ಒಂದೆರಡು ತಿಂಗಳಲ್ಲೇ ಬಿ.ಸಿ.ರೋಡ್ ತಾಲೂಕು ಕಚೇರಿ ಇದ್ದ ಸ್ಥಳದಲ್ಲಿ ಭವ್ಯವಾದ ಕಟ್ಟಡ ಸಂಪೂರ್ಣವಾಗಿ ತಲೆಎತ್ತಿ ನಿಲ್ಲಲಿದೆ. ಇದು ನಿರ್ಮಾಣವಾಗೋದೇ ಜನರಿಗೆ. ನೆನಪಿಡಿ ಇದು ನಮ್ಮದೇ ಕಟ್ಟಡ. ಇದಕ್ಕೆ ತಗಲುವ 10 ಕೋಟಿ ವೆಚ್ಚದಲ್ಲೂ ಪ್ರತಿಯೊಬ್ಬರ ಬೆವರಿನ ಶ್ರಮ ಅಡಗಿದೆ. ಒಳ್ಳೆಯ ಉದ್ದೇಶಕ್ಕೆ ಬಳಕೆಯಾಗಲಿ ಎಂಬ ಆಶಯ ಬಂಟ್ವಾಳನ್ಯೂಸ್ ನದ್ದು.
www.bantwalnews.com COVER STORY
- by ಹರೀಶ ಮಾಂಬಾಡಿ
ಹಳೇ ತಾಲೂಕು ಕಚೇರಿ ಇದ್ದ ಜಾಗದಲ್ಲೀಗ ಮಿನಿ ವಿಧಾನಸೌಧ ನಿರ್ಮಾಣ ಮುಕ್ತಾಯದ ಹಂತದಲ್ಲಿದೆ. ಇದು ನಮ್ಮ ನಿಮ್ಮೆಲ್ಲರ ಹಣದಲ್ಲಿ ಕಟ್ಟಲಾಗುವ ಕಚೇರಿ ಸಂಕೀರ್ಣ. ನಮ್ಮ ನಿಮ್ಮೆಲ್ಲರ ಉಪಯೋಗಕ್ಕೂ ಹೌದು. ತಾಲೂಕಿನ ಎಲ್ಲ ಪ್ರಮುಖ ಕಚೇರಿಗಳು ಇನ್ನು ಇಲ್ಲಿಂದಲೇ ಕಾರ್ಯಾಚರಿಸಲಿವೆ. ಇದು ಮೂರಂತಸ್ತಿನ ಕಟ್ಟಡ. ಪ್ರತಿಯೊಂದೂ 1075 ಚ.ಮೀನಂತೆ ಒಟ್ಟು 3225 ಚ.ಮೀ. ವಿಸ್ತೀರ್ಣ. ಹೀಗಾಗಿ ಜಾಗಕ್ಕೆ ಕೊರತೆ ಇಲ್ಲ.
ಬಂಟ್ವಾಳ ಶಾಸಕರೂ ಆಗಿರುವ ಸಚಿವ ಬಿ.ರಮಾನಾಥ ರೈ ಮುತುವರ್ಜಿಯಿಂದ ನಿರ್ಮಾಣವಾಗುತ್ತಿರುವ ಮಿನಿ ವಿಧಾನಸೌಧ ಸುಮಾರು 33 ಸೆಂಟ್ಸ್ ವಿಸ್ತೀರ್ಣದಲ್ಲಿದೆ. ಈಗಿರುವ ಸಬ್ ರಿಜಿಸ್ಟ್ರಾರ್ ಕಟ್ಟಡ, ಈಗ ಕಾರ್ಯಾಚರಿಸುತ್ತಿರುವ ತಾಲೂಕು ಕಟ್ಟಡದ ಜಾಗದಲ್ಲೆಲ್ಲ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುತ್ತದೆ.
ಮಂಗಳೂರಿನ ಸೀಡಿ ಕನ್‌ಸ್ಟ್ರಕ್ಷನ್ ಸಂಸ್ಥೆಯು ಇದರ ಕಾಮಗಾರಿಯನ್ನು ಕೈಗೆತ್ತಿಕೊಂಡಿದೆ. ಅಂದುಕೊಂಡದ್ದಕ್ಕಿಂತ ವೇಗವಾಗಿ ಕೆಲಸವೂ ನಡೆದಿದೆ.
ಏನೆಲ್ಲ ಇಲ್ಲಿರಲಿದೆ?
ನೆಲ ಅಂತಸ್ತು:
ತಾಲೂಕು ಕಚೇರಿ, ತಾಲೂಕು ಸಬ್ ರಿಜಿಸ್ಟ್ರಾರ್, ಗ್ರಾಮಕರಣಿಕ, ಸರ್ವೆ ಇಲಾಖೆ, ನೆಮ್ಮದಿ, ಭೂದಾಖಲೆ ನಿರ್ದೇಶಕರ ಕಚೇರಿ ಮತ್ತು ಪಾಣೆಮಂಗಳೂರು ನಾಡಕಚೇರಿ.
ಎರಡನೇ ಅಂತಸ್ತು:
ವಾಣಿಜ್ಯ ದಾಖಲೆಗಳ ಕೊಠಡಿ, ತಾಲೂಕು ಕಚೇರಿಗೆ ಸಂಬಂಧಿಸಿದ ಇತರ ಕಚೇರಿಗಳು.
2300 ಚ.ಮೀ. ವಿಸ್ತೀರ್ಣದ ವಿಶಾಲ ರೆಕಾರ್ಡ್ ರೂಮ್. ಮಿನಿ ಹಾಲ್. ಸಭಾಂಗಣ. ಜನರಿಗೆ ಆಸನ, ನೀರು, ಶೌಚಾಲಯ ವ್ಯವಸ್ಥೆ.
ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಸಹಿತ ಕಂದಾಯ ಮತ್ತು ಲೋಕೋಪಯೋಗಿ ಇಲಾಖೆಯ ಮೇಲಾಧಿಕಾರಿಗಳು ಕಾಮಗಾರಿಯನ್ನು ಕಾಲಕಾಲಕ್ಕೆ ಪರಿಶೀಲನೆ ನಡೆಸಿದ್ದಾರೆ.
ಜಿಲ್ಲೆಯಲ್ಲೇ ನಿರ್ಮಾಣಗೊಂಡ ಮಿನಿಸೌಧಗಳ ಪೈಕಿ ಬಂಟ್ವಾಳ ಮಿನಿವಿಧಾನ ಸೌದ ಅತ್ಯಂತ ವಿನೂತನ ಮತ್ತು ಅತೀ ದೊಡ್ಡದಾಗಿದೆ ಎಂಬ ಹೆಗ್ಗಳಿಕೆ ಇದಕ್ಕಿದೆ.
ನೀಗಿತೇ ಬವಣೆ:
ಮಿನಿ ವಿಧಾನಸೌಧವೇನೋ ನಿರ್ಮಾಣವಾಗುತ್ತಿದೆ. ಇದು ಜನರ ಸ್ವತ್ತು. ಇದರ ಸಂಪೂರ್ಣ ಅಧಿಕಾರ ಜನರಿಗಿದೆ. ಇದನ್ನು ಸರಿಯಾಗಿ ಉಪಯೋಗಿಸುವುದು, ಬಿಡುವುದೂ ಜನರಿಗೇ ಸೇರಿದ್ದು. ಎಷ್ಟರಮಟ್ಟಿಗೆ ಇಲ್ಲಿ ಕಾರ್ಯಸಾಧ್ಯವಾಗುತ್ತದೆ ಎಂಬುದನ್ನು ಕಾಲವೇ ಹೇಳಬೇಕು.
ಏನು ನಿರೀಕ್ಷೆ
ಮಿನಿ ವಿಧಾನಸೌಧವನ್ನು ಮುಖ್ಯಮಂತ್ರಿ ಬಂದು ಉದ್ಘಾಟನೆ ಮಾಡಬಹುದು. ಅಲ್ಲಿ ಮಂತ್ರಿಗಳ ಗಡಣವೇ ಸೇರಬಹುದು. ಈ ಕಟ್ಟಡ ನಿರ್ಮಾಣಕ್ಕೆ ನಾವು ಕಾರಣ ಎಂಬ ಕ್ರೆಡಿಟ್ ಪಡೆದುಕೊಳ್ಳಲು ರಾಜಕೀಯ ಪಕ್ಷಗಳು ಪೈಪೋಟಿಯಲ್ಲೇ ನಿಲ್ಲಲೂ ಸಾಕು. ಅದು ಮಾಮೂಲಿ ವಿಷಯ. ಆದರೆ ಒಂದಂತೂ ನೆನಪಿರಲಿ. ಈ ಭವ್ಯ ಕಟ್ಟಡ ನಿರ್ಮಾಣವಾದದ್ದೇ ಜನರಿಗೋಸ್ಕರ. ಇದಕ್ಕೆ ಬಳಸಲಾದ ಮರಳು, ಜಲ್ಲಿ, ಸಿಮೆಂಟಿನ ಒಂದೊಂದು ಕಣದಲ್ಲೂ ಜನಸಾಮಾನ್ಯನ ಬೆವರಿನ ಶ್ರಮದ ಹಣವಿದೆ. ಇದಕ್ಕೆ ನ್ಯಾಯ ಸಲ್ಲಬೇಕು ಎಂದಾದರೆ ನ್ಯಾಯಸಮ್ಮತ ಕಾರ್ಯಗಳು ಈ ಕಟ್ಟಡದಲ್ಲಾಗಬೇಕು. ಇಲ್ಲಿ ಕುಳಿತುಕೊಳ್ಳುವ ಎಲ್ಲರಿಗೂ ಸರಕಾರ ಸಂಬಳ ನೀಡುತ್ತೆ.. ಇನ್ನು ಉಳಿದದ್ದು ಅವರು ಜನೋಪಯೋಗಿ ಕೆಲಸ ಮಾಡುವುದು. ತಮ್ಮ ಕಾಲಬುಡಕ್ಕೆ ಬಂದ ಜನರನ್ನು ಅಷ್ಟೇ ಗೌರವಾದರಗಳಿಂದ ಕಂಡು ನಿಮಗೇನು ಬೇಕು ಎಂದು ನಗುಮೊಗದಲ್ಲಿ ವ್ಯವಹರಿಸಿದರೆ ಈ ಮಿನಿ ವಿಧಾನಸೌಧ ಕಟ್ಟಡ ಸಾರ್ಥಕವಾಗುತ್ತದೆ.
ಈ ಮಿನಿ ವಿಧಾನಸೌಧಕ್ಕೆ ಕಾಲಿಟ್ಟ ಜನಸಾಮಾನ್ಯ ಕಣ್ಣೀರ ಹನಿಯೊಂದಿಗೆ ಮರಳದಿದ್ದರೆ ಅದೇ ಸಾರ್ಥಕ. ಇಲ್ಲವಾದರೆ ಬಿ.ಸಿ.ರೋಡಿನಲ್ಲಿ ಇರುವ ಇತರ ಕಟ್ಟಡಗಳಂತೆ ಇದು ಪರಕೀಯವೆನಿಸಬಹುದು.
Be the first to comment on "ರೆಡಿಯಾಗ್ತಿದೆ ಮಿನಿ ವಿಧಾನಸೌಧ"