ವಿಶೇಷ ಸೃಷ್ಟಿಗಳ ಲೋಕದಲ್ಲಿ -ಅಂಕಣ1: ಏನು ಮಾಡ್ತಾ ಇದ್ದೀರಿ ಈಗ?

ಪದ್ಯಾಣ ಗೋಪಾಲಕೃಷ್ಣ (1928-1997)

ದಕ್ಷಿಣ ಕನ್ನಡ ಜಿಲ್ಲೆಯ ಪತ್ರಕರ್ತರ ಸಾಲಿನಲ್ಲಿ ಮುಂಚೂಣಿಯಲ್ಲಿದ್ದವರು ಪದ್ಯಾಣ ಗೋಪಾಲಕೃಷ್ಣ (1928-1997). ಪ.ಗೋ. ಎಂದೇ ಚಿರಪರಿಚಿತರಾಗಿದ್ದ ಅವರು, ಕನ್ನಡದ ಪ್ರಸಿದ್ಧ ದಿನಪತ್ರಿಕೆಗಳಲ್ಲಿ ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಕೆಲಸ ಮಾಡಿದವರು. ನೇರ, ನಿಷ್ಠುರ ನಡೆಯ ಪ.ಗೋ. ಅವರು ಪತ್ರಕರ್ತನಾಗಿ ವೃತ್ತಿಜೀವನದುದ್ದಕ್ಕೂ ಸಿದ್ಧಾಂತ ಹಾಗೂ ಪ್ರಾಮಾಣಿಕತೆಯ ಹಾದಿ ಹಿಡಿದಿದ್ದರು. ವೃತ್ತಪತ್ರಿಕಾ ಜಗತ್ತಿನ ಎಲ್ಲ ಮುಖಗಳ ಅನುಭವವನ್ನು ವೃತ್ತಿನಿರತ ಪತ್ರಿಕೋದ್ಯೋಗಿಯಾಗಿ ಕಂಡ ನಾನಾ ಮುಖಗಳೂ, ಅನುಭವಿಸಿದ ನೋವು, ನಲಿವುಗಳನ್ನು ನಿರ್ಮೋಹದಿಂದ, ವಸ್ತುನಿಷ್ಠವಾಗಿ ಬರೆದ ವಿಶೇಷ ಸೃಷ್ಟಿಯ ಲೋಕದಲ್ಲಿ ವೃತ್ತಪತ್ರಿಕೆಗಳ ಕಾಲಂ ಸಾಹಿತ್ಯ ಮತ್ತು ಕನ್ನಡ ಸಾಹಿತ್ಯದಲ್ಲಿ ಒಂದು ವಿಶಿಷ್ಟ ಬರವಣಿಗೆ.  ಇದು ಪ.ಗೋ. ಆತ್ಮಕತೆಯ ಭಾಗವೂ ಹೌದು. 2005ರಲ್ಲಿ ಪುಸ್ತಕವಾಗಿಯೂ ಪ್ರಕಟಗೊಂಡಿವೆ. ದಕ್ಷಿಣ ಕನ್ನಡ ಜಿಲ್ಲೆಯ ಅಡ್ಯನಡ್ಕದಲ್ಲಿ ಜನಿಸಿದ ಪ.ಗೋ, ಅವರ ಈ ಕೃತಿಯನ್ನು ಬಂಟ್ವಾಳನ್ಯೂಸ್ ಓದುಗರಿಗಾಗಿ ಒದಗಿಸಿಕೊಟ್ಟವರು ಗಲ್ಫ್ ನಲ್ಲಿ ಉದ್ಯೋಗಿಯಾಗಿರುವ ಸಾಹಿತ್ಯಪ್ರೇಮಿ ಪ.ಗೋ ಅವರ ಪುತ್ರ ಪದ್ಯಾಣ ರಾಮಚಂದ್ರ. (ಪ.ರಾಮಚಂದ್ರ).

ಜಾಹೀರಾತು

ವಿಶೇಷ ಸೃಷ್ಟಿಗಳ ಲೋಕದಲ್ಲಿ ಪ್ರಥಮ ಕಂತು ಇಲ್ಲಿದೆ…

“ಏನು ಮಾಡ್ತಾ ಇದ್ದೀರಿ ಈಗ?”

ಜಾಹೀರಾತು

ಇಂದಿಗೆ (1995) 40  ವರ್ಷಗಳ ಹಿಂದೆ, ಒಂದು ಬೆಳಗಿನ ಹೊತ್ತು. ಬೆಂಗಳೂರು ಬಳೇಪೇಟೆಯ ಗಲ್ಲಿಯೊಂದರಲ್ಲಿ ಹಿಂದೊಂದು ಕಾಲದಲ್ಲಿ ಖ್ಯಾತಿವೆತ್ತು ಮೆರೆಯುತ್ತಿದ್ದ ವಿಶ್ವಕರ್ನಾಟಕ ಸಂಜೆ ದೈನಿಕ ಕಾರ್ಯಲಯದಲ್ಲಿ ಸಹಾಯಕ ಸಂಪಾದಕರಿಂದ ಬಂದ ಪ್ರಶ್ನೆ ಅದು.

ಅಲ್ಲಿಗೆ ಉದ್ಯೋಗ ಹುಡುಕಿಕೊಂಡು, ಮಿತ್ರನೊಬ್ಬನ ಜೊತೆಗೆ ಹೋಗಿ ಪರಿಚಯ ಹೇಳಿಕೊಂಡ ಕೂಡಲೆ ಬಂದ ಆ ಪ್ರಶ್ನೆಗೆ “ಸದ್ಯ ಏನೂ ಇಲ್ಲ” ಎಂದಷ್ಟೇ ಹೇಳಿ ಸುಮ್ಮನಾದೆ.

ಅಷ್ಟುಹೊತ್ತಿಗೆ, ಕೆಲವೇ ದಿನಗಳ ಹಿಂದಿನ ಒಂದು ಸಂದರ್ಭದಲ್ಲಿ ತನಗಾಗಿದ್ದ ನನ್ನ ಸಾಂಪ್ರದಾಯಿಕ ಪರಿಚಯವನ್ನು ನೆನಪು ಮಾಡಿಕೊಂಡ ಅವರು-

ಜಾಹೀರಾತು

‘ಇಲ್ಲಿ ಯಾಕೆ ಸೇರಬಾರದು?” ಎಂಬ ನೇರ ಪ್ರಶ್ನೆ ಹಾಕಿದರು.

1963ರಲ್ಲಿ ತೆಗೆದ ಪ.ಗೋ. ಕುಟುಂಬದ ಚಿತ್ರ

ಉದ್ಯೋಗದ ಬೇಟೆಯಲ್ಲೇ ಅಲ್ಲಿಗೆ ಹೋಗಿದರೂ ,ಹೆಚ್ಚಿನ ನಿರೀಕ್ಷೆ ಇರಿಸಿರಲ್ಲಿಲ್ಲ. ಅನಿರೀಕ್ಷಿತ ಆಹ್ವಾನ ನನ್ನನ್ನು ತಬ್ಬಿಬ್ಬಾಗಿಸಿತು .“ಯಾವಕೆಲಸಕ್ಕೆ?”  ಎಂದು ಕೇಳಿ ತಿಳಿದುಕೊಳ್ಳಬೇಕೆಂಬುದೂ ಮರೆತುಹೋಯಿತು.

“ನಾಳೆ ಬನ್ನಿ – ಬಾಸ್ ಅವರ ಅಭಿಪಾಯ ತಿಳಿದು ಹೇಳುತ್ತೇನೆ’ ಎಂಬ ಚುಟುಕು ಸೂಚನೆ ಇತ್ತು. ಬಲಗೈಯನ್ನೊಮ್ಮೆ ಎತ್ತಿ ಅಲ್ಲಾಡಿಸಿ, ತಲೆ ತಗ್ಗಿಸಿ ಸಿಗರೇಟ್ ಹಚ್ಚಿ ಕುರ್ಚಿಯಲ್ಲಿ ಪದ್ಮಾಸನ ಹಾಕಿ ಕುಳಿತ ಸಹಾಯಕ ಸಂಪಾದಕ ಕುಮಾರ ವೆಂಕಣ್ಣ, ಅನಂತರ ನನ್ನ ಕಡೆಗೆ ಕಣ್ಮೆತ್ತಿಯೂ ನೋಡಲಿಲ್ಲ. ನಾನು ಮಾತ್ರ ಸರಸರನೆ ಬರೆಯುತ್ತಾ ಹೋಗುತ್ತಿದ್ದ ಅವರ ಭಂಗಿಯನ್ನು ಒಂದೈದು ನಿಮಿಷ ನೋಡುತ್ತಾ ಅಲ್ಲೇ ನಿಂತಿದ್ದೆ – ಹೊರಗೆ ಬಂದಿದ್ದ ಮಿತ್ರ ನನ್ನನ್ನು ಕರೆಯುವವರೆಗೂ.

ಜಾಹೀರಾತು

ಮರುದಿನ ಸರಿಸುಮಾರು ಅದೇ ಸಮಯಕ್ಕೆ ಹೋದಾಗ ಬಾಸ್ (ಮುದ್ರಕ – ಪ್ರಕಾಶಕರು) ಅಲ್ಲಿದ್ದರು. ನನ್ನ ಪರಿಚಯ ಮಾಡಿಸಿದ ವೆಂಕಣ್ಣನವರಲ್ಲಿ _ ‘ಫ್ರೀ ಸರ್ವಿಸ್ ವಿಷಯ ಹೇಳಿದ್ದೀರೇನ್ರೀ?’ – ಎಂದು ಅವರೆನ್ನುವುದೂ,‘ಇಲ್ಲ- ಈಗ ಹೇಳ್ತೇನೆ’ ಎಂದ ಉತ್ತರವೂ, ಮೆಲು ಮಾತಿನಲ್ಲಿ ಬಂದರೂ ನನಗೆ ಕೇಳಿಸಿತು. ಹಾಗೆಂದರೆ ಏನೆಂಬುದು ಅರ್ಥವಾಗಿರಲಿಲ್ಲ. ವೆಂಕಣ್ಣ ನನ್ನನ್ನು ಹೊರಗೆ ಕರೆದು – ‘ಮೂರು ತಿಂಗಳವರೆಗೆ ಪುಕ್ಕಟೆ ಸೇವೆ ಸಲ್ಲಿಸಿದರೆ ಮಾತ್ರ ಉದ್ಯೋಗ’ ಎಂಬ ನಿಬಂಧನೆಯನ್ನು ತಿಳಿಸಿದರು. ಜೊತೆಗೇ, ‘ಈಗ ಸೇರಿಕೊ – ಆಮೇಲೆ ನಾನೇ ಎಲ್ಲವನ್ನೂ ಸರಿಮಾಡುತ್ತೇನೆ’ ಎಂಬ ಭರವಸೆಯನ್ನೂ ಕೊಟ್ಟರು.

ಇಲ್ಲದಿದ್ದ ಧೈರ್ಯವನ್ನು ತಂದುಕೊಂಡು – ನನಗೆ ಸಿಗುವ ಉಗ್ಯೋಗವಾದರೂ ಏನು?  -ಎಂದು ಅವರನ್ನು ಕೇಳಿದ್ದು ಆಗಲೇ. ( ಸಿಗಬಹುದಾದ ವೇತನ ತಿಂಗಳಿಗೆ ಮೂವತ್ತು ರೂ.ಗಳು ಎಂಬ ಮುಂದಿನ ವಿವರ ಗೊತ್ತಾಗಲು ಮತ್ತೂ ಆರು ವಾರಗಳು ಬೇಕಾದವು).

ಇವನ್ಯಾವ ಶತಮೂರ್ಖ ? ಎಂಬ ಹಾಗೆ ನನ್ನನ್ನೊಮ್ಮೆ ದಿಟ್ಟಿಸಿ ನೋಡಿ “ಸಬ್ ಎಡಿಟರ್ ಕೆಲಸ ಕಣ್ರೀ” ಎಂದು ಹಳೆಮೈಸೂರಿನ (ಅವರು ದ.ಕ.ಮೂಲದವರು) ರಾಗದಲ್ಲಿ ತಿಳಿಸಿ, ‘ಸೇರುವುದಾದರೆ ಈಗಿನಿಂದಲೇ ಕೆಲಸ ಪ್ರಾರಂಭ ಮಾಡು’ ಎಂದು ಆಜ್ಞಾಪಿಸಿದರು.

ಜಾಹೀರಾತು

ಏನು ಎತ್ತ ಎಂಬ ಯಾವ ಯೋಚನೆಯನ್ನೂ ಮಾಡದೆ, ಸ್ವಾತಂತ್ರ್ಯ ಸಮರ ಸೇನಾನಿ ತಿರುಮಲೆ ತಾತಾಚಾರ್ಯ ಶರ್ಮರು (ಹಿಂದೆ)  ಸಂಪಾದಕರಾಗಿ ಮೆರೆದಿದ್ದ ‘ವಿಶ್ವಕರ್ನಾಟಕ’ (ಮತ್ತು ಪೂರ್ಣಕಾಲಿಕ ಪತ್ರಿಕೋದ್ಯಮ)ಕ್ಕೆಆ ಕೂಡಲೆ ಕಾಲಿಟ್ಟೆ. (ಅದಕ್ಕೂ ಎರಡು ವರ್ಷಗಳ ಮೊದಲೊಮ್ಮೆ ಮುಂಬಯಿಯ ‘ಮಾರ್ಚ್’ ಇಂಗ್ಲೀಷ್ ವಾರ ಪತ್ರಿಕೆಯಲ್ಲಿ ಕರಡೋಲೆ ತಿದ್ದುವ ತಾತ್ಕಾಲಿಕ ಉದ್ಯೋಗದ ನಾಟಕವನ್ನು ಮೂರು ತಿಂಗಳು ನಿಭಾಯಿಸಿದ್ದೇ ಅದುವರೆಗಿನ ನನ್ನ ಪತ್ರಿಕೋದ್ಯಮದ ಅಂಶಕಾಲಿಕ ಅನುಭವ!)

ಉದ್ಯೋಗಿಯ ಅವತಾರದಲ್ಲಿ ಒಳಗೆ ಹೊಕ್ಕ ನನ್ನನ್ನು ಖಾಲಿಯಾಗಿದ್ದ ಮೂರು ಕುರ್ಚಿಗಳ ಪೈಕಿ ಒಂದರಲ್ಲಿ ಅಂದಿನ ‘ದಿ ಹಿಂದೂ’ ಪತ್ರಿಕೆಯ ಪುಟದ ಒಂದು ಸುದ್ದಿ ತುಣುಕನ್ನು ಗುರುತಿಸಿ -‘ಹಾಂ, ಇದೊಂದು ಬಿಟ್ ತಯಾರಾಗಲಿ, ಬೇಗ’- ಎಂಬ ಅಪ್ಪಣೆ ಕೊಟ್ಟು ಹೊರಗೆ ಹೋದ ವೆಂಕಣ್ಣ ತಿರುಗಿ ಬರುವ ಹದಿನೈದು ನಿಮಿಷಗಳ ಹೊತ್ತು, ನಾನು ಏನಾಗಿದ್ದೆ ನೋ ನನಗೇ ಗೊತ್ತಿರಲಿಲ್ಲ.

ಸುದ್ದಿಯ ತುಣುಕನ್ನು ಕನ್ನಡಕ್ಕೆ ಅನುವಾದಿಸಲು ಅವರು ಹೇಳಿದ್ದರೆಂಬುದನ್ನು ಮಾತ್ರ ಅರ್ಥಮಾಡಿಕೊಂಡಿದ್ದೆ. ಭಾಷೆ, ಶೈಲಿ, ಗಾತ್ರ ವಿಸ್ತಾರದ ಮಿತಿ, ಇತ್ಯಾದಿಗಳ ಬಗ್ಗೆ ಯಾವ ಸೂಚನೆಯೂ ದೊರಕಿರಲಿಲ್ಲ. ಹೇಗೆ-ಏನುಗಳ ಪ್ರಶ್ನೆಗಳೇ ಗೊಂದಲವೆಬ್ಬಿಸಿದ್ದವು. ಆದರೂ, ಹೆಚ್ಚೆಂದರೆ, ಇದು ತಪ್ಪಾಗಿದೆ ಎಂದಷ್ಟೇ ಹೇಳಬಹುದು – ನೀನು ಕೆಲಸಕ್ಕೆ ನಾಲಾಯಖ್’ ಎನ್ನಲೂಬಹುದು, ಅಷ್ಟೆ. ಹೇಗಾದರೂ ಒದ್ದಾಡಿ ಈ ಸುದ್ದಿ ತುಣುಕನ್ನು ಅನುವಾದಿಸಲೇಬೇಕು ಎನ್ನುವ ನಿರ್ಧಾರ ತಳೆದು ಅದನ್ನು ಮುಗಿಸುವ ಹೊತ್ತಿಗೆ ವೆಂಕಣ್ಣ ಬಂದೇ ಬಿಟ್ಟಿದ್ದರು. ನಾನು ಬೆವರು ಒರೆಸಿಕೊಳ್ಳುತ್ತಿದ್ದೆ.

ಜಾಹೀರಾತು

ಅವರ ಕೈಗಿತ್ತ ನನ್ನ(ಹದಿನೇಳು ಪಂಕ್ತಿಗಳ) ಅನುವಾದ ಸಾಹಸವನ್ನು ಒಮ್ಮೆ ಕ ಣ್ಣಾಡಿಸಿ ನೋಡಿ – ‘ನೀವು ಜರ್ನಲಿಸ್ಟ್ ಕೆಲಸಕ್ಕೆ ನಾಲಾಯಖ್’ – ಎಂದೇಬಿಟ್ಟರು ಅವರು! ಆದರೆ ಆಗ ನಗುತ್ತಿದ್ದ ಕಾರಣ, ‘ಯಾಕೆ?’ ಎಂದು ಕೇಳುವ ಧೈರ್ಯ ನನ್ನಲ್ಲಿ ಮೂಡಿತ್ತು.

‘ಅಕ್ಷರ ಇಷ್ಟು ಚೆನ್ನಾಗಿ ಇರಬಾರದು. ಕಂಪಾಸಿಟರರಿಗೆ ಕೊರಕಲು ಅಕ್ಷರವೇ ಹೆಚ್ಚು ಪರಿಚಿತ- ಮತ್ತು ಅದರಲ್ಲೇ ಹೆಚ್ಚು ಪ್ರೀತಿ’, ಎಂಬ ಪ್ರಥಮೋಪದೇಶ ಅವರಿಂದ ಆದಾಗ, ನನ್ನ ಲಿಪಿ ಸಿದ್ಧಿಯ ಬಗ್ಗೆ ಹೆಮ್ಮೆಯೇನೋ ಮೂಡಿತ್ತು. ಜೊತೆಯಲ್ಲೇ ಕೊರಕಲು ಅಕ್ಷರ ಬರೆಯಲು ತಿರುಗಿ ಕಲಿಯುವುದಾದರೂ ಹೇಗೆ? ಎಂಬ ಪ್ರಶ್ನೆಯೂ ಹುಟ್ಟಿಕೊಂಡಿತು.

‘ಅಕ್ಷರಗಳು ಯಾಕೆ ಹಾಗಿರಬೇಕು ? ಅದರಿಂದ ನಮಗೇನು ಅನುಕೂಲ?’ ಎಂದು ಕೇಳಿಯೇಬಿಟ್ಟೆ.

ಜಾಹೀರಾತು

‘ನೋಡಪ್ಪಾ (ಆಗಾಗ ಏಕವಚನಗಳ ಬಳಕೆ ಅವರ ಅಭ್ಯಾಸವೆಂದು ಅನಂತರ ಗೊತ್ತಾಯಿತು) ವೇಗವಾಗಿ ಬರೆಯಬೇಕಾದರೆ ಸುಂದರ ಅಕ್ಷರಗಳು ಉಪಕಾರಕ್ಕೆ ಬರುವುದಿಲ್ಲ. ‘ಸ್ಪೀಡ್ರೈಟಿಂಗ್’ ಅನ್ನುವ ಶಬ್ದ ಕೇಳಿ ಗೊತ್ತಾ ? ಅದೇ ಇಲ್ಲಿಬೇಕಾದ್ದು. ನೋಡಿ, ಬರೆಯುವಾಗ ಹೀಗೆ ಬರೆಯಬೇಕಾಗುತ್ತದೆ ಎಂದು ಅವರ ಮಾತಿನ ವಾಕ್ಯಗಳನ್ನೇ ಸರಸರನೆ ಗೀಚಿ ತೋರಿಸಿ, ನನ್ನನ್ನು ದಂಗುಬಡಿಸಿದರು.

ಅಂದು ‘ಅಕ್ಷರಮಾತ್ರಮಂ (ರೂಪ-ಗಾತ್ರಮಂಕೂಡಎನ್ನಲೆ?) ಕಲಿಸಿದ’ ಆ ಗುರುವಿನಿಂದಾಗಿ, (ಇತ್ತೀಚಿನ ವರ್ಷಗಳವರೆಗೂ ದೈನಿಕಗಳ ಕೆಲಸದಲ್ಲಿ ಉಪಯೋಗಕ್ಕೆ ಉಳಿದುಕೊಂಡ) ಕನ್ನಡ ಅಕ್ಷರಗಳ ವಿಚಿತ್ರ ಶೀಘ್ರ ಲಿಪಿ ನನ್ನದು ಎಂದಾಯಿತು.

‘ಕ’ ಬರೆಯಬೇಕಾದರೆ, ಕೆಳಗೊಂದು ಚುಕ್ಕೆ ಅಥವಾ ಕಿರು ಸೊನ್ನೆ- ಮೇಲೊಂದು ಕೋರೆಗೆರೆ, ‘ಒ’ ಅಕ್ಷರಕ್ಕೆ ವಾಲಿಕೊಂಡ ಪ್ರಶ್ನಾಚಿಹ್ನೆಯ ಹಾಗೆ ಒಂದು ಸಂಕೇತ, ‘ಯ’-ಕ್ಕೆಇಂಗ್ಲೀಷಿನ ‘ಡಬ್ಲ್ಯು’ವನ್ನು ಹೋಲುವ ಗುರುತು ಇತ್ಯಾದಿಗಳನ್ನು ಉಪಯೋಗಿಸಿ ವೇಗವಾಗಿ ಬರೆಯಲೂ, ಏನನ್ನಾದರೂ ಗುರುತು ಹಾಕಿಕೊಳ್ಳಲೂ ಅಂದಿನಿಂದಲೇ ಆರಂಭಿಸಿದೆ. (ಹಲವರು ಅಚ್ಚುಮೊಳೆ ಜೋಡಿಸುವವರ ಶಾಪಕ್ಕೂ ಒಳಗಾಗಿದ್ದೆ ಎಂಬುದು ಬೇರೆ ಮಾತು).

ಜಾಹೀರಾತು

ಬರಹಗಾರಿಕೆಯಲ್ಲಿ ಸಾಕಷ್ಟು ಪರಿಶ್ರಮವಿದ್ದರಿಗೂ ಅನಯಾಸವಾಗಿ, ಅಂದದ ಅಕ್ಷರಗಳನ್ನು ಮೂಡಿಸುವ ಚೈತನ್ಯವಿರುವವರಿಗೂ, ಅಂದಿನ ಆ ಲಿಪಿ ಸಾಧನೆ ಅಷ್ಟೇನೂ ಮಹತ್ವವಿಲ್ಲದ ವಿಷಯ ಎಂದೆನೆಸುವುದು ಸಹಜ. ಅದು ಅವರವರ ಸಾಮರ್ಥ್ಯವನ್ನೇ ಹೊಂದಿಕೊಂಡಿದೆ. ಆದರೆ, ನನ್ನ ಮಟ್ಟಿಗಂತೂ ಅಂದಿನ ಕಲಿಕೆ ಅನಿವಾರ್ಯ ಅವಶ್ಯಕತೆಯಾಗಿತ್ತು. ನನ್ನಂಥ ಎಳೆನಿಂಬೆಗಳು ಎಷ್ಟೋ ಮಂದಿ ಇದ್ದರು -ಈಗಲೂ ಇರಬಹುದು.

ಭಾಷಾ ಪತ್ರಿಕೋದ್ಯಮಕ್ಕೆ ಕಾಲಿಟ್ಟ ಹೊಸಬನಿಗೆ ಅತ್ಯಗತ್ಯವಾಗಿ ಬೇಕಾಗುವ ಒಂದು ಆಧಾರ ವಸ್ತು ಯಾವುದು? ಈ ಪ್ರಶ್ನೆಯ ಉತ್ತರವನ್ನುವಿಶ್ವ ಕರ್ನಾಟಕದಲ್ಲಿ ಎರಡು ದಿನ ಕಳೆಯವ ಹೊತ್ತಿಗೇ ನಾನು ಕಂಡುಕೊಳ್ಳಬೆಕಾಯಿತು.

ಈ ಹಿನ್ನಲೆಯಲ್ಲಿ ಅಂದಿನಿಂದ ಇಂದಿಗೆ ಒಮ್ಮೆ ಬರೋಣ. ಮೊನ್ನೆಮೊನ್ನೆಯಷ್ಟೇ ಹಳೆಯನೆನಪು ಮರುಕಳಿಸಿದ ಕಾರಣ, ಅದೇ ಪ್ರಶ್ನೆಯನ್ನು ಒಂಭತ್ತು ಮಂದಿ ಮಂಗಳೂರಿನ ತರುಣ ಪತ್ರಿಕೋದ್ಯಮಿ ಮಿತ್ರರ ಮುಂದಿಟ್ಟೆ- ಬೇರೆ ಬೇರೆ ಸಂದರ್ಭಗಳಲ್ಲಿ ಅವರಲ್ಲಿ ಒಬ್ಬರಿಂದ ಮಾತ್ರ ಸರಿ ಎನಿಸಬಹುದಾದ ಉತ್ತರ ಸಿಕ್ಕಿತು. ನೀವು ಕೆಲಸಕ್ಕೆ ಸೇರಿದ ಕೂಡಲೇ ಮೊತ್ತಮೊದಲಾಗಿ ನಿಮಗೆ ಯಾವುದರ ಅವಶ್ಯಕತೆ ಬಿದ್ದಿತ್ತು? ಎಂಬ ಪ್ರಶ್ನೆಗೆ ಉಳಿದ ಎಂಟು ಮಂದಿಯಿಂದಲೂ ಉತ್ತರದ ಬದಲು ಗೊಂದಲಕ್ಕೆ ಒಳಗಾದ ಪ್ರತಿಕ್ರಿಯೆಯಷ್ಟೇ ದೊರೆತಿತ್ತು. ಉತ್ತರಿಸಿದ ಒಬ್ಬರು ಹೇಳಿದ್ದು-‘ಸರಿಯಾದ ಒಂದು ಇಂಗ್ಲಿಷ್- ಕನ್ನಡ ನಿಘಂಟಿನ ಅಭಾವ ನನ್ನನ್ನುಕಾಡಿತ್ತು’ ಎಂದರು.

ಜಾಹೀರಾತು

ಅಂದೂ ನನ್ನನ್ನುಕಾಡಿದ್ದು ಅದೇ.

ಮೊದಲಿನೆರಡು ದಿನ, ಇಂಗ್ಲೀಷ್ ಪದಗಳ ಅನುವಾದಕ್ಕೆ ನಾನು ಆಶ್ರಯಿಸುತ್ತಿದ್ದದು (ಪ್ಲೇಟ ಊಟಕ್ಕಾಗಿ ಹೋದ ಹೋಟೇಲಿನಲ್ಲಿ ಸಿಗುತ್ತಿದ್ದ ನವಭಾರತವೂ ಸೇರಿದಂತೆ) ಇತರ ಕನ್ನಡ ದೈನಿಕ ಪತ್ರಿಕೆಗಳನ್ನು ಮಾತ್ರ.

ಪರ್ಯಾಯ ಪದಗಳನ್ನು ಗುರುತಿಸಿ( ಸರಿ ತಪ್ಪುಗಳ ವಿಮರ್ಶೆಗೆ ಹೋಗದೆ) ಅವುಗಳನ್ನೇ ಉಪಯೋಗಿಸುತ್ತಿದ್ದೆ. ಹಾಗೇ ಪದಗಳ ಅಭಾವ ಪೀಡೆಗೂ ಒಳಗಾಗುತ್ತಿದ್ದೆ.

ಜಾಹೀರಾತು

(ಮುಂದಿನ ವಾರಕ್ಕೆ)

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ವಿಶೇಷ ಸೃಷ್ಟಿಗಳ ಲೋಕದಲ್ಲಿ -ಅಂಕಣ1: ಏನು ಮಾಡ್ತಾ ಇದ್ದೀರಿ ಈಗ?"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*