ತಾಲೂಕು ಸಾಹಿತ್ಯ ಸಮ್ಮೇಳನಕ್ಕೆ ಇಪ್ಪತ್ತೈದು ವರ್ಷಗಳ ಇತಿಹಾಸ

  • ಹರೀಶ ಮಾಂಬಾಡಿ

ಬಂಟ್ವಾಳ  ತಾಲೂಕು ಮಟ್ಟದ ಮೊದಲನೇ ಸಮ್ಮೇಳನ ನಡೆದದ್ದು ೧೯೯೨ರ ಏಪ್ರಿಲ್ ೫ರಂದು ನರಹರಿ ಪರ್ವತದಲ್ಲಿ. ಆಗ ಅಧ್ಯಕ್ಷರಾಗಿದ್ದುದು ಪಡಾರು ಮಹಾಬಲೇಶ್ವರ ಭಟ್ಟ. ತಂಪಾದ ಗಾಳಿ, ಬೆಟ್ಟದ ತುದಿಯಲ್ಲಿ ಸಾಹಿತ್ಯದೌತಣ ಅಂದು ಸೇರಿದ್ದವರನ್ನು ಹೊಸ ದಿಕ್ಕಿಗೆ ಒಯ್ದಿತ್ತು.
ಅದಾಗಿ ಎರಡು ವರ್ಷಗಳಲ್ಲಿ ಹಿರಿಯ ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ ಅಧ್ಯಕ್ಷತೆಯಲ್ಲಿ ಎರಡನೇ ಸಮ್ಮೇಳನ ನಡೆಯಿತು. ಈಗ ೧೭ನೇ ಸಮ್ಮೇಳನ ಉದ್ಘಾಟಕರೂ ಅವರೇ. ಬಂಟ್ವಾಳ ಶ್ರೀ ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪದಲ್ಲಿ ೧೯೯೪ರಂದು ಈ ನುಡಿಹಬ್ಬ ನಡೆದಿತ್ತು.
ಕನ್ನಡದ ಕಲ್ಹಣ ಎಂದೇ ಖ್ಯಾತರಾಗಿದ್ದ ನೀರ್ಪಾಜೆ ಭೀಮ ಭಟ್ಟ ಅಧ್ಯಕ್ಷತೆಯಲ್ಲಿ ೩ನೇ ಸಾಹಿತ್ಯ ಸಮ್ಮೇಳನ ಸತ್ಯಸಾಯಿ ವಿಹಾರ ಅಳಿಕೆಯಲ್ಲಿ ೧೯೯೫ರಲ್ಲಿ ನಡೆದರೆ, ಶಿರಂಕಲ್ಲು ಈಶ್ವರ ಭಟ್ಟ ಅಧ್ಯಕ್ಷತೆಯಲ್ಲ ನಾಲ್ಕನೇ ಸಮ್ಮೇಳನ ೧೯೯೬ರಲ್ಲಿ ವಿಟ್ಲ ಪಂಚಲಿಂಗೇಶ್ವರ ಸನ್ನಿಧಿಯಲ್ಲಿ ನಡೆಯಿತು. ೫ನೇ ಸಮ್ಮೇಳನ ಕವಿ ಗಣಪತಿ ದಿವಾಣ ಅಧ್ಯಕ್ಷತೆಯಲ್ಲಿ ೧೯೯೭ರಲ್ಲಿ ಕಾರಿಂಜೇಶ್ವರ ಸನ್ನಿಧಿಯಲ್ಲಿ ನಡೆಯಿತು. ಇರಾ ಶಾಲಾ ವಠಾರದಲ್ಲಿ ೬ನೇ ಸಾಹಿತ್ಯ ಸಮ್ಮೇಳನ ಕೈಂತಜೆ ನರಸಿಂಹ ಭಟ್ಟರ ಅಧ್ಯಕ್ಷತೆಯಲ್ಲಿ ೧೯೯೮ರಲ್ಲಿ ಸಂಪನ್ನಗೊಂಡಿತು.
೭ನೇ ಸಾಹಿತ್ಯ ಸಮ್ಮೆಳನ ಪತ್ರಕರ್ತ, ಸಾಹಿತಿ ವಿ.ಬಿ.ಹೊಸಮನೆ ಅಧ್ಯಕ್ಷತೆಯಲ್ಲಿ ಉಳಿ ಶ್ರೀ ಪಂಚದುರ್ಗಾ ದೇವಸ್ಥಾನದಲ್ಲಿ ೧೯೯೯ರಲ್ಲಿ ನಡೆದರೆ, ೮ನೇಯದ್ದು ಏರ್ಯ ಚಂದ್ರಭಾಗಿ ರೈ ಅಧ್ಯಕ್ಷತೆಯಲ್ಲಿ ಮುಡಿಪು ಗೋಪಾಲಕೃಷ್ಣ ಸಭಾಭವನದಲ್ಲಿ ೨೦೦೧ರಲ್ಲಿ ನಡೆದಿತ್ತು. ೨೦೦೨ರಲ್ಲಿ ಕವಿ, ಸಾಹಿತಿ, ವಿಮರ್ಶಕ ವಿ.ಗ.ನಾಯಕ ಅಧ್ಯಕ್ಷತೆಯಲ್ಲಿ ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದಲ್ಲಿ ೯ನೇ ಸಾಹಿತ್ಯ ಸಮ್ಮೇಳನ ನಡೆಯಿತು.
೧೦ನೇ ಸಾಹಿತ್ಯ ಸಮ್ಮೇಳನ ಕಥೆಗಾರ್ತಿ ಗಂಗಾ ಪಾದೇಕಲ್ ಅಧ್ಯಕ್ಷತೆಯಲ್ಲಿ ಕನ್ಯಾನ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ೨೦೦೩ರಲ್ಲಿ ನಡೆದರೆ, ೧೧ನೇಯದ್ದು ಅಂಶುಮಾಲಿ ಅಧ್ಯಕ್ಷತೆಯಲ್ಲಿ ಪಾಂಗಲ್ಪಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ವಠಾರದಲ್ಲಿ ೨೦೦೪ರಲ್ಲಿ ನಡೆಯಿತು.
ನಂದಾವರದಲ್ಲಿ ೨೦೦೬ರಲ್ಲಿ ಎರಡು ದಿನಗಳ ಕಾಲ ಅದ್ದೂರಿಯಾಗಿ ಸಾಹಿತ್ಯ ಸಮ್ಮೇಳನ ನಡೆಯಿತು. ಫೆ.೧೧, ೧೨ರಂದು ನಡೆದ ಆ ಸಮ್ಮೇಳನದ ಅಧ್ಯಕ್ಷತೆಯನ್ನು ಡಾ.ವಾಮನ ನಂದಾವರ ವಹಿಸಿದ್ದರು. ೧೩ನೇ ಸಾಹಿತ್ಯ ಸಮ್ಮೇಳನ ವಿದ್ವಾಂಸ ಪಾದೇಕಲ್ಲು ನರಸಿಂಹ ಭಟ್ಟ ಅಧ್ಯಕ್ಷತೆಯಲ್ಲಿ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ೨೦೦೯ರಲ್ಲಿ ನಡೆದರೆ, ಸರಪಾಡಿಯಲ್ಲಿ ೨೦೧೧ರಲ್ಲಿ ಶಿಕ್ಷಣ ತಜ್ಞ ಸಿ.ಎಚ್.ಕೃಷ್ಣ ಶಾಸ್ತ್ರೀ ಬಾಳಿಲ ಅಧ್ಯಕ್ಷತೆಯಲ್ಲಿ ೧೪ನೇ ಸಮ್ಮೇಳನ ನಡೆಯಿತು. ೧೫ನೇ ಸಾಹಿತ್ಯ ಸಮ್ಮೇಳನ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ ಅಧ್ಯಕ್ಷತೆಯಲ್ಲಿ ಕಲ್ಲಡ್ಕ ಉಮಾಶಿವ ಕ್ಷೇತ್ರ ದಲ್ಲಿ ೨೦೧೨ರಂದು ನಡೆದರೆ, ಡಾ. ಚಿನ್ನಪ್ಪ ಗೌಡ ಅಧ್ಯಕ್ಷತೆಯಲ್ಲಿ ೨೦೧೪ರಲ್ಲಿ ೧೬ನೇ ಸಾಹಿತ್ಯ ಸಮ್ಮೇಳನ ನಡೆಯಿತು. ಇದೀಗ ಮೂರು ವರ್ಷಗಳ ಬಳಿಕ ಸಿದ್ಧಕಟ್ಟೆಯಲ್ಲಿ ಡಾ.ಪುಂಡಿಕಾಯಿ ಗಣಪಯ್ಯ ಭಟ್ ಅಧ್ಯಕ್ಷತೆಯಲ್ಲಿ ಸಮ್ಮೇಳನ ನಡೆಯುತ್ತಿದೆ.
ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿಗೆ ನಾಲ್ಕು ಜಿಲ್ಲಾ ಸಮ್ಮೇಳನ ನಡೆಸಿದ ಹೆಗ್ಗಳಿಕೆಯೂ ಇದೆ. ನೀರ್ಪಾಜೆ ಭೀಮ ಭಟ್ಟ ಅಧ್ಯಕ್ಷತೆಯಲ್ಲಿ ೨೦೦೦ನೇ ಇಸವಿಯಲ್ಲಿ ಮೊಡಂಕಾಪಿನಲ್ಲಿ ನಡೆದ ಜಿಲ್ಲಾ ಸಮ್ಮೇಳನದ ಸಂದರ್ಭವೇ ಕನ್ನಡ ಭವನಕ್ಕೆ ಶಂಕುಸ್ಥಾಪನೆ ನಡೆದದ್ದನ್ನು ಇಲ್ಲಿ ನೆನಪಿಸಬಹುದು. ಬಳಿಕ ಬಂಟ್ವಾಳ ಶ್ರೀ ಮಂಜುನಾಥೇಶ್ವರ ಸಭಾಭವನದಲ್ಲಿ ಏರ್ಯ ಲಕ್ಷ್ಮೀನಾರಾಯಣ ಆಳ್ವ ಅಧ್ಯಕ್ಷತೆಯಲ್ಲಿ ಜಿಲ್ಲಾ ಸಮ್ಮೇಳನ ೨೦೦೪ರಲ್ಲಿ ನಡೆಯಿತು. ಅಳಿಕೆಯಲ್ಲಿ ಡಾ.ತಾಳ್ತಜೆ ವಸಂತ ಕುಮಾರ ಅಧ್ಯಕ್ಷತೆಯಲ್ಲಿ ೨೦೧೧ರಲ್ಲಿ ಜಿಲ್ಲಾ ಸಮ್ಮೇಳನ ನಡೆದರೆ, ಪೊಳಲಿಯಲ್ಲಿ ೨೦೧೪ರಂದು ಕೆ.ಪಿ.ರಾವ್ ಅಧ್ಯಕ್ಷತೆಯಲ್ಲಿ ಜಿಲ್ಲಾ ಸಮ್ಮೇಳನ ನಡೆಯಿತು.
ಉದಯಶಂಕರ ನೀರ್ಪಾಜೆ ತಾಲೂಕು ಅಧ್ಯಕ್ಷರಾಗಿದ್ದಾಗ ಮೂರು ಹೋಬಳಿ ಸಮ್ಮೇಳನಗಳೂ ಇಲ್ಲಿ ನಡೆದಿವೆ. ಅದಾದ ಬಳಿಕ ಹೋಬಳಿ ಸಮ್ಮೇಳನಗಳು ನಡೆದಿಲ್ಲ. ಬಂಟ್ವಾಳ ಎಸ್.ವಿ.ಎಸ್. ಕಾಲೇಜಿನಲ್ಲಿ ರಾಜಮಣಿ ರಾಮಕುಂಜ ಅಧ್ಯಕ್ಷತೆಯಲ್ಲಿ ಬಂಟ್ವಾಳ ಹೋಬಳಿ ಸಮ್ಮೇಳನ ೨೦೦೩ರಲ್ಲಿ ವಿಟ್ಲ ಹೋಬಳಿ ಸಮ್ಮೇಳನ ೨೦೦೩ರಲ್ಲಿ ಮುಳಿಯ ಶಂಕರ ಭಟ್ ಅಧ್ಯಕ್ಷತೆಯಲ್ಲಿ ಹಾಗೂ ಪಾಣೆಮಂಗಳೂರು ಹೋಬಳಿ ಸಮ್ಮೇಳನ ಹಾ.ಮ.ಸತೀಶ ಅಧ್ಯಕ್ಷತೆಯಲ್ಲಿ ಗೋಳ್ತಮಜಲು ಹಿ.ಪ್ರಾ.ಶಾಲೆಯಲ್ಲಿ ನಡೆದಿತ್ತು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Harish Mambady
ಕಳೆದ 26 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.

Be the first to comment on "ತಾಲೂಕು ಸಾಹಿತ್ಯ ಸಮ್ಮೇಳನಕ್ಕೆ ಇಪ್ಪತ್ತೈದು ವರ್ಷಗಳ ಇತಿಹಾಸ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*