ಬಿ.ಸಿ.ರೋಡ್ ಫ್ಲೈ ಓವರ್, ಸಂಚಾರ ಡೇಂಜರ್

  • ಹರೀಶ ಮಾಂಬಾಡಿ

  • ಮೇಲ್ಸೇತುವೆಯಲ್ಲಿ ರಸ್ತೆ ಸಂಚಾರ ವಿಭಜನೆ
  • ಕಟ್ಟುನಿಟ್ಟಿನ ಟ್ರಾಫಿಕ್ ಮೇಲುಸ್ತುವಾರಿ ಇಲ್ಲದಿದ್ದರೆ ಅಪಘಾತಕ್ಕೆ ರಹದಾರಿ
  • ಪೀಕ್ ಅವರ್ ನಲ್ಲಿ ವಾಹನದಟ್ಟಣೆ
  • ಸುಲಭದಲ್ಲಿ ಹಾನಿಗೀಡಾಗುವ ಕೋನ್ ಗಳು

ನಿರ್ಮಾಣವಾಗುವ ಪ್ರತಿ ಘಟ್ಟದಲ್ಲೂ ವಿವಾದಗಳನ್ನು ಮೈಮೇಲೆ ಎಳೆದುಕೊಂಡ ಬಿ.ಸಿ.ರೋಡ್ ನ ಅಂಕುಡೊಂಕಿನ ಫ್ಲೈಓವರ್ ಮತ್ತೊಂದು ಪ್ರಯೋಗಕ್ಕೆ ಸಜ್ಜಾಗುತ್ತಿದೆ. ಇದೀಗ ಏಕಮುಖ ಸಂಚಾರವೇ ಅಪಾಯಕಾರಿಯಾಗುತ್ತಿರುವ ಈ ರಸ್ತೆಯಲ್ಲಿ ದ್ವಿಮುಖ ಸಂಚಾರ ನಡೆಸಲಾಗುವುದು ಎಂಬುದು ತಜ್ಞರ ಅಂದಾಜು.

pic: Kishore Peraje

ಸುಮಾರು ಏಳೆಂಟು ವರ್ಷಗಳ ಹಿಂದೆ ಅವತರಿಸಿತ್ತು ಫ್ಲೈಓವರ್. ಇದರ ನಿರ್ಮಾಣ ಹಂತದಲ್ಲೇ ಕುಸಿತದ ಭೀತಿ ಕಂಡು ಆತಂಕವನ್ನೂ ಸೃಷ್ಟಿಸಿತ್ತು. ಸುರತ್ಕಲ್-ಬಿ.ಸಿ.ರೋಡ್ ಚತುಷ್ಪಥ ರಸ್ತೆಯ ಅಂತಿಮ ಘಟ್ಟವಾದ ಫ್ಲೈಓವರ್, ಹೇಗಿರಬೇಕೋ ಹಾಗೆ ಇರಲೇ ಇಲ್ಲ. ಇದರ ರಚನೆಯೇ ವಿವಾದಾಸ್ಪದವಾಯಿತು. ಸಾಮಾನ್ಯವಾಗಿ ಫ್ಲೈಓವರ್ ನಿರ್ಮಾಣಗೊಂಡರೆ, ಎಡ, ಬಲಗಳಲ್ಲಿ ಸರ್ವೀಸ್ ರಸ್ತೆಗಳು ಸ್ಥಳೀಯ ಸಂಚಾರಕ್ಕಾಗಿ ನಿರ್ಮಾಣಗೊಳ್ಳುತ್ತವೆ. ಫ್ಲೈಓವರ್ ಅನ್ನು ಸ್ಥಳೀಯ ಭಾಗಕ್ಕೆ ತೆರಳದ ವಾಹನಗಳಿಗೆ ಹಾಗೂ ಸುಲಭದಲ್ಲಿ ಅನಾಯಾಸವಾಗಿ ಸಾಗಲು ಬಳಸಲಾಗುತ್ತದೆ. ಆದರೆ ಬಿ.ಸಿ.ರೋಡ್ ಫ್ಲೈಓವರ್ ಯಾವ ಉದ್ದೇಶಕ್ಕೆಂದು ಆರಂಭವಾಯಿತೋ, ಅದಕ್ಕೆ ಬಳಕೆ ಆಗಲೇ ಇಲ್ಲ.

ಜಾಹೀರಾತು

ಹೇಗಿದೆ ಫ್ಲೈಓವರ್:

ಫ್ಲೈಓವರ್ ಆರಂಭಗೊಳ್ಳುವ ಮತ್ತು ಅಂತ್ಯಗೊಳ್ಳುವ ಜಾಗದಲ್ಲಿ ವಾಹನಗಳು ಪಾರ್ಕಿಂಗ್ ಮಾಡುತ್ತವೆ. ಇದನ್ನು ನಿಯಂತ್ರಿಸಲು ಯಾರಿಗೂ ಸಾಧ್ಯವಾಗುತ್ತಿಲ್ಲ. ಇದರ ಪಕ್ಕದಲ್ಲಿರುವ ಸರ್ವೀಸ್ ರಸ್ತೆ ಸಂಪೂರ್ಣ ಹಾಳಾಗಿದ್ದು, ಸಾರ್ವಜನಿಕರ ಸಂಚಾರಕ್ಕೆ ಅಯೋಗ್ಯವಾಗಿದೆ. ಬೆಂಗಳೂರು ಕಡೆಯಿಂದ ಬಿ.ಸಿ.ರೋಡ್ ಗೆ ಆಗಮಿಸುವ ಬಸ್ಸುಗಳು ಸರ್ವೀಸ್ ರಸ್ತೆಗೆ ಇಳಿಯುವುದೇ ಇಲ್ಲ. ಹೀಗಾಗಿ ಇದೊಂದು ಅನಕೃತ ಬಸ್ ಸ್ಟ್ಯಾಂಡ್ ಆಗಿಯೂ ಪರಿಣಮಿಸಿದೆ. ಫ್ಲೈಓವರ್ ಆರಂಭದ ಜಾಗದಲ್ಲಿ ಬೆಳಗಿನ ಜಾವ ಆಟೋಗಳು ಪಾರ್ಕ್ ಮಾಡಿ ಬಸ್ಸಿನ ಪ್ರಯಾಣಿಕರಿಗೆ ಕಾಯುತ್ತವೆ. ಯಾವ ಜಾಗದಲ್ಲೂ ವಿದ್ಯುತ್ ದೀಪಗಳು ಇಲ್ಲ. ಕತ್ತಲಾದರೆ ಇಲ್ಲಿ ನಡೆದಾಡುವುದು ಡೇಂಜರ್. ಪಾದಚಾರಿಗಳಿಗೆ ಫುಟ್‌ಪಾತ್ ವ್ಯವಸ್ಥೆ ಇಲ್ಲ. ಫ್ಲೈಓವರ್ ಕೊನೆಗೊಳ್ಳುವ ಜಾಗದಲ್ಲಿ ಭಾರತ್ ಬ್ಯಾಂಕ್ ಪಕ್ಕ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ನಿರ್ಮಾಣ ಭರದಿಂದ ಸಾಗುತ್ತಿದೆ. ಮಳೆಗಾಲ ಕಳೆದ ಬಳಿಕ ಇದರ ವಿಧ್ಯುಕ್ತ ಉದ್ಘಾಟನೆ ನಡೆಯಬಹುದು.

ಈಗ ಏನಾಗಿದೆ:

ಜಾಹೀರಾತು

ಫ್ಲೈಓವರ್ ನಿರ್ಮಾಣಗೊಂಡದ್ದೇ ಏಕಮುಖ ಸಂಚಾರಕ್ಕೆ. ಮಂಗಳೂರಿಗೆ ತೆರಳುವ ವಾಹನಗಳು ಬಿ.ಸಿ.ರೋಡ್ ಪೇಟೆಗೆ ಬಾರದೆ ಹಾಗೆಯೇ ಮುಂದೆ ಹೋಗಲು ಅನುಕೂಲವಾಗುವಂತೆ ಫ್ಲೈಓವರ್ ರಚನೆಯಾಗಿದೆ. ಮಂಗಳೂರಿನಿಂದ ಬರುವ ವಾಹನಗಳು ಬಿ.ಸಿ.ರೋಡ್ ಪೇಟೆಯಲ್ಲೇ ಬರಬೇಕು. ಆದರೆ ಬಿ.ಸಿ.ರೋಡ್ ಪೇಟೆಯಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆಯನ್ನು ಅನುಲಕ್ಷಿಸಿ, ಕಳೆದ ವರ್ಷ ಫ್ಲೈಓವರ್ ನಲ್ಲಿ ಎರಡೂ ಕಡೆಯಿಂದ ವಾಹನಗಳನ್ನು ಬಿಡುವ ವ್ಯವಸ್ಥೆ ಮಾಡಲಾಯಿತು. ಆದರೆ ತಿರುವುಮುರುವಿನ ರಸ್ತೆಯುಳ್ಳ ಮೇಲ್ಸೇತುವೆಯಲ್ಲಿ ಎದುರಿನಿಂದ ದೊಡ್ಡ ಲೈಟ್ ಹಾಕಿಕೊಂಡು ವಾಹನಗಳು ವೇಗವಾಗಿ ಎದುರುಬದುರಾಗಿ ಬರುವಾಗ ಅಪಾಯಗಳು ಜಾಸ್ತಿ ಎಂದು ಅನ್ನಿಸಿದ್ದರಿಂದ ಆ ಪ್ರಸ್ತಾಪವನ್ನು ಕೈಬಿಡಲಾಯಿತು. ಮತ್ತೆ ಮೊದಲಿನಂತೆ ಏಕಮುಖ ಸಂಚಾರಕ್ಕೆ ಲಕ್ಷ್ಯ ಮಾಡಲಾಯಿತು. ಆದರೆ ಈಗ ಸನ್ನಿವೇಶ ಬೇರೆಯದ್ದೇ ಆಗಿದೆ.

ಒಂದೆಡೆ ಬಿ.ಸಿ.ರೋಡ್ ನಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ಸಹಿತ ವಾಣಿಜ್ಯ ಚಟುವಟಿಕೆಗಳಿಗೆ ನೆರವಾಗಬಲ್ಲ ಮಹತ್ವಾಕಾಂಕ್ಷೆಯ ಬಸ್ ನಿಲ್ದಾಣ ನಿರ್ಮಾಣವಾಗುತ್ತಿದೆ. ಆದರೆ ಇದುವರೆಗೂ ನಿಲ್ದಾಣಕ್ಕೆ ಇದ್ದ ಮೊದಲ ಅಡ್ಡಿ ಹಾಗೂ ಆತಂಕವೆಂದರೆ ಬಸ್ಸುಗಳು ಅದರೊಳಗೆ ಹೋಗುವುದು ಹೇಗೆ, ಅಲ್ಲಿಂದ ಹೊರಬಂದ ಬಳಿಕ ಬೆಂಗಳೂರು ಕಡೆಗೆ ತಿರುಗುವುದು ಹೇಗೆ ಎಂಬುದಾಗಿತ್ತು. ಆದರೆ ಈಗ ನಿಧಾನವಾಗಿ ಮಂಗಳೂರಿನ ವಾಹನಗಳೂ ಫ್ಲೈಓವರ್ ಮೂಲಕ ಸಾಗಲು ಅನುಕೂಲವಾಗುವಂಥ ವ್ಯವಸ್ಥೆ ಕಲ್ಪಿಸಲು ವೇದಿಕೆ ಸಿದ್ಧವಾಗಿದೆ. ಮೊದಲ ಹಂತವಾಗಿ ಸಂಚಯಗಿರಿ ಕಡೆಗೆ ತೆರಳುವ ಜಾಗದಲ್ಲಿ ಇದುವರೆಗೆ ಇದ್ದ ಡಿವೈಡರ್ ತೆರವನ್ನು ಮತ್ತಷ್ಟು ಅಗಲಗೊಳಿಸಲಾಗುತ್ತಿದೆ. ವೋಲ್ವೊ ಸಹಿತ ದೊಡ್ಡ ಬಸ್ಸುಗಳು, ಲಾರಿಗಳು ಇತ್ಯಾದಿ ಘನ ವಾಹನಗಳು ಇಲ್ಲಿಂದ ಫ್ಲೈಓವರ್ ಗೆ ತಿರುಗುವ ಅವಕಾಶ ಜಾಸ್ತಿ. ಮಂಗಳೂರಿಂದ ಕೆ.ಎಸ್.ಆರ್.ಟಿ.ಸಿ. ನಿಲ್ದಾಣಕ್ಕೆ ಬಸ್ ಬರಲೂ ಇದು ಅನುಕೂಲ. ಮಂಗಳೂರು ಕಡೆಯಿಂದ ಎಡಕ್ಕೆ ತಿರುಗಿ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣಕ್ಕೆ ತಲುಪಬೇಕು. ಬಳಿಕ ಬೆಂಗಳೂರು ಕಡೆಗೆ ಹೋಗುವುದಾದರೆ ಮತ್ತೆ ಫ್ಲೈಓವರ್ ಇದ್ದೆಡೆ ಹೋಗಬೇಕು. ಅಥವಾ ಹಳೇ ರಸ್ತೆಯಲ್ಲಿ ಬಂದು ತಿರುಗಬೇಕು. ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ಆರಂಭಗೊಳ್ಳುವ ಹಂತದಲ್ಲಿ ಇದರ ಕುರಿತು ಸ್ಪಷ್ಟ ಚಿತ್ರಣ ನಡೆಯಲಿದೆ. ಆರಂಭಿಕ ಹಂತವಾಗಿ ರಸ್ತೆ ಮಧ್ಯೆ ಕೋನ್ ಗಳನ್ನು ಹಾಕಲಾಗಿದೆ. ಇದರಿಂದ ಎಡಕ್ಕೆ ಮತ್ತು ಬಲಕ್ಕೆ ವಾಹನಗಳು ಸುಗಮವಾಗಿ ಸಂಚರಿಸಲು ಅನುಕೂಲವಾಗುತ್ತದೆ ಎಂದು ಆಡಳಿತದ ಅಂದಾಜು. ಆದರೆ ವಾಹನಗಳಿಗೆ ಕೋನ್ ಬೀಳಿಸುವುದು ದೊಡ್ಡ ವಿಷಯವಲ್ಲ. ವೇಗವಾಗಿ ಸಂಚರಿಸುವ ವಾಹನಗಳು ಸ್ವಲ್ಪ ಜಾಗರೂಕರಾಗಿರಬೇಕು.

ಫ್ಲೈ ಓವರ್ ನಲ್ಲಿ ಲಾರಿಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸುವುದು, ವಾಹನಗಳನ್ನು ಅನಿಯಂತ್ರಿವಾಗಿ ರಸ್ತೆಯಲ್ಲಿ ಓಡಿಸುವವರಿಗೆ ದಂಡ ವಿಸುವ ಪ್ರಕ್ರಿಯೆಗಳು ಆಗಾಗ್ಗೆ ನಡೆಯುತ್ತಿವೆ. ಆದರೆ ರಸ್ತೆ ಮಧ್ಯೆ ಕೋನ್ ಅಳವಡಿಸಿದರೆ, ವಾಹನಗಳು ಎಲ್ಲೆಂದರಲ್ಲಿ ನುಗ್ಗುವುದಿಲ್ಲ  ಕೆಲ ತಿಂಗಳ ಹಿಂದಷ್ಟೇ ವೇಗವಾಗಿ ಬಂದ ಬೈಕು ಸವಾರ ಫ್ಲೈ ಓವರ್ ಮೇಲಿಂದ ಬಿದ್ದು ಮೃತಪಟ್ಟಿದ್ದರು. ಈ ಕುರಿತು ಪೊಲೀಸರು ಅಲರ್ಟ್ ಆಗದಿದ್ದರೆ, ಮತ್ತೊಂದು ಅಪಘಾತ ಆಗುವ ಸಾಧ್ಯತೆ ಇದೆ.

ಜಾಹೀರಾತು

ಬಿ.ಸಿ.ರೋಡ್ ನಲ್ಲಿ ಸಂಚಾರ ದಟ್ಟಣೆ ವಿಪರೀತವಿದ್ದ ಸಂದರ್ಭ ಫ್ಲೈಓವರ್ ನಲ್ಲಿ ಇದೇ ರೀತಿ ಕೋನ್ ಅಳವಡಿಸಿ ದ್ವಿಮುಖ ಸಂಚಾರ ಮಾಡಲಾಗಿತ್ತು. ಆದರೆ ಅದು ಫ್ಲಾಪ್ ಆಯಿತು. ಈಗ ಮತ್ತೆ ಸಂಚಾರ ಬದಲಾವಣೆ.

video report:

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಏಳನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಬಿ.ಸಿ.ರೋಡ್ ಫ್ಲೈ ಓವರ್, ಸಂಚಾರ ಡೇಂಜರ್"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*