ಬಿ.ಸಿ.ರೋಡ್ ಸಮೀಪದ ಕೈಕುಂಜೆಯಲ್ಲಿ ಮಹಿಳೆಯೋರ್ವರ ಕತ್ತಿನಿಂದ ಚಿನ್ನದ ಕರಿಮಣಿ ಸರವನ್ನು ಎಗರಿಸಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಬಂಟ್ವಾಳ ನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
www.bantwalnews.com report
ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಪೈವಳಿಕೆ ನಿವಾಸಿ ಜನಾರ್ಧನ ಮಂಜಲ್ಪಾಡಿ ಎಂಬವರ ಪುತ್ರ ಕಿರಣ್(24) ಮತ್ತು ಕ್ಯಾಲಿಕಟ್ ಜಿಲ್ಲೆಯ ಪೆರಂಬರ ತಾಲೂಕಿನ ಚೆಂಬರಾ ನಿವಾಸಿ ಅಹ್ಮದ್ ಪಿ.ಕೆ. ಎಂಬವರ ಪುತ್ರ ನಿಝಾಮ್ (25) ಬಂಧಿತ ಆರೋಪಿಗಳು.
ಆರೋಪಿಗಳನ್ನು ಶುಕ್ರವಾರ ಬೆಳಗ್ಗೆ ಮಾರ್ನಬೈಲ್ ಎಂಬಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಿ.ಸಿ.ರೋಡಿನ ಜನವಸತಿ ಬಡಾವಣೆಯಾಗಿರುವ ಹಾಗೂ ಜನಸಂಚಾರ ಇರುವ ಕೈಕುಂಜೆ ಪೂರ್ವ ಬಡಾವಣೆಯಲ್ಲಿ ಹಾಡುಹಗಲೇ ಕಳ್ಳತನ ನಡೆದದ್ದು ಜನರನ್ನು ಬೆಚ್ಚಿಬೀಳಿಸಿತ್ತು. ಸಂಜೆ 6.15 ಗಂಟೆ ವೇಳೆಗೆ ಕೃತ್ಯ ನಡೆದಿತ್ತು.
ಸಂಜೆ ವೇಳೆಗೆ ಕಚೇರಿ ಕರ್ತವ್ಯ ಮುಗಿಸಿ ಕೈಕುಂಜೆಯಲ್ಲಿರುವ ತನ್ನ ಮನೆಗೆ ನಡೆದುಕೊಂಡು ಬರುತ್ತಿದ್ದ ಬಿ.ಎಸ್.ಎನ್.ಎಲ್. ಉದ್ಯೋಗಿ ಕಮಲಾಕ್ಷಿ ಮಯ್ಯ ಅವರು ಬಿ.ಸಿ.ರೋಡಿನ ಕೈಕುಂಜೆ ಪೂರ್ವ ಬಡಾವಣೆಯ ಚಿತ್ರಾ ಎಂಬ ಮನೆಯ ಎದುರು ಬಂದ ಸಂದರ್ಭ, ಬೈಕಿನಲ್ಲಿ ಬಂದ ಈ ಆರೋಪಿಗಳು ದಿಢೀರನೆ ಬಂದು ಕುತ್ತಿಗೆಯಲ್ಲಿದ್ದ 7 ಪವನ್ ಬಂಗಾರದ ಮಂಗಳಸೂತ್ರವನ್ನು ಸೆಳೆದೊಯ್ದಿದ್ದಾರೆ. ಕೂಡಲೇ ಕಮಲಾಕ್ಷಿ ಅವರು ಅವರನ್ನು ಸ್ವಲ್ಪ ದೂರ ಹಿಂಬಾಲಿಸಲು ಯತ್ನಿಸಿದರಾದರೂ ಪರಾರಿಯಾಗಿದ್ದರು.
ಎಗರಿಸಲ್ಪಟ್ಟ 1.4 ಲಕ್ಷ ರೂ ಮೌಲ್ಯದ ಚಿನ್ನದ ಕರಿಮಣಿಯನ್ನು ಹಾಗೂ 50 ಸಾವಿರ ರೂ. ಮೌಲ್ಯದ ಬೈಕನ್ನು ಆರೋಪಿಗಳಿಂದ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇಬ್ಬರು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ ಸಂದರ್ಭ ಮಂಗಳೂರು ನೀರುಮಾರ್ಗ ಎಂಬಲ್ಲಿ ಮಹಿಳೆಯೊಬ್ಬರ ಕರಿಮಣಿ ಸರವನ್ನು ಎಗರಿಸಲು ವಿಫಲ ಯತ್ನ ನಡೆಸಿರುವುದಾಗಿ ತಿಳಿಸಿದ್ದಾರೆ ಎಂದು ಬಂಟ್ವಾಳ ನಗರ ಪೊಲೀಸ್ ಠಾಣೆಯ ಪೊಲೀಸರು ತಿಳಿಸಿದ್ದಾರೆ.
ದ.ಕ. ಜಿಲ್ಲಾ ಪೊಲೀಸ್ ಅಧೀಕ್ಷಕ ಭೂಷಣ್ ಜಿ. ಬೊರಸೆ, ಹೆಚ್ಚುವರಿ ಅಧೀಕ್ಷಕ ಸಿ.ಬಿ.ವೇದಮೂರ್ತಿ ನಿರ್ದೇಶನದಂತೆ, ಬಂಟ್ವಾಳ ಉಪ ವಿಭಾಗದ ಡಿವೈಎಸ್ಪಿ ಡಾ. ರವೀಶ್ ಸಿ.ಆರ್., ಬಂಟ್ವಾಳ ವೃತ್ತ ನಿರೀಕ್ಷಕ ಮಂಜಯ್ಯ ಬಿ.ಕೆ. ಮಾರ್ಗದರ್ಶನದಂತೆ, ನಗರ ಠಾಣೆ ಎಸ್ಸೈ ನಂದಕುಮಾರ್ ಎಂ.ಎಂ., ನಗರ ಠಾಣೆಯ ಅಪರಾಧ ವಿಭಾಗದ ಎಸ್ಸೈ ಗಂಗಾಧರಪ್ಪರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಎಎಸ್ಸೈ ಸಂಜೀವ ಕೆ., ಹೆಡ್ ಕಾನ್‌ಸ್ಟೇಬಲ್‌ಗಳಾದ ಅಬ್ದುಲ್ ಕರೀಂ, ಸುಜು, ಕೃಷ್ಣ, ಸುರೇಶ್, ಗಿರೀಶ, ರಾಜೇಶ್, ಸಿಬ್ಬಂದಿಯಾದ ಅದ್ರಾಮ, ಸಂಪತ್ ಮತ್ತು ಮಂಗಳೂರು ದ.ಕ. ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯ ಕಂಪ್ಯೂಟರ್ ವಿಭಾಗದ ಸಿಬ್ಬಂದಿಯಾದ ಸಂಪತ್, ದಿವಾಕರ ಪಾಲ್ಗೊಂಡರು. ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
Be the first to comment on "ಕೈಕುಂಜೆ ಮಹಿಳೆ ಸರಕಳವು ಆರೋಪಿಗಳ ಬಂಧನ"