ವಿಶೇಷ ಸೃಷ್ಟಿಗಳ ಲೋಕದಲ್ಲಿ -ಅಂಕಣ 6 : “ಮಿಸ್ಟರ್ ಓದುಗ! ಪ್ಲೀಸ್ ಫಿಲ್ ಅಪ್ ದಿ ಬ್ಲಾಂಕ್ಸ್”

ಪದ್ಯಾಣ ಗೋಪಾಲಕೃಷ್ಣ (1928-1997)

ದಕ್ಷಿಣ ಕನ್ನಡ ಜಿಲ್ಲೆಯ ಪತ್ರಕರ್ತರ ಸಾಲಿನಲ್ಲಿ ಮುಂಚೂಣಿಯಲ್ಲಿದ್ದವರು ಪದ್ಯಾಣ ಗೋಪಾಲಕೃಷ್ಣ (1928-1997). ಪ.ಗೋ. ಎಂದೇ ಚಿರಪರಿಚಿತರಾಗಿದ್ದ ಅವರು, ಕನ್ನಡದ ಪ್ರಸಿದ್ಧ ದಿನಪತ್ರಿಕೆಗಳಲ್ಲಿ ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಕೆಲಸ ಮಾಡಿದವರು. ನೇರ, ನಿಷ್ಠುರ ನಡೆಯ ಪ.ಗೋ. ಅವರು ಪತ್ರಕರ್ತನಾಗಿ ವೃತ್ತಿಜೀವನದುದ್ದಕ್ಕೂ ಸಿದ್ಧಾಂತ ಹಾಗೂ ಪ್ರಾಮಾಣಿಕತೆಯ ಹಾದಿ ಹಿಡಿದಿದ್ದರು. ವೃತ್ತಪತ್ರಿಕಾ ಜಗತ್ತಿನ ಎಲ್ಲ ಮುಖಗಳ ಅನುಭವವನ್ನು ವೃತ್ತಿನಿರತ ಪತ್ರಿಕೋದ್ಯೋಗಿಯಾಗಿ ಕಂಡ ನಾನಾ ಮುಖಗಳೂ, ಅನುಭವಿಸಿದ ನೋವು, ನಲಿವುಗಳನ್ನು ನಿರ್ಮೋಹದಿಂದ, ವಸ್ತುನಿಷ್ಠವಾಗಿ ಬರೆದ ವಿಶೇಷ ಸೃಷ್ಟಿಯ ಲೋಕದಲ್ಲಿ ವೃತ್ತಪತ್ರಿಕೆಗಳ ಕಾಲಂ ಸಾಹಿತ್ಯ ಮತ್ತು ಕನ್ನಡ ಸಾಹಿತ್ಯದಲ್ಲಿ ಒಂದು ವಿಶಿಷ್ಟ ಬರವಣಿಗೆ.  ಇದು ಪ.ಗೋ. ಆತ್ಮಕತೆಯ ಭಾಗವೂ ಹೌದು. 2005ರಲ್ಲಿ ಪುಸ್ತಕವಾಗಿಯೂ ಪ್ರಕಟಗೊಂಡಿವೆ. ದಕ್ಷಿಣ ಕನ್ನಡ ಜಿಲ್ಲೆಯ ಅಡ್ಯನಡ್ಕದಲ್ಲಿ ಜನಿಸಿದ ಪ.ಗೋ, ಅವರ ಈ ಕೃತಿಯನ್ನು ಬಂಟ್ವಾಳನ್ಯೂಸ್ ಓದುಗರಿಗಾಗಿ ಒದಗಿಸಿಕೊಟ್ಟವರು ಗಲ್ಫ್ ನಲ್ಲಿ ಉದ್ಯೋಗಿಯಾಗಿರುವ  ಪ.ಗೋ ಅವರ ಪುತ್ರ ಸಾಹಿತ್ಯಪ್ರೇಮಿ ಪದ್ಯಾಣ ರಾಮಚಂದ್ರ. (ಪ.ರಾಮಚಂದ್ರ).

ಜಾಹೀರಾತು

ವಿಶೇಷ ಸೃಷ್ಟಿಗಳ ಲೋಕದಲ್ಲಿ 6ನೇ  ಕಂತು ಇಲ್ಲಿದೆ…

1970 ರ ದಶಕದ ಛಾಯಚಿತ್ರ: ದಿನಾಂಕ 17 ಜುಲೈ 1978 ರಂದು ಡ್ರೆಜಿಂಗ್ ಕಾರ್ಪೋರೇಶನ್ ಆಫ್ ಇಂಡಿಯಾದ ಮ್ಯಾನೇಜಿಂಗ್ ಡೈರೆಕ್ಟರ್ ಕ್ಯಾಪ್ಟನ್. ಎಸ್. ಕೆ. ಸೋಮಯಾಜುಲು ಅವರು ನವ ಮಂಗಳೂರು ಬಂದರಿನಲ್ಲಿ ಕಾರ್ಯ ನಿರ್ವಹಿಸುತಿದ್ದ ” ಎಂ. ಒ. ಟಿ.- VIII ಡ್ರೆಜ್ “ನಲ್ಲಿ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡ ನವ ಮಂಗಳೂರು ಬಂದರಿನ ಚೀಫ್ ಎಂಜಿನಿಯರ್ ಪಂಡಿತಾರಾದ್ಯ ಅವರೊಂದಿಗೆ ಅಂದಿನ ” ಸಂಯುಕ್ತ ಕರ್ನಾಟಕ” ಪತ್ರಿಕೆಯ ಮಂಗಳೂರು ಪ್ರತಿನಿಧಿ ಶ್ರೀ. ಪ. ಗೋಪಾಲಕೃಷ್ಣ.

  • ವಿಶೇಷ ಸೃಷ್ಟಿಗಳ ಲೋಕದಲ್ಲಿ -ಅಂಕಣ 6 : “ಮಿಸ್ಟರ್ ಓದುಗ! ಪ್ಲೀಸ್ ಫಿಲ್ ಅಪ್ ದಿ ಬ್ಲಾಂಕ್ಸ್”

ಅಂಕಣಕಾರನ ಅಪರ(ಅಪಾರ)ವಲ್ಲ ಹೊಣೆ ನನ್ನ ಮೇಲೆ ಬೀಳಲು, ನಮ್ಮ ಮುದ್ರ ಮುರುಘೇಂದ್ರರಿಗೆ ಇದ್ದಕ್ಕಿದ್ದಂತೆ ಮೂಡಿದ ಸ್ಫೂರ್ತಿಯೇ ಮುಖ್ಯ ಕಾರಣ. (ನನ್ನ ಬೇಡಿಕೆಯ ಒತ್ತಡಕ್ಕೆ ವಿಧಿಯಿಲ್ಲದೆ ಬಗ್ಗಿ ಕೊಡುತ್ತಿದ್ದ 15.ರೂ.ಹೆಚ್ಚಿನ ವೇತನಕ್ಕೆ ಪ್ರತಿಫಲ ಪಡೆದ ಅಪೇಕ್ಷೆಯೂ ಒಂದು ಹಿನ್ನೆಲೆ).

ಜಾಹೀರಾತು

“ಛೂಬಾಣದ ಹಾಗೆ ನಮ್ಮಲ್ಲೂ ಒಂದು ಕಾಲಂ ಇದ್ರೆ ಚೆನ್ನಾಗಿರುತ್ತೆ ಅಲ್ವೇನ್ರೀ ವೆಂಕಣ್ಣ? ಹೆಸರು ಏನು ಬೇಕಾದ್ರೂ ಇರಲಿ. ಒಟ್ಟಿನಲ್ಲಿ ಪೇಪರಿನಲ್ಲಿ ಸ್ವಲ್ಪ ಉಪ್ಪು-ಹುಳಿ ಇರಬೇಕು” ಇಂಗಿತ ವೆಂಕಣ್ಣನವರ ಮುಂದೆ- ನನ್ನ ಎದುರಿಗೇ- ಪ್ರಕಟವಾಯಿತು. ಅವರು ನನ್ನ ಕಡೆಗೆ ನೋಡಿ ‘ನೋಡಿ, ಆಗಲಿ, ನಾಳೆಯಿಂದಲೇ ಆರಂಭವಾಗಲಿ’ ಎಂಬ ತುರ್ತು ಆಜ್ಞೆ ಹೊರಡಿಸಿದರು. ಬಹುಶಃ ಇಬ್ಬರೂ ಮೊದಲೇ ಮಾತನಾಡಿಕೊಂಡಿರಬೇಕು.

ಆಜ್ಞೆಯ ಹೊತ್ತಿಗೆ ಸುಮ್ಮನಿದ್ದರೂ, ಮುದ್ರಕರ ನಿರ್ಗಮನವಾದ ಕೂಡಲೆ, ವೆಂಕಣ್ಣ ನೆದುರು ನನ್ನ ಪ್ರತಿಭಟನೆ ಆರಂಭಿಸಿದೆ. ಏನು-ಹೇಗೆಗಳ ಅರಿವೇ ಇಲ್ಲ, ಕೆಲಸ ಮಾಡುವುದಾದರೂ ಹೇಗೆ! ಎಂದು ತೊಡಗಿ- ಉತ್ತರ ಸಿಕ್ಕಾಗ- ಮಾದರಿಯೊಂದನ್ನು ಬರೆದು ತೋರಿಸಿದ ಹೊರತು ಮುಂದುವರಿಯಲಾಗುವುದಿಲ್ಲ ಎಂದು ಹಟ ಹಿಡಿದೆ. ಛೂಬಾಣದ ಟೀಎಸ್ಸಾರ್ ಅವರ ಮಟ್ಟಕ್ಕೆ ಏರುವ ಯೋಗ್ಯತೆ ನನಗೆ ಯಾವಾಗಲೂ ಬಾರದು ಎಂದೂ ವಾದಿಸಿದೆ.

“ಒಪ್ಪಿಕೊಳ್ಳೊ-ಲೋ ಮಂಕುಮುಂಡೇದೆ. ನಿನ್ನ ಒಳ್ಳೇದಕ್ಕೇ ಇದು ಆಗ್ತಾ ಇರೋದು. ಬೇಕಾದ್ರೆ ಒಂದೆರಡು ಪೀಸಸ್ ಬರ್ದು ತೋರಿಸ್ತೀನಿ, ಬಾ” ಎಂದು ನನ್ನ ಪ್ರತಿಭಟನೆಗೆ ತೋರಿದ್ದ ತಾಳ್ಮೆಯ ಕೊನೆಯ ಹಂತದಲ್ಲಿ ಘರ್ಜಿಸಿದ ಅವರು, ಅಂದಿನ ‘ಬೇರೆ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದ ಒಂದೆರಡು ವಾರ್ತೆಗಳನ್ನು ಓದಿ ನೋಡಿದರು. ಎರಡೇ ಎರಡು ನಿಮಿಷ ಯೋಚಿಸಿ, ಅಂಕಣದ ಎರಡು ಪ್ಯಾರಾಗಳನ್ನು ಬರೆದು, ‘ಉಪ್ಪು-ಹುಳಿ’ ಶೀರ್ಷಿಕೆ ಕೊಟ್ಟು, ಕಾಗದವನ್ನು ನನ್ನೆಡೆ ತಳ್ಳಿ -‘ಹೂಂ, ಮುಂದುವರಿಸು’ ಎಂದೇ ಬಿಟ್ಟರು.

ಜಾಹೀರಾತು

ಮತ್ತೊಂದು ನಿಮಿಷ ಕಳೆದು -“ಹೀಗೇ ಏನಾದ್ರೂ ಬರೀತಾ ಹೋಗು, ನಿನ್ನದೇ ಶೈಲಿಯಲ್ಲಿ ( ಅವರು ಬರೆದ ವಾಕ್ಯಗಳು ನನ್ನವೆಯೋ ಏನೋ ಎಂಬ ಭ್ರಮ ಹುಟ್ಟಿಸುವಂತಿದ್ದವು!)  ಸೆನ್ಸ್ ಆಫ್ ಹೂಮರ್ ಮಾತ್ರ ಕಳ್ಕೋಬೇಡ”- ಎಂದೂ ಪ್ರೋತ್ಸಾಹಿಸಿದರು.

ಅವರು ಹೇಳಿದಂತೆ ಮಾಡತೊಡಗಿದೆ. ಸಾಕಷ್ಟು ಒದ್ದಾಟವಾಯಿತು. ಕೊನೆಗೂ, ಒಂದೂವರೆ ಗಂಟೆ ಸಮಯ ವ್ಯಯಿಸಿ ಸರಿಸುಮಾರು ಮುಕ್ಕಾಲು ಕಾಲಂನಷ್ಟು ಉದ್ದದ ‘ಉಪ್ಪು-ಹುಳಿ’ ಅಂಕಣ ಮರುದಿನಕ್ಕಾಗಿ ಸಿದ್ಧವಾದಾಗ ಹೊಟ್ಟೆ ಹಸಿಯುತ್ತಿದ್ದ ನೆನಪಾಯಿತು.

ತಲೆ ಎತ್ತಿ ನೋಡಿದೆ. ಕುರ್ಚಿಯಲ್ಲೇ ತಾಳ್ಮೆಯಿಂದ ಕುಳಿತು ಸಿಗರೇಟು ಉರಿಸುತ್ತಿದ್ದ ವೆಂಕಣ್ಣನನ್ನು ಕಂಡು ಅಚ್ಚರಿಯಾಯಿತು. ಮಾತಿಲ್ಲದೆ ನೀಡಿದ ಅವರ ಕೈಗೆ ಹಾಳೆಗಳನ್ನಿತ್ತೆ. ಬರೆದುದನ್ನು ನೋಡಿ, ಕೆಲವು ಕಡೆ ತಿದ್ದಿದ ಅನಂತರ “ದಿಸೀಸ್ ಓಕೆ” ಎಂದವರು ಮತ್ತೆ-

ಜಾಹೀರಾತು

– ಬೆಳಗ್ಗೆ ಬಂದ ಹಾಗೆ, ಎಲ್ಲಾ ಪೇಪರ್ ನೋಡು. ಗುರುತು ಹಾಕಿಕೊ. ಜೊತೆಗೇ, ಕಮೆಂಟ್ ಮಾಡುವಂಥಾ ವಿಷಯ ಬೇರೇನಾದ್ರೂ ನೆನಪಾದರೆ ಅದನ್ನೂ ನೋಟ್ ಮಾಡು. ತಲೆಗೆ ಹೊಳೆದ ಕಮೆಂಟ್ಸನ್ನ ಕೂಡಲೇ ಬರಿ. ಇದು ಇನ್ ಸೈಡ್ – ಅಂದರೆ ಎಡಿಟೋರಿಯಲ್- ಪೇಜಿಗೆ ಹೋಗಬೇಕು. ಬೆಳಗ್ಗೆ, ಮೊದಲಾಗಿ ಕೊಡಬೇಕಾಗುತ್ತೆ- ಎಂದು ನೆನಪಿಸಿ ಹೊರಟುಹೋದರು.

(ಮರುದಿನ ಪ್ರಕಟವಾದ ಅಂಕಣಕ್ಕೆ ದೊರಕಿದ ಶಹಬಾಸ್ ಗಿರಿಯನ್ನು ಏರಿದ್ದವು ಆರಂಭದ ಎರಡು ತುಣುಕುಗಳು. ಅವುಗಳನ್ನೇ ಅನುಕರಿಸಿದ ಆ ನಂತರವಲ್ಲ ಎಂಬುದು ನಿಜ).

ಅಂದಿನಿಂದ, ವಿವಿಧ ವರದಿ, ಹೇಳಿಕೆ ಅಥವಾ ಘಟನೆಗಳ ಮೇಲೆ ಮೂಡುವ ಪ್ರತಿಕ್ರಿಯೆಗಳಲ್ಲಿ ವ್ಯಂಗ್ಯ, ಅಣಕ, ಲೇವಡಿ ( ಕೆಲವೊಮ್ಮೆ ಕುತ್ಸಿತ ಹಾಸ್ಯ ಕೂಡಾ) ಇತ್ಯಾದಿಗಳನ್ನು ಸೇರಿಸಿ ಅಂಕಣವನ್ನು ಮುಂದುವರೆಸುತ್ತಾ ಹೋಗಲು ಅಭ್ಯಾಸ ಮಾಡಿಕೊಂಡೆ.

ಜಾಹೀರಾತು

ಕ್ರಮೇಣ, ಪತ್ರಿಕೆಯ ಎರಡನೆ ಪುಟದ ಕಡೆಗೆ ಆ ಮೊದಲು ಕಣ್ಣು ಹಾಯಿಸದೆ ಇದ್ದವರೂ, ಉಪ್ಪು-ಹುಳಿ ಅಂಕಣವನ್ನು ಓದುತ್ತಾರೆ ಎಂದು ಗೊತ್ತಾಯಿತು. ಇತರ ಪತ್ರಿಕೆಗಳವರಂತೂ ಹೋಲಿಸಿ ಓದುತ್ತಾರೆಂಬ ನಿದರ್ಶನಗಳೂ ಸಿಕ್ಕಿದವು.

ಒಮ್ಮೆ, ಜನವಾಣಿಯಲ್ಲಿ ‘ಅಣ್ವಸ್ತ್ರ ಯುದ್ಧಸಿದ್ಧತೆ- ಅಮೆರಿಕದ ಸಂಪಾದನೆ’ ಎಂಬ ಶೀರ್ಷಿಕೆ ಕಂಡಿತು. ಅದನ್ನು ಸಹಪತ್ರಿಕೆಯ ತಲೆಬರಹ ಎಂದು ಪರಿಚಯಿಸಿದ ಉಪ್ಪು-ಹುಳಿ – ಖಂಡಿತವಾಗಿಯೂ ಇದು ಮೊಳೆ ಜೋಡಿಸಿದವರ ತಪ್ಪಲ್ಲ, ಅಣ್ವಸ್ತ್ರವು ಈಗಿನ ಇತರ ಅಸ್ತ್ರಗಳ ಅಣ್ಣ ಮಾತ್ರವೇ ಏಕೆ ? ಅವುಗಳ ದೊಡ್ಡಣ್ಣ ಎನಿಸುವಷ್ಟರ ಮಟ್ಟಿಗೆ ಬೆಳೆದಿದೆ. ಅದರ ಅರಿವೂ ಅವರಿಗೆ ಇದೆ. ಹಾಗಾಗಿಯೇ ಆ ಒತ್ತಕ್ಷರ ಅಲ್ಲಿ ಬಂತು. ಆದರೆ ಅದು ಅಣ್ವಸ್ತ್ರದ ಬದಲು ದೊ(ಡ್ಡ)ಣ್ಣಸ್ತ್ರ ಆಗಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು- ಎಂದಿತು. (ಒಂದು ಸಣ್ಣ ಕಣ್ತಪ್ಪಿಗೆ ಅಷ್ಟು ದೊಡ್ಡ ಟಿಪ್ಪಣಿ ಅಗತ್ಯವಿತ್ತೇ?)

ಜನವಾಣಿ ಸಂಪಾದಕರ ‘ಪ್ರೀತಿಯ ಕರೆ’ ಅದೇ ಸಂಜೆ ದೂರವಾಣಿಯಲ್ಲಿ ನಮ್ಮ ಸಂಪಾದಕರಿಗೆ ಬಂದಿತ್ತಂತೆ. ಅವರು ಹೇಳಿದ್ದೆಲ್ಲವನ್ನೂ ಸಂಪಾದಕರು ಮಾತ್ರ ನನಗೆ ತಲುಪಿಸಲಿಲ್ಲ.

ಜಾಹೀರಾತು

ಆದರೆ ಸುದ್ಧಿ ಸಂಪಾದಕ (ನ್ಯೂಸ್ ಎಡಿಟರ್)ರ ಉಪ್ಪು-ಹುಳಿ ಪ್ರತಿಕ್ರಿಯೆಯನ್ನು ಯಥಾವತ್ತಾಗಿ ತಿಳಿಯುವ ಅವಕಾಶವನ್ನು ಪ್ರಜಾವಾಣಿ ಮುಂದಿನ ಕೆಲವೇ ದಿನಗಳಲ್ಲಿ ಒದಗಿಸಿತು.

ಆ ಸಂದರ್ಭ ಒಂದು ದಿನ ಒದಗಿ ಬಂದದ್ದು ಹೀಗೆ:

ಚುನಾವಣೆ ಫಲಿತಾಂಶಗಳಲ್ಲಿ ವಿವಿಧ ಪಕ್ಷಗಳು ಗೆದ್ದುಕೊಂಡ ಸ್ಥಾನಗಳನ್ನು ಪ್ರತ್ಯೇಕವಾಗಿ ಒಂದನೇ ಪುಟದಲ್ಲಿ ತೋರಿಸುವ ವ್ಯವಸ್ಥೆ ಪ್ರಜಾವಾಣಿಯಲ್ಲಾಗಿತ್ತು. ಕೊನೆಯ ಘಳಿಗೆಯವರೆಗೂ ದೊರಕುತ್ತಿದ್ದ ಸ್ಥಾನಗಳ ಸಂಖ್ಯೆಗಳನ್ನು ಪತ್ರಿಕೆಯ ಎಲ್ಲಾ ಆವೃತ್ತಿಗಳಲ್ಲೂ ಸೇರಿಸಲು ಅನುಕೂಲವಾಗುವಂತೆ, ಮೊದಲೇ ಮೊಳೆ ಜೋಡಿಸಿದ್ದ ಒಂದು ‘ಸ್ಟಿಕ್’ ನಷ್ಟು ಮ್ಯಾಟರ್ ತಯಾರಾಗಿತ್ತು. ಕಟ್ಟಕಡೆಗೆ ದೊರೆತ ಸಂಖ್ಯೆಗಳನ್ನು ಕೂಡಲೇ ಸೇರಿಸಿ, ಸಮಯದ ಉಳಿತಾಯ ಮಾಡಲು-

ಜಾಹೀರಾತು

… ಗಂಟೆಯ ವರೆಗೆ ದೊರೆತ ಫಲಿತಾಂಶಗಳ ಪ್ರಕಾರ ಎಂಬ ಶೀರ್ಷಿಕೆಯಡಿ… ಪಕ್ಷವು … ಸ್ಥಾನಗಳನ್ನೂ, ಪಕ್ಷವು ಸ್ಥಾನಗಳನ್ನೂ ಇತರ ಸ್ವತಂತ್ರರು! ಸ್ಥಾನಗಳನ್ನೂ ಗಳಿಸಿದ್ದರು ಎಂಬುದಾಗಿ ಸಿದ್ಧವಿದ್ದ ಸಾಲುಗಳು, ಯಾರದೋ ಅವಸರದ ಪರಿಣಾಮವಾಗಿ ಸಂಖ್ಯೆಗಳಿಲ್ಲದೆ ಪತ್ರಿಕೆಯ ಕೊನೇ ಮುದ್ರಣದಲ್ಲಿ ಸೇರಿಕೊಂಡಿದ್ದವು!

ಅದನ್ನು “ರಾಜ್ಯದಲ್ಲೇ ಅತ್ಯಧಿಕ ಪ್ರಸಾರವುಳ್ಳ ದಿನಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿ” ಎಂದು ಎತ್ತಿ ತೋರಿಸಿದ ಉಪ್ಪು-ಹುಳಿ “ಮಿಸ್ಟರ್ ಓದುಗ! ಪ್ಲೀಸ್ ಫಿಲ್ ಅಪ್ ದಿ ಬ್ಲಾಂಕ್ಸ್” ಎಂಬ ಟಿಪ್ಪಣಿಯನ್ನು ( ಬೇರೇನನ್ನೂ ಬರೆಯಲು ತೋಚದ ಕಾರಣ) ಕೊಟ್ಟಿತು. ಅಷ್ಟೆ.

‘ಮೂಲೆಗುಂಪಾಗುವ ಸ್ಥಿತಿಗೆ’ ಬಂದಿದ್ದ ವಿಶ್ವಕರ್ನಾಟಕದ ‘ಧಾಷ್ಟ್ರ್ಯ’ದ ಕಡೆಗೆ ಸುದ್ಧಿಸಂಪಾದಕರ ಗಮನ ಸೆಳೆದ ಪ್ರಜಾವಾಣಿಯ ಸಹೋದ್ಯೋಗಿಗಳು.

ಜಾಹೀರಾತು

“ಆ ಪೇಪರಿನಲ್ಲಿ ಬರುವ ಸಾವಿರ  ತಪ್ಪುಗಳ ಮೇಲೆ ನಾವೂ ಕಮೆಂಟ್ ಮಾಡ್ಬೇಕು. ನೂರು ಜನ ಓದೋರಿಲ್ಲ- ಆದ್ರೂ ಎಷ್ಟು ಕೊಬ್ಬು?” ಎಂಬ ಉತ್ತರ ಪಡೆದರು.

(ಮುಂದೆ ಹೋಗುತ್ತಿದ್ದ ಎಮ್ಮೆಯನ್ನು ನೋಡಿ ಹಿಂದಿನ ಎಮ್ಮೆ ತಮಾಷೆ ಮಾಡಿದ ಕಥೆಯನ್ನು ಹೋಲುವಂಥ ಅಸಭ್ಯ ಕಥೆಯನ್ನೂ ಅವರು ಹೇಳಿದರು ಎನ್ನುವ ವದಂತಿಯೂ ಇದೆ).

ಆದರೆ, ಮುಂದಿನ ಕ್ರಮಕ್ಕೆ ವಾಡಿಕೆಯ ಅನುಮತಿ ಪಡೆಯುವ ಸಲುವಾಗಿ, ಸಂಪಾದಕರಲ್ಲಿ ವಿಷಯ ಪ್ರಸ್ತಾಪ ಮಾಡಿದಾಗ, ಟೀಎಸ್ಸಾರ್ ರವರು-

ಜಾಹೀರಾತು

“ಅವರದೇನೂ ತಪ್ಪಿಲ್ಲ, ಪ್ರಿಂಟಿಂಗ್ ಅವಾರ್ಡ್ ಪಡೆದ ಪೇಪರಿನಲ್ಲಿ ಆಗಬಾರದಿದ್ದ ಮಿಸ್ಟೇಕನ್ನು ತೋರಿಸಿದ್ದಾರೆ ಅಂಥಾದ್ದನ್ನು ನಾವು ಅವೈಡ್ ಮಾಡಬೇಕು.” ಎಂದು ಸಮಾಧಾನ ಮಾಡಿದರಂತೆ.

ಈ ‘ಅಂತೆ ಪ್ರಕರಣ’ ದ ವಿಸ್ತೃತ ವರದಿಯನ್ನು ಸಹಕರ್ಮಿಯೊಬ್ಬ ತನಗೆ ಅರಿವಿಲ್ಲದೆಯೇ ನನಗೆ ದಾಟಿಸಿದ್ದ- ಒಂದು ಕಾರ್ಯಕ್ರಮವನ್ನು ಮುಗಿಸಿದ ವರದಿಗಾರರ ತಂಡವು ಜೀಪಿನಲ್ಲಿ ತಂತಮ್ಮ ಕಚೇರಿಗಳಿಗೆ ಹಿಂದಿರುಗುತ್ತಿದ್ದ ವೇಳೆಯಲ್ಲಿ ಎದುರು ಬದುರಾಗಿ ನಾವು ಕುಳಿತಿದ್ದೆವು. ವರದಿಯೊಪ್ಪಿಸಿದಾತ ಕೊನೆಯಲ್ಲಿ-

ನಿಮ್ಮ ವಿಶ್ವಕರ್ನಾಟಕದ ಉಪ್ಪು-ಹುಳಿಯ ಕರ್ತೃ ಯಾರು? ಎಂದು ಕೇಳಿದಾಗ, ನಾನು ಉತ್ತರ ಕೊಡಲಿಲ್ಲವಾದರೂ, ಕರ್ತೃವಿನ ಹೆಸರನ್ನು (ಮುಖಭಾವದಿಂದಲೇ) ಆತ ಪತ್ತೆ ಮಾಡಿದ್ದ.

ಜಾಹೀರಾತು

ಮತ್ತೆ ಆ ಸುದ್ಧಿಯನ್ನೇ ಎತ್ತದೆ, ಬೇರೆಲ್ಲಾ ವಿಷಯಗಳನ್ನು ಮಾತನಾಡುತ್ತಾ ಹೋಗುತ್ತಿದ್ದಾಗಲೂ, ಬೇಕಾದ ಮಾಹಿತಿಗಳನ್ನು ಅನಾಯಾಸವಾಗಿ ಸಂಗ್ರಹಿಸಿಕೊಳ್ಳುತ್ತಿದ್ದ ಆತನ ವರದಿಗಾರನ ಜಾಣ್ಮೆ ಪ್ರಶಂಸನೀಯವಾಗಿತ್ತು.

ಹಾಗಾಗಿ, ನಾನೂ ಅವನ ಬಗ್ಗೆ ಕುತೂಹಲ ತಳೆಯುವಂತಾಯಿತು.

ಅಂದಿನ ಆ ಕುತೂಹಲವೇ-

ಜಾಹೀರಾತು

ಮುಂದೊಂದು ದಿನ ‘ಗುರುತ್ವದ ಪರಸ್ಪರ ವಿನಿಮಯ’ದ ಹಂತಕ್ಕೆ ಮುಟ್ಟುವಷ್ಟರ ಮಟ್ಟಿಗೆ ಬೆಳೆದ ನಮ್ಮ ಗೆಳೆತನವನ್ನು ಮತ್ತೆ ಪ್ರಸ್ತಾಪಿಸುತ್ತೇನೆ.

 

(ಮುಂದಿನ ಭಾಗದಲ್ಲಿ)

ಜಾಹೀರಾತು

Also Read:

https://bantwalnews.com/2017/06/01/pa-go-series-5/

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ವಿಶೇಷ ಸೃಷ್ಟಿಗಳ ಲೋಕದಲ್ಲಿ -ಅಂಕಣ 6 : “ಮಿಸ್ಟರ್ ಓದುಗ! ಪ್ಲೀಸ್ ಫಿಲ್ ಅಪ್ ದಿ ಬ್ಲಾಂಕ್ಸ್”"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*