ಆರೋಪ, ಪ್ರತ್ಯಾರೋಪದೊಂದಿಗೆ ಮುಗಿದ ಪುರಸಭೆ ಮೀಟಿಂಗ್

ವಾರ್ಡ್ ಅಭಿವೃದ್ಧಿಯಾಗಲು ಪ್ರತಿ ಪುರಸಭಾ ಸದಸ್ಯರಿಗೆ ಸಿಗುತ್ತದೆ 2 ಲಕ್ಷ ರೂ. ಈ ನಿರ್ಣಯಕ್ಕೆ ಸರ್ವಾನುಮತದ ಬೆಂಬಲ ದೊರಕಿದ್ದು ಬಿಟ್ಟರೆ, ಬಂಟ್ವಾಳ ಪುರಸಭೆ ಸಾಮಾನ್ಯ ಸಭೆ ಮಂಗಳವಾರ ಆರೋಪ, ಪ್ರತ್ಯಾರೋಪಗಳಿಗೆ ಸಾಕ್ಷಿಯಾಯಿತು.

ಪುರಸಭೆ ಮೀಟಿಂಗ್ ನಲ್ಲಿ ಏನೇನಾಯ್ತು ಇಲ್ಲಿದೆ ವರದಿ.

ಜಾಹೀರಾತು

ಬಂಟ್ವಾಳ ಪುರಸಭೆ ಸಾಮಾನ್ಯ ಸಭೆ ಅಧ್ಯಕ್ಷತೆಯನ್ನು ಪಿ.ರಾಮಕೃಷ್ಣ ಆಳ್ವ ವಹಿಸಿದ್ದರು. ಮುಖ್ಯಾಧಿಕಾರಿ ಎಂ.ಎಚ್.ಸುಧಾಕರ್, ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ನಗರ ಯೋಜನ ಪ್ರಾಧಿಕಾರ ಅಧ್ಯಕ್ಷ ಸದಾಶಿವ ಬಂಗೇರ, ಮಾಜಿ ಅಧ್ಯಕ್ಷೆ ವಸಂತಿ ಚಂದಪ್ಪ, ಯಾಸ್ಮೀನ್, ಮಹಮ್ಮದ್ ಶರೀಫ್, ಜಗದೀಶ್ ಕುಂದರ್, ಪ್ರವೀಣ್, ಚಂಚಲಾಕ್ಷಿ, ವಾಸು ಪೂಜಾರಿ, ಸುಗುಣ ಕಿಣಿ, ಎ.ಗೋವಿಂದ ಪ್ರಭು, ದೇವದಾಸ ಶೆಟ್ಟಿ, ಮೊನೀಶ್ ಆಲಿ, ಮಹಮ್ಮದ್ ಇಕ್ಬಾಲ್, ನಾಮನಿರ್ದೇಶಿತ ಸದಸ್ಯ ಲೋಕೇಶ್ ಸುವರ್ಣ ಸಹಿತ ಹಲವರು ಚರ್ಚೆಯಲ್ಲಿ ಪಾಲ್ಗೊಂಡರು.

ಅಧಿಕಾರಿಗಳಾದ ಮತ್ತಡಿ, ರತ್ನಪ್ರಸಾದ್, ಡೊಮಿನಿಕ್ ಡಿಮೆಲ್ಲೊ, ದಯಾವತಿ, ರಜಾಕ್ ಪ್ರಶ್ನೆಗಳಿಗೆ ಉತ್ತರಿಸಿದರು.

ಜಾಹೀರಾತು

ಆರಂಭದಲ್ಲೇ ವಿರೋಧ ಪಕ್ಷದ ಸುಗುಣ ಕಿಣಿ ಮತ್ತು ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು ಅವರ ಮಧ್ಯೆ ಕಾಮಗಾರಿ ನಡೆಸಿದ ಜಾಗ ಹಾಗೂ ವ್ಯಾಪ್ತಿಯ ವಿಷಯದಲ್ಲಿ ಸುದೀರ್ಘ ಮಾತಿನ ಚಕಮಕಿ ಆರೋಪ, ಪ್ರತ್ಯಾರೋಪ ನಡೆಯಿತು. ಈ ಸಂದರ್ಭ ನಾಮನಿರ್ದೇಶಿತ ಸದಸ್ಯ ಲೋಕೇಶ್ ಅವರೂ ಆಡಳಿತ ಪಕ್ಷದವರ ಬೆಂಬಲಕ್ಕೆ ನಿಂತರು. ವಿರೋಧ ಪಕ್ಷದ ಪರವಾಗಿ ಗೋವಿಂದ ಪ್ರಭು, ದೇವದಾಸ ಶೆಟ್ಟಿ ಸುಗುಣ ಕಿಣಿ ಬೆಂಬಲಕ್ಕೆ ನಿಂತರು. ಸಾಕಷ್ಟು ವಾದ, ವಿವಾದಗಳು ನಡೆದ ಬಳಿಕ ಚರ್ಚೆ ಮುಂದಕ್ಕೆ ಹೋಯಿತು.

ಉಳಿದಂತೆ ಪುರಸಭೆಯಲ್ಲಿ ನಡೆದ ಚರ್ಚೆಯ ಮುಖ್ಯಾಂಶಗಳು ಇವು.

ಬಿ.ಮೂಡ ಗ್ರಾಮದ ತಲಪಾಡಿ ಮಫತ್‌ಲಾಲ್ ಲೇಔಟ್‌ಗೆ ಮಂಜೂರಾದ ನಕ್ಷೆಯಲ್ಲಿ ಕಾಣಿಸಿದಂತೆ ಉದ್ಯಾನವನಕ್ಕೆ ಮೀಸಲಿರಿಸಿದ ಸ್ಥಳ ಅತಿಕ್ರಮಣವಾಗಿರುವುದರಿಂದ ಸರ್ವೆ ನಡೆಸಿ ಅತಿಕ್ರಮಣ ತೆರವುಗೊಳಿಸಲು ಬಂಟ್ವಾಳ ಪುರಸಭೆ ತೀರ್ಮಾನಿಸಿದೆ. ಲೇಔಟ್ ನಲ್ಲಿ ಉದ್ಯಾನವನ ಸ್ಥಳದ ಅತಿಕ್ರಮಣ ವಿಚಾರದ ಕುರಿತು ಚರ್ಚೆ, ವಾದ ನಡೆದವು. ಅಂತಿಮವಾಗಿ ಈ ಕುರಿತು ಸರ್ವೆ ನಡೆಸುವುದು ಎಂದು ತೀರ್ಮಾನಿಸಲಾಯಿತು. ವಿಷಯ ಪ್ರಸ್ತಾಪಿಸಿದ ಆಡಳಿತ ಪಕ್ಷದ ಸದಸ್ಯ ಮಹಮ್ಮದ್ ಶರೀಫ್, ಮಫತ್ ಲಾಲ್ ಲೇಔಟ್ ಕುರಿತ ದಾಖಲೆಗಳನ್ನು ಸಭೆಯ ಮುಂದಿಡಲು ಒತ್ತಾಯಿಸಿದರು. ನೀವು ರೆಕಾರ್ಡ್ ರೂಮ್ ನಲ್ಲಿ ದಾಖಲೆ ಹುಡುಕಿದ್ದೀರಾ ಎಂದು ಈ ಸಂದರ್ಭ ಹಿರಿಯ ಸದಸ್ಯ ಎ.ಗೋವಿಂದ ಪ್ರಭು ಮುಖ್ಯಾಕಾರಿಯನ್ನು ಪ್ರಶ್ನಿಸಿದರು. ಈ ಕುರಿತು ನಾನು 2016ರ ಜೂನ್ 6 ಕ್ಕೆ ಕೊಟ್ಟ ದೂರಿಗೆ ಇದುವರೆಗೂ ಉತ್ತರ ಲಭಿಸಿಲ್ಲ. ಸರ್ವೆ ನಡೆಸಿದರೆ ಯಾವಾಗ ಅದರ ವಿವರ ಕೊಡುತ್ತೀರಿ ಎಂದು ಪ್ರಶ್ನಿಸಿದ ದೇವದಾಸ ಶೆಟ್ಟಿ, ದಾಖಲೆ ಇಲ್ಲದ ಜಾಗಲ್ಲಿ ಮನೆ ಕಟ್ಟುವ ಸಂದರ್ಭ ಪುರಸಭೆ ಅನುಮತಿ ಕೇಳುತ್ತೇವೆ. ಈಗ ಅಲ್ಲಿ ಜಾಗವೇ ಇಲ್ಲ ಎಂದು ಹೇಳಿದರು. ಜಾಗ ಅತಿಕ್ರಮಣ ಕುರಿತು ಬಿಸಿಬಿಸಿ ಚರ್ಚೆ ನಡೆಯುತ್ತಿದ್ದಾಗಲೇ ಆಡಳಿತ ಪಕ್ಷದ ಸದಸ್ಯ ವಾಸು ಪೂಜಾರಿ ಎದ್ದು ನಿಂತು, ಸರಕಾರಿ ಜಾಗ ಅತಿಕ್ರಮಣವಾಗುತ್ತಿದೆ, ಏನು ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿ, ಹಕ್ಕುಪತ್ರ ಕೊಡದೇ ಇದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು. ಭಾರೀ ಪ್ರಮಾಣದಲ್ಲಿ ಸರಕಾರಿ ಜಾಗ ಅತಿಕ್ರಮಣವಾಗಿದೆ. ಈ ಕುರಿತು ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಿದ್ದಾಗ ಬಡವರಿಗೆ ಮನೆ ನಿವೇಶನ ಕೊಡುವುದಾದರೂ ಹೇಗೆ ಎಂದು ವಾಸು ಪೂಜಾರಿ ಪ್ರಶ್ನಿಸಿದರೆ, ಸದಸ್ಯ ಪ್ರವೀಣ್ ಜತೆಗೂಡಿದರು.

ಜಾಹೀರಾತು

ಬಿ.ಸಿ.ರೋಡ್ ರಕ್ತೇಶ್ವರಿ ದೇವಸ್ಥಾನದ ಹತ್ತಿರ ಇರುವ ಪುರಸಭೆ ವಾಣಿಜ್ಯ ಸಂಕೀರ್ಣ ಕಟ್ಟಡದಲ್ಲಿ 1ನೇ ಅಂತಸ್ತು ನಿರ್ಮಿಸಿಕೊಟ್ಟು, ಬಂಟ್ವಾಳ ಯೋಜನಾ ಪ್ರಾಕಾರ ಕಚೇರಿ ನಡೆಸಲು ಅವಕಾಶ ಕೋರಿ ಯೋಜನ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮನವಿ ಮಾಡಿದ್ದನ್ನು ಸಭೆಯಲ್ಲಿ ಮಂಡಿಸಲಾಯಿತು. ಈ ಸಂದರ್ಭ ಮಾತನಾಡಿದ ಸದಸ್ಯ ಪ್ರವೀಣ್, ಮೊದಲು ರೆಕಾರ್ಡ್ ರೂಮ್‌ಗೆ ಸೌಲಭ್ಯ ಕಲ್ಪಿಸಿ, ಬಳಿಕ ಯೋಜಾ ಪ್ರಾಕಾರ ಕುರಿತು ಗಮನಹರಿಸಿ ಎಂದು ಸಲಹೆ ನೀಡಿದರು. 150 ವರ್ಷಗಳ ಹಿಂದಿನ ಇತಿಹಾಸ ಹೇಳುವ ದಾಖಲೆಗಳು ಇಲ್ಲಿವೆ. ಅವು ಹಾಳಾಗುತ್ತಿದೆ. ರೆಕಾರ್ಡ್ ರೂಮ್ ಕತೆ ಏನಾಯಿತು ಎಂದು ಪ್ರಭು ಪ್ರಶ್ನಿಸಿದರು. ಸದಸ್ಯರಾದ ವಾಸು ಪೂಜಾರಿ, ಪ್ರವೀಣ್, ಮಹಮ್ಮದ್ ಶರೀಫ್ ಸಹಿತ ಹಲವು ಸದಸ್ಯರು ಚರ್ಚೆಯಲ್ಲಿ ಪಾಲ್ಗೊಂಡರು. ಈ ಹಂತದಲ್ಲಿ ಯೋಜನಾ ಪ್ರಾಕಾರದ ಅಧ್ಯಕ್ಷ ಸದಾಶಿವ ಬಂಗೇರ ಮತ್ತು ಗೋವಿಂದ ಪ್ರಭು ಮಧ್ಯೆ ಮಾತಿನ ಚಕಮಕಿ ನಡೆಯಿತು.

ಬಂಟ್ವಾಳ ಪುರಸಭೆಯಲ್ಲಿ ಹೊರರಗುತ್ತಿಗೆ ನೌಕರರಿಗಿಂತ ದಿನಗೂಲಿ ಆಧಾರದಲ್ಲಿ ಸೇರಿದವರ ಸಂಬಳ ಜಾಸ್ತಿ ಇದೆ. ಹೀಗಾಗಬಾರದು ಎಂದು ಪ್ರವೀಣ್ ಹೇಳಿದರು. ಇದು ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಎಂಬಂತಾಗಿದೆ. ಪುರಸಭೆ ಆಡಳಿತ ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಸದಸ್ಯ ಗೋವಿಂದ ಪ್ರಭು ಆಕ್ಷೇಪಿಸಿದರು.

ತ್ಯಾಜ್ಯ ತೆಗೆದುಕೊಂಡು ಹೋಗಲು ಯಾರೂ ಬರುವುದಿಲ್ಲ. ಕೆಲ ವಾರ್ಡ್‌ಗಳಲ್ಲಷ್ಟೇ ವಿಲೇವಾರಿ ಆಗುತ್ತಿದೆ. ಟೆಂಡರ್ ಕರೆದರೂ ಗುತ್ತಿಗೆ ವಹಿಸಿಕೊಳ್ಳಲು ಬರುವುದಿಲ್ಲ ಎಂಬ ಮಾತು ಸಭೆಯಲ್ಲಿ ಕೇಳಿಬಂತು. ಈ ಸಂದರ್ಭ ಪುರಸಭೆಯಲ್ಲಿ ಆದಾಯದ ಕೊರತೆಯ ಪ್ರಸ್ತಾಪವೂ ಆಯಿತು. ತ್ಯಾಜ್ಯ ಸಂಗ್ರಹಿಸಿದ ಲಾರಿಯೊಂದು ಬಿ.ಸಿ.ರೋಡ್ ಲಯನ್ಸ್ ಸೇವಾ ಮಂದಿರ ಬಳಿ ಇರುತ್ತದೆ. ಅದರಿಂದ ದುರ್ವಾಸನೆ ಬರುತ್ತಿದೆ ಎಂದು ಸದಸ್ಯ ದೇವದಾಸ ಶೆಟ್ಟಿ ಹೇಳಿದರೆ, ಮಹಮ್ಮದ್ ಇಕ್ಬಾಲ್ ಇದಕ್ಕೆ ದನಿಗೂಡಿಸಿದರು. ಕಂಚಿನಡ್ಕಪದವು ತ್ಯಾಜ್ಯ ವಿಲೇವಾರಿ ಘಟಕದ ಕತೆ ಏನಾಯಿತು ಎಂದು ಇಕ್ಬಾಲ್ ಪ್ರಶ್ನಿಸಿದರು. ಅದಿನ್ನೂ ಅಂತಿಮ ಹಂತದ ಪ್ರಕ್ರಿಯೆಯಲ್ಲಿದೆ ಎಂದು ಅಧ್ಯಕ್ಷ ಆಳ್ವ ತಿಳಿಸಿದರು. ಪುರಸಭೆ ನಿಯಿಂದ ಅಭಿವೃದ್ಧಿ ಕಾಮಗಾರಿಗಳನ್ನು ನಿರ್ವಹಿಸಲು ಪ್ರತಿ ವಾರ್ಡಿಗೆ ಅನುದಾನ ಮಂಜೂರು ಮಾಡುವ ಮತ್ತು ಕ್ರಿಯಾಯೋಜನೆ ತಯಾರಿಸುವ ಕುರಿತು ಪ್ರತಿ ಸದಸ್ಯರಿಗೆ 2 ಲಕ್ಷ ರೂ. ಒದಗಿಸುವ ಬಗ್ಗೆ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಯಿತು. ಈ ಸಂದರ್ಭ ಅನುದಾನನೀಡಲು ಹಣ ಇಲ್ಲ ಎಂದು ಹೇಳಿದ್ದು ಸದಸ್ಯರನ್ನು ಕೆರಳಿಸಿತು. ಎಷ್ಟು ನೀರಿನ ಸಂಪರ್ಕದಿಂದ ಹಣ ವಸೂಲು ಮಾಡಿದ್ದೀರಿ, ತೆರಿಗೆ ಎಷ್ಟು ವಸೂಲಾಗಿದೆ ಎಂದು ಸದಾಶಿವ ಬಂಗೇರ ಪ್ರಶ್ನಿಸಿದರು. ಪ್ರತಿಯೊಂದಕ್ಕೂ ಅನುದಾನ ಇಲ್ಲ ಎಂದು ಹೇಳುವುದು ಎಷ್ಟು ಸರಿ ಎಂದು ಚಂಚಲಾಕ್ಷಿ ಆಕ್ಷೇಪಿಸಿದರು. ಆದರೆ ಒಂದೆಡೆ ಹಣ ಇಲ್ಲ ಎಂದು ಹೇಳಿದ ಪುರಸಭೆ, ಅದೇ ಹೊತ್ತಿನಲ್ಲಿ ಖಾಸಗಿ ಕಾರ್ಯಕ್ರಮಗಳಿಗೆ ಧನಸಹಾಯ ಮಂಜೂರು ಮಾಡಿತು.

ಜಾಹೀರಾತು

for video report click:

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಏಳನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಆರೋಪ, ಪ್ರತ್ಯಾರೋಪದೊಂದಿಗೆ ಮುಗಿದ ಪುರಸಭೆ ಮೀಟಿಂಗ್"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*