ಹನಿ ಹನಿ ಕಹಾನಿ..

ಅವ್ರೇನೋ ನೀರು ಹಾಳು ಮಾಡುವುದಿಲ್ಲ ಅಂತಿದ್ದಾರೆ, ನೀವು ಏನಂತೀರಾ..??

  • ಅನಿತಾ ನರೇಶ್ ಮಂಚಿ.

 ರ್ರೀ ಕನಕಾಂಗಿ.  ನಮ್ ಮನೆ ಕೀ ಕೊಡಿ, ಮದುವೆ ಮುಗ್ಸಿ ಬಂದೆ

ಜಾಹೀರಾತು

ಅಯ್ಯೋಕೀ ನಿಮ್ಮನೆಯವ್ರು ಇಲ್ಲಿ ಕೊಟ್ಟು ಹೋಗಿಲ್ಲ ಕಣ್ರೀ, ಮರ್ತು ಹೋಯ್ತು ಅನ್ಸುತ್ತೆ ಅವ್ರಿಗೆ, ಒಳ್ಳೇದಾಯ್ತು ಬಿಡಿ, ಬನ್ನಿ ಒಳಗೆ, ಮದುವೆ ಗಮ್ಮತ್ತಾ? ಜನ ತುಂಬಾ ಇದ್ರಾ?

ಛೇ.. ಎಂತಾ ಕೆಲ್ಸ ಮಾಡ್ತಾರೆ ನಮ್ಮನೆಯವ್ರು.. ನಿಮ್ಗೆ ಸುಮ್ನೆ ತೊಂದ್ರೆ ಆಯ್ತೀಗ,

ಜಾಹೀರಾತು

ಅರ್ರೇ.. ನಂಗೇನು ತೊಂದ್ರೆ? ಮಕ್ಳು ಬರೋವರೆಗೆ ಹೆಚ್ಚೇನು ಕೆಲಸ ಇಲ್ಲ. ಪಟ್ಟಾಂಗ ಹಾಕಿದ್ರೆ ಹೊತ್ತು ಹೋಗುತ್ತೆ ಸರೋಜಾ. ಬನ್ನಿ.

ಹುಂ… ಹೊರಗೆ ನಿಲ್ಲುವಂತಿಲ್ಲ. ತುಂಬಾ ಬಿಸಿಲು

ಅಯ್ಯೋ.. ಇಲ್ಯಾಕೆ ನಿಲ್ಬೇಕು? ಒಳಗ್ಬನ್ನಿ. ಫ಼್ರಿಡ್ಜಲ್ಲಿ ತಣ್ಣಗೆ ಜ್ಯೂಸ್ ಇಟ್ಟಿದ್ದೀನಿ. ಕುಡಿದ್ರೆ ಸೆಖೆ ಎಲ್ಲಾ ಹಾರಿ ಹೋಗುತ್ತೆ ಬನ್ನಿ

ಜಾಹೀರಾತು

ಜ್ಯೂಸು ಗೀಸೆಲ್ಲಾ ಬೇಡ ತಾಯಿ, ಅದೆಲ್ಲಾ ನಿಮ್ಮಂತ ಪುಣ್ಯವಂತರು ಮಾತ್ರ ಕುಡೀಬಹುದು. ನಮ್ದೋ ಫ್ಯಾಕ್ಟರಿ ಫುಲ್ ಶುಗರ್ ತುಂಬ್ಕೊಂಡಿದೆ, ಇನ್ನು ಜ್ಯೂಸು ಕುಡುದ್ರೆ ಆಯ್ತು ಕಥೆ, ಮದ್ವೆ ಊಟದಲ್ಲೇ ಬೇಡ ಬೇಡ ಅಂದ್ರೂ ಒಂದು ಹೋಳಿಗೆ, ಒಂದು ಲಾಡು ಬಡಿಸಿದ್ರು. ವೇಸ್ಟ್ ಆಗುತ್ತೆ ಅಂತ ತಿಂದ್ಬಿಟ್ಟೆ. ಅದೇ ಹೆದ್ರಿಕೆ ಶುರು ಆಗಿದೆ ಈಗ

ಹುಂ, ನಾವು ಹೆಂಗಸರೇ ಹೀಗೆ? ನಮ್ಮ ಅರ್ಧ ಆರೋಗ್ಯ ಹಾಳಾಗೋದು ಇಂತದ್ರಿಂದಲೇ. ಹಾಳಾಗುತ್ತೆ ಅಂತ ಉಳಿದ ಹಾಳು ಮೂಳುಗಳನ್ನೆಲ್ಲಾ ತಿಂದ್ಬಿಡ್ತೀವಿ. ಇಲ್ಲಸಲ್ಲದ ಖಾಯಿಲೆಗಳನ್ನು ಎಳ್ಕೊಂಡ್ಬಿಡ್ತೀವಿ.

ಅದೇನೋ ಸರಿ ಕನಕಾಂಗಿ ನೀವು ಹೇಳೋದು. ಆದ್ರೂ ಬೇಕಾದ್ದನ್ನು ಉಳಿಸೋದ್ರಲ್ಲಿ ಯಾಕೆ ಹಿಂದೇಟು ಹಾಕ್ತೀವಿ ನಾವು?

ಜಾಹೀರಾತು

ಹಾಗಂದ್ರೇನ್ರೀ ಸರೋಜಾ? ನೀವು ಒಗಟಾಗಿ ಮಾತಾಡಿದ್ರೆ ನಂಗರ್ಥ ಆಗಲ್ಲ. ಬಿಡಿಸಿ ಹೇಳ್ರೀ ಸ್ವಲ್ಪ

ಏನಿಲ್ಲಾ ಕಣ್ರೀ, ನಿಮ್ಗೇ ಗೊತ್ತಲ್ಲಾ ಈ ವರ್ಷ ಮಳೆ ಎಷ್ಟು ಕಡಿಮೆ ಬಿದ್ದಿದೆ ಅಂತ. ಕಳೆದ ಸಲ ಮಳೆ ಬರುವ ಮೊದಲಂತೂ ಕುಡಿಯಲು ನೀರಿಲ್ಲದೇ ಪೇಟೆ ಮಂದಿಯೆಲ್ಲಾ ಒದ್ದಾಡಿದ್ದು ಗೊತ್ತೇ ಇದೆ. ಆದ್ರೂ ನಮ್ಗೆ ಬುದ್ಧಿ ಮಾತ್ರ ಬಂದಿಲ್ಲ ಅನ್ಸುತ್ತೆ

ನಿಮ್ಮ ಮಾತು ನಾನು ಒಪ್ತೀನಿ ಸರೋಜಾ, ಇಡೀ ದಿನ ಬುಲ್ದೋಜರ್ ಸದ್ದು ಒಂದಲ್ಲ ಒಂದು ಕಡೆ ಕೇಳ್ತಾ ಇರುತ್ತೆ. ನೆಲ ಬಗೆದು, ಕಾಡು ಉರುಳಿಸಿ ಜಾಗ ಮಾಡಿ ಕಟ್ಟಡಗಳಾಗ್ತಾ ಇವೆ. ಹೀಗೆ ನೆಲ ಬಗೀತಾ ಇದ್ರೆ ಒಂದು ದಿನ ನಿಂತ ನೆಲ ಕುಸಿದು ನಾವು ಮಣ್ಣಿನೊಳಗೆ ಹೂತು ಹೋಗ್ತೀವೇನೋ? ಆದ್ರೆ ಇದರ ನಿಜವಾದ ಕಾರಣ ಜನಸಂಖ್ಯೆಯ ಹೆಚ್ಚಳ. ಅದನ್ನು ಯಾರೂ ಹೇಳೋದೇ ಇಲ್ಲ ನೋಡಿ. ಮೊದಲಿದ್ದ ರಸ್ತೆಗಳು ಸಾಲ್ತಾ ಇಲ್ಲ ನಮ್ಗೆ, ಮೊದಲಿದ್ದ ಮನೆಗಳು ಸಾಲ್ತಾ ಇಲ್ಲ ನಮ್ಗೆ.. ಅಯ್ಯೋ.. ನಾನು ನಿಮ್ ಮಾತು ಕೇಳಿ ಭಾಷಣಾನೇ ಶುರು ಮಾಡ್ಬಿಟ್ಟೆ. ಆದ್ರೆ ಮದ್ವೆ ಮನೆಗೂ, ನಿಮ್ಮ ಉಳಿತಾಯದ ಚಿಂತೆಗೂ ಸಂಬಂಧ ಏನೂ ಅಂತಾನೇ ಅರ್ಥ ಆಗ್ತಿಲ್ಲ

ಜಾಹೀರಾತು

ನಾವು ದೊಡ್ಡ ದೊಡ್ಡ ಮಟ್ಟದ ಮಾತುಗಳನ್ನು ಆಡಿ ಚಿಕ್ಕ ಚಿಕ್ಕ ವಿಷಯಗಳನ್ನು ಮರ್ತು ಬಿಡೋದು ಇಲ್ಲೇ ನೋಡಿ. ಇವತ್ತು ಮದ್ವೆ ಮನೇಲಿ ಊಟದ ತಟ್ಟೆ  ಪಕ್ಕದಲ್ಲಿ ಅರ್ಧರ್ಧ ಲೀಟರಿನ ಸೀಲ್ಡ್ ನೀರಿನ ಬಾಟಲಿ ಇಟ್ಟಿದ್ರು. ಅಷ್ಟು ನೀರು ಯಾರಿಗೆ ಬೇಕಾಗುತ್ತೆ ಹೇಳಿ. ಎಲ್ರೂ ಅಷ್ಟಷ್ಟು ಉಳಿಸಿ ಎದ್ದು ನಡೆದ್ರು. ಸಾಧಾರಣ ಊಟಕ್ಕೆ ಕುಳಿತಿದ್ದ ಮುನ್ನೂರು ಮಂದಿಯ ಹತ್ರ ಇದ್ದ ನೀರು ನೂರೈವತ್ತು ಲೀಟರ್. ಅದ್ರಲ್ಲಿ ಐವತ್ತು ಲೀಟರ್ ನೀರು ಕುಡಿಯುವುದಕ್ಕೆ ಉಪಯೋಗ ಆಗಿದ್ಯೇನೋ. ಉಳಿದೆಲ್ಲಾ ನೀರು ಎಂಜಲು ತಟ್ಟೆಯ ಜೊತೆಗೆ ಸೇರಿತು ಅಷ್ಟೇ!! ಯಾರು ಕೊಟ್ರು ನಮಗೆ ಹೀಗೆ ಹಾಳು ಮಾಡುವ ಹಕ್ಕನ್ನು. ಮೊದಲಾದ್ರೆ ಪಕ್ಕದಲ್ಲಿ ನೀರಿನ ಲೋಟ ಇರ್ತಾ ಇತ್ತು. ನೀರು ಬೇಕಿದ್ರೆ ಕೇಳಿ ಹಾಕಿಸಿಕೊಳ್ತಾ ಇದ್ರಿ, ನಾವು ಆಧುನಿಕರಾಗ್ತಾ ಹೋದಂತೆ ಪೋಲು ಮಾಡುವ ವಿಧಾನಗಳು ಹೆಚ್ಚಾಗ್ತಾ ಹೋಗ್ತಾ ಇದೆ.

ಹುಂ, ಇದಂತೂ ಸತ್ಯ. ಬೇಸರ ಆಗುತ್ತಲ್ವಾ ಸರೋಜಾ

ಹೌದಮ್ಮಾ, ನಾನಂತೂ ನನ್ನ ಬಾಟಲಿಯ ನೀರನ್ನು ಹಾಗೆ ತಂದಿದ್ದೀನಿ ನೋಡಿಲ್ಲಿ

ಜಾಹೀರಾತು

ಇದೊಳ್ಳೆಯ ಉಪಾಯ, ನಾವು ಇಷ್ಟು ಉಳಿಸುವ ಪ್ರಯತ್ನ ಮಾಡಿ ಉಳಿದವರಿಗೂ ಪ್ರೇರಣೆ ನೀಡಬಹುದು ಅಲ್ವಾ..

ಹುಂ, ಹೌದು .. ಹೋ.. ನಮ್ ಯಜಮಾನ್ರು ಬಂದ್ರು ಅನ್ಸುತ್ತೆ, ಬಾಗ್ಲು ತೆಗೀತಾ ಇರೋ ಶಬ್ಧ ಕೇಳಿಸ್ತಾ ಇದೆ.  ಸ್ವಲ್ಪ ನೀರು ಗಂಟಲಿಗೆ ಹುಯ್ಕೊಂಡೇ ಹೊರಡ್ತೀನಿ. ಇಷ್ಟು ಹೊತ್ತು ನನ್ನ ಮನೆಯಿಂದ ಹೊರಗೆ ಕೂರ್ಸಿದ್ದಕ್ಕೆ ಜಗಳ ಬೇರೆ ಮಾಡ್ಬೇಕಿದೆ. ಬರ್ಲಾ ಕನಕಾಂಗಿ..

ಹುಂ, ಹೊರಡಿ ಸರೋಜಾ, ಆಲ್ ದಿ ಬೆಸ್ಟ್ ನಿಮ್ಮ ಜಗಳಕ್ಕೆ. ಆದ್ರೆ ನಿಮ್ಮಿಂದಾಗಿ ನಾನೊಂದು ಪಾಠ ಕಲಿತೆ.   ನಾನು ಇನ್ಮುಂದೆ ಕುಡಿಯುವ ನೀರು ಪೋಲು ಮಾಡಲ್ಲ,

ಜಾಹೀರಾತು

ಅವ್ರೇನೋ ನೀರು ಹಾಳು ಮಾಡುವುದಿಲ್ಲ ಅಂತಿದ್ದಾರೆ, ನೀವು ಏನಂತೀರಾ..??

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Anitha Naresh Manchi
ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಮಂಚಿಯ ರಾಮ ನರೇಶ್ ಮಂಚಿ ಅವರ ಪತ್ನಿ ಅನಿತಾ ನರೇಶ್ ಮಂಚಿ, ಕನ್ನಡದ ಪ್ರಸಿದ್ಧ ಲೇಖಕಿ. ಕೊಡೆ ಕೊಡೆ ನನ್ನಕೊಡೆ ಕಾಲೇಜು ಪಠ್ಯವಾಗಿದೆ. ಎರಡು ಲಘು ಬರಹ ಸಂಕಲನ, ಮೂರು ಕಥಾಸಂಕಲನ ಬಿಡುಗಡೆಗೊಂಡಿವೆ. ನಾಡಿನ ವಿವಿಧ ಪತ್ರಿಕೆಗಳಲ್ಲಿ ಕಥೆ, ಲೇಖನಗಳು ಪ್ರಕಟಗೊಂಡಿವೆ. ಅವರ ಕಥೆಗಳು ಬೇರೆ ಭಾಷೆಗೂ ಅನುವಾದಗೊಂಡಿವೆ. ವಿಜಯವಾಣಿ ದಿನಪತ್ರಿಕೆಯಲ್ಲಿ ಅಂಕಣ ಬರೆಯುವ ಅನಿತಾ ಅವರಿಗೆ ಮಂಗಳೂರಿನ ಕನ್ನಡ ರತ್ನ ಪ್ರಶಸ್ತಿ. ಕೊಡಗಿನ ಗೌರಮ್ಮ ಪ್ರಶಸ್ತಿ, ಅಕ್ಷರ ಶ್ರೀ ಪ್ರಶಸ್ತಿ ದೊರಕಿವೆ.

Be the first to comment on "ಹನಿ ಹನಿ ಕಹಾನಿ.."

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*