ವಿಶೇಷ ಸೃಷ್ಟಿಗಳ ಲೋಕದಲ್ಲಿ -ಅಂಕಣ 24: ನವಭಾರತದ ಮರುಪ್ರವೇಶ

.ಗೋ. ಎಂದೇ ಚಿರಪರಿಚಿತರಾಗಿದ್ದ ಪದ್ಯಾಣ ಗೋಪಾಲಕೃಷ್ಣ (1928-1997) ಕನ್ನಡದ ಪ್ರಸಿದ್ಧ ದಿನಪತ್ರಿಕೆಗಳಲ್ಲಿ ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಕೆಲಸ ಮಾಡಿದವರು. ನೇರ, ನಿಷ್ಠುರ ನಡೆಯ .ಗೋ. ಅವರು ಪತ್ರಕರ್ತನಾಗಿ ವೃತ್ತಿಜೀವನದುದ್ದಕ್ಕೂ ಸಿದ್ಧಾಂತ ಹಾಗೂ ಪ್ರಾಮಾಣಿಕತೆಯ ಹಾದಿ ಹಿಡಿದಿದ್ದರು. ವೃತ್ತಪತ್ರಿಕಾ ಜಗತ್ತಿನ ಎಲ್ಲ ಮುಖಗಳ ಅನುಭವವನ್ನು ವೃತ್ತಿನಿರತ ಪತ್ರಿಕೋದ್ಯೋಗಿಯಾಗಿ ಕಂಡ ನಾನಾ ಮುಖಗಳೂ, ಅನುಭವಿಸಿದ ನೋವು, ನಲಿವುಗಳನ್ನು ನಿರ್ಮೋಹದಿಂದ, ವಸ್ತುನಿಷ್ಠವಾಗಿ ಬರೆದ ವಿಶೇಷ ಸೃಷ್ಟಿಯ ಲೋಕದಲ್ಲಿ ವೃತ್ತಪತ್ರಿಕೆಗಳ ಕಾಲಂ ಸಾಹಿತ್ಯ ಮತ್ತು ಕನ್ನಡ ಸಾಹಿತ್ಯದಲ್ಲಿ ಒಂದು ವಿಶಿಷ್ಟ ಬರವಣಿಗೆಇದು .ಗೋ. ಆತ್ಮಕತೆಯ ಭಾಗವೂ ಹೌದು. 2005ರಲ್ಲಿ ಪುಸ್ತಕವಾಗಿಯೂ ಪ್ರಕಟಗೊಂಡಿವೆ.

pa gO cartoon by Harini

ದಕ್ಷಿಣ ಕನ್ನಡ ಜಿಲ್ಲೆಯ ಅಡ್ಯನಡ್ಕದಲ್ಲಿ ಜನಿಸಿದ .ಗೋ, ಅವರ ಕೃತಿಯನ್ನು ಬಂಟ್ವಾಳನ್ಯೂಸ್ ಓದುಗರಿಗಾಗಿ ಒದಗಿಸಿಕೊಟ್ಟವರು .ಗೋ ಅವರ ಪುತ್ರ ಪದ್ಯಾಣ ರಾಮಚಂದ್ರ. (.ರಾಮಚಂದ್ರ). ಲೇಖನಮಾಲೆಯ 24ನೇ ಕಂತು ಇಲ್ಲಿದೆ. ಅಂಕಣಮಾಲೆಯಾಗಿ ಪ್ರಕಟಗೊಂಡು, ಪುಸ್ತಕರೂಪವಾಗಿ ಹೊರಬಂದ ವಿಶೇಷ ಸೃಷ್ಟಿಗಳ ಲೋಕದಲ್ಲಿ ಪುಸ್ತಕದ ಮರುಪ್ರಕಟಣೆ. ಇಲ್ಲಿ ವ್ಯಕ್ತವಾದ ವಿಚಾರಗಳೆಲ್ಲವೂ ಲೇಖಕರಿಗೆ ಸಂಬಂಧಿಸಿದ್ದಾಗಿದೆ. ಬಂಟ್ವಾಳನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ.

ಜಾಹೀರಾತು
ವಿಶೇಷ ಸೃಷ್ಟಿಗಳ ಲೋಕದಲ್ಲಿ –ಅಂಕಣ 24: ನವಭಾರತದ ಮರುಪ್ರವೇಶ
 
 ತದ ಮುದ್ರಣ ವ್ಯವಸ್ಥೆಗೆ, ಎಷ್ಟು ಕಡಿಮೆ ಎಂದರೂ 500 ರೂ.ಗಳಷ್ಟು ಬೆಲೆಯ ಅಚ್ಚುಮೊಳೆ ಬೇಕಾಗಿತ್ತು. ಆ ಮೊತ್ತವನ್ನು ಸಾಲಪಡೆದು, ಮೊಳೆಗಳನ್ನು ತರಿಸಿಕೊಂಡೆ. ಹಿಂದೆ ಪುತ್ತೂರಿನಲ್ಲಿ ಪ್ರಯೋಗಿಸಿ ನೋಡಿದ್ದಾಗ ಕಂಡು ಬಂದ ನ್ಯೂನತೆಗಳನ್ನು ನಿವಾರಿಸಿದ ಇನ್ನೊಂದು ಉರುಳುಗೋಲಕವನ್ನೂ ಸಿದ್ಧಪಡಿಸಿದೆ. ವಾಸವಿದ್ದ ಮನೆ ಜಗಲಿಯಲ್ಲೇ ಅವುಗಳನ್ನು ಇರಿಸಿಕೊಂಡು ವಾರ್ತಾಲೋಕದ ಪ್ರಕಟಣೆಗೆ ತೊಡಗಿದೆ.

1980ರ ದಶಕದ ಛಾಯಚಿತ್ರ: ಧರ್ಮಸ್ಥಳದಲ್ಲಿ ನಡೆದ ಶ್ರೀ.ಬಾಹುಬಲಿ ಮಹಾ ಮಸ್ತಕಾಭಿಷೇಕದ ಶ್ರೀ ಪ.ಗೋ. ಅವರು ಸಂಯೋಜಿಸಿದ ಈ ಛಾಯಾಚಿತ್ರ ಪತ್ರಿಕೋದ್ಯಮಕ್ಕೆ ಪೂರಕವಾದ ಎಲ್ಲ ವಿಭಾಗಗಳ ಪರಿಣತ ಶ್ರೀ. ಪ. ಗೋಪಾಲಕೃಷ್ಣರು ಛಾಯಾಚಿತ್ರದ ದೃಶ್ಯ ಸಂಯೋಜನೆಯಲ್ಲಿ ನಿಪುಣರು ಎಂದು ದೃಢಪಡಿಸುತ್ತದೆ.

 
ಮನೆಗೆ ವಿದ್ಯುದ್ದೀಪದ ಸೌಕರ್ಯ ಇರಲಿಲ್ಲ. ಆದ್ದರಿಂದ ಕತ್ತಲು ಮುಸುಕುವ ಮೊದಲೇ ಕೆಲಸ ಮುಗಿಸಬೇಕಿತ್ತು. ಆದ್ದರಿಂದ ದೈಹಿಕ ಶ್ರಮ ಕಡಿಮೆಯಾಗಿತ್ತಾದರೂ ‘ಯೋಚನೆಗಳಲ್ಲೇ ಮುಳುಗಿರಬೇಕಾದ ಸಮಯ’ ಹೆಚ್ಚುತ್ತಾ ಹೋಯಿತು.
 
ಯಾರನ್ನಾದರೂ ಸಹಾಯಕ್ಕೆ ನೇಮಿಸಿಕೊಳ್ಳುವ ಶಕ್ತಿ ಇರಲಿಲ್ಲ. ಹಾಗಾಗಿ ವಾರ್ತಾಲೋಕದ ವ್ಯವಹಾರ ಏಕವ್ಯಕ್ತಿ ಪ್ರದರ್ಶನವಾಯಿತು.
 
ಬೆಳಗ್ಗೆ ಸೈಕಲ್ ಏರಿ ಹೊಅಟು, ನಗರದ ನಾಲ್ಕು ಪೋಲೀಸ್ ಠಾಣೆಗಳಿಗೆ ಭೇಟಿ ಕೊಟ್ಟು ‘ಅಪರಾಧ ವಾರ್ತೆ’ಗಳನ್ನು ಸಂಗ್ರಹಿಸಿ ತಂದು, ಒಂದನೆ ಪುಟದ ಮೊಳೆ ಜೋಡಿಸಿ – ಮುದ್ರಿಸಿದ ಪತ್ರಿಕೆಯ ಪ್ರತಿಗಳನ್ನು ಬೇರೆ ಬೇರೆ ಕಡೆಯ ‘ಸ್ಟಾಲ್’ ಗಳಿಗೆ ಹಂಚಿಬರುತ್ತಿದ್ದೆ. ಹತ್ತು ನಿಮಿಷ ವಿಶ್ರಾಂತಿ ಪಡೆದು ಮರುದಿನದ ಪತ್ರಿಕೆಯ ಹಿಂದಿನ ಮೊಳೆ ಜೋಡಿಸಿ ಆ ಪುಟವನ್ನು ಸಂಜೆಯ ಮೊದಲು ಮುದ್ರಿಸಿ ಇಡುತ್ತಿದ್ದೆ.
 
ಸುದ್ದಿಗಳನ್ನು ಬರೆಯುವ ಅಥವಾ ಬರೆದಿದ್ದನ್ನು ಪರಿಷ್ಕರಿಸುವ ಕೆಲಸ ಮಾಡುತ್ತಿರಲಿಲ್ಲ. ಗುರುತು ಹಾಕಿದ್ದ ಕಾಗದವನ್ನು ‘ಕೇಸ್’ ನಲ್ಲಿ ಎದುರಿಗೆ ಇರಿಸಿಕೊಂಡು, ಮೊಳೆ ಜೋಡಿಸುತ್ತಾ ‘ಸಂಪಾದಕನ ಕಾರ್ಯ’ ನಡೆಸುತ್ತಿದ್ದೆ.
 
ಸ್ಟಾಲ್ ಮಾರಾಟದ ಪ್ರತಿಗಳ ಸಂಖ್ಯೆ ಹೆಚ್ಚಿಸುವ ಮೂಲ ಚೈತನ್ಯಕ್ಕೆ ಬೇಕಾಗುವಷ್ಟು ಜಾಹಿರಾತು ಬೆಂಬಲ ಗಳಿಸುವ ಮತ್ತು ಒಂದು ವಾರಕ್ಕಾದರೂ ಮುದ್ರಣ ಕಾಗದ ಸಂಗ್ರಹ ಮಾಡಿಟ್ಟುಕೊಳ್ಳುವ ವ್ಯವಸ್ಥೆ ನನ್ನಿಂದ ಸಾಧ್ಯವಾಗುತ್ತಿರಲಿಲ್ಲ. ಅದಕ್ಕಾಗಿ ಮಾಡಿದ ಸೈಕಲ್ ಸಂಚಾರ ದೇಹಾರೋಗ್ಯದ ಮೇಲೆ ಪರಿಣಾಮ ಬೀರುತ್ತಿತ್ತು.
 
ಇವೆಲ್ಲ ಕೊರತೆಗಳಿಗೂ ನನ್ನ ‘ವ್ಯವಹಾರ ಪರಿಣತಿಯ ಅಭಾವವೇ ಕಾರಣ’ವೆಂಬ ತಿಳುವಳಿಕೆ ಮೂಡಿದಾಗ ಹೊತ್ತು ಮೀರಿತ್ತು. ಕೆಲವು ತಿಂಗಳುಗಳೇ ಸಂದಿದ್ದವು.
 
ಆ ಸಮಯದಲ್ಲೇ – ಕೆಲಸದ ಉರುಳುಗೋಲಕವೂ – ಲೋಹದಲ್ಲಿ ಮಾಡಿರಬೇಕಾಗಿದ್ದ ಹಲವು ಬಿಡಿಭಾಗಗಳಿಗೆ ಮರ ಮತ್ತು ಇತರ ವಸ್ತುಗಳನ್ನು ಉಪಯೋಗಿಸಿದ್ದರಿಂದ ತೊಂದರೆ ಕೊಡತೊಡಗಿತು. ಪುಟಗಳನ್ನು ಮುದ್ರಿಸುವಾಗ ಕೆಟ್ಟುಹೋಗುವ ಕಾಗದದ ಸಂಖ್ಯೆ ಹೆಚ್ಚುತ್ತಾ ಹೋಯಿತು.
 
ಅಷ್ಟು ಹೊತ್ತಿಗೆ, ನನ್ನಿಂದ ‘ತಿಂಗಳ ಬಡ್ಡಿ’ ಪಡೆಯುತ್ತಿದ್ದ ಪರಿಚಿತರು ತಮಗೆ ಬರಬೇಕಾಗಿದ್ದ ‘ಅಸಲು ಬಾಕಿ’ಯನ್ನು ಮನ್ನಾ ಮಾಡಿದ ರಿಯಾಯಿತಿ ತೋರಿದದ್ದು ಏಕಮಾತ್ರ ‘ಪ್ರಸರಣ ವ್ಯವಸ್ಥೆ’  ನಿರ್ವಹಿಸುತ್ತಿದ್ದ ಪತ್ನಿಯ ಪರಿಶ್ರಮದಿಂದಾಗಿ 500ರೂ.ಗಳ ಬ್ಯಾಂಕ್ ಸಾಲದ ಮಂಜೂರಾತಿಯೂ ಆಗಿತ್ತು.
 
ಆದರೆ ಅವೆರಡೂ ಸೌಲಭ್ಯಗಳೂ ನನ್ನ ಸಮಸ್ಯೆಗಳನ್ನು ಪರಿಹರಿಸಲು ಸಹಾಯಕವಾಗಲಿಲ್ಲ.
 
ಹದಗೆಟ್ಟ ಪರಿಸ್ಥಿತಿ ಪರಾಕಾಷ್ಠೆಗೆ ಮುಟ್ಟಿದ ದಿನ ಒಂದು ಹೊತ್ತಿನಲ್ಲಿ (ಮಾನಸಿಕ ದೌರ್ಬಲ್ಯವು ಶರೀರದ ಮೇಲೆ ಪರಿಣಾಮ ಬೀರಿದ್ದರಿಂದಲೇ ಇರಬೇಕು.) ಮೊಳೆಗಳನ್ನು ಹೆಕ್ಕಿಸ್ಟಿಕ್ ಗೆ ಇಳಿಸಲೆಂದು ಮೆಲೆತ್ತಿದ್ದ ಬಲಗೈಯನ್ನು ಕೆಳಕ್ಕೆ ಇಳಿಸಲು ಆಗಲೇ ಇಲ್ಲ. ಮೊಣಗಂಟಿನ ಚಲನೆ ಹಲವು ನಿಮಿಷಗಳ ಕಾಲ ನಿಂತೇ ಹೋಯಿತು.
 
ಇದ್ದಕ್ಕಿದ್ದಂತೆ “ಸಾತೀ, ಪೇಪರ್ ನಿಲ್ಲಿಸುತ್ತೇನೆ !” ಎಂದು ಬೊಬ್ಬೆ ಹೊಡೆದಾಗ ಓಡಿ ಬಂದ ಪತ್ನಿಯ “ಅರ್ಧ ಮಾಡಿಟ್ಟ ಕೆಲಸವನ್ನಾದರೂ ಪೂರ್ಣಮಾಡಿ. ಇಂದಿನ ಪತ್ರಿಕೆಯನ್ನು ಹೊರಡಿಸಿ. ನಾಳೆಗೆ ನಿಲ್ಲಿಸೋಣ”ವೆಂಬ ಬೇಡಿಕೆಯನ್ನೂ ಅಲ್ಲಗಳೆದು, ‘ಕೇಸ್’ ನಿಂದ ಹಿಂದೆ ಸರಿದೆ. ಆಗ, ಬಲಗೈ ಕೆಳಗಿಳಿಯಿತು. ಎಡಗೈಯಲ್ಲಿ ಹಿಡಿದಿದ್ದ ‘ಸ್ಟಿಕ್’ (ಮೊಳೆಗಳ ಸಹಿತ) ಕೆಳಗೆ ಬಿದ್ದಿತು.
 
ಯಾವ ಸೂಚನೆಯನ್ನೂ ಕೊಡದೆ ವಾರ್ತಾಲೋಕದ ಪ್ರಕಟಣೆ ನಿಂತುಹೋಯಿತು.
 
ಪತ್ರಿಕೆಯ ಮಾಲಿಕನಾಗಿ ಬದುಕುವ ಕನಸನ್ನು ಇನ್ನು ಮುಂದೆ ಕಾಣಬಾರದು ಎಂದುಕೊಂಡೆ. ಮಸಿಹಿಡಿದಿದ್ದ ಕೈಯನ್ನೂ ಸರಿಯಾಗಿ ತೊಳೆಯದೆ, ಉರುಳಿಸಿದ್ದ ಚಾಪೆಯಲ್ಲಿ ಮಲಗಿದೆ.
 
ಆ ನಿರ್ಧಾರ ತಂದುಕೊಟ್ಟ ‘ಶಾಂತಿ’ಯ ಪರಿಣಾಮವೋ ಏನೋ, ಕೆಲವೇ ನಿಮಿಷಗಳಲ್ಲಿ ನಿದ್ರೆಗೆ ಒಳಗಾದೆ. (ಮರುದಿನ ಬೆಳಗಿನವರೆಗೂ ನಿದ್ರೆಯ ‘ಸುಖ’ ಅನುಭವಿಸಿದೆ.)
 
ಎಂದಿನ ಅಭ್ಯಾಸದಂತೆ, ಪತ್ರಿಕೆಯ ವಿತರಣೆಯ ಹೊತ್ತಿಗೆ ಜೊತೆಯಾಗಿ ಹೊರಡುತ್ತಿದ್ದ ಕಿರಿಮಗನ “ಹೊರಡೋಣವೇ ಅಮ್ಮ!” ಎಂಬ ಅವಸರಕ್ಕೆ “ಪೇಪರ್ ಇನ್ನು ಇಲ್ಲ ಮಗಾ” ಎಂದು ಅವನ ತಾಯಿ ಹೇಳಿದುದು ಎಲ್ಲೋ ದೂರದಿಂದ ಒಮ್ಮೆ ಕೇಳಿ ಬಂದಂತಾಗಿತ್ತು.
 
ನಿದ್ದೆಯಲ್ಲೇ ಪಡೆದಿದ್ದ ಮನೋವಿಶ್ರಾಂತಿ, ಮಾರನೆಯ ದಿನದಿಂದ ತೊಡಗಿದ್ದ ‘ಮುಕ್ತಾಯ ಚಟುವಟಿಕೆ’ಗಳಿಗೆ ಬಹಳಷ್ಟು ಸಹಾಯಕವಾಯಿತು.
 
ಹೆಚ್ಚು ಅವಸರ ಮಾಡದೆ, ಕಳೆದು ಹೋಗುತ್ತಿದ್ದ ದಿನಗಳ ಪರಿವೆಯೂ ಇಲ್ಲದೆ, ಸಂಬಂಧಿಸಿದವರನ್ನೆಲ್ಲಾ ಭೇಟಿಯಾಗಿ ಪತ್ರಿಕೆಯನ್ನು ನಿಲ್ಲಿಸಿರುವ ಸುದ್ದಿಯನ್ನು ಅವರುಗೆ ತಿಳಿಸಲು ಹೊರಟೆ.
 
ಮೊದಲನೆಯದಾಗಿ ‘ಸಾಂಕೇತಿಕ ಸಹಾಯ’ವನ್ನು (ವೈಯಕ್ತಿಕ ಸಹಾನುಭೂತಿಯ ಕಾರಣ) ನನ್ನ ಪತ್ರಿಕೆಗೂ ವಿಸ್ತರಿಸಿದ್ದ ಚಿತ್ರಮಂದಿರಗಳ ಆಡಳಿತಗಾರರನ್ನು ಭೇಟಿಮಾಡಿದೆ. ಅವರ ‘ಅನುಕಂಪಭರಿತ ವಿಷಾದ’ದ ನುಡಿಗಳನ್ನೂ ಕೇಳಿದೆ.
 
ಪತ್ರಿಕೆಯನ್ನು ಮಾರುತ್ತಿದ್ದ ಎಲ್ಲಾ 13 ಸ್ಟಾಲ್ ಗಳ ಒಡೆಯರ ಭೇಟಿ ಅನಂತರದ ದಿನಗಳದ್ದು. ಅವರಾರಿಗೂ ಪತ್ರಿಕೆಯ ಬಗ್ಗೆ ಹೆಚ್ಚಿನ ಆಸಕ್ತಿ ಮೊದಲಿನಿಂದಲೂ ಇರಲಿಲ್ಲ. ಹಾಗಾಗಿ ಅವರೊಂದಿಗಿನ ‘ವಿದಾಯ – ಸಂದರ್ಶನ’ವೂ ಔಪಚಾರಿಕ ಮಾತುಕತೆಗಳಲ್ಲೇ ಮುಗಿದಿತ್ತು. ಅವರಲ್ಲೊಬ್ಬರು ಮಾತ್ರ ನನ್ನ ಲೋಪಗಳನ್ನು ವಿಶ್ಲೇಷಿಸಿ ಅನುಸರಿಸಬಹುದಾಗಿದ್ದ ಪರ್ಯಾಯ ಮಾರ್ಗಗಳನ್ನು ಸೂಚಿಸುವ ಮನಸ್ಸು ಮಾಡಿದ್ದರು.
 
 ಅವೆರಡು ಕಾರಣಗಳಿಗಾಗಿ ನಗರದ ಸುತ್ತಾಟ ನಡೆಸುತ್ತಿದ್ದಾಗ ಒಂದು ದಿನ ಹಂಪನಕಟ್ಟೆಯ (ತಮ್ಮ) ಕುಟುಂಬದ ಒಂದು ಸಂಸ್ಥೆಯ ಶೋ ರೂಮ್ ನಿಂದ ಸಂಜೀವ ಕುಡ್ವರು ಹೊರಗೆ ಬಂದು ಅವರ ಕಾರಿನಲ್ಲಿ ಕುಳಿತುದನ್ನು ನೋಡಿದೆ.
 
ಇವರು ಯಾವಾಗಿನಿಂದ ಹೊತ್ತಿಗೆ ಮೊದಲೇ ನಗರ ಸಂಚಾರ ಮಾಡತೊಡಗಿದರೆಂದು ತಿಳಿಯುವ ಕುತೂಹಲ ಮೂಡಿತು. ಶೋ ರೂಮ್ ನ ಕಾವಲುಗಾರನನ್ನು ಮೆಲ್ಲನೆ ಮಾತಿಗೆಳೆದು ವಿಚಾರಿಸಿದಾಗ, ಅವರು ಆ ಸಂಸ್ಥೆಯ ಕಾರ್ಯಭಾರಗಳನ್ನೂ ಇತ್ತೀಚೆಗೆ ಆಸಕ್ತಿ ವಹಿಸಿದ್ದು, ಪ್ರತಿದಿನವೂ ಸಂಜೆ ಒಂದಷ್ಟು ಸಮಯವನ್ನು ಅಲ್ಲೆ ಕಳೆಯುತ್ತಿದ್ದಾರೆ ಎಂದು ಗೊತ್ತಾಯಿತು.
 
ಹಂಪನಕಟ್ಟೆಯಿಂದ ಮನೆಗೆ ಬಂದು ಮುಟ್ಟುವ ಮೊದಲು ‘ನವಭಾರತದಲ್ಲಿ ಇನ್ನೊಮ್ಮೆ ನೌಕರಿ ಕೊಡುವಿರಾ?” ಎಂದು ಸಂಜೀವ ಕುಡ್ವರನ್ನು ಕೇಳಿ ನೋಡಬೇಕು ಎಂದು ತೀರ್ಮಾನಿಸಿದ್ದೆ.
 
ಅಂತೆ, ಮರುದಿನ, ಹಂಪನಕಟ್ಟೆಯಲ್ಲಿ ಸಮಯ ಕಾದು, ಆ ಪ್ರಶ್ನೆಯನ್ನೂ ಅವರಲ್ಲಿ ಎತ್ತಿದೆ.
 
ಅವರು “ಯಾಕೆ? ನಿಮ್ಮ ಸ್ವಂತದ ಪೇಪರ್ ಇತ್ತಲ್ಲ ? ಏನಾಯಿತು?” ಎಂದಾಗ _   
 
“ಇತ್ತು. ಆದರೆ ಅದನ್ನು ನಡೆಸಿಕೊಂಡು ಹೋಗುವ ಚೈತನ್ಯ ಒದಗಿ ಬರಲಿಲ್ಲ. ಪೇಪರ್ ನಿಲ್ಲಿಸಿದ್ದೇನೆ” ಎಂದೆ.
 
“ಯಾವುದಕ್ಕೂ ನೀವು ನಾಡಿದ್ದು ಬನ್ನಿ, ನೋಡೋಣ” ಎಂದರು.
 
ಅವರಂದಂತೆ, ಎರಡನೆಯ ಬಾರಿ ಅವರನ್ನು ಕಂಡು, ನನಗೆ ಕೊಡಬಹುದಾಗಿದ್ದ ಕೆಲಸದ ಬಗ್ಗೆ ಅವರಲ್ಲಿ ಮೂಡಿದ ಗೊಂದಲವನ್ನು ನಿವಾರಿಸಿ ಪಿ.ಟಿ.ಐ.ವರದಿಗಳ ಅನುವಾದ ಕಾರ್ಯಕ್ಕೆ ನನ್ನನ್ನು ಉಪಯೋಗಿಸಿಕೊಳ್ಳಲು ಒಪ್ಪಿಸಿದೆ. ‘ನಾಳೆಯಿಂದ ಬಾ’ ಎಂಬ ಆದೇಶದ ಪ್ರಕಾರ ಮರುದಿನ ನವಭಾರತದ ಮರುಪ್ರವೇಶ ಮಾಡಿದೆ.
 
 
(ಮುಂದಿನ ಭಾಗದಲ್ಲಿ)
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು

About the Author

Bantwal News
2016 ನವೆಂಬರ್ 10ರಂದು ಆರಂಭಗೊಂಡ ಬಂಟ್ವಾಳದ ಮೊದಲ ವೆಬ್ ಪತ್ರಿಕೆ ಇದು. 17 ಲಕ್ಷಕ್ಕಿಂತಲೂ ಅಧಿಕ ಮಂದಿ ಕೇವಲ 30 ತಿಂಗಳಲ್ಲೇ ಓದಿದ ಜಾಲತಾಣವಿದು. ಸಂಪಾದಕ: ಹರೀಶ ಮಾಂಬಾಡಿ. ಬ್ರೇಕಿಂಗ್ ನ್ಯೂಸ್ ಧಾವಂತದಲ್ಲಿ ಅವಸರದ ಸುದ್ದಿ ಕೊಡದೆ, ಮಾಹಿತಿ ಖಚಿತಗೊಂಡ ಬಳಿಕವಷ್ಟೇ ಪ್ರಕಟಿಸಲಾಗುತ್ತದೆ. ಅತಿರಂಜಿತ ಸುದ್ದಿ ಇಲ್ಲಿಲ್ಲ. ಇದು www.bantwalnews.com ಧ್ಯೇಯ.

Be the first to comment on "ವಿಶೇಷ ಸೃಷ್ಟಿಗಳ ಲೋಕದಲ್ಲಿ -ಅಂಕಣ 24: ನವಭಾರತದ ಮರುಪ್ರವೇಶ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*