ಬೆವರುವ ಬೇಸಗೆ, ನೀರು ಕುಡಿಯಲು ಮರೆಯದಿರಿ

  • ಡಾ. ಮುರಲೀ ಮೋಹನ ಚೂಂತಾರು 

ನಮ್ಮ ದೇಹದ ತೂಕದ ಸುಮಾರು 60 ಶೇಕಡಾದಷ್ಟು ನೀರಿನಾಂಶ ಇದ್ದು, ದೇಹದ ಹೆಚ್ಚಿ ಎಲ್ಲಾ ಜೈವಿಕ ಕ್ರಿಯೆಗಳಿಗೆ ನೀರು ಅತೀ ಅಗತ್ಯ. ಸುಮಾರು 70 ಕೆ.ಜಿ ತೂಕದ ವ್ಯಕ್ತಿಯಲ್ಲಿ ಸರಿಸುಮಾರು 40 ಲೀಟರ್‌ಗಳಷ್ಟು ಅಂದರೆ ದೇಹದ ತೂಕದ 60 ಶೇಕಡಾದಷ್ಟು ನೀರು ಇರುತ್ತದೆ. ನಮ್ಮ ದೇಹದಲ್ಲಿನ ನೀರು ಬೇರೆ ಬೇರೆ  ಕಾರಣಗಳಿಂದ ಬೇರೆ ಬೇರೆ ರೂಪದಲ್ಲಿ (ಬೆವರು, ಮೂತ್ರ ಇತ್ಯಾದಿಯಾಗಿ) ದೇಹದಿಂದ ಹೊರ ಹಾಕಲ್ಪಟ್ಟ ನೀರಿನ ಪ್ರಮಾಣಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಸೇವಿಸುವುದು ಅತೀ ಅಗತ್ಯ. ಈ ಪ್ರಮಾಣದಲ್ಲಿ ಏರುಪೇರು ಉಂಟಾದಲ್ಲಿ ದೇಹದೊಳಗಿನ, ನೀರಿನ ಅಂಶ ಕಡಮೆಯಾದಲ್ಲಿ ಆ ದೈಹಿಕ ಸ್ಥಿತಿಯನ್ನು ನಿರ್ಜಲೀಕರಣ ಅಥವಾ ಆಂಗ್ಲ ಭಾಷೆಯಲ್ಲಿ ಡೀಹೈಡ್ರೇಷನ್ ಎಂದು ಕರೆಯುತ್ತಾರೆ. ಕಾರಣಾಂತರಗಳಿಂದ ನಮ್ಮ ನೀರಿನ ಸೇವನೆಯ ಪ್ರಮಾಣ ಕಡಮೆಯಾದಾಗ ನಿರ್ಜಲೀಕರಣ ಉಂಟಾಗುತ್ತದೆ. ಸರಿಯಾದ ಸುರಕ್ಷಿತ ನೀರಿನ ಕೊರತೆ, ಕೆಲಸದೊತ್ತಡದಿಂದ ನೀರು ಸೇವಿಸದಿರುವುದು, ಪ್ರಯಾಣದ ಸಂದರ್ಭದಲ್ಲಿ ಸುರಕ್ಷಿತ ನೀರಿನ ಅಲಭ್ಯತೆ, ಅಸೌಖ್ಯದಿಂದಾಗಿ ನೀರು ಸೇವಿಸದಿರುವುದು ಅಥವಾ ಇನ್ನಾವುದೇ ಕಾರಣದಿಂದ ನೀರಿನ ಸೇವನೆ ಕಡಮೆಯಾದಲ್ಲಿ ನಿರ್ಜಲೀಕರಣ ಉಂಟಾಗಬಹುದು. ನಮ್ಮ ದೇಹಕ್ಕೆ ಪ್ರತಿದಿನ ಕನಿಷ್ಠ ಪಕ್ಷ ಸುಮಾರು 3 ರಿಂದ 4 ಲೀಟರ್ ನೀರಿನ ಅವಶ್ಯಕತೆ ಇರುತ್ತದೆ. ದಿನಕ್ಕೆ ನೀವು ಇಂತಿಷ್ಟೇ ನೀರು ಕುಡಿಯಬೇಕು ಎಂದು ನಿಖರವಾಗಿ ಹೇಳಲು ಕಷ್ಟವಾಗಬಹುದು, ಯಾಕೆಂದರೆ ಒಬ್ಬ ವ್ಯಕ್ತಿಯ ದೈನಂದಿನ ನೀರಿನ ಅವಶ್ಯಕತೆ ಆತನ ವಯಸ್ಸು, ಶರೀರದ ಗಾತ್ರ, ತೂಕ, ಆರೋಗ್ಯ ಮತ್ತು ಹವಾಮಾನ ಮುಂತಾದ ಅಂಶಗಳಿಗೆ ನೇರವಾಗಿ ಸಂಬಂಧ ಹೊಂದಿರುತ್ತದೆ. ಸಾಮಾನ್ಯವಾಗಿ ಆರೋಗ್ಯವಂಥ 40 ಕೆ.ಜಿ. ತೂಕದ ಮಧ್ಯ ವಯಸ್ಕ ಮನುಷ್ಯರಿಗೆ ಸುಮಾರು 3 ರಿಂದ 4 ಲೀಟರ್ ನೀರಿನ ಅವಶ್ಯಕತೆ ಹೆಚ್ಚಾಗಬಹುದು ಮತ್ತು ಚಳಿಗಾಲದಲ್ಲಿ ನೀರಿನ ಅವಶ್ಯಕತೆ ಕಡಮೆಯಾಗಬಹುದು. ಒಟ್ಟಿನಲ್ಲಿ ನಮ್ಮ ದೇಹದ ಎಲ್ಲಾ ಜೈವಿಕ ಕ್ರಿಯೆಗಳಿಗೆ ಮತ್ತು ನಮ್ಮ ದೇಹದ ಆರೋಗ್ಯವನ್ನು ಸಮತೋಲನದಲ್ಲಿ ಇಟ್ಟುಗೊಳ್ಳಲು ಸುರಕ್ಷಿತವಾದ ನೀರನ್ನು ಸೂಕ್ತ ಪ್ರಮಾಣದಲ್ಲಿ ಸೇವಿಸುವುದು ಅತೀ ಅನಿವಾರ್ಯ.

ನಿರ್ಜಲೀಕರಣ ಯಾಕಾಗಿ ಆಗುತ್ತದೆ :-

 ಬೇಸಗೆಯ ವಾತಾವರಣದಲ್ಲಿ ತಾಪಮಾನ ಜಾಸ್ತಿಯಾಗಿ ವಿಪರೀತ ಬೆವರುವಿಕೆಯಿಂದಾಗಿ ದೇಹದ ನೀರಿನಾಂಶ ಮತ್ತು ಲವಣಾಂಶ ನಷ್ಟವಾಗಿ, ನಿರ್ಜಲೀಕರಣ ಉಂಟಾಗುತ್ತದೆ. ಸಮುದ್ರ ಮಟ್ಟದಲ್ಲಿರುವ ಕರಾವಳಿಯ ಪ್ರದೇಶಗಳಲ್ಲಿ ವಾತಾವರಣದ ತಾಪಮಾನ ಹೆಚ್ಚಾಗಿರುವುದರ ಜೊತೆಗೆ ಲವಣದ ಸಾಂದ್ರತೆಯೂ ಹೆಚ್ಚಾಗಿ ಇರುವುದರಿಂದ ದೇಹದಿಂದ ನೀರಿನ ನಷ್ಟವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

 ಕೆಪೇನ್ ಪದಾರ್ಥಗಳಾದ ಕಾಫಿ, ಟೀ, ಚಾಕೊಲೇಟ್‌ಗಳ ಅತಿಯಾದ ಸೇವನೆ.