ಪುತ್ತೂರು ತಾಲೂಕಿನ ಚಿಕ್ಕಮುಡ್ನೂರು ಗ್ರಾಮದ ತಾರಿಗುಡ್ಡೆ ನಿವಾಸಿ ಅನ್ವರ್ ಆಲಿ (36), ಸಾಲ್ಮಾರ ಮೌಂಟನ್ ವ್ಯೂ ಶಾಲಾ ಬಳಿ ಸಮೀಪದ ನಿವಾಸಿ ಮಹಮ್ಮದ್ ಇರ್ಫಾನ್ (19) ಎಂಬಿಬ್ಬರನ್ನು ಕಂಬಳಬೆಟ್ಟು ಸಮೀಪ ವಿಟ್ಲ ಪೊಲೀಸರು ಬಂಧಿಸಿದ್ದಾರೆ.
ಇವರು ಕಳೆದ ಮೂರು ವರ್ಷಗಳಿಂದ ವಿಟ್ಲ ಆಸುಪಾಸಿನಲ್ಲಿ ಅಡಕೆ, ಗೇರುಬೀಜ ಕಳ್ಳತನ ಮಾಡುತ್ತಿದ್ದರು ಎಂದು ತಿಳಿಸಿರುವ ಪೊಲೀಸರು ಅವರಿಂದ 6 ಕ್ವಿಂಟಾಲ್ ಅಡಿಕೆ, 3 ಕ್ವಿಂಟಾಲ್ ಗೇರು ಬೀಜ, ಕಾರು, ಓಮ್ನಿ, ಎರಡು ಅಟೋ ರಿಕ್ಷಾವನ್ನು ವಶಕ್ಕೆ ಪಡೆದರು.
ಎರಡು ತಿಂಗಳ ಅವಧಿಯಲ್ಲಿ ಕೇಪು, ಕೋಡಪದವು, ನೇರಳಕಟ್ಟೆ, ಸೂರ್ಯ ಭಾಗದಲ್ಲಿ ಅಡಿಕೆ ಹಾಗೂ ಗೇರುಬೀಜ ಕಳ್ಳತನ ಪ್ರಕರಣವಾಗಿತ್ತು. 2015ರಲ್ಲಿ ಸೂರಿಕುಮೇರಿ, ಮಾಣಿ, ಬುಡೋಳಿ ಭಾಗದಲ್ಲಿ ಸುಮಾರು 20ಲಕ್ಷ ಮೌಲ್ಯದ ಅಡಿಕೆ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದರು. 2016ರಲ್ಲಿ ಕುಡ್ತಮುಗೇರು, ವಿಟ್ಲಪಡ್ನೂರಿನ ಕೆಲವು ಭಾಗದಲ್ಲಿ ಸಾಕು ಪ್ರಾಣಿಗಳಿಗೆ ವಿಷ ಉಣಿಸಿ ದಾಸ್ತಾನಿರಿಸಿದ್ದ ಸುಮಾರು 16ಲಕ್ಷದ ಅಡಿಕೆಯನ್ನು ಕಳ್ಳತನ ಮಾಡಿದ ಆರೋಪ ಇವರ ಮೇಲಿದೆ.
ಇವರಿಂದ 6 ಕ್ವಿಂಟಾಲ್ ಅಡಿಕೆ, 3 ಕ್ವಿಂಟಾಲ್ ಗೇರು ಬೀಜವನ್ನು ಹಾಗೂ ಕಳವು ಮಾಡಲು ಉಪಯೋಗಿಸಿದ 1 ಮಾರುತಿ ರಿಡ್ಜ್, 1 ಮಾರುತಿ ಓಮ್ನಿ, 2 ಅಟೋ ರಿಕ್ಷಾಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಇದರ ಒಟ್ಟು ಮೊತ್ತ ಸುಮಾರು 12.50 ಲಕ್ಷ ಎಂದು ಅಂದಾಜಿಸಲಾಗಿದೆ.
ಸೋಮವಾರ ಬೆಳಗ್ಗೆ ವಿಟ್ಲ ಪೊಲೀಸ್ ಉಪನಿರೀಕ್ಷಕರ ನೇತೃತ್ವದ ತಂಡ ಕಂಬಳಬೆಟ್ಟು ಸಮೀಪ ವಾಹನ ತಪಾಸಣೆಯಲ್ಲಿ ತೊಡಗಿದ್ದ ಸಮಯದಲ್ಲಿ ಅಡಕೆಯನ್ನು ತುಂಬಿಕೊಂಡು ಅನುಮಾಸ್ಪದವಾಗಿ ಚಲಾಯಿಸಿಕೊಂಡು ಬಂದ ವಾಹನವನ್ನು ನಿಲ್ಲಿಸಲಾಗಿದೆ. ದಾಖಲೆ ಪರಿಶೀಲನೆ ನಡೆಸುವ ಸಮಯ ವಾಹನದ ಯಾವ ದಾಖಲೆಯೂ ಅವರ ಬಳಿಯಲ್ಲಿರಲಿಲ್ಲ. ವಾಹನದಲ್ಲಿ ಅಡಿಕೆಯನ್ನು ರೈತರಿಂದ ಪಡೆದುಕೊಂಡ ಯಾವ ದಾಖಲೆಯೂ ಇರಲಿಲ್ಲ. ಬಳಿಕ ಅವರನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ ಸಮಯದಲ್ಲಿ ಮೂರು ವರ್ಷಗಳಿಂದ ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ಹಲವು ಅಡಿಕೆ ಹಾಗೂ ಗೇರು ಬೀಜ ಕಳ್ಳತನ ಮಾಡಿರುವ ವಿಚಾರ ಗೊತ್ತಾಯಿತು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೂಷಣ್ ಜಿ ಬೋರಸೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಡಾ. ವೇದಮೂರ್ತಿ, ಬಂಟ್ವಾಳ ಸಹಾಯಕ ಅಧೀಕ್ಷಕ ರವೀಶ್ ಸಿಆರ್ ಮಾರ್ಗದರ್ಶನದಂತೆ ಬಂಟ್ವಾಳ ವೃತ್ತ ನಿರೀಕ್ಷಕ ಮಂಜಯ್ಯ ನೇತೃತ್ವದಲ್ಲಿ ವಿಟ್ಲ ಪೊಲೀಸ್ ಉಪನಿರೀಕ್ಷಕ ನಾಗರಾಜ್ ಹೆಚ್. ಈ., ಸಿಬ್ಬಂದಿಗಳಾದ ಜಯಕುಮಾರ್, ಬಾಲಕೃಷ್ಣ, ಶ್ರೀಧರ್, ಉದಯ್, ಪ್ರವೀಣ್ ರೈ, ರಕ್ಷಿತ್ ರೈ, ರಮೇಶ್, ಪ್ರವೀಣ್ ಕುಮಾರ್, ಲೋಕೇಶ್, ಸತೀಶ್, ಚಾಲಕ ರಘುರಾಮ, ಜಿಲ್ಲಾ ಕಂಪ್ಯೂಟರ್ ವಿಭಾಗದ ಮಂಜುನಾಥ್, ದಿವಾಕರ್ ಬಂಧನ ಕಾರ್ಯಾಚರಣೆಯಲ್ಲಿದ್ದರು.
Be the first to comment on "ಅಡಕೆ, ಗೇರು ಬೀಜ ಚೋರರ ಬಂಧಿಸಿದ ವಿಟ್ಲ ಪೊಲೀಸರು"