- ಬಂಟ್ವಾಳ ನಗರ ವ್ಯಾಪ್ತಿಯ ಗ್ರಾಮಗಸ್ತು ಸಭೆಯಲ್ಲಿ ಎಸ್ಪಿ ಸುಧೀರ್ ಕುಮಾರ್ ರೆಡ್ಡಿ
ಇನ್ನು ಪೊಲೀಸ್ ಸಿಬ್ಬಂದಿ ಠಾಣೆಗಳಲ್ಲಿ ಜಾಸ್ತಿಯೇ ಇರಲಿದ್ದಾರೆ. ಕನಿಷ್ಠ 5ರಿಂದ 6 ಸಿಬ್ಬಂದಿ ಹೆಚ್ಚುವರಿಯಾಗಿ ಬರಲಿದ್ದಾರೆ.
ಹೀಗಂದವರು ಎಸ್ಪಿ ಸುಧೀರ್ ಕುಮಾರ್ ರೆಡ್ಡಿ.
ಬಂಟ್ವಾಳದ ಬಿ.ಸಿ.ರೋಡ್ ರೋಟರಿ ಕ್ಲಬ್ ಸಭಾಭವನದಲ್ಲಿ ಶನಿವಾರ ಸಂಜೆ ನಡೆದ ನಗರ ಠಾಣಾ ವ್ಯಾಪ್ತಿಯ ಗ್ರಾಮಗಸ್ತು ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಗೆ ನೂರಕ್ಕೂ ಅಧಿಕ ಪೊಲೀಸರನ್ನು ಹೆಚ್ಚುವರಿಯಾಗಿ ನೇಮಕ ಮಾಡಿಕೊಳ್ಳಲಾಗುವುದು . ಬಂಟ್ವಾಳ ನಗರ ಮತ್ತು ಗ್ರಾಮಾಂತರ ಠಾಣಾ ವ್ಯಾಪ್ತಿಗೆ ತಲಾ ಇಬ್ಬರಂತೆ ಪ್ರೊಬೆಷನರಿ ಎಸ್.ಐ.ಗಳನ್ನು ನೇಮಿಸಲಾಗಿದೆ. ಕಲ್ಲಡ್ಕ, ಫರಂಗಿಪೇಟೆ ಹೊರಠಾಣೆಗಳನ್ನು ಪೂರ್ಣಪ್ರಮಾಣ ಠಾಣೆಗಳಾಗಿ ಮೇಲ್ದರ್ಜೆಗೇರಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ . ಈಗಾಗಲೇ ಜಿಲ್ಲಾದ್ಯಂತ ಜಾರಿಯಲ್ಲಿರುವ ಬೀಟ್ ಪೊಲೀಸ್ ವ್ಯವಸ್ಥೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಪ್ರತೀ ಗ್ರಾಮದಲ್ಲೂ ಅನುಷ್ಠಾನಕ್ಕೆ ತರಲಾಗುವುದು ಎಂದರು.
ಅಪಘಾತ ಪ್ರಕರಣದ ಸಾಕ್ಷಿಧಾರರನ್ನಾಗಿಸಲಾಗುತ್ತಿದೆ ಎಂಬ ಭಯ ಬೇಡ ಎಂದು ಮೆಲ್ಕಾರ್ ನ ಎಂ.ಎನ್.ಕುಮಾರ್ ಕೇಳಿದ ಪ್ರಶ್ನೆಗೆ ಉತ್ತರಿಸಿದರು.
ಕೆಲವೊಂದು ವಿಷಯಗಳ ಬಗ್ಗೆ ಮಾಹಿತಿ ನೀಡಿದವ ಹೆಸರ್‍ನು ಗೌಪ್ಯವಾಗಿರಿಸಲಾಗುವುದು, ಇದರಲ್ಲಿ ಯಾವುದೇ ಅನುಮಾನ ಬೇಡ ಎಂದರು.
ರಿಕ್ಷಾಗಳಲ್ಲಿ ನಿಯಮ ಮೀರಿ ಹೆಚ್ಚಿನ ಸಂಖ್ಯೆಯ ಮಕ್ಕಳನ್ನು, ಪ್ರಯಾಣಿಕರನ್ನು ಸಾಗಿಸುತ್ತಾರೆ ಎಂದು ಮೆಸ್ಕಾಂ ಬಂಟ್ವಾಳ ಶಾಖೆಯ ಸಲಹಾ ಸಮಿತಿ ಸದಸ್ಯ ವೆಂಕಪ್ಪ ಪೂಜಾರಿ ಹೇಳಿದರು. ಮೆಲ್ಕಾರ್ ನ ಟ್ರಾಫಿಕ್ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇಬ್ಬರು ಟ್ರಾಫಿಕ್ ಸಿಬ್ಬಂದಿ ನೇಮಿಸಿ ಎಂದು ಮಾಜಿ ಕೌನ್ಸಿಲರ್ ದಾಮೋದರ್ ಒತ್ತಾಯಿಸಿದರು.
ಬಂಟ್ವಾಳ ಪೇಟೆ ರಸ್ತೆ ಅಗಲೀಕರಣ, ಟ್ರಾಫಿಕ್ ಸಮಸ್ಯೆ, ಪೊಲೀಸ್ ಸಮುದಾಯ ಭವನ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಯಿತು. ಸದಾಶಿವ ಪ್ರಭು ಬಂಟ್ವಾಳ, ಇದಿನಬ್ಬ ಕಲ್ಲಡ್ಕ, ಸತೀಶ್ ಮೆಲ್ಕಾರ್, ಮುಸ್ತಾಫಾ, ಮೊದಲಾದವರು ಸಮಸ್ಯೆಗಳನ್ನು ಮುಂದಿಟ್ಟರು. ಬಂಟ್ವಾಳ ಎಎಸ್ಪಿ ಡಾ.ಅರುಣ್, ನಗರ ಠಾಣಾಧಿಕಾರಿ ರಕ್ಷಿತ್ ಗೌಡ, ಪ್ರೊಭೆಷನರಿ ಎಸೈಗಳಾದ ಪ್ರಸನ್ನ, ಪ್ರವೀಣ್ ಕುಮಾರ್, ಮಾದೇಶ ಎಂ, ನಿತ್ಯಾನಂದ ಗೌಡ ಮೊದಲಾದವರು ಉಪಸ್ಥಿತರಿದ್ದರು.
Be the first to comment on "ಪೊಲೀಸ್ ಠಾಣೆಗಳು ಸಿಬ್ಬಂದಿಗಳಿಂದ ಭರ್ತಿಯಾಗಲಿವೆ"