ವಿಶೇಷ ಸೃಷ್ಟಿಗಳ ಲೋಕದಲ್ಲಿ -ಅಂಕಣ 11: ‘ತ್ರಿಕೋಣಾಕೃತಿಯ ನಿತ್ಯಪಾದಯಾತ್ರೆ’

ದಕ್ಷಿಣ ಕನ್ನಡ ಜಿಲ್ಲೆಯ ಪತ್ರಕರ್ತರ ಸಾಲಿನಲ್ಲಿ ಮುಂಚೂಣಿಯಲ್ಲಿದ್ದವರು ಪದ್ಯಾಣ ಗೋಪಾಲಕೃಷ್ಣ (1928-1997). ಪ.ಗೋ. ಎಂದೇ ಚಿರಪರಿಚಿತರಾಗಿದ್ದ ಅವರು, ಕನ್ನಡದ ಪ್ರಸಿದ್ಧ ದಿನಪತ್ರಿಕೆಗಳಲ್ಲಿ ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಕೆಲಸ ಮಾಡಿದವರು. ನೇರ, ನಿಷ್ಠುರ ನಡೆಯ ಪ.ಗೋ. ಅವರು ಪತ್ರಕರ್ತನಾಗಿ ವೃತ್ತಿಜೀವನದುದ್ದಕ್ಕೂ ಸಿದ್ಧಾಂತ ಹಾಗೂ ಪ್ರಾಮಾಣಿಕತೆಯ ಹಾದಿ ಹಿಡಿದಿದ್ದರು. ವೃತ್ತಪತ್ರಿಕಾ ಜಗತ್ತಿನ ಎಲ್ಲ ಮುಖಗಳ ಅನುಭವವನ್ನು ವೃತ್ತಿನಿರತ ಪತ್ರಿಕೋದ್ಯೋಗಿಯಾಗಿ ಕಂಡ ನಾನಾ ಮುಖಗಳೂ, ಅನುಭವಿಸಿದ ನೋವು, ನಲಿವುಗಳನ್ನು ನಿರ್ಮೋಹದಿಂದ, ವಸ್ತುನಿಷ್ಠವಾಗಿ ಬರೆದ ವಿಶೇಷ ಸೃಷ್ಟಿಯ ಲೋಕದಲ್ಲಿ ವೃತ್ತಪತ್ರಿಕೆಗಳ ಕಾಲಂ ಸಾಹಿತ್ಯ ಮತ್ತು ಕನ್ನಡ ಸಾಹಿತ್ಯದಲ್ಲಿ ಒಂದು ವಿಶಿಷ್ಟ ಬರವಣಿಗೆ.  ಇದು ಪ.ಗೋ. ಆತ್ಮಕತೆಯ ಭಾಗವೂ ಹೌದು. 2005ರಲ್ಲಿ ಪುಸ್ತಕವಾಗಿಯೂ ಪ್ರಕಟಗೊಂಡಿವೆ. ದಕ್ಷಿಣ ಕನ್ನಡ ಜಿಲ್ಲೆಯ ಅಡ್ಯನಡ್ಕದಲ್ಲಿ ಜನಿಸಿದ ಪ.ಗೋ, ಅವರ ಈ ಕೃತಿಯನ್ನು ಬಂಟ್ವಾಳನ್ಯೂಸ್ ಓದುಗರಿಗಾಗಿ ಒದಗಿಸಿಕೊಟ್ಟವರು ಗಲ್ಫ್ ನಲ್ಲಿ ಉದ್ಯೋಗಿಯಾಗಿರುವ ಸಾಹಿತ್ಯಪ್ರೇಮಿ ಪ.ಗೋ ಅವರ ಪುತ್ರ ಪದ್ಯಾಣ ರಾಮಚಂದ್ರ. (ಪ.ರಾಮಚಂದ್ರ). ಲೇಖನಮಾಲೆಯ 11ನೇ ಕಂತು ಇಲ್ಲಿದೆ.

ವಿಶೇಷ ಸೃಷ್ಟಿಗಳ ಲೋಕದಲ್ಲಿ -ಅಂಕಣ 11: ‘ತ್ರಿಕೋಣಾಕೃತಿಯ ನಿತ್ಯಪಾದಯಾತ್ರೆ’
ಯಾಕೆ ನೌಕರಿಯಿಂದ ವಜಾ ಮಾಡಲಾಯಿತು ?
ಪತ್ರಿಕೆಯ ಮ್ಯಾನೇಜರ್ ನನಗೆ ಕಳುಹಿಸಿದ್ದ ಮೂರು ಸಾಲುಗಳ ನೋಟೀಸ್ ನಲ್ಲಿ ಕಾರಣವನ್ನೂ ಕಾಣಿಸಿರಲಿಲ್ಲ. ನಿನ್ನ ಬಾಕಿ ವೇತನವನ್ನೂ ಪಾವತಿ ಮಾಡುವಂತೆ ಲೆಕ್ಕಪತ್ರ ವಿಭಾಗಕ್ಕೆ ತಿಳಿಸಲಾಗಿದೆ ಎಂಬ ಸೂಚನೆ ಮಾತ್ರವಿತ್ತು.
 
ನೌಕರಿಯನ್ನು ನಾನು ಕಳೆದುಕೊಂಡುದು ಹೇಗೆ ? ಪ್ರಶ್ನೆಯ ಉತ್ತರ ನೋಟೀಸ್ ಪಡೆದ ಮೇಲೆ ಆ ಕಟ್ಟಡದಲ್ಲಿ ನಾನು ಉಳಿದಿದ್ದ ಸ್ವಲ್ಪ ಹೊತ್ತು ಮುಗಿಯುವುದರೊಳಗೇ ಸಿಕ್ಕಿತು.
 
ಅಂದು ಮಧ್ಯಾಹ್ನ ಸಂಪಾದಕೀಯ ಶಾಖೆಯ ಕೋಣೆಗೆ ಪತ್ರಿಕೆಯ ಒಡೆಯನ ಪಾದಸ್ಪರ್ಶವಾದೊಡನೆ ಎಲ್ಲರೂ ಗಡಬಡಿಸಿ ಎದ್ದು ನಿಂತು ಆಸ್ಥಾನಗೌರವ ಸಲ್ಲಿಸಿದ್ದರು. ತಲೆಕೆಳಗೆ ಹಾಕಿಕೊಂಡು ಬರೆಯುತ್ತಿದ್ದು, ‘ಅನ್ನದಾತನ ಆಗಮನವನ್ನೂ ಗಮನಿಸದೆ’ ನಾನೊಬ್ಬ ಮಾತ್ರ ಎದ್ದು ನಿಲ್ಲದೆ ಇದ್ದುದು ಆತನ ದೃಷ್ಟಿಯಲ್ಲಿ ಶತಾಪರಾಧವಾಗಿತ್ತು.
 
ತನ್ನ ಸ್ನೇಹಿತ ಎಂಜಿನಿಯರೊಬ್ಬರನ್ನು ಜೊತೆಗೆ ಕರೆತಂದು ತನ್ನ ಸಾಮ್ರಾಜ್ಯವನ್ನು ತೋರಿಸುತ್ತಿರುವಾಗಲೇ ಕಂಡುಬಂದ ಅವಿಧೇಯತೆ ಆತನನ್ನು ಕೆರಳಿಸಿತ್ತು. ನಾನಿದ್ದ ಮೇಜಿನ ಬಳಿ ಬಂದು “ಎದ್ದು ನಿಲ್ರೀ” ಎಂದು ಆತ ಘರ್ಜಿಸಿದಾಗ, ಬರವಣಿಗೆಯಲ್ಲೇ ತಲ್ಲೀನನಾಗಿದ್ದ ನಾನೊಮ್ಮೆ ಬೆಚ್ಚಿಬಿದ್ದೆ, ಸಾವರಿಸಿಕೊಂಡು ಎದ್ದುನಿಂತೆ.
 
“ಮ್ಯಾನರ್ಸ್ ಇಲ್ಲಾನಿನಗೆ? ಯೂಸ್ಲೆಸ್ ಫೆಲೋ” ಟೀಕಾಪ್ರಹಾರ ಮುಗಿಸಿ, ಅಲ್ಲಿಂದ ಆತ ನಿರ್ಗಮಿಸಿದಾಗಲೂ ನನ್ನ ಅಪರಾಧದ ಮೂಲಬರಹವನ್ನು ನೋಡುತ್ತಲೇ ನಿಂತಿದ್ದೆ. ವಿಳಂಬದ ಸಹಾನುಭೂತಿ ಸೂಚಿಸುವ ಧೈರ್ಯಮಾಡಿ ನನ್ನ ಬಳಿ ಬಂದಿದ್ದ ಒಂದಿಬ್ಬರು ಕೂಡಾ ಆ ಬರಹವನ್ನು ನೋಡಿದರು.
 
“ಪ್ರಸಿದ್ಧ ಕಂಟಾಕ್ಟರೂ ಸಾಮಾಜಿಕ ಕಾರ್ಯಕರ್ತರೂ ಕೊಡುಗೈಯ ದಾನಿಗಳೂ ತಾಯಿನಾಡು ಪತ್ರಿಕೆಯ ಮಾಲಿಕರೂ ಆದ ಶೀ    ಯ್ಯವರು” ಯಾವುದೋ ಒಂದು ಸಂಸ್ಥೆಗೆ ತನ್ನ ಕೊಡುಗೆಯನ್ನು ಒಬ್ಬ ರಾಜಕಾರಣಿಯ ಎದುರಿಗೆ ಘೋಷಿಸುತ್ತಿದ್ದಾಗ ತೆಗೆಸಿದ್ದ ಚಿತ್ರದ ಪಡಿಯಚ್ಚಿನ ಅಡಿಬರಹ ಅದು. ತುಂಬಿಸಬೇಕಾಗಿದ್ದ ವಿಶೇಷಣಗಳನ್ನು ಆಲೋಚಿಸುವುದರಲ್ಲೇ ತಲ್ಲೀನನಾಗಿದ್ದುದೇ ನನ್ನ ಘನ-ಘೋರ ಅಪರಾಧವಾಗಿ ಪರಿಣಮಿಸಿದುದು ಒಂದು ವಿಪರ್ಯಾಸ!
 
“ಛೆ ! ಛೆ ! ಹೀಗಾಗಬಾರದಿತ್ತು!” ಮುಂತಾದ ಹಲವು ‘ಚ್ಚ್-ಚ್ಚ್-ಚ್ಚ್’ ಗಳು ಮುಗಿದ ಮೇಲೆ “ಅವರ ಕಣ್ಣಿಗೆ ಇವರೇ ಸಿಕ್ಕಿದರೆ ! ಯಾಕೋ ಲಕ್ಷಣ ಚೆನ್ನಾಗಿಲ್ಲ” ಎಂದು ದೂರದಿಂದಲೇ ನುಡಿದ ಅನಂತಸುಬ್ಬರಾಯರ ಭವಿಷ್ಯವಾಣಿ ಕೆಲವೇ ಗಂಟೆಗಳಲ್ಲಿ ನಿಜವಾಯಿತು.
 
ಆದರೆ ಅಲ್ಲೂ, ಜಾತೀಯ ಪಕ್ಷಪಾತದ ಆರೋಪ ಬರಬಹುದೆಂಬ ಅಳುಕು. ನನಗೆ ನೋಟೀಸ್ ಕೊಡಹೇಳಿದವರನ್ನೂ “ಆಗಲಿ ಸಾರ್” ಎಂದು ಅಪ್ಪಣೆ ಪಾಲಿಸಿ ಅದನ್ನು ಜಾರಿ ಮಾಡಿಸಿದ (ಆಗಿನ) ಸಂಪಾದಕ ಪಿ. ಸಿದ್ದಪ್ಪನವರನ್ನು ಕಾಡಿತ್ತೋ ಏನೋ ನನ್ನ ಜೊತೆಗೇ ಆಬ್ರಾಹ್ಮಣ ವಿ.ಟಿ. ರಾಜಶೇಖರರಿಗೂ ಅಂತಹದೇ ನೋಟೀಸ್ ಕೊಡಲಾಯಿತು.
 
 (ರಾಜಶೇಖರ್ ಎಸಗಿದ್ದ ಅಪರಾಧದ ಸುಳಿವು ಕೂಡಾ ನನಗೆ ಇದುವರೆಗೂ ಸಿಕ್ಕಿಲ್ಲ.) ಇದೊಂದು ಮಟ್ಟಿಗೆ ಸಮಾನಶೀಲರೆನಿಸಿದ ನಾವಿಬ್ಬರೂ ಒಟ್ಟಾಗಿ, ಬಳಿಯ ಹೋಟೆಲಿನಲ್ಲಿ ಸಂಪಾದಕರ ಹೊರತು, ಶಾಖೆಯ ಇತರರೆಲ್ಲರಿಗೂ ಸಂಜೆಯ ಉಪಹಾರ ಕೊಡಿಸಿ, ತಾಯಿನಾಡು ಆವರಣದಿಂದ ಹೊರನಡೆದೆವು.
 
ಮಾಲಿಕನ ಕೆಂಗಣ್ಣು ನನ್ನ ಮೇಲೆ ಆ ಮೊದಲೇ ಬಿದ್ದಿತ್ತು- ಇತರ ಕೆಲವು ಸಂದರ್ಭಗಳಲ್ಲಿ ನೋಟೀಸಿನ ದಿನದ ಘಟನೆ ಬರಿಯ ಒಂದು ನೆಪ. ಹಿಂದಿನ ಸಂದರ್ಭಗಳನ್ನು ನಾನು ಗಮನಿಸಿರಲಿಲ್ಲ ಎಂದು ಅನಂತರ ತಿಳಿದೆ. (ಮೊದಲು ಬಿ.ಎನ್.ಗುಪ್ತ ಅವರ ಹಿಂದೆ ಇವರಿಬ್ಬರೂ ತಾಯಿನಾಡು ಸಂಬಂಧ ತೊರೆದಾಗಲೇ ನಾನು ಜಾಗೃತನಾಗಬೇಕಿತ್ತು.)

ಹಿರಿಯ ಕನ್ನಡ ಪತ್ರಕರ್ತ , ತಾಯಿನಾಡು ದಿನಪತ್ರಿಕೆಯ ಸಹೋದ್ಯೋಗಿ ಹೆಚ್. ಆರ್. ನಾಗೇಶರಾವ್ ಅವರ ಸಂಗ್ರಹದಲ್ಲಿ ಲಭ್ಯವಾದ 11 ಜೂನ್ 1958 ರಂದು ನಡೆದ ಪ.ಗೋಪಾಲಕೃಷ್ಣ ಅವರ ಮದುವೆಯ ಆಮಂತ್ರಣ ಪತ್ರಿಕೆ

 
ಆ ಹೊತ್ತಿಗೆ, ಆ ಮೊದಲೇ ( ಮುಂದಾಲೋಚನೆ ಇಲ್ಲದೆ?) ಆಗಲೊಪ್ಪಿದ ನನ್ನ ಮದುವೆಯ ದಿನವೂ ನಿಶ್ಚಯವಾಗಿತ್ತು. ಸಂಬಂಧಪಟ್ಟವರಿಗೆ ನನ್ನ ಪ್ರಸ್ತುತ ನಿರುದ್ಯೋಗ ಪರಿಸ್ಥಿತಿಯನ್ನು ವಿವರಿಸಿದೆ. ಅವರಿಗೆ ಅದು ಹೆಚ್ಚಿನ ಆತಂಕವನ್ನೇನೂ ತಂದೊಡ್ಡಿದಂತೆ ಕಾಣಲಿಲ್ಲ. ಹಾಗಾಗಿ ಉದ್ಯೋಗದ ಬೇಟೆ, ತಾಯಿನಾಡು ಆಡಳಿತದ ವಿರುದ್ಧ ಕಾರ್ಮಿಕ ಆಯುಕ್ತರಿಗೆ ಮನವಿ ಸಲ್ಲಿಕೆ ಮತ್ತು ಮದುವೆಯ ವೆಚ್ಚಕ್ಕೆ ಅನಿವಾರ್ಯವೆನಿಸಿದ್ದ ಪುಡಿಗಾಸಿನ ಹೊಂದಿಕೆ- ಇವು ಮೂರು ಚಟುವಟಿಕೆಗಳೂ -ಆ ತಿಂಗಳನ್ನು ‘ಸುಲಭವಾಗಿ’ ಮುಗಿಸಿದವು.
 
ಅದುವರೆಗೂ ನಾನು ತಿಳಿದುಕೊಳ್ಳುವ ಅಗತ್ಯವೇ ಕಾಣದಿದ್ದ, ಅನಿರೀಕ್ಷಿತ ಸನ್ನಿವೇಶಗಳನ್ನು ಮುಂದುವರಿಸುವ ಕ್ರಮವನ್ನು ತೋರಿಸಿಕೊಟ್ಟ ಮಾಜಿ ಸಹೋದ್ಯೋಗಿ ಕೆ.ಸತ್ಯನಾರಾಯಣನ ಸಲಹೆಗಳು ಹಲವು ರೀತಿಯಲ್ಲಿ ಉಪಯೋಗಕ್ಕೆ ಬಂದವು.
 
ಆದರೆ ತಾಯಿನಾಡುವಿನ ಮೇಲೆ ಕಾರ್ಮಿಕ ಆಯುಕ್ತರಲ್ಲಿ ಸಲ್ಲಿಸುವ ದೂರನ್ನು ರಾಜ್ಯ ಪತ್ರಕರ್ತರ ಸಂಘದ ಮೂಲಕ ಕಳುಹಿಸಿದೆ.
 
ಆಗಲಷ್ಟೇ ಆರಂಭವಾಗಲಿದ್ದ (ಹುಬ್ಬಳ್ಳಿಯ) ಸಂಯುಕ್ತಕರ್ನಾಟಕದ ಬೆಂಗಳೂರು ಆವೃತ್ತಿಯಲ್ಲಿ ಸೇರಿಕೊಳ್ಳುವ ಪ್ರಯತ್ನವನ್ನೂ ನಡೆಸಿದೆ.
 
“ಉದ್ಯೋಗದಲ್ಲಿರುವ ಪತ್ರಕರ್ತರಿಗೆ ಮಾತ್ರವೇ ಮನ್ನಣೆ ಹೊರತು, ಮಾಜಿಗಳಿಗಲ್ಲವೆಂಬ ವಾಸ್ತವಿಕ ಕಾರಣಕ್ಕಾಗಿ, ಮಡಿಕೇರಿಯಿಂದ ಪ್ರಕಟವಾಗುತ್ತಿದ್ದ ‘ಶಕ್ತಿ’ ದೈನಿಕದ ಬೆಂಗಳೂರು ಪ್ರತಿನಿಧಿಯ ಸ್ಥಾನವನ್ನು ‘ಹೇಗೋ’ ಗಳಿಸಿಕೊಂಡೆ.
 
ಆ ಮೂರು ವಿಚಾರಗಳಲ್ಲೂ, ಸ್ವಲ್ಪ ಮಟ್ಟಿನ ವಿವರಣೆ ಅನಿವಾರ್ಯ, ಅಲ್ಲಿ ಕೂಡಾ ಮೂರನೆಯದನ್ನು ಮೊದಲು ಹೇಳಬೇಕಾಗುತ್ತದೆ.
 
ಶಕ್ತಿ ಪತ್ರಿಕೆಯ ಸಂಪಾದಕ-ಮಾಲಿಕರಿಗೆ ರಾಜ್ಯದ ರಾಜಧಾನಿಯಲ್ಲಿ ಪ್ರತಿನಿಧಿಗಳ ಅಗತ್ಯವೇ ಕಂಡಿರದಿದ್ದ ಕಾಲ ಅದು.
 
 ಬೇರೊಂದು ಉದ್ದೇಶದಲ್ಲಿ ಮಡಿಕೇರಿಗೆ ಹೋಗಿದ್ದಾಗ, ನನ್ನ ‘ಆತಿಥೇಯ’ ಎನ್.ಮಹಾಬಲೇಶ್ವರ ಭಟ್ಟರು ಆಸಕ್ತಿವಹಿಸಿ, ‘ಶಕ್ತಿ’ ಯ ಸಂಪಾದಕರ ಪರಿಚಯ ಮಾಡಿಸಿದರು. ‘ಪತ್ರಿಕೆಗೆ ಬೆಂಗಳೂರಿನಲ್ಲಿ ಒಬ್ಬ ಪ್ರತಿನಿಧಿಯ ಅಗತ್ಯವಿದೆ. ಆ ಕೆಲಸವನ್ನು ಮಾಡಬಲ್ಲ ವ್ಯಕ್ತಿಯನ್ನು ಕರೆತಂದಿದ್ದೇನೆ’ ಎಂದರು.
 
 ಸುದೀರ್ಘ ಮಾತುಕತೆಯ ಅರ್ಧ ಅವಧಿಯಲ್ಲಿ ಪ್ರತಿನಿಧಿಗೆ ಕೊಡಬೇಕಾಗುವಷ್ಟು ವೇತನ ಕೊಡುವ ಶಕ್ತಿ ನಮಗಿದ್ದೀತೆ ? ಎಂಬ ಪ್ರಶ್ನೆ ಸಂಪಾದಕರಿಂದ ಬಂದಿತು.
 
“ಸದ್ಯಕ್ಕೆ ದಿನಕ್ಕೊಂದು ರೂಪಾಯಿ ಕೊಟ್ಟರೆ ಸಾಕು ” ಎಂದೆ.
 
(ಪತ್ರಿಕಾ ಪ್ರತಿನಿಧಿಯ ಸ್ಥಾನವನ್ನು ಹೇಗಾದರೂ ಗಳಿಸಿಕೊಳ್ಳಬೇಕಾಗಿತ್ತು.)
 
“ಹಾಗಾದರೆ ನೋಡೋಣ” ಎಂಬ ಮಾತು ಅವರಿಂದ ಬಂದುದೇ ತಡ, ನನ್ನನ್ನು ನೇಮಿಸಿದರೆ ಪತ್ರಿಕೆಗೆ ಆಗಬಹುದಾದ ಪ್ರಯೋಜನಗಳೆಲ್ಲವನ್ನೂ ವಿವರಿಸಿ, ಭಾಷಣ ಬಿಗಿಯುತ್ತಾ ಹೋದೆ.
 
ಅವರ ಲೆಟರ್ ಹೆಡ್ ನಲ್ಲಿ ಬರೆದ ನೇಮಕಾತಿಯ ಪತ್ರ, ನನ್ನ ಕೈಗೆ ಸಿಕ್ಕಿದ ಮೇಲಷ್ಟೇ ನನ್ನ ಮಾತು ನಿಂತಿತು.
 
ನೇಮಕದ ಪತ್ರದೊಂದಿಗೆ ಬೆಂಗಳೂರಿಗೆ ಹಿಂದಿರುಗಿದ ಮರುದಿನದಿಂದಲೇ ‘ಶಕ್ತಿ’ಯ ಬೆಂಗಳೂರು ಪ್ರತಿನಿಧಿಯ ಅಸ್ತಿತ್ವ ಸ್ಥಾಪನೆಯ ಘನಕಾರ್ಯದಲ್ಲಿ ಮುಳುಗಿದೆ.
 
‘ಮಾನ್ಯತೆ’ ಪಡೆದ ಪತ್ರಕರ್ತರಿಗೆ ಬಿ.ಟಿ.ಎಸ್.ಬಸ್ಸುಗಳಲ್ಲಿ ಪ್ರಯಾಣಕ್ಕೆ ಆಗ, ಅತ್ಯಲ್ಪ ಶುಲ್ಕದಲ್ಲಿ ‘ಪಾಸ್’ ಸೌಲಭ್ಯ ಸಿಗುತ್ತಿತ್ತು. ಸೌಲಭ್ಯಕ್ಕಾಗಿಯೇ ‘ಬಸ್ ಪಾಸ್ ಜರ್ನಲಿಸ್ಟ್’ ಗಳಾದವರೂ ಹಲವು ಮಂದಿ ಇದ್ದರು. ಆಚೆ ‘ಮಾನ್ಯ’ ಪತ್ರಿಕೆಗಳನ್ನು ಪ್ರತಿನಿಧಿಸದ -ಈಚೆ ‘ಪಾಸಿಗಷ್ಟೇ ಜರ್ನಲಿಸ್ಟ್’ ಎನ್ನಿಸಿಕೊಳ್ಳಲು ಬಯಸದ – ಎಡಬಿಡಂಗಿ ಸ್ಥಾನದಿಂದ ಬಡ್ತಿ ಹೊಂದುವುದು ನನಗೆ ಅನಿವಾರ್ಯವಾಗಿತ್ತು.
 
ಪಾಸಿನ ಸೌಲಭ್ಯ ಮತ್ತು ಅತ್ಯವಶ್ಯವಾದ ಅಧಿಕೃತ ಮಾನ್ಯತೆ – ಇವುಗಳಿಗಾಗಿ ಸರಕಾರಿ ವಾರ್ತಾ ಇಲಾಖೆಯ ನಿರ್ದೇಶಕ ಡಿ.ಆರ್.ರಾಮಯ್ಯನವರೆದುರಿಗೂ, ಕೇಂದ್ರದ ಪಿಐಬಿ (ಬೆಂಗಳೂರು) ಕಚೇರಿಯ ಪ್ರಮುಖ ಇನಾಂದಾರ್ ರ ಮುಂದೆಯೂ ಹಾಜರಾದೆ, ಅರ್ಜಿಯನ್ನೂ ಸಲ್ಲಿಸಿದೆ.
 
ಆಶ್ಚರ್ಯ ಎನ್ನಿಸುವ ಹಾಗೆ, ಮಾನ್ಯತೆಗೆ ಸಂಬಂಧಿಸಿದ ಪೋಲೀಸ್ ಇಲಾಖಾ ವಿಚಾರಣೆ ಎಂಟೇ ದಿನಗಳಲ್ಲಿ ಮುಗಿಯಿತು. ಇಲಾಖೆಯ ಮಾನ್ಯತಾ ಪರಿಚಯ ಪತ್ರವೂ ದೊರೆಯಿತು. ಆದರೆ ಬಸ್ ಪಾಸ್ ಮಾತ್ರ ‘ವಿಳಂಬ ನೀತಿ’ಯ ಕತ್ತರಿಯಲ್ಲಿ ಸಿಕ್ಕಿ ಬಿ.ಟಿ.ಎಸ್. ಕಚೇರಿಯಲ್ಲೇ ಉಳಿಯಿತು.
 
ಅದರಿಂದಾಗಿ, ಹೋಗಬೇಕಾಗಿದ್ದ ದೂರವನ್ನು ‘ನಟರಾಜ ಸರ್ವಿಸ್’ ನಲ್ಲೇ ಕ್ರಮಿಸುವ ಅಭ್ಯಾಸವೂ ರೂಢಿಯಾಯಿತು. ವಿಧಾನ ಸೌಧದ ಪ್ರೆಸ್ ರೂಂ, ಗಾಂಧಿನಗರದ ಪಿ.ಐ.ಬಿ.ಕಾರ್ಯಾಲಯ ಮತ್ತು ರೆಸಿಡೆನ್ಸಿ ರಸ್ತೆಯಲ್ಲಿನ  ಸಂಯುಕ್ತ ಕರ್ನಾಟಕ ಕಾರ್ಯಾಗಾರ ? ಇವು ಮೂರು ಕಡೆಗಳಿಗೂ ‘ತ್ರಿಕೋಣಾಕೃತಿಯ ನಿತ್ಯಪಾದಯಾತ್ರೆ’ ನಡೆಯತೊಡಗಿತು.
 
(ಮುಂದಿನ ಭಾಗದಲ್ಲಿ)
ಕಳೆದ ವಾರ:
https://bantwalnews.com/2017/07/06/pa-go-series-9/

ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ವಿಶೇಷ ಸೃಷ್ಟಿಗಳ ಲೋಕದಲ್ಲಿ -ಅಂಕಣ 11: ‘ತ್ರಿಕೋಣಾಕೃತಿಯ ನಿತ್ಯಪಾದಯಾತ್ರೆ’"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*