ್ರಿಯೆ ನಡೆಸಬೇಕು ಎಂಬ ಅಳಲು ಸಾರ್ವಜನಿಕರದ್ದು.
Be the first to comment on "ಸುರಿಯುವ ಮಳೆಗೇ ಆಧಾರ್‌ಗೆ ಸಾಲು"