ಮೇಳ ಸೇರುವಾಗಲೇ 15 ಪ್ರಸಂಗ ಕಂಠಪಾಠವಿತ್ತು!!

ಇಂದು ಪ್ರತಿಯೊಂದಕ್ಕೂ ಅಕಾಡೆಮಿಕ್ ಶಿಕ್ಷಣವನ್ನೇ ಅರ್ಹತೆಯ ಮಾನದಂಡವಾಗಿ ಬಳಸಲಾಗುವುದು ಎಲ್ಲರಿಗೂ ಗೊತ್ತಿರುವ ವಿಷಯ. ಅದರಲ್ಲೂ ಶಾಸ್ತ್ರೀಯ ಸಂಗೀತ, ನೃತ್ಯಗಳಿಗೆ ನಡೆಯುವ ಪರೀಕ್ಷೆಗಳ ಸಂಗತಿಗಳ ಬಗ್ಗೆ ಹೇಳಿದರೆ, ಒಂದು ಸಂಪುಟವನ್ನೇ ಮಾಡಬೇಕಾದೀತು. ಜ್ಯೂನಿಯರ್, ಸೀನಿಯರ್ ಗಳೋ, ಅದರ ಗ್ರೇಡುಗಳೋ, ಅದನ್ನು ನಿರ್ಧರಿಸುವವರ ಕುರಿತು ಪರೀಕ್ಷಾರ್ಥಿಗಳು ಎತ್ತುವ ಅಪಸ್ವರಗಳು ಹಾಗೂ ಆ ಅರ್ಹತೆಗಳಿಂದ ಪಡೆದ ಬಿರುದುಗಳನ್ನು ಹೊತ್ತವರೇ ನೈಜ ಕಲಾವಿದರು ಎಂಬಲ್ಲಿಯವರೆಗಿನ ಮನೋಸ್ಥಿತಿ ನಿರ್ಮಾಣವಾಗಿರುವುದು ಇಂದಿನ ಸನ್ನಿವೇಶ. ಆದರೆ ಹಿಂದೆ ಹಾಗಿರಲಿಲ್ಲ. ಯಕ್ಷಗಾನಕ್ಕಂತೂ ಹಿಂದೆಯೂ ಎಲ್ಲರಿಗೂ ಸಮಾನ ಪಠ್ಯವೆಂಬುದು ಇರಲಿಲ್ಲ. ಗುರು-ಶಿಷ್ಯ ಪರಂಪರೆಯೇ ಇತ್ತು. ಬಹುತೇಕ ಇಂದಿಗೂ ಅದು ಮುಂದುವರಿದಿದೆ. ಮಾಂಬಾಡಿ ಮನೆತನಕ್ಕೆ ದೊರಕಿದ ಸೌಭಾಗ್ಯವೆಂದರೆ ಸುದೀರ್ಘ ಕಾಲ ತಂದೆ, ಮಗ ಯಕ್ಷಗಾನದ ಶಿಕ್ಷಣಕ್ಕೆಂದೇ ತಮ್ಮ ಜೀವನವನ್ನು ಮುಡಿಪಾಗಿಟ್ಟದ್ದು.

ಹೀಗೆ ಸರಿಸುಮಾರು 110 ವರ್ಷಗಳ ಹಿಂದೆ ಕರೋಪಾಡಿಯ ಮಿತ್ತನಡ್ಕ ಶಾಲೆಯಲ್ಲಿ ಮಾಂಬಾಡಿ ನಾರಾಯಣ ಭಟ್ಟರು ಎರಡು ವರ್ಷ ಶಿಕ್ಷಣ ಪಡೆದದ್ದನ್ನು ಬಿಟ್ಟರೆ ಮತ್ತೆ ಶಾಲೆಯ ಮೆಟ್ಟಿಲು ಹತ್ತಲಿಲ್ಲ. ಏಳನೇ ವರ್ಷಕ್ಕೆ ಉಪನಯನವೂ ಆಯಿತು. ಅಲ್ಲಿಂದ ಮುಂದೇನು ಎಂಬ ಕುರಿತು ಹೆಚ್ಚಿಗೆ ಯೋಚನೆಯೇನೂ ಇರಲಿಲ್ಲ. ಅವರ ತಂದೆಯವರಿಗೆ ಮಕ್ಕಳಿಗೆ ವಿದ್ಯಾಭ್ಯಾಸ ನೀಡುವಂತೆ ಮಾಡುವ ಆರ್ಥಿಕ ಶಕ್ತಿಯೂ ಇರಲಿಲ್ಲ. ಹೀಗಾಗಿ ನಾರಾಯಣ ಭಟ್ಟರು ಅಣ್ಣಂದಿರ ಹಾದಿ ಹಿಡಿಯಬೇಕಾಯಿತು.

ಅಣ್ಣಂದಿರಾದರೂ ಹೋದದ್ದು ಎಲ್ಲಿಗೆ?

ಕೇರಳ ರಾಜ್ಯಕ್ಕೆ.

ನಾರಾಯಣ ಭಟ್ಟರ ಒಬ್ಬ ಅಣ್ಣ ತಿರುವಾಂಕೂರಿನ ಮಹಾರಾಜ ಹೈಸ್ಕೂಲಿನಲ್ಲಿ ಇಂಗ್ಲೀಷ್ ಅಧ್ಯಯನ ಮಾಡುತ್ತಿದ್ದರು. ಇವರ ಹೆಸರು ಕೇಶವ ಭಟ್ಟರು. ಮತ್ತೋರ್ವ ಅಣ್ಣ ಈಶ್ವರ ಭಟ್ಟರು ಅದೇ ಊರಿನಲ್ಲಿ ಜ್ಯೋತಿಷ್ಯ ಕಲಿಯುತ್ತಿದ್ದರು. ನಾರಾಯಣ ಭಟ್ಟರೂ ಅಣ್ಣಂದಿರನ್ನು ಸೇರಿಕೊಂಡರು. ಆದರೆ ಶಾಲೆಗೆ ಅಲ್ಲ. ಆದರೂ ಇಂಗ್ಲೀಷ್ ಪಾಠ, ಜ್ಯೋತಿಷ್ಯಕ್ಕೆ ಸಂಬಂಧಿಸಿದ ಕೆಲ ವಿಚಾರಗಳು, ಸಂಸ್ಕೃತಾಧ್ಯಯನವನ್ನು ಅಣ್ಣಂದಿರಿಂತ ಕಲಿತುಕೊಂಡರು. ಒಂದೆರಡು ವರ್ಷಗಳಲ್ಲೇ ನಾರಾಯಣ ಭಟ್ಟರು ಊರಿಗೆ ಮರಳಿದರು. ಆದರೆ ಅಪಾರ ಜೀವನಾನುಭವವನ್ನು ಅವರು ಕಲಿತುಕೊಂಡರು.

ಊರಿಗೆ ಮರಳಿದ ನಾರಾಯಣ ಭಟ್ಟರು ಕೃಷಿಯಲ್ಲಿ ತಂದೆಯೊಂದಿಗೆ ಸೇರುತ್ತಿದ್ದರೇ ವಿನ: ಮತ್ತೆ ಶಾಲೆಗೆ ಹೋಗಲಿಲ್ಲ. ಅದೇ ಹೊತ್ತಿಗೆ ಅವರ ಅಣ್ಣ ಈಶ್ವರ ಭಟ್ಟರು ಊರಿಗೆ ಮರಳಿದ್ದರು.  ಬಳಿಕ ಅವರು ಕಮ್ಮಜೆಯ ಸಂಸ್ಕೃತ ಪಾಠಶಾಲೆಯ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಅವರನ್ನು ಈಶ್ವರ ಮಾಸ್ತರರು ಹಾಗೂ ಈಶ್ವರ ಜೋಯಿಸರು ಎಂದು ಸುತ್ತಮುತ್ತಲಿನ ಊರವರು ಗುರುತಿಸುತ್ತಿದ್ದರು. ಈಶ್ವರ ಭಟ್ಟರು ನಾರಾಯಣರಿಗೆ ಕಾವ್ಯಾಭ್ಯಾಸವನ್ನೂ ಮಾಡಿಸಿ, ಹಾಡುಗಾರಿಕೆಯ ರುಚಿಯನ್ನು ಹಿಡಿಸಿದರು. ರಘುವಂಶದವರೆಗೆ ಸಂಸ್ಕೃತ ಕಾವ್ಯಾಭ್ಯಾಸವನ್ನೂ ಈಶ್ವರ ಭಟ್ಟರಿಂದ ಕಲಿತ ನಾರಾಯಣನಿಗೆ ಅವರಿಂದ ಹಾಡುಗಾರಿಕೆ ಆಸಕ್ತಿಯೂ ಮೂಡಿತು. ತಂದೆಯವರು ಹವ್ಯಾಸಿ ಭಾಗವತರೂ ಆಗಿದ್ದರು. ಅಣ್ಣ ಈಶ್ವರನೂ ಭಾಗವತಿಕೆ ಕಲಿತಿದ್ದರು. ಹೀಗಾಗಿ ಅಣ್ಣ ಮತ್ತು ತಂದೆ ಮಾಂಬಾಡಿ ನಾರಾಯಣ ಭಾಗವತರ ಮೊದಲ ಗುರುಗಳಾಗಿ ಮೂಡಿಬಂದರು. ಅವರೊಂದಿಗೆ ಬಾಲಪಾಠಗಳ ಸಹಿತ ಯಕ್ಷಗಾನ ಹಿಮ್ಮೇಳದ ಅಭ್ಯಾಸವೂ ಆರಂಭಗೊಂಡವು.

ವೇದಿಕೆ ನಿರ್ಮಾಣ:

ನಾರಾಯಣ ಭಟ್ಟರ ಮತ್ತೋರ್ವ ಸಹೋದರ ಕೇಶವ ಭಟ್ಟರು ತಿರುವಾಂಕೂರಿನಿಂದ ಸರಿಯಾಗಿ ಅದೇ ಸಮಯಕ್ಕೆ ಮರಳಿದರು. ಅವರು ನೀರ್ಚಾಲಿನಲ್ಲಿ ಆಗ ತಾನೇ ಆರಂಭಗೊಂಡ ಮಹಾಜನ ಸಂಸ್ಕೃತ ಪಾಠಶಾಲೆಯಲ್ಲಿ ಇಂಗ್ಲೀಷ್ ಅಧ್ಯಾಪಕರಾಗಿ ನಿಯುಕ್ತಿಗೊಂಡರು. ಅವರನ್ನು ಇಂಗ್ಲೀಷ್ ಮಾಸ್ತರ್ ಎಂದೇ ಜನ ಗುರುತಿಸುತ್ತಿದ್ದರು. ನಾರಾಯಣ ಭಟ್ಟರು ಅಣ್ಣನೊಂದಿಗೆ ಕೆಲ ಕಾಲ ನೀರ್ಚಾಲಿನಲ್ಲಿದ್ದರು. ಈ ಸಂದರ್ಭ ನೀರ್ಚಾಲಿನ ಗಣ್ಯ ವ್ಯಕ್ತಿಗಳಲ್ಲೋರ್ವರಾಗಿದ್ದ ಮಹಾಜನ ಸಂಸ್ಕೃತ ಪಾಠಶಾಲೆಯ ಆಡಳಿತಗಾರ ಖಂಡಿಗೆ ಈಶ್ವರ ಭಟ್ಟರು ಹಾಗೂ ಮಹಾಲಿಂಗ ಭಟ್ಟರು ಪಾಠಶಾಲೆಯಲ್ಲಿ ತಾಳಮದ್ದಳೆಯೊಂದನ್ನು ಏರ್ಪಡಿಸಿದ್ದರು. ಆಗ ಯುವ ಭಾಗವತ ಮಾಂಬಾಡಿ ನಾರಾಯಣ ಭಟ್ಟರನ್ನೇ ಭಾಗವತರನ್ನಾಗಿ ಆಯ್ಕೆ ಮಾಡಲಾಯಿತು. ಪ್ರಸಂಗದ ಹೆಸರು ಮಕರಾಕ್ಷ ಕಾಳಗ. (ರಚನೆ: ಜತ್ತಿ ಈಶ್ವರ ಭಾಗವತ) ಇನ್ನೂ ಹದಿನಾರು ವಯಸ್ಸಾಗದ ನಾರಾಯಣ ಭಟ್ಟರು ದೊರೆತ ಅವಕಾಶವನ್ನು ಸದುಪಯೋಗಪಡಿಸಿಕೊಂಡರು. ಇದು ಅವರ ಪ್ರಥಮ ಪ್ರದರ್ಶನ ಎಂದು ದಾಖಲಾಯಿತು. ಸುತ್ತಮುತ್ತಲಿನವರಿಗೂ ಇವರ ಕಂಠಸಿರಿಯ ಪ್ರದರ್ಶನವೂ ಆಯಿತು.

ಪದ್ಯಾಣ ಕುಟುಂಬದಲ್ಲಿ ಆಗ ಪುಟ್ಟುನಾರಾಯಣ ಭಟ್ಟರು ಭಾಗವತರಾಗಿ ಹೆಸರು ಗಳಿಸಿದ್ದರು. ನಾರಾಯಣ ಭಟ್ಟರ ಮನೆಗೂ ಪುಟ್ಟುನಾರಾಯಣ ಭಟ್ಟರ ಮನೆಗೂ ಹೆಚ್ಚು ದೂರವಿರಲಿಲ್ಲ. ಹೀಗಾಗಿ ಪುಟ್ಟುನಾರಾಯಣಭಟ್ಟರಲ್ಲಿ ಮಾಂಬಾಡಿ ನಾರಾಯಣ ಭಟ್ಟರು ಭಾಗವತಿಕೆಯ ಹೆಚ್ಚಿನ ತರಬೇತಿ ಪಡೆದರು. ಅಂದು ಇಚಿಲಂಪಾಡಿ ಮೇಳ ಪ್ರಸಿದ್ಧ ಮೇಳವಾಗಿತ್ತು. ಅದರ ಪ್ರಧಾನ ಭಾಗವತರಾಗಿ ಈಶ್ವರಪ್ಪಯ್ಯ ಎಂಬವರು ಪ್ರಸಿದ್ಧರಾಗಿದ್ದರು. ಪುಟ್ಟುನಾರಾಯಣ ಭಟ್ಟರ ೊಡನಾಟದಿಂದ ಈಶ್ವರಪ್ಪಯ್ಯ ಸಂಪರ್ಕವೂ ಮಾಂಬಾಡಿಯವರಿಗೆ ಆಯಿತು. ಪೂಕಳ ಎಂಬಲ್ಲಿ ತಾಳಮದ್ದಳೆಯೊಂದು ಏರ್ಪಾಟಾಗಿತ್ತು. ಪುಟ್ಟುನಾರಾಯಣಭಟ್ಟರೊಂದಿಗೆ ಮಾಂಬಾಡಿಯವರೂ ಹೋಗಿದ್ದರು. ಈಶ್ವರಪ್ಪಯ್ಯನವರಿಗೆ ಆ ದಿನ ಕಂಠ ಕೆಟ್ಟುಹೋಯಿತು. ಆಗ ಸಂಘಟಕರು ಮಾಂಬಾಡಿಯವರನ್ನು ಭಾಗವತಿಕೆ ಮಾಡಲು ಹೇಳಿದರು. ಧೈರ್ಯದಿಂದ ಭಾಗವತಿಕೆ ಮಾಡಿದ ಮಾಂಬಾಡಿಯವರ ಕಂಠಸಿರಿಗೆ ಈಶ್ವರಪ್ಪಯ್ಯರಾದಿಯಾಗಿ ಎಲ್ಲರೂ ಭೇಷ್ ಎಂದರು. ಆಗ ನಿನಗೆ ಮೇಳ ಸೇರಲು ಆಸೆ ಇದೆಯೇ ಎಂದು ಈಶ್ವರಪ್ಪಯ್ಯನವರು ವಿಚಾರಿಸಿದರು. ಅದಾಗಲೇ 15 ಪ್ರಸಂಗಗಳನ್ನು ಕಂಠಪಾಠ ಮಾಡಿಕೊಂಡಿದ್ದ ನಾರಾಯಣ ಭಟ್ಟರಿಗೆ ನಿಧಿ ಸಿಕ್ಕಂತಾಯಿತು. ಮೇಳ ಸೇರಲು ನನಗಿಷ್ಟ ಎಂದು ಈಶ್ವರಪ್ಪಯ್ಯನವರ ಬಳಿ ಹೇಳಿದರು. ಹೀಗೆ ಮಾಂಬಾಡಿ ನಾರಾಯಣ ಭಟ್ಟರು ಇಚಿಲಂಪಾಡಿ ಮೇಳಕ್ಕೆ ಸಂಗೀತಗಾರ (ಉಪಭಾಗವತ)ನಾಗಿ ಸೇರಿದರು.

ಆಗ ಅವರ ವಯಸ್ಸು ಹದಿನೆಂಟು. ಇಸವಿ 1918.

(ಮುಂದುವರಿಯುವುದು)

ಹಳೇ ಲೇಖನಗಳಿಗೆ ಕ್ಲಿಕ್ ಮಾಡಿರಿ

ಪರಂಪರೆಯ ಹಿನ್ನೋಟ

About the Author

Harish Mambady
ಕಳೆದ 26 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.

Be the first to comment on "ಮೇಳ ಸೇರುವಾಗಲೇ 15 ಪ್ರಸಂಗ ಕಂಠಪಾಠವಿತ್ತು!!"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*