ಪರಿಸರ ಉಳಿಸಿದರೆ ದೇವರು ಮೆಚ್ಚುತ್ತಾನೆ

  • ಅನಿತಾ ನರೇಶ್ ಮಂಚಿ

ಯೋಚಿಸುವ ಮನಸ್ಸುಗಳು ನಮ್ಮದಾದಂತೆ  ಅದರೆಡೆಗೆ ನಡೆಯುವ ದಾರಿಯೂ ನಮ್ಮದಾಗಬೇಕು. ಆ ದಾರಿಯಲ್ಲಿ ಉಳಿದವರೂ ಸಾಗುವಂತೆ ಮಾಡುವ ಚೈತನ್ಯವೂ ನಮ್ಮಲ್ಲಿಳಿಯಬೇಕು.

ಜಾಹೀರಾತು
ಏನು ಎರಡು ದಿನದಿಂದ ಕಾಣಿಸ್ಲೇ ಇಲ್ಲ ಕನಕಾಂಗಿ? ಎಲ್ಲಿಯಾದರೂ ಹೋಗಿದ್ರಾ?
 ಇಲ್ಲ ಸರೋಜಮ್ಮಾ, ಮನೆಗೆ ತಮ್ಮ ಮತ್ತು ತಮ್ಮನ ಹೆಂಡತಿ ಬಂದಿದ್ರು. ಹಾಗೇ ಸ್ವಲ್ಪ ನಮ್ಮೂರು ತೋರಿಸೋದು ಅಂತ ಇಲ್ಲಿಯೇ ಕೆಲವು ಕಡೆ ತಿರುಗಾಡಿದೆವಷ್ಟೇ.
 ಹೌದಾ, ಎಲ್ಲೆಲ್ಲಿ ಹೋಗಿದ್ರಿ
ತುಂಬಾ ದೂರ ಏನೂ ಹೋಗಿರ್ಲಿಲ್ಲ.. ನಮ್ಮೂರಿನ ದೊಡ್ಡ ಬೆಟ್ಟದ ಮೇಲಿರೋ ದೇವಸ್ಥಾನ ಇದೆಯಲ್ಲಾ ಅಲ್ಲಿಗೆ ಹೋಗಿದ್ದೆವು.
 ಓಹ್.. ತುಂಬಾ ಚೆಂದದ ಜಾಗ ಅಲ್ವಾ ಅದು. ನಾನು ಹೋಗ್ಬೇಕೊಮ್ಮೆ. ತುಂಬಾ ಸಮಯದಿಂದ ಅಂದುಕೊಂಡಿದ್ದೆ. ಹೋಗಲು ಇನ್ನೂ ಮುಹೂರ್ತ ಕೂಡಿ ಬಂದಿಲ್ಲ. ಅದರ ಮೇಲೆ ನಿಂತ್ರೆ ಇಡೀ ಊರೇ ಕಾಣ್ಸುತ್ತೆ.. ಹಸಿರು ಹಸಿರಿನ ಬೆಟ್ಟಗಳ ಸಾಲು, ನಡುವಿನಲ್ಲೊಂದು ರೈಲಿನ ಮಾರ್ಗ, ಇತ್ತ ಭತ್ತದ ಗದ್ದೆ, ದೂರದ ರಸ್ತೆಯಲ್ಲಿ ಚಲಿಸುವ ವಾಹನಗಳೆಲ್ಲಾ ಇರುವೆ ಸಾಲು ಹೋದಂತೆ ಕಾಣ್ತಾ ಇರುತ್ತಲ್ವಾ.. ಹತ್ತುವ ಮಾರ್ಗವಂತೂ ತುಂಬಾ ಚೆಂದ. ಮರಗಳ ನೆರಳಿನಲ್ಲಿ ನಡೆದದ್ದೇ ಗೊತ್ತಾಗದು. ಅಕ್ಕಪಕ್ಕದ  ದೊಡ್ಡ ದೊಡ್ಡ ಕಪ್ಪು ಬಂಡೆಗಳು ಕಾವಲುಗಾರರಂತೆ ಕಾಣಿಸ್ತವೆ. ಓಹ್.. ನೋಡೋಕೆ ಎರಡು ಕಣ್ಣು ಸಾಲದು.  ನನಗಂತೂ ಈ ವಾರವೇ ಹೋಗ್ಬೇಕು..
 ನಾನು ಹೀಗೆ ಕನಸು ಕಟ್ಟಿಕೊಂಡೇ ಹೋಗಿದ್ದೆ. ಸರೋಜಮ್ಮ, ಆದ್ರೆ ಅಲ್ಲಿ ಅಭಿವೃದ್ಧಿಯ ಹೆಸರಲ್ಲಿ ಬೆಟ್ಟದಲ್ಲಿರುವ ಮರಗಳ, ಬಂಡೆಗಳ ಮಾರಣಹೋಮ ನಡೀತಾ ಇದೆ. ಈಗೇನೋ ನೀರಿರುವ ಕೆರಗಳು ಹಸಿರು ನಾಶವಾದರೆ ನೀರು ಉಳಿಸಿಕೊಂಡಾವೆ?
ಅಯ್ಯೋ, ನಾವು ಮನುಷ್ಯರು ಯಾಕೆ ನಮ್ಮ ಕಾಲಿನ ಮೇಲೇ ಕೊಡಲಿ ಎತ್ತಿ ಹಾಕಿಕೊಳ್ಳುತ್ತೇವೆ? ಸುಂದರವಾದದ್ದನ್ನು ನೋಡಲೆಂದೇ ಹೋಗುತ್ತೇವೆ. ಅದೇ ಸುಂದರತೆಯನ್ನು ನಾಶ ಮಾಡುತ್ತೇವೆ. ಬಹುಷಃ ಇಂತದ್ದು ಮುಂದುವರಿಯುತ್ತಾ ಹೋದರೆ ಕಲಿಗಾಲದ ಕೊನೆ ಬಂದಿದೇ ಎಂತಲೇ ಅರ್ಥವೇನೋ..? ಪ್ರಕೃತಿ ತನ್ನನ್ನು ತಾನು ಉಳಿಸಿಕೊಳ್ಳಬೇಕಾದರೆ ತಾನೇ ಸೃಷ್ಟಿಸಿದ ಈ ಬುದ್ಧಿವಂತ ಜನಾಂಗದ ಅಳಿವಿನಿಂದಷ್ಟೇ ಸಾಧ್ಯ ಆನ್ನುವಂತಹ ಸ್ಥಿತಿಯನ್ನು ನಾವೇಕೆ ತಂದುಕೊಳ್ಳುತ್ತೇವೆ?
ಹೌದು ಸರೋಜಮ್ಮಾ, ಕೇಳುವಾಗ ನಿಮ್ಮ ಮಾತುಗಳು ಕಠೋರ ಅನ್ನಿಸಿದರೂ ವಾಸ್ತವ ಅದೇ ಆಗಿದೆ. ಅಷ್ಟು ಚೆಂದದ ಬೆಟ್ಟವನ್ನು ಅಲ್ಲಿಲ್ಲಿ ಅಗೆದು ತೆಗೆದು ರಾಜ ಮಾರ್ಗದಂತೆ ಮಾಡಿ ನಮ್ಮ ಕೊಳಕನ್ನೆಲ್ಲಾ ಅಲ್ಲಿಗೆತ್ತಿಕೊಂಡು ಹೋಗಿ ಹಾಕಿಬಿಡುತ್ತೇವೆ. ಮಾನವ ಭೂಮಿಗೆ ಮಾರಕನಾಗುತ್ತಾ ಹೋಗುತ್ತಿದ್ದಾನೆ  ಅಲ್ವಾ.. ನನ್ನ ತಮ್ಮ ಮತ್ತು ಅವನ ಹೆಂಡತಿ ಹಳ್ಳಿಯಿಂದ ಬಂದವರು. ಅವರಿಗೂ ಇದನ್ನು ನೋಡಿ ಬಹು ಬೇಸರ ಆಯ್ತು. ಇಲ್ಲಿ ಮರ ಗಿಡಗಳು ಇರುವುದೇ ಇಷ್ಟು ಜಾಗದಲ್ಲಿ ಅದನ್ನು ಕಡಿದು ಗುಂಡಾಂತರ ಮಾಡ್ತಾರಲ್ಲಾ ನಿಮ್ಮೂರಿನವರು ಅಂತಂದ ನೋಡಿ.
ಇದಕ್ಕೇನೂ ಪರಿಹಾರ ಇಲ್ವಾ,
ಪರಿಹಾರ ನಾವು ಕಂಡುಕೊಂಡರೆ ಇಲ್ಲದೇ ಏನು? ಮರ ಕಡಿಯುವುದು  ಅನಿವಾರ್ಯ ಎಂದಾದ್ರೆ ಕಡಿದ ಮರಗಳ ಬದಲಿಗೆ ಒಂದಿಷ್ಟು ಗಿಡ ನೆಟ್ಟು  ಅದು ಬೆಳೆದು ಮರವಾಗಲು ಸಹಾಯ ಮಾಡುವುದೂ ಅಭಿವೃದ್ಧಿಯೇ ಎಂದು ನಮಗೆ ನಾವೇ ಮನದಟ್ಟು ಮಾಡಿಕೊಳ್ಳಬೇಕು. ಇಲ್ಲದೇ ಹೋದರೆ ಮರಗಳಲ್ಲಿ ಮನೆ ಮಾಡುವ  ಹಕ್ಕಿಗಳೆಲ್ಲಾ ಲೈಟ್ ಕಂಬಗಳನ್ನೇ ಮರಗಳು ಎಂದುಕೊಳ್ಳಬೇಕಷ್ಟೇ ಇನ್ನು.
ಹೌದು ನಮಗೆ ದೇವರಿರುವ ಜಾಗಕ್ಕೆ ಹೋಗಲು ಅದರ ಗರ್ಭಗುಡಿಯವರೆಗೆ ರಸ್ತೆ ಬೇಕು ಎನ್ನುವ ಮನಸ್ಥಿತಿಯನ್ನು ಬದಲಾಯಿಸಿ, ಪ್ರಕೃತಿಯನ್ನು ಇದ್ದಂತೇ ಕಾಪಾಡಿಕೊಳ್ಳಬೇಕು. ಆಗ ದೇವರು ನಾವಿದ್ದಲ್ಲೇ ಕಾಣಿಸಿಕೊಳ್ಳುತ್ತಾನೆ. ಕಣ್ತುಂಬುವ ಹಸಿರು, ಜುಳು ಜುಳು ಹರಿವ ನೀರು, ಸ್ವಚ್ಚ ಗಾಳಿ ಇಲ್ಲದೆಡೆ ದೇವರಾದರೂ ಹೇಗೆ ಇರಬಲ್ಲ ಅಲ್ವಾ..
ಹುಂ.. ಯೋಚಿಸುವ ಮನಸ್ಸುಗಳು ನಮ್ಮದಾದಂತೆ  ಅದರೆಡೆಗೆ ನಡೆಯುವ ದಾರಿಯೂ ನಮ್ಮದಾಗಬೇಕು. ಆ ದಾರಿಯಲ್ಲಿ ಉಳಿದವರೂ ಸಾಗುವಂತೆ ಮಾಡುವ ಚೈತನ್ಯವೂ ನಮ್ಮಲ್ಲಿಳಿಯಬೇಕು..

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Anitha Naresh Manchi
ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಮಂಚಿಯ ರಾಮ ನರೇಶ್ ಮಂಚಿ ಅವರ ಪತ್ನಿ ಅನಿತಾ ನರೇಶ್ ಮಂಚಿ, ಕನ್ನಡದ ಪ್ರಸಿದ್ಧ ಲೇಖಕಿ. ಕೊಡೆ ಕೊಡೆ ನನ್ನಕೊಡೆ ಕಾಲೇಜು ಪಠ್ಯವಾಗಿದೆ. ಎರಡು ಲಘು ಬರಹ ಸಂಕಲನ, ಮೂರು ಕಥಾಸಂಕಲನ ಬಿಡುಗಡೆಗೊಂಡಿವೆ. ನಾಡಿನ ವಿವಿಧ ಪತ್ರಿಕೆಗಳಲ್ಲಿ ಕಥೆ, ಲೇಖನಗಳು ಪ್ರಕಟಗೊಂಡಿವೆ. ಅವರ ಕಥೆಗಳು ಬೇರೆ ಭಾಷೆಗೂ ಅನುವಾದಗೊಂಡಿವೆ. ವಿಜಯವಾಣಿ ದಿನಪತ್ರಿಕೆಯಲ್ಲಿ ಅಂಕಣ ಬರೆಯುವ ಅನಿತಾ ಅವರಿಗೆ ಮಂಗಳೂರಿನ ಕನ್ನಡ ರತ್ನ ಪ್ರಶಸ್ತಿ. ಕೊಡಗಿನ ಗೌರಮ್ಮ ಪ್ರಶಸ್ತಿ, ಅಕ್ಷರ ಶ್ರೀ ಪ್ರಶಸ್ತಿ ದೊರಕಿವೆ.

Be the first to comment on "ಪರಿಸರ ಉಳಿಸಿದರೆ ದೇವರು ಮೆಚ್ಚುತ್ತಾನೆ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*