ವಿಶೇಷ ಸೃಷ್ಟಿಗಳ ಲೋಕದಲ್ಲಿ -ಅಂಕಣ 4 : ‘ಮೇಜರ್ ಅಸೈನ್ ಮೆಂಟ್’

ಪದ್ಯಾಣ ಗೋಪಾಲಕೃಷ್ಣ (1928-1997)

ದಕ್ಷಿಣ ಕನ್ನಡ ಜಿಲ್ಲೆಯ ಪತ್ರಕರ್ತರ ಸಾಲಿನಲ್ಲಿ ಮುಂಚೂಣಿಯಲ್ಲಿದ್ದವರು ಪದ್ಯಾಣ ಗೋಪಾಲಕೃಷ್ಣ (1928-1997). ಪ.ಗೋ. ಎಂದೇ ಚಿರಪರಿಚಿತರಾಗಿದ್ದ ಅವರು, ಕನ್ನಡದ ಪ್ರಸಿದ್ಧ ದಿನಪತ್ರಿಕೆಗಳಲ್ಲಿ ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಕೆಲಸ ಮಾಡಿದವರು. ನೇರ, ನಿಷ್ಠುರ ನಡೆಯ ಪ.ಗೋ. ಅವರು ಪತ್ರಕರ್ತನಾಗಿ ವೃತ್ತಿಜೀವನದುದ್ದಕ್ಕೂ ಸಿದ್ಧಾಂತ ಹಾಗೂ ಪ್ರಾಮಾಣಿಕತೆಯ ಹಾದಿ ಹಿಡಿದಿದ್ದರು. ವೃತ್ತಪತ್ರಿಕಾ ಜಗತ್ತಿನ ಎಲ್ಲ ಮುಖಗಳ ಅನುಭವವನ್ನು ವೃತ್ತಿನಿರತ ಪತ್ರಿಕೋದ್ಯೋಗಿಯಾಗಿ ಕಂಡ ನಾನಾ ಮುಖಗಳೂ, ಅನುಭವಿಸಿದ ನೋವು, ನಲಿವುಗಳನ್ನು ನಿರ್ಮೋಹದಿಂದ, ವಸ್ತುನಿಷ್ಠವಾಗಿ ಬರೆದ ವಿಶೇಷ ಸೃಷ್ಟಿಯ ಲೋಕದಲ್ಲಿ ವೃತ್ತಪತ್ರಿಕೆಗಳ ಕಾಲಂ ಸಾಹಿತ್ಯ ಮತ್ತು ಕನ್ನಡ ಸಾಹಿತ್ಯದಲ್ಲಿ ಒಂದು ವಿಶಿಷ್ಟ ಬರವಣಿಗೆ.  ಇದು ಪ.ಗೋ. ಆತ್ಮಕತೆಯ ಭಾಗವೂ ಹೌದು. 2005ರಲ್ಲಿ ಪುಸ್ತಕವಾಗಿಯೂ ಪ್ರಕಟಗೊಂಡಿವೆ. ದಕ್ಷಿಣ ಕನ್ನಡ ಜಿಲ್ಲೆಯ ಅಡ್ಯನಡ್ಕದಲ್ಲಿ ಜನಿಸಿದ ಪ.ಗೋ, ಅವರ ಈ ಕೃತಿಯನ್ನು ಬಂಟ್ವಾಳನ್ಯೂಸ್ ಓದುಗರಿಗಾಗಿ ಒದಗಿಸಿಕೊಟ್ಟವರು ಗಲ್ಫ್ ನಲ್ಲಿ ಉದ್ಯೋಗಿಯಾಗಿರುವ  ಪ.ಗೋ ಅವರ ಪುತ್ರ ಸಾಹಿತ್ಯಪ್ರೇಮಿ ಪದ್ಯಾಣ ರಾಮಚಂದ್ರ. (ಪ.ರಾಮಚಂದ್ರ).

ವಿಶೇಷ ಸೃಷ್ಟಿಗಳ ಲೋಕದಲ್ಲಿ ನಾಲ್ಕನೇ  ಕಂತು ಇಲ್ಲಿದೆ…

ಹಿಂದೊಮ್ಮೆ ಉತ್ತಮ ಸ್ಥಿತಿಯಲ್ಲಿದ್ದಾಗ ಆಡಳಿತದಲ್ಲಿ ತಲೆತೂರಿಸಲು ಯತ್ನಿಸಿದ ಒಂದು ಪ್ರಬಲವರ್ಗದ ಜಗ್ಗಾಟವನ್ನು ಪ್ರತಿಭಟಿಸಿದ ತಿ.ತಾ.ಶರ್ಮಾರವರು ಪತ್ರಿಕೆಯ ಕೈಬಿಟ್ಟು ಹೋದ ಮೇಲೆ ಕಮೇಣ ಇಳಿದ ಆದಾಯ ಮತ್ತು ಪ್ರಸಾರಸಂಖ್ಯೆಗಳಿಂದಾಗಿ ಈಗಿನ ಸ್ಥಿತಿ ಬಂದಿತು. ವಾರ್ತಾಸಂಸ್ಥೆಯ ಶುಲ್ಕ ದೊಡ್ಡ ಮೊತ್ತದಲ್ಲಿ ಬಾಕಿಯಾದ್ದರಿಂದ ಟೆಲಿಪ್ರಿಂಟರ್ ಸೌಕರ್ಯವೂ ಹೋಯಿತು (ಮತ್ತೆ ಮಹಡಿಯ ಮೇಲೆ ಟೆಲಿಪ್ರಿಂಟರಿನ ಖಾಲಿ ಕ್ಯಾಬಿನೆಟ್ ಮಾತ್ರ ಉಳಿಯಿತು). ಸದ್ಯಕ್ಕೆ ಜಾಹೀರಾತು ಅಥವಾ ಬೇರೆ ಮೂಲಗಳಿಂದ ಬಂದ ಆದಾಯವನ್ನು ಹಂಚಿಕೊಳ್ಳುವುದು, ನ್ಯೂಸ್ ಪ್ರಿಂಟ್ ಅಥವಾ ವೇತನ ಬಟವಾಡೆಗೆ ಮಂಡೀಪೇಟೆಯ ಅಯ್ಯನವರಿಂದ ಹಣಕಿತ್ತುಕೊಂಡು ಬರುವುದು… ಇದೇ ನಡೆದು ಬಂದಿದೆ. ಅವರಾದರೋ, ಹಣ ಕೇಳಿದಾಗ ಒಮ್ಮೆಗೆ ಬೈದರೂ ಕೊನೆಗೆ “ನಮ್ಮವರ ಪೇಪರ್ ಅಲ್ವ, ಆ ಬಿಟ್ಟಾಕೋಕಾಗತ್ತಾ! ಆದ್ರೆ ಇದೇ ಕೊನೇ ಸಲಿ- ಇನ್ಮೇಲೆ ಬಂದ್ರೆ ಏನೂ ಸಿಗೊಲ್ಲ” ಅಂತಾರೆ. ಕೊಟ್ಟ ಮಾರನೆ ದಿನ.,ಆಡಿಟೋರಿಯಲ್ ನ ಯಾರಿಗಾದರೂ ಫೋನ್ ಮಾಡಿ “ಯಾರೂ ಮಾತಾಡೋದೂ??? ಏನು… ಯ್ಯ ಕಣಪ್ಪಾ, ನಂ ವರ್ತಕರ ಸುದ್ದಿ ಏನಾದ್ರೊಂದಷ್ಟು ನಂ ಪೇಪರ್ ನಲ್ಲಿ ಹಾಕ್ರೋ” ಅಂತ ಕೇಳ್ಕೊತ್ತಾರೆ. ‘ಸರಿ ಸಾರ್, ಹಾಗೇ ಮಾಡ್ತೀವಿ’ ಅಂತ ಯಾರಾದ್ರೂ ಉತ್ತರ ಕೊಟ್ಟರೆ ಮುಂದಿನ ಸಲಾನೂ ಅದೇ ನಾಟ್ಕ ನಡಿಯುತ್ತೆ…
 
ಶೀನಿ ಕಥೆ ಕೇಳಿ ಹೊರಟುಹೋದ. ಕುತೂಹಲ ತಡೆಯಲಾರದೆ ಮಹಡಿಯ ಕಸತುಂಬಿದ್ದ ಕೋಣೆಗೆ ಮೊದಲ ಬಾರಿ ಕಾಲಿಟ್ಟು, ಅಲ್ಲಿ ಗೋಡೆಗೊರಗಿ ಇಟ್ಟಿದ್ದ ಟೆಲಿಪ್ರಿಂಟರಿನ ಖಾಲಿ ಕ್ಯಾಬಿನೆಟ್ಟನ್ನು ನೋಡಿ ಬಂದ ಮೇಲೆ- ನನ್ನ ಮೂರು ತಿಂಗಳ ಅವಧಿ ವಿಸ್ತರಣೆಯಾದರೆ ಹೊಟ್ಟಿಗೇನು ಗತಿಯೆಂಬ ಪ್ರಶ್ನಾಕೀಟ ನನ್ನನ್ನು ತೊರೆಯತೊಡಗಿತು. ಮುಂದಿನ ಕೆಲವು ದಿನಗಳ ಬಗೆಗೆ ಕೊರೆಯುತ್ತಲೇ ಇತ್ತು.
 
ಆದರೆ, ಆ ತಿಂಗಳು ಕಳೆಯುವುದರೊಳಗೇ, ಆರಂಭಗೊಂಡ ಕೆಲವು ವಿದ್ಯಮಾನಗಳು, ನನ್ನ … ಪರಿಹರಿಸಿದುದು ಮಾತ್ರವೇ ಅಲ್ಲದೆ, ನನ್ನ ವೃತ್ತಿಜೀವನಕ್ಕೆ ಒಂದು ಹೊಸ ವಸ್ತುವನ್ನೂ ಕೊಟ್ಟವು. ಒಂದು ದಿನ ಯಾವುದೇ ಮುನ್ಸೂಚನೆ ಕೊಡದೆ ನನ್ನನ್ನು ಕರೆದ ಬಾಸ್, ನನಗೆ ಮೂವತ್ತಲ್ಲ 45 ರೂ.ಗಳನ್ನು ಕೊಟ್ಟು, “ನೋಡ್ರೀ, ನಿಮಗೆ ಈ ತಿಂಗಳಿಂದಾನೇ ಇಷ್ಟು ಕೊಡ್ಬಹುದೂಂತ ರೆಕಮೆಂಡೇಶನ್ ಆಗಿದೆ. ಚೆನ್ನಾಗಿ ಕೆಲ್ಸ ಮಾಡಿದ್ರೆ ಇನ್ನೂ ಹೆಚ್ಚು ಮಾಡ್ತೀವಿ” ಎಂಬ ಶರ್ಕರವಾಕ್ಯಗಳನ್ನು ಉಸುರಿದಾಗ, ಮುಂದೆ ಏನೋ ನಡೆಯಲಿದೆ ಎಂದು ಅರಿತುಕೊಂಡೆ.
 
ಮುಂದೆ ನಡೆದುದೆಲ್ಲವೂ ಬೇರೆಯವರೆಲ್ಲರ ಮಟ್ಟಿಗೆ ಬಹಳ ನಿಧಾನಗತಿಯ ಬೆಳವಣಿಗೆಗಳು ಆದರೆ, ನನ್ನ ಮಟ್ಟಿಗಂತೂ, ಮುಂದಿನ ಕೆಲವು ತಿಂಗಳುಗಳವರೆಗೆ, ದಿನಗಳು ಸರಿದು ಹೋದುದೇ ಗೊತ್ತಾಗದಷ್ಟು ವೇಗವಾಗಿ ನಡೆದ ಪರಿವರ್ತನೆಗಳು.
 
ಉನ್ನತ ಮಟ್ಟದಲ್ಲಿ ನಡೆದ ಸಮಾಲೋಚನೆಗಳೋ, ಅಥವಾ ಬಲೆಗೆ ಸಿಕ್ಕಿದ್ದ ರಾಜಕೀಯ ಮಿಕಗಳಿಂದ ದೊರೆತ(ಹಣದ) ಬೆಂಬಲವೋ, ಅಂತೂ ಯಾವುದೋ ಒಂದು ತೆರದ ಬಲ, ಮುಂದೆ ಬರಲಿರುವ ಚುನಾವಣೆಗಳ ಹಿನ್ನೆಲೆಯಲ್ಲಿ ಪತ್ರಿಕೆಗೆ ಸಿಗಲಾರಂಭಿಸಿತ್ತು. ನನಗೆ(ಆಗ) ತಿಳಿದ ಮಟ್ಟಿಗೆ, ಸಂಪಾದಕೀಯ ಶಾಖೆಯ ತ್ರಿಮೂರ್ತಿಗಳಲ್ಲಿ ಇಬ್ಬರು ಆ ಬಲವ್ಯೂಹದಲ್ಲಿ ಮುಖ್ಯಪಾತ್ರ ವಹಿಸಿದ್ದರು.
 
ನ್ಯೂಸ್ ಪ್ರಿಂಟ್ ಆಗಬೇಕಾದರೆ ಮಂಡಿಪೇಟೆಗೆ ದುಡ್ಡಿಗಾಗಿ ಓಡುವ ಸ್ಥಿತಿ ಬದಲಾಗಿ ಚೆಕ್ ಕೊಟ್ಟು ರೀಮ್ ತರಿಸುವ ಅಭ್ಯಾಸ ಬರತೊಡಗಿತ್ತು. ಎತ್ತಿ ಕೊಂಡುಯ್ದ ಟೆಲಿಪ್ರಿಂಟರ್ ಹಿಂದಿನ ಬಾಕಿಯನ್ನು ಮುಂದಿನ ಕಂತುಗಳಲ್ಲಿ ತೀರಿಸುವ ಆಶ್ವಾಸನೆಯ ಮೇರೆಗೆ ಮಹಡಿಯ ಮೇಲಕ್ಕೆ ಪುನಃ ಬಂದಿತು. ಮೊಳೆ ಜೋಡಿಸುವವರಿಗೆ ಮೊದಲು, ಉಳಿದವರಿಗೆ ಅನಂತರ ಎಂದೇ ಆದರೂ, ತಿಂಗಳ ನಿರ್ದಿಷ್ಟ ದಿನಗಳಲ್ಲಿ ವೇತನ ಸಿಗತೊಡಗಿತು.
 
ತ್ರಿಮೂರ್ತಿಗಳು, ಅದರಲ್ಲೂ ಮುಖ್ಯವಾಗಿ ವೆಂಕಣ್ಣ, ಕಚೇರಿಯಲ್ಲಿ ಇರುತ್ತಿದ್ದ ಸಮಯ ಕಡಿಮೆಯಾಗುತ್ತಾ ಬರುತ್ತಿದ್ದಂತೆ, ನನ್ನೊಬ್ಬನ ಮೇಲೆ ಬೀಳುವ ಹೊಣೆಗಾರಿಕೆಯೂ ಹೆಚ್ಚುತ್ತಾ ಬಂತು.
 
ಹೊರಿಸಲಿರುವ ಹೊಣೆಗಾರಿಕೆಯನ್ನು ಒಂದು ದಿನ ಸಂದರ್ಭ ಒದಗಿಸಿಕೊಂಡು ಅವರು ವಿವರವಾಗಿ ಹೇಳಿಯೂ ಬಿಟ್ಟರು.ನಾಲ್ಕು ಕಾಸು ಹೆಚ್ಚಾಗಿ ಸಿಗುವ ಭರವಸೆಯನ್ನೂ ಅವರು ಕೊಟ್ಟ ಕಾರಣ, ಹೊಣೆಯನ್ನು ಅವರ ಪರೋಕ್ಷ ಬೆಂಬಲವಾದರೂ ಸಿಗುವುದಾದರೆ- ಹೊರಲು ಸಿದ್ಧ ಎಂದೆ. ಮುಂದೆ,ಹೊತ್ತೆ.
 
 ಹೊರಿಸುವ ಹೊತ್ತಿನಲ್ಲಿ ವೈಯಕ್ತಿಕ ವಿಚಾರಗಳಲ್ಲದೆ, ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ಅವರು ಕೊಟ್ಟ ಮಾಹಿತಿಗಳು ಹಲವು. “ಈಗ ಒಮ್ಮೆಗೆ, ದೊಡ್ಡದೊಂದು ಹೊರೆ ನಿನ್ನ ಹೆಗಲ ಮೇಲೆ ಬಿದ್ದ ಹಾಗೆ ಕಂಡರೂ ಗಾಬರಿಯಾಗಬೇಡ. ಪತ್ರಿಕೆಯ ಒಳಹೊರಗುಗಳನ್ನೆಲ್ಲಾ ನೀನಾಗಿಯೇ ತಿಳಿದುಕೊಂಡು ಬೆಳೆಯಲು ಇದೊಂದು ಒಳ್ಳೆಯ ಅವಕಾಶವೆಂದು ಭಾವಿಸಿಕೊ. ಎಲ್ಲ ವಿಭಾಗಗಳಲ್ಲೂ ಇಲ್ಲಿ ಜನರ ಕೊರತೆ ಇದೆ. ಆದ್ದರಿಂದ ಯಾವ ಕೆಲಸವನ್ನಾದರೂ ನೀನು ವಹಿಸಿಕೊಂಡು ಮಾಡಬಹುದು. ಪ್ರಯೋಗ ಮಾಡಿ, ನಿರ್ವಹಿಸಬಹುದು. ಬೇರೆಲ್ಲೂ ಇಂಥ ಟ್ರೆಯಿನಿಂಗ್ ಗ್ರೌಂಡ್ ನಿನಗೆ ಸಿಗುವುದಿಲ್ಲ” ಎಂಬ ಸಲಹೋಪದೇಶ ಪ್ರಾಮುಖ್ಯವಾಗಿತ್ತು.
 
ಅವರು ಆಡಿದ ಮಾತಿಗೆ ಕೋಲೆಬಸವನಂತೆ ತಲೆಯಾಡಿಸಿದೆ. ಮರುದಿನದಿಂದಲೇ, ಯಕ್ಷಗಾನ ಮೇಳದ ಬಾಲಗೋಪಾಲ ಗೋಪುರ ಕಟ್ಟಲೂ ತಯಾರು ಎನ್ನುವ ಹಾಸ್ಯಗಾರನ ಸ್ಥಾನಕ್ಕೆ ಏರಿದೆ.
 
ಅದೇ ಸಂಜೆ ಆಯಾಚಿತವಾಗಿ, ವರದಿಗಾರ ವೇಷ ಪ್ರಾಪ್ತವಾಯಿತು. (ನಾಗಯ್ಯನವರ ಅನುಪಸ್ಥಿತಿಯ ನೆನಪೂ ಬಂದಿತ್ತು) ನನಗೆ ನಾನೇ ಹಾಕಿಕೊಂಡ ಒಂದು‘ಅಸೈನ್ ಮೆಂಟ್’ ಪ್ರಕಾರ ಸೆಂಟ್ರಲ್ ಕಾಲೇಜಿನಲ್ಲಿ ನಾಟಕಕಾರ ಶೀರಂಗರು ಭಾಗವಹಿಸಿದ್ದ ಒಂದು ಕ್ಲಾಸ್ ಸೆಮಿನಾರಿನಲ್ಲಿ ಏಕಮಾತ್ರ ವರದಿಗಾರನಾಗಿ ಹಾಜರಿದ್ದೆ.
 
ಅನುಕರಿಸಲು ಇತರ ವರದಿಗಾರರು ಯಾರೂ ಇರಲಿಲ್ಲ. ಮರುದಿನ ಮುಂಜಾನೆಯ ಪತ್ರಿಕೆಗಳಿಂದ ಮರಡಿಯನ್ನೆತ್ತಿ ನಮ್ಮ ಸಂಜೆ ಪತ್ರಿಕೆಗೆ ಕೊಡುವ ಅವಕಾಶವೂ ನಾಸ್ತಿ. ಹಾಗಾಗಿ, ನನ್ನ ‘ವಸ್ತುನಿಷ್ಠ’ ಕಿರುವರದಿಯನ್ನು ಯಾರೂ ಗಮನಿಸದೆ ಹೋದುದು ಒಳ್ಳೆಯದೇ ಆಯಿತು ಎಂದುಕೊಂಡೆ.
 
ಅದಾದ ಮೂರೇ ಮೂರು ದಿನಗಳಲ್ಲಿ ‘ಮೇಜರ್ ಅಸೈನ್ ಮೆಂಟ್’ ಒಂದು ಸಂಪಾದಕರಿಂದಲೇ ದೊರಕಿತು. ಮೈಸೂರಿನ ಮಹಾಶಿಲ್ಪಿ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ ಭಾಷಣ ಹತ್ತು ಗಂಟೆಗೆ ಸರಿಯಾಗಿ ಟೌನ್ ಹಾಲ್ (ಪುಟ್ಟಣ್ಣಚೆಟ್ಟಿ ಪುರಭವನ) ದಲ್ಲಿ ಇದೆ. ಕವರ್ ಮಾಡು ಎಂದರು ಸಂಪಾದಕರು.
 
ಹೇಗೂ ಜುಜುಬಿ ಕಾರ್ಯಕ್ರಮವಲ್ಲ, ಬರುವ ಘಟಾನುಘಟಿಗಳನ್ನು ನೋಡಿಕೊಂಡು ಅವರು ಮಾಡಿದಂತೆ ಮಾಡಿದರಾಯಿತು ಎಂದುಕೊಂಡು ಪುರಭವನಕ್ಕೆ ಓಡಿದೆ. ಭವನದ ಒಳಹೊಕ್ಕು, ಪ್ರೆಸ್ ಎಂಬ ಗಂಭೀರ ಶಬ್ದವನ್ನು ಬಾಗಿಲಲ್ಲಿ ಉಚ್ಚರಿಸಿ, ಮುಂದೆ ಹೋಗಿ ಕುಲಿತೆ, ವರದಿಗಾರರ ಕುರ್ಚಿಸಾಲಿನಲ್ಲಿ ಹಿಂದೆ.
 
ಸ್ವಾಗತ, ಪರಿಚಯ, ಪ್ರಸ್ತಾವನೆಗಳ ಸಾಂಪ್ರದಾಯಿಕ ಪ್ರವಚನಗಳಾಗುತ್ತಿರುವಾಗ, ನನ್ನ ಮುಂದಿನವರಲ್ಲಿ ಹಲವರ ಚಡಪಡಿಕೆ ನೋಡಿ, ಯಾಕೆ ಹೀಗೆ ಮಾಡುತ್ತಿದ್ದಾರೆ? ಎಂಬ ಸಮಸ್ಯೆ ಉಂಟಾಗಿತ್ತು, ಸರ್ ಎಂ.ವಿ. ಅವರ ಹದಿನೇಳು ಪುಟಗಳ ಮುದ್ರಿತ ಭಾಷಣದ ಪ್ರತಿಗಳ ಹಂಚೋಣ ಆರಂಭವಾಯಿತು. ಅವರ ಭಾಷಣ ಇನ್ನೂ ಆರಂಭವಾಗಿರಲಿಲ್ಲ, ಅಷ್ಟರಲ್ಲಿ ಪ್ರತಿಗಳನ್ನು ಹಂಚುವವರಿಂದ ಅವಸರವಸರವಾಗಿ ಕಿತ್ತುಕೊಂಡ ವರದಿಗಾರ ಬಂಧುಗಳು ಗುಂಪುಕಟ್ಟಿ ಹೊರನಡೆದರು. ವರದಿಗಾರಿಕೆಯ ಹೊಸಪರಿಯನ್ನು ಕಂಡು ಬೆರಗಾದರೂ, ಅವರನ್ನು ನಾನೂ ಹಿಂಬಾಲಿಸುವ ಅಗತ್ಯ ಕಾಣದಾದೆ.
 
ವಿಶ್ವೇಶ್ವರಯ್ಯನವರು – ‘ನನ್ನ ಭಾಷಣದ ಪ್ರತಿಗಳನ್ನು ನೀವೆಲ್ಲ ಪಡೆದಿದ್ದೀರಿ, ನಾನು ಇನ್ನೊಮ್ಮೆ ಅದನ್ನು ಓದಬೇಕಾಗಿಲ್ಲ, ಇನ್ನೂ ಹೇಳಬೇಕಾದ ಮಾತುಗಳು ಕೆಲವಿವೆ. ಅವುಗಳನ್ನು ಈಗ ಹೇಳುತ್ತೇನೆ’- ಎಂದು ಆರಂಭಿಸಿ ಭಾಷಣವನ್ನು ಮುಗಿಸುವವರೆಗೂ ಕುಳಿತಿದ್ದು, ಅವರು ಅಧ್ಯಕ್ಷತೆ ವಹಿಸಿದ್ದ ಮುಖ್ಯಮಂತ್ರಿ ಕಡಿದಾಳ್ ಮಂಜಪ್ಪನವರ ಸರಕಾರಕ್ಕೆ ಹಾಕಿದ ಛೀಮಾರಿಯ ನುಡಿಗಳೂ ಸೇರಿದಂತೆ ಆಡಿದ್ದೆಲ್ಲವನ್ನೂ( ತಲೆಯೊಳಗ ಮತ್ತು ನೋಟ್ ಬುಕ್ಕಿನಲ್ಲಿ) ಸಂಗ್ರಹಿಸಿ, ಕಾರ್ಯಕ್ರಮದ ಕೊನೆಯಲ್ಲಷ್ಟೇ ಕಚೇರಿ ತಲುಪಿದೆ.
 
“ಏನ್ ಮರೀ? ನಮ್ಮದು ಈವಿನಿಂಗ್ ಪೇಪರ್ ಅನ್ನೋದು ಮರ್ತೇ ಹೋಗಿತ್ತಾ?” ಎಂಬ ಕಾಯುತ್ತಾ ಚಡಪಡಿಸುತ್ತಿದ್ದ ವೆಂಕಣ್ಣನವರ ಪ್ರಶ್ನೆಗೆ, ಮೌನವಾಗಿದ್ದು ಮುದ್ರಿತ ಭಾಷಣದ ಪ್ರತಿಯನ್ನು ಅವರ ಕೈಗಿತ್ತೆ, ‘ಹೂಂ, ಬೇಗ ಬೇಗ ಒಂದಷ್ಟು ಗೀಚಿ ಕೊಡು’ ಎಂದುದಕ್ಕೆ “ಅವರು ಇದನ್ನು ಓದಲೇ ಇಲ್ಲ, ಏನು ಮಾಡಲಿ?” ಎಂಬ ರಾಗ ನನ್ನಿಂದ ಹೊರಟಿತು.
 
ಮತ್ತೇನಾಗಿತ್ತೋ? “ಅವರು ಬೇರೆಯೇ ಮಾತಾಡಿದರು”. ‘ಹಾಗಾದರೆ ಅದನ್ನೇ ಬರೆದುಕೊಡು, ಬೇಗ’ – ಎಂದ ಅವರ ಅವಸರಕ್ಕೆ ಒಪ್ಪಿ, ಗೀಚಿದ ವರದಿ, ಮುಂದೇನಾಯಿತು?
 
(ಮುಂದಿನ ಭಾಗದಲ್ಲಿ)
Last week

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ವಿಶೇಷ ಸೃಷ್ಟಿಗಳ ಲೋಕದಲ್ಲಿ -ಅಂಕಣ 4 : ‘ಮೇಜರ್ ಅಸೈನ್ ಮೆಂಟ್’"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*