ವಿಶೇಷ ಸೃಷ್ಟಿಗಳ ಲೋಕದಲ್ಲಿ -ಅಂಕಣ 9: ಎಲ್ಲದರಂತಲ್ಲ ಈ ಪತ್ರಿಕೋದ್ಯಮ, ಅಲ್ಲವೆ ?

ಪದ್ಯಾಣ ಗೋಪಾಲಕೃಷ್ಣ (1928-1997)

ದಕ್ಷಿಣ ಕನ್ನಡ ಜಿಲ್ಲೆಯ ಪತ್ರಕರ್ತರ ಸಾಲಿನಲ್ಲಿ ಮುಂಚೂಣಿಯಲ್ಲಿದ್ದವರು ಪದ್ಯಾಣ ಗೋಪಾಲಕೃಷ್ಣ (1928-1997). ಪ.ಗೋ. ಎಂದೇ ಚಿರಪರಿಚಿತರಾಗಿದ್ದ ಅವರು, ಕನ್ನಡದ ಪ್ರಸಿದ್ಧ ದಿನಪತ್ರಿಕೆಗಳಲ್ಲಿ ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಕೆಲಸ ಮಾಡಿದವರು. ನೇರ, ನಿಷ್ಠುರ ನಡೆಯ ಪ.ಗೋ. ಅವರು ಪತ್ರಕರ್ತನಾಗಿ ವೃತ್ತಿಜೀವನದುದ್ದಕ್ಕೂ ಸಿದ್ಧಾಂತ ಹಾಗೂ ಪ್ರಾಮಾಣಿಕತೆಯ ಹಾದಿ ಹಿಡಿದಿದ್ದರು. ವೃತ್ತಪತ್ರಿಕಾ ಜಗತ್ತಿನ ಎಲ್ಲ ಮುಖಗಳ ಅನುಭವವನ್ನು ವೃತ್ತಿನಿರತ ಪತ್ರಿಕೋದ್ಯೋಗಿಯಾಗಿ ಕಂಡ ನಾನಾ ಮುಖಗಳೂ, ಅನುಭವಿಸಿದ ನೋವು, ನಲಿವುಗಳನ್ನು ನಿರ್ಮೋಹದಿಂದ, ವಸ್ತುನಿಷ್ಠವಾಗಿ ಬರೆದ ವಿಶೇಷ ಸೃಷ್ಟಿಯ ಲೋಕದಲ್ಲಿ ವೃತ್ತಪತ್ರಿಕೆಗಳ ಕಾಲಂ ಸಾಹಿತ್ಯ ಮತ್ತು ಕನ್ನಡ ಸಾಹಿತ್ಯದಲ್ಲಿ ಒಂದು ವಿಶಿಷ್ಟ ಬರವಣಿಗೆ.  ಇದು ಪ.ಗೋ. ಆತ್ಮಕತೆಯ ಭಾಗವೂ ಹೌದು. 2005ರಲ್ಲಿ ಪುಸ್ತಕವಾಗಿಯೂ ಪ್ರಕಟಗೊಂಡಿವೆ. ದಕ್ಷಿಣ ಕನ್ನಡ ಜಿಲ್ಲೆಯ ಅಡ್ಯನಡ್ಕದಲ್ಲಿ ಜನಿಸಿದ ಪ.ಗೋ, ಅವರ ಈ ಕೃತಿಯನ್ನು ಬಂಟ್ವಾಳನ್ಯೂಸ್ ಓದುಗರಿಗಾಗಿ ಒದಗಿಸಿಕೊಟ್ಟವರು ಗಲ್ಫ್ ನಲ್ಲಿ ಉದ್ಯೋಗಿಯಾಗಿರುವ ಸಾಹಿತ್ಯಪ್ರೇಮಿ ಪ.ಗೋ ಅವರ ಪುತ್ರ ಪದ್ಯಾಣ ರಾಮಚಂದ್ರ. (ಪ.ರಾಮಚಂದ್ರ). ಲೇಖನಮಾಲೆಯ ಒಂಭತ್ತನೇ ಕಂತು ಇಲ್ಲಿದೆ.

ಅಂಕಣ 9: ಎಲ್ಲದರಂತಲ್ಲ ಈ ಪತ್ರಿಕೋದ್ಯಮ, ಅಲ್ಲವೆ ?

ಮುಳುಗಲಿರುವ ವಿಶ್ವಕರ್ನಾಟಕ ಹಡಗಿನಿಂದ ದಡಕ್ಕೆ ನೆಗೆಯುವ ಮೊದಲು –
 
ಪತ್ರಿಕೆಯ ಸಂಪಾದಕೀಯ ಶಾಖೆಯ ಕೆಲಸವೂ ಇತರ ಎಲ್ಲ ಉದ್ಯೋಗಗಳಂತೆ ಒಂದು ವೃತ್ತಿ. ಆ ವೃತ್ತಿಯಲ್ಲಿ ದಿನದೂಡಲು, ಮೇಲಿನವರು ವಹಿಸಿಕೊಡುವ ಕೆಲಸಗಳ ಸಮರ್ಪಕ ನಿರ್ವಹಣೆಗೆ ಅಗತ್ಯವಿರುವಷ್ಟು ಮಾತ್ರ ನೈಪುಣ್ಯ ಗಳಿಸಿಕೊಂಡರೆ ಸಾಕು. ಅದರಿಂದ ಹೆಚ್ಚಾಗಿ ಏನೂ ಬೇಕಾಗಿಲ್ಲವೆಂಬ ಮನೋಭಾವ.
 
ದುಡಿಮೆಯ ಆರಂಭದ ಅವಧಿಯಲ್ಲೇ ನನ್ನಲ್ಲಿ ಬೆಳೆಯತೊಡಗಿತ್ತು. ಅದನ್ನು ಪ್ರಾಸಂಗಿಕವಾಗಿ ಮಿತ್ರನೊಬ್ಬನಲ್ಲಿ ಒಮ್ಮೆ ಪ್ರಕಟಿಸಿದ್ದೆ ಕೂಡಾ.
 
‘ನಿರ್ಲಿಪ್ತತೆ – ವೈರಾಗ್ಯಗಳು ಇಷ್ಟು ಬೇಗನೆ ಬರಬಾರದು. ಪತ್ರಿಕೋದ್ಯಮದ ವೈಶಿಷ್ಟ್ಯವನ್ನೂ ಅಲ್ಲಿ ಬುದ್ಧಿವಂತನಾದವನು ಬೆಳೆಯಲು ಒದಗಿಬರುವ ಅವಕಾಶಗಳನ್ನೂ ಸರಿಯಾಗಿ ತಿಳಿದು, ಅವನ್ನು ತನ್ನ ಒಳ್ಳೆಯದಕ್ಕೆ ಬಳಸಿಕೊಳ್ಳುವ ‘ಕಲೆ’ ಕರಗತವಾಗುವವರೆಗೂ ತಾಳ್ಮೆಯಿಂದ ಇರು’ ಎಂದು ಅವನು ಆಗ ಎಚ್ಚರಿಸಿದ್ದ.
 
‘ಎಲ್ಲದರಂತಲ್ಲ ಈ ಪತ್ರಿಕೋದ್ಯಮ, ಅಲ್ಲವೆ ?’ ಎಂಬ ಬೆರಗಿನ ಪ್ರಶ್ನೆ ಆಗಲಷ್ಟೇ ನನ್ನ ಬುದ್ಧಿಯನ್ನು ಕೆಣಕಿತು. ಅಂದಿನಿಂದ ಬೆಂಗಳೂರಿನ ಪತ್ರಿಕಾಪ್ರಪಂಚದ ವೈವಿಧ್ಯ-ವೈಶಿಷ್ಟ್ಯ- ಏರುಪೇರುಗಳ ಕಡೆ ಗಮನ ಹರಿಯಿತು.
 
ಪತ್ರಿಕೆಗಳ ಒಡೆಯರು ಒಂದು ರೀತಿಯಲ್ಲಿ, ಅವರ ನೌಕರರು ಇನ್ನೊಂದು ರೀತಿಯಲ್ಲಿ ತಮಗೆ ಲಭ್ಯವಾದ ಸಾಮಾಜಿಕ ಶಕ್ತಿಯ ಲಾಭವನ್ನು ಹೇಗೆ ಗಳಿಸಿಕೊಳ್ಳುತ್ತಾರೆ-
 
ಹಾಗೆಯೇ, ಪತ್ರಿಕೆಗಳ ಮೇಲೆ ಹಿಡಿತ ಸಾಧಿಸಿದ ಪ್ರಬಲರು, ಶಕ್ತಿಯ ಪ್ರಯೋಜನವನ್ನು ಹೇಗೆ ಪಡೆದುಕೊಳ್ಳುತ್ತಾರೆ- ಎಂಬ ಎರಡೂ ವಿಚಾರಗಳು ಅರ್ಥವಾಗತೊಡಗಿತ್ತು.
 
ವಿಶ್ವಕರ್ನಾಟಕದ ‘ವಿಶೇಷ ಸೃಷ್ಟಿಯ’ ಪ್ರಕರಣದ ಸ್ಪಷ್ಟ ನಿದರ್ಶನದಿಂದಾಗಿ, ಊರಿನ ಇತರ ಪತ್ರಿಕೆಗಳ ಆಗುಹೋಗುಗಳಲ್ಲೂ ಆಸಕ್ತಿ ತಳೆದೆ. ಅದರಿಂದಾಗಿ, ಅಲ್ಲೆಲ್ಲಾದರೂ ಕೊಡುವ ನೌಕರಿಗೆ ಅರ್ಹತೆ ಅಥವಾ ಕಾರ್ಯಕ್ಷಮತೆಗಳಿಗಿಂತ (ಜಾತಿಮೂಲವೂ ಸೇರಿದ) ಪ್ರಭಾವಿಗಳ ಶಿಫಾರಸ್ಸಿಗೆ ಹೆಚ್ಚಿನ ಮನ್ನಣೆ ಇದೆಯೆಂಬ ವಾಸ್ತವವನ್ನೂ ತಿಳಿದುಕೊಂಡೆ.
 
ಅದೇ ಜಾಡಿನಲ್ಲಿ, ಹೊಟ್ಟೆಗೆ ಸಾಲುವಷ್ಟು ವೇತನ ಕೊಡುವ ಶಕ್ತಿ (ಅಂದಿಗೆ) ಇದ್ದ ಒಂದು ಪ್ರಮುಖ ಪತ್ರಿಕೆಯೊಳಗೆ ಸೇರಿಕೊಳ್ಳಲು ಯತ್ನಿಸಿದಾಗ “….ರಿಂದ ಒಂದು ಮಾತು ಹೇಳಿಸಿದರೆ ಉದ್ಯೋಗ ಸಿಗಬಹುದು” ಎಂಬರ್ಥದಲ್ಲಿ ನಾಲ್ಕಾರು ಗಣ್ಯರ ಹೆಸರುಗಳನ್ನು ಕೇಳಿ ತಿಳಿದು ‘ಇದು ನನ್ನಿಂದ ಸಾಗುವ ಕೆಲಸವಲ್ಲ’ ಎಂದು ಕೈಚೆಲ್ಲಿ ಕುಳಿತಿದ್ದೆ.
 
ಆ ಸಂಧಿಕಾಲದಲ್ಲಿ-
 
 ಕುರ್ಚಿಯಿಂದ ಕೆಳಗಿಸಿಕೊಂಡು, ಗೋರ್ ವಾಲ ವಿಚಾರಣಾ ಸಮಿತಿಯ ವರದಿಯನ್ನೂ ಎದುರಿಸಿದ್ದ ಕೆಂಗಲ್ ಹನುಮಂತಯ್ಯನವರು, ವಿಧಾನಸೌಧದ ನಿರ್ಮಾಣ ಕಾಲಕ್ಕೆ ಶ್ರೀಮಂತರಾಗಿ ಬೆಳೆದಿದ್ದ ಗುತ್ತಿಗೆದಾರ ಮಿತ್ರರೊಬ್ಬರನ್ನು ಪ್ರೇರಿಸಿದ ಪರಿಣಾಮ, ಹಳಬ ಕಾಂಗ್ರೆಸ್ಸಿಗ ಪಿ.ಆರ್. ರಾಮಯ್ಯನವರಿಂದ ‘ತಾಯಿನಾಡು’ ಪತ್ರಿಕೆಯ ಒಡೆತನ ಆ ಗುತ್ತಿಗೆದಾರರಿಗೆ ಹಸ್ತಾಂತರ.
 
ಆ ವ್ಯವಸ್ಥೆಯಲ್ಲಿ, ವ್ಯವಹಾರಚತುರ ಪತ್ರಿಕಾ‘ಉದ್ಯಮಿ’ ಬಿ.ಎನ್.ಗುಪ್ತ ನಿರ್ವಾಹಕ ಸಂಪಾದಕರಾದರು. (ಪತ್ರಿಕೆಯಲ್ಲಿ ಮಾತ್ರ ಹಾಗೆ ಹೆಸರು ಹಾಕಿಸಿಕೊಂಡಿರಲಿಲ್ಲ). ವರ್ಣಕಲಾವಿದ ರುಮಾಲೆ ಚನ್ನಬಸವಯ್ಯ ನಾಮಧಾರಿ ಸಂಪಾದರಾದರು.
 
ಹಿ.ಮ.ನಾಗಯ್ಯ ತಾಯಿನಾಡು ಸೇರಿಕೊಳ್ಳುವ ಹಂತದಲ್ಲಿದ್ದಾರೆಂಬ ವದಂತಿ ಕೇಳಿದ ಕೂಡಲೆ, ಹಿಂದೆಯೇ ಆಗಿದ್ದ ರುಮಾಲೆಯವರ ಪರಿಚಯವನ್ನು ನೆನಪು ಮಾಡಿ, ನನ್ನ ಪ್ರವೇಶ ಸಾಧ್ಯತೆ ಬಗ್ಗೆ ಫೋನಿನಲ್ಲಿ ಪ್ರಸ್ತಾಪಿಸಿದೆ. ಹೊಸ ಪದವಿಯ ಆನಂದವನ್ನು ಆಗಷ್ಟೇ – ಕಚೇರಿಯ ಫೋನ್ ಕರೆಗಳೆಲ್ಲವನ್ನೂ ತಾವೇ ಉತ್ತರಿಸುತ್ತ- ಅನುಭವಿಸುತ್ತಿದ್ದ ಅವರು “ಪ್ರಾಮಾಣಿಕವಾಗಿ ಹೇಳ್ಲಾ ಗೋಪಾಲಕೃಷ್ಣ- ಅಪಾಯಿಂಟ್ ಮೆಂಟ್ ವಿಷಯದಲ್ಲಿ ನೀವು ಗುಪ್ತರನ್ನೇ ಕಾಣೋದು ಒಳ್ಳೇದು” ಎಂದರು.
 
ಗುಪ್ತರ ಭೇಟಿಗೆಂದು ತಾಯಿನಾಡು ಕಟ್ಟಡದ ಒಳಗೆ ಹೋಗುವಾಗಲೇ ಬಾಗಿಲಲ್ಲಿ ಕಂಡ ಕುಳ್ಳನೊಬ್ಬನ ಮುಗುಳುನಗೆಯ ಸ್ವಾಗತ ದೊರೆತಿತು. ನನ್ನ ಹೆಸರನ್ನು ತಾನೇ ಹೇಳಿ, “ನಾನು ಶ್ರೀಕೃಪಾ” ಎಂದು ತನ್ನನ್ನೂ ಪರಿಚಯಿಸಿಕೊಂಡು, ನೇರವಾಗಿ ಗುಪ್ತರ ಬಳಿಗೆ ಕರೆದುಕೊಂಡು ಹೋಗಿ “ನಾಳೆಯಿಂದ( ಕೆಲಸಕ್ಕೆ) ಬರಲಿ” ಎಂಬ ಅಪ್ಪಣೆ ಇವರಿಂದ ದೊರೆಯುವವರೆಗೂ ‘ಕೊನೆ ಮುಟ್ಟಿಸಿದ’ ಆ ಕುಳ್ಳನೇ ನನ್ನ ಪ್ರಭಾವ ಮೂಲವೆಂದು ಆಗ ಗೊತ್ತಾಗಿರಲೇ ಇಲ್ಲ!
 
 (ಶ್ರೀಕೃಪಾನ ನಿಜನಾಮಧೇಯ ಉಪೇಂದ್ರ ಉರಾಳ ಎಂದು. ನನ್ನನ್ನು ಎಲ್ಲೋ ಒಂದು ಕಡೆ ಗುರುತಿಸಿದ್ದಾನಂತೆ, ನನ್ನ ವಿವರಗಳನ್ನೂ ಕಲೆ ಹಾಕಿದ್ದಾನಂತೆ. ಎಡಿಟೋರಿಯಲ್ ಡಿಪಾರ್ಟ್ ಮೆಂಟಿಗೆ ಬೇಕಾದ ಹೊಸಬರ ಬಗ್ಗೆ ಗುಪ್ತರು ವಿಚಾರಿಸಿದಾಗ ನನ್ನ ಹೆಸರನ್ನು ಸೂಚಿಸಿ ಪೂರ್ವಾನುಮತಿ ಕೂಡಾ ಪಡೆದಿದ್ದನಂತೆ. ಕಠಿಣ ಸಂದರ್ಶನ ಖ್ಯಾತಿಯ ಗುಪ್ತರು ನನ್ನಲ್ಲಿ ಹೆಚ್ಚೇನನ್ನೂ ಕೇಳದೆ ಇದ್ದುದಕ್ಕೆ ಆಶ್ಚರ್ಯವಾಯಿತೆಂದು ನಾನು ಬೇರೊಂದು ದಿನ ಹೇಳಿದಾಗಲಷ್ಟೇ ಆ ಗುಟ್ಟು ರಟ್ಟಾಯಿತು).
 
 ಗುಪ್ತಾದೇಶದ ಅನುಸಾರ, ಮರುದಿನ ರಾತ್ರೆ ಪಾಳಿಗೆ ತಾಯಿನಾಡು ಪತ್ರಿಕೆಯಲ್ಲಿ ಹಾಜರಾದೆ. ಹಾಜರಿ ಪುಸ್ತಕದಲ್ಲಿ ಸಹಿ ಹಾಕುವ ಅವಕಾಶ ಅಂದು ಲಭಿಸಲಿಲ್ಲ, ಆದರೆ ಅಪೂರ್ವಕ್ಕೆ ಸೌಮ್ಯ ಪ್ರಭಾವಿ ಉಪಸಂಪಾದಕರೊಬ್ಬರ ದರ್ಶನವಾಯಿತು.
 
ಕಚೇರಿಯಲ್ಲಿ ಆಗ ಇದ್ದವರು ಅವರೊಬ್ಬರೇ, ಇಷ್ಟು ದೊಡ್ಡ ಪತ್ರಿಕೆಯಲ್ಲೂ ರಾತ್ರಿಯ ಕೆಲಸ ನಿಭಾಯಿಸಲು ಒಬ್ಬರನ್ನಷ್ಟೇ ನೇಮಿಸಿದ್ದಾರೆಯೇ ? ಮೂಡಿದ್ದ ಕುತೂಹಲವನ್ನು ಅದುಮಿ, ನನ್ನ ಪರಿಚಯ ಹೇಳಿಕೊಂಡೆ. “ಕುಳಿತುಕೊಳ್ಳಿ” ಎಂದೊಂದು ಕುರ್ಚಿ ತೋರಿಸಿ, ಅವರೆದುರು ರಾಶಿ ಹಾಕಿಕೊಂಡಿದ್ದರ ಟೆಲಿಪ್ರಿಂಟರ್ ವಾರ್ತೆಗಳ ತುಣುಕುಗಳನ್ನು ವಿಂಗಡಿಸುವ ಕಾರ್ಯದಲ್ಲೇ ಮಗ್ನರಾದ ಅವರು ತಲೆ ಎತ್ತುವುದನ್ನು ಕಾದು ಕುಳಿತೆ-ಹತ್ತು ನಿಮಿಷ.
 
 ತಮ್ಮ ಕೆಲಸದಲ್ಲೇ ಮುಳುಗಿದ್ದ ಅವರನ್ನೂ ಕೋಣೆಯ ಮೇಜುಗಳಲ್ಲಿ ಇರಿಸಿದ್ದ ಶಾಯಿ ಕುಡಿಕೆ ಲೇಖನಿಗಳ ಅಚ್ಚುಕಟ್ಟಿನ ವ್ಯವಸ್ಥೆಯನ್ನೂ, ಗೋಡೆಗಳಲ್ಲಿ ನೇತುಹಾಕಿದ್ದ ನಕ್ಷೆ-ಭೂಪಟಗಳನ್ನೂ ಕುಳಿತಲ್ಲಿಂದಲೇ ಸರದಿಪ್ರಕಾರ ನೋಡುತ್ತಾ ಹೊತ್ತು ಕಳೆದೆ.
 
ಚಡಪಡಿಕೆ ಹೆಚ್ಚಾಯಿತು. ಅವರೆದುರು ಹೋಗಿ ನಿಂತು “ಬರಿಯೋದು ಏನಾದರೂ ಕೊಡ್ತೀರಾ ಸಾರ್?” ಎಂದಾಗ-
 
ಆಗಷ್ಟೇ ನನ್ನ ಇರವನ್ನು ಗಮನಿಸಿದವರಂತೆ  ತಲೆ ಎತ್ತಿ ನೋಡಿದರು. ಪ್ರತ್ಯೇಕವಾಗಿ ಇರಿಸಿದ್ದ ಒಂದು ಟೆಲಿಪ್ರಿಂಟರ್ ಸುದ್ಧಿಯ ತುಣುಕನ್ನು ಕೈಗೆ ಕೊಟ್ಟು “ಇದನ್ನು ಬರೀತಾ ಇರಿ. ಆಮೇಲೆ ಬೇರೆ ಕೊಡೋಣ” ಎಂದರು. ವಿಂಗಡಣೆಯನ್ನು ಮತ್ತೆ ಮುಂದುವರಿಸಿದರು.
 
(ಟೆಲಿಪ್ರಿಂಟರ್ ಕಾಗದದ ಹಿಂದಿನ ಮಗ್ಗುಲು ಖಾಲಿಯಾಗೇ ಇರುತ್ತದೆ). ಸುದ್ಧಿ ತುಣುಕಿನ ಹಿಂಭಾಗದಲ್ಲೇ ಅದರ ಅನುವಾದವನ್ನು ಸರಸರನೆ ಬರೆದೆ. ಅವರೆಡೆಗೆ ಮರಳಿ ಹೋಗಿ “ಇನ್ನೇನಾದರೂ ಇದೆಯಾ ಸಾರ್?” ಎಂದಾಗ, ನನ್ನೆಡೆಗೆ ಅವರು ಬೀರಿದ ನೋಟ ವಿಲಕ್ಷಣವಾಗಿತ್ತು.
 
ಒಂದು ಕ್ಷಣ ನನ್ನನ್ನೇ ದಿಟ್ಟಿಸಿ ನೋಡಿದರು. ಒಂದೆಡೆ ಪ್ರತ್ಯೇಕವಾಗಿ ಇರಿಸಿದ್ದ ಸುದ್ದಿ ಹಾಳೆಗಳ ಒಂದು ಕಂತೆಯನ್ನೆತ್ತಿ ಕೊಟ್ಟು, ‘ಇದನ್ನೂ ಬರೆದುಕೊಡಿ’ ಎಂದರು.
 
ಬರೆದುಕೊಟ್ಟೆ. ಒಂದು ಗಂಟೆ ಕಳೆದು ಅದೇ ಕ್ರಿಯೆಯ ಪುನರಾವರ್ತನೆಯಾಯಿತು.
 
“ಮ್ಯಾಟರ್ ಸಾಕು ಸಾರ್” ಎಂದು ಕಂಪೋಸಿಂಗ್ ವಿಭಾಗದಿಂದ ಸೂಚನೆ ಬರುವ ಹೊತ್ತಿಗೆ, ಮತ್ತೂ ಒಂದು ಕಂತೆ ಬರಹದ ಕ್ರಿಯೆ ನಡೆದಿತ್ತು.
 
ಸುದ್ದಿಗಳ ಕೊನೆಯ ಬ್ಯಾಚನ್ನು ನನ್ನಿಂದ ಪಡೆದು ಅವರು ಅಚ್ಚುಮೊಳೆ ವಿಭಾಗದತ್ತ ನಡೆದಾಗ ಮಧ್ಯರಾತ್ರಿಯ ಅನಂತರದ ಒಂದು ಗಂಟೆ.
 
ಮತ್ತೂ ಒಂದು ಗಂಟೆಯನ್ನು ಕಚೇರಿಯಲ್ಲಿ ಕಳೆದು, ಆಗಲೂ ಅವರು ಬಾರದಿದ್ದಾಗ, ಬಾಗಿಲಿನಲ್ಲಿದ್ದ ಗೂರ್ಖನಿಗೆ ಹೇಳಿ, ಕಚೇರಿಯಿಂದ ಹೊರಬಿದ್ದೆ.
 
ಅವರು ಕಂಪೋಸಿಂಗ್ ವಿಭಾಗಕ್ಕೆ ಯಾವುದೋ ಕೆಲಸದಲ್ಲಿ ಹೋಗಿರಬೇಕು. ಆ ಕೆಲಸ ಏನಿರಬಹುದು ? ಎಂಬ ಒಂದು ಪ್ರಶ್ನೆಯ ಜೊತೆಗೆ ‘ಅವರ ಹೆಸರಾದರೂ ಏನು?’ ಎಂಬ ಇನ್ನೊಂದು ಮುಖ್ಯ ಪ್ರಶ್ನೆಯನ್ನೂ ತಲೆಯೊಳಗೆ ಬಾಕಿಯಾಗಿಟ್ಟುಕೊಂಡು ಕೋಣೆಗೆ ಬಂದೆ. ಮೊದಲನೆ ಬಾರಿಯ ರಾತ್ರಿ ದುಡಿತದಿಂದ ಆಗಿದ್ದ ಆಯಾಸ ಕಳೆಯಲು, ನೀರಿನ ನಳ್ಳಿಯಡಿ ಕುಳಿತು ತಣ್ಣೀರು ಸ್ನಾನ ಮಾಡಿದ ನಂತರವಷ್ಟೇ ನಿದ್ರಿಸಿದೆ.
 
ನಿದ್ರೆ ನನ್ನನ್ನು ಆವರಿಸುವ ಮೊದಲು, ಆ ರಾತ್ರಿಯ ಹೊಸ ಅನುಭವದ ವಿಶ್ಲೇಷಣೆ ಒಮ್ಮೆ ಆಗಿತ್ತು. ನೋಟೀಸ್ ಕೊಡದೆ ಕೆಲಸ ಬಿಟ್ಟು ಬಂದಿದ್ದ ವಿಶ್ವಕರ್ನಾಟಕದಿಂದ ಹಿಂದಿನ (ತಿಂಗಳ) ಸಂಬಳದ ಬಾಕಿ ವಸೂಲಿಗೆ ಎಷ್ಟು ಒದ್ದಾಡಬೇಕಾಗುವುದೋ ಏನೊ, ಎಂಬ ಯೋಚನೆಯೂ ಮೂಡಿತ್ತು.
 
 ಮರು ರಾತ್ರಿ, ತಾಯಿನಾಡು ಕಚೇರಿ ಕೆಲಸಕ್ಕೆ ಹಾಜರಾದ ಕೂಡಲೆ, ನನ್ನ ಮೇಲಧಿಕಾರಿಯವರೊಡನೆ ನೇರ ಪ್ರಶ್ನೆ ಕೇಳಿ, ಅವರ ಹೆಸರು ಎ.ಎಸ್. ಅನಂತಸುಬ್ಬರಾವ್ ಎಂದು ತಿಳಿದುಕೊಂಡೆ. ಗುಪ್ತರು ಮಾಡಿದ್ದ, ದಿನದ ಮೂರು ಬೇರೆಬೇರೆ ಪಾಳಿಗಳಿಗೆ ಬೇಕಾಗುವ ಉಪಸಂಪಾದಕರ ವ್ಯವಸ್ಥೆಯ ವಿವರ ಮತ್ತು ವಿಭಾಗದ ಇತರ ಸದಸ್ಯರ ಹೆಸರುಗಳು ಇವುಗಳನ್ನು ತಿಳಿದೆ.    
 
(ಮುಂದಿನ ಭಾಗದಲ್ಲಿ)

(2005ರಲ್ಲಿ ಪುಸ್ತಕವಾಗಿ ಪ್ರಕಟಗೊಂಡ ಪದ್ಯಾಣ ಗೋಪಾಲಕೃಷ್ಣ ಅವರ ಅಂಕಣ ಬರಹಗಳ ಮರುಪ್ರಕಟಣೆ ಇದು.)

Click to read older posts:

ವಿಶೇಷ ಸೃಷ್ಟಿಗಳ ಲೋಕದಲ್ಲಿ -ಅಂಕಣ 8: ನಾನೂ ಒಂದು ‘ಸಾಕ್ಷಿಯ ಭೂತ’ವಾಗಿದ್ದೆ

 

 

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ವಿಶೇಷ ಸೃಷ್ಟಿಗಳ ಲೋಕದಲ್ಲಿ -ಅಂಕಣ 9: ಎಲ್ಲದರಂತಲ್ಲ ಈ ಪತ್ರಿಕೋದ್ಯಮ, ಅಲ್ಲವೆ ?"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*