ವೆನಿಲ್ಲಾ ಹೂವೂ, ರಕ್ತಸಂಬಂಧವೂ

  • ಕಥೆ – ಅನಿತಾ ನರೇಶ್ ಮಂಚಿ

www.bantwalnews.com

ಜಾಹೀರಾತು

ಕರಾಗ್ರೇ ವಸತೇ ಲಕ್ಷ್ಮಿ ಕರ ಮಧ್ಯೇ ಸರಸ್ವತಿ.. ಎಂದು ಹೇಳಿಕೊಳ್ಳುತ್ತಿರುವಾಗಲೇ ’ಸರಸ್ವತೀ’ ಎಂಬ ಗಂಡನ ಸ್ವರ ಕೇಳಿಸಿತು. ’ಬಂದೇ ಎಂದು ಅಲ್ಲಿಗೆ ಕೈ ಮುಗಿದು ಎದ್ದು ಹೊರ ನಡೆದಳು. ಬೆಳಕಿನ್ನೂ ಮೂಡಿರಲಿಲ್ಲ.

ಜಾಹೀರಾತು

 

ಬಚ್ಚಲಿನ ಒಲೆಯ ಎದುರು ಕುಕ್ಕುರುಗಾಲಿನಲ್ಲಿ ಕುಳಿತ ನರಹರಿ ’ ಇಕಾ ಅಲ್ಲಿ ದೇವರ ಪಟದ ಹಿಂದೆ ಒಂದು ತೊಟ್ಟೆಯ ಒಳಗೆ ಬೀಡಿ ಕಟ್ಟು ಇಟ್ಟಿದ್ದೇನೆ. ಅದರಿಂದ ಒಂದು ಬೀಡಿ ತಂದುಕೊಡು.ನಿನ್ನೆ ರಾತ್ರಿ ಹಾಕಿದ ಸೌದೆ ಕುಂಟೆ ಇನ್ನೂ ಹೊತ್ತಿ ಮುಗಿದಿಲ್ಲ. ಕೆಂಡ ಕಾಣ್ತಾ ಉಂಟು. ಮತ್ತೆ ಎಳೆಯುವ ಬೀಡಿ ಈಗಲೇ ಎಳೆದರಾಯ್ತು. ಒಂದು ಬೆಂಕಿ ಕಡ್ಡಿ ಉಳೀತದೆ ಎಂದ ದೊಡ್ಡ ಲೆಕ್ಕಾಚಾರದ ಗತ್ತಿನಲ್ಲಿ.

ಜಾಹೀರಾತು

ಯಾವ ದೇವರ ಪಟದ ಹಿಂದೆ ಇಟ್ಟಿದ್ದಾರಪ್ಪಾ ಎಂದು ಒಂದೆರಡರ ಹಿಂದೆ ಕೈ ಹಾಕಿ ನೋಡಿದಳು. ಅಲ್ಲಿದ್ದ ಜೇಡನ ಬಲೆಯ ಹಸಿ ಅಂಟು ಕೈ ಮೆತ್ತಿಕೊಂಡಿತು. ಈಗಷ್ಟೇ ತನ್ನ ಕೆಲಸ ಪ್ರಾರಂಭಿಸಿದ್ದ ಜೇಡ ಹೆದರಿ ದೇವರ ಫೊಟೋದ ಎದುರುಗಡೆಯ ಕಿರೀಟದ ಹತ್ತಿರ ನಿಂತು ಇವಳನ್ನೇ ನೋಡತೊಡಗಿತು.

’ಎಂತಾ ಮಾರಾಯ್ತಿ ಇನ್ನೂ ಸಿಕ್ಕ್ಲಿಲ್ವಾ.. ಅಲ್ಲೇ ಮೊನ್ನೆ ತಂದ ಹೊಸ ಪಟ ಉಂಟಲ್ಲ ಸ್ವಾಮಿಗಳದ್ದು.. ಅದರ ಹಿಂದೆ ಉಂಟು ನೋಡು..’ಎಂದವನು ಇಷ್ಟೊತ್ತಿಗೆ ನಾನೇ ಎದ್ದು ಹೋಗಿದ್ದರೆ ಎರಡು ಬೀಡಿ ಎಳೆದಾಗುತ್ತಿತ್ತು, ಹಾಳು ಚಳಿ.. ಏಳಲಿಕ್ಕೆ ಮನಸ್ಸಿಲ್ಲ ಎಂದು ಮನಸ್ಸಿನಲ್ಲೇ ಬಯ್ದುಕೊಂಡ.

ಮೊದಲೇ ಹೇಳಿದ್ರೇನಾಗ್ತಿತ್ತು ಇವರಿಗೆ ಎಂದುಕೊಂಡು ಜೇಡನ ಬಲೆ ಅಂಟಿದ ಕೈಯನ್ನು ಸೆರಗಿಗೆ ಒರೆಸಿಕೊಂಡು ಫೊಟೋದ ಹಿಂಬಾಗದಲ್ಲಿದ್ದ ಪ್ಲಾಸ್ಟಿಕ್ ಲಕೊಟೆಯನ್ನು ಎಳೆದಳು.

ಜಾಹೀರಾತು

ಅಬ್ಬಾ ಈ ಬೀಡಿ ಕಟ್ಟಿಗೊಂದು ಎಷ್ಟು ಜಾಗ್ರತೆ.. ಹೊರಗೆ ಒಂದು ತೊಟ್ಟೆ ಸಾಲದು ಅಂತ ಮತ್ತೊಂದು ಕಾಗದದ ಲಕೋಟೆ ಬೇರೆ.. ಬಿಡಿಸುವಾಗ ಕಾಗದದ ಲಕೋಟೆ ಮದುವೆ ಆಮಂತ್ರಣ ಪತ್ರಿಕೆಯಂತೆ ಕಂಡಿತು. ಇದ್ಯಾರ ಕಾಗದದಲ್ಲಿ ಬೀಡಿ ಕಟ್ಟು ಸುಂದಿ ಇಟ್ಟಿದ್ದಾರಪ್ಪಾ ಇವರು ಎಂದು ಮಂದ ಬೆಳಕಿನಲ್ಲಿ ನೋಡಿದಳು.

ಅರ್ರೇ.. ಅಣ್ಣನ ಹೆಸರಿದೆ ಇದರಲ್ಲಿ.. ಕುತೂಹಲ ಇಮ್ಮಡಿಸಿತು. ಸೀತಾಲಕ್ಷ್ಮಿಗೆ ಮದುವೆ.. ಅಂದರೆ ಅಣ್ಣನ ಮಗಳಿಗೆ.. ಮದುವೆ ಕಳೆದುಹೋಗಿದೆಯೇನೋ.. ಹೋ..ಇಲ್ಲ ಈ ತಿಂಗಳ ಇಪ್ಪತ್ತೆಂಟಕ್ಕೆ.. ಇನ್ನು ದಿನ ಉಂಟು ಹಾಗಿದ್ರೆ..

ಎಂತಾ ಕರ್ಮ ಮಾರಾಯ್ತಿ.. ಬೀಡಿ ಎಂತ ನೀನೇ ಕಟ್ಟಿ ತರುವುದಾ.. ಇಲ್ಲಿಕೆಂಡ ಹೊತ್ತಿ ಬೂದಿಯಾಯ್ತು.. ಇನ್ನೆಲ್ಲಿಗೆ ಬೀಡಿ.. ಎಂದು ಎದ್ದು ಬಂದವನಿಗೆ ಹೆಂಡತಿಯ ಕೈಯಲ್ಲಿದ್ದ ಕಾಗದ ಕಂಡು ವಿಷಯ ಅರ್ಥವಾಗಿ ಕಂಡೂ ಕಾಣದಂತೆ ಅದೇ ವೇಗದಲ್ಲಿ ಹೆಗಲಲ್ಲಿದ್ದ ಬೈರಾಸು ಕೊಡವಿ ಅಂಗಳಕ್ಕಿಳಿದ. ಅಡಿಕೆ ಮರದ ಕಾಲು ಸಂಕ ದಾಟಿ ತೋಟದೊಳಗೆ ಮರೆಯಾದ.

ಜಾಹೀರಾತು

ನಿನ್ನೆ ಸಂಜೆ ಅಂಗಡಿಗೆ ಹೋಗಿದ್ದಾಗ ’ನಿಮ್ಗೆ ಒಂದು ಪೋಸ್ಟ್ ಇತ್ತು.. ಬರ್ಲಿಕ್ಕೆ ಮೊನ್ನೆಯೇ ಬಂದಿದೆ. ನೀವು ಈ ಕಡೆ ಬರ್ಲಿಲ್ಲ ನೋಡಿ. ಬಂದಾಗ ಕೊಟ್ರಾಯ್ತು ಅಂತ ಇಲ್ಲಿಯೇ ಇಟ್ಟೆ. ತೆಗೊಳ್ಳಿ ಎಂದು ಅಂಗಡಿಯ ಸಂಜೀವ ನರಹರಿಯ ಕೈಗೆ ಕಾಗದ ವರ್ಗಾಯಿಸಿದ್ದ. ನೋಡಿದರೆ ಸರಸ್ವತಿಯ ಅಣ್ಣನ ಮಗಳ ಮದುವೆ ಕಾಗದ.ಮದುವೆಗೆ ನಾವು ಬರಬೇಕೆಂದಿದ್ದರೆ ಹೀಗಾ ಕಾಗದ ಕಳಿಸುವುದು..ಮೊದಲೇನೇ ಆಗಿದ್ದರೂ ತಂಗಿ ಭಾವ ಮದುವೆಗೆ ಬರಲೇಬೇಕೆಂದಿದ್ದರೆ ಮನೆಗೆ ಬಂದು ಹೇಳುವಷ್ಟು ಸೌಜನ್ಯ ಬೇಡ್ವಾ.. ಎಂದು ಸಿಟ್ಟು ಬಂದಿತ್ತವನಿಗೆ. ಆಗಲೇ ಸಣ್ಣ ಪಿರಿ ಪಿರಿ ಮಳೆ ಸುರುವಾಗಿದ್ದು.ಕೈಯಲ್ಲಿದ್ದ ಬೀಡಿ ಕಟ್ಟು ಒದ್ದೆಯಾಗುತ್ತದೆಂದು ಒಳಗಿನ ಕಾಗದವನ್ನು ತೆಗೆದು ಬಿಸಾಡಿ ಹೊರಗಿನ ಲಕೋಟೆಯಲ್ಲಿ ಬೀಡಿ ಕಟ್ಟನ್ನು ಇರಿಸಿ ತಂದಿದ್ದ. ಮನೆಗೆ ನುಗ್ಗಿದ ಮೇಲೆ ಕಾಗದದ ವಿಷಯವೇ ಮರೆತಿದ್ದ.

ಅದನ್ನೇ ಯೋಚಿಸುತ್ತಾ ತೋಟದೊಳಗೆ ಸುಮಾರು ದೂರ ಬಂದವನು ಹೇಗೂ ಬಂದಾಗಿದೆಯಲ್ಲ.. ಕಾಟು ಮಾವಿನಹಣ್ಣು ಬಿದ್ದದ್ದನ್ನು ಹೆಕ್ಕಿಕೊಂಡೇ ಮನೆಗೆ ಹೋದರಾಯಿತು ಎಂದು ಕೈಗೆ ಸಿಕಿದ ಅಡಿಕೆ ಹಾಳೆಯನ್ನು ಹಿಡಿದುಕೊಂಡು ಹೊರಟ. ಕಣ್ಣಿಗೆ ಕಂಡ ಹಣ್ಣಡಿಕೆ, ಮಾವಿನಹಣ್ಣು ಎಂದೆಲ್ಲಾ ಸ್ವಲ್ಪ ಸಮಯ ಕಳೆದರೂ ಮನೆಯ ಕಡೆ ಕಾಲೆತ್ತಿಡಲು ಮನಸ್ಸೇ ಬರುತ್ತಿಲ್ಲ. ಅಲ್ಲೇ ತೋಟದ ಕೆರೆಯ ಬದಿಯಲ್ಲಿ ಕೂತವನ ಕಣ್ಣೆದುರು ರೀಲಿನಂತೆ ಹಳೆಯ ನೆನಪುಗಳು ಬಿಚ್ಚಿಕೊಳ್ಳತೊಡಗಿದವು.

ಇವಳ ಅಣ್ಣನ ಮಗನ ಉಪನಯನದ ಸಡಗರ.ನಾಲ್ಕು ದಿನಕ್ಕೆ ಮೊದಲೇ ನಾಂಧಿ ಮಾಡ್ತೇವೆ ಭಾವ. ಆಗ ಬಂದರೆ ಉಪನಯನ ಕಳೆದೇ ಹೋಗುವುದು ಎಂದು ಸರಸ್ವತಿಯ ಅಣ್ಣನ ಒತ್ತಾಯದ ಹೇಳಿಕೆ. ತೋಟದ ಕೆಲಸ ನಾವೇ ಮಾಡುವುದಾದ ಕಾರಣ ಬಂದು ಮಾಡಿದರಾಯಿತು. ಒಂದೆರಡು ದಿನದಲ್ಲೇನು ಪ್ರಳಯ ಆಗ್ತದಾ..? ಆದರೆ ಹಟ್ಟಿಯಲ್ಲಿರುವ ಜಾನುವಾರುಗಳ ಹೊಟ್ಟೆಗೆ ಹಾಕಬೇಕಲ್ಲ. ಅದರ ಉಸ್ತುವಾರಿಗಾಗಿ ಪಕ್ಕದಲ್ಲೇ ಇದ್ದ ಗೋಪಾಲನನ್ನು ದಿನಾ ಬಂದು ಹುಲ್ಲು ಹಿಂಡಿ ಹಾಕಿ, ಹಟ್ಟಿ ಕ್ಲೀನ್ ಮಾಡಿ, ಕರೆಯುವ ಹಸು ಗಂಗೆಯ ಹಾಲು ಕರೆದು ಅವನ ಮನೆಗೇ ತೆಗೆದುಕೊಂಡು ಹೋಗಲು ಒಪ್ಪಿಸಿ ಆಗಿತ್ತು. ವನಿತಾ, ವಿನುತಾ ಅಜ್ಜನ ಮನೆಗೆ ಹೋಗುವುದೆಂದು ಹಿಗ್ಗಿನಿಂದ ತಯಾರಿ ನಡೆಸುತ್ತಿದ್ದರು.ಇಬ್ಬರೂ ಸೇರಿ ಮನೆಯಂಗಳದಲ್ಲಿ ಹೂ ಬಿಟ್ಟಿದ್ದ ಅಬ್ಬಲ್ಲಿಗೆ, ಮಲ್ಲಿಗೆ ಎಲ್ಲವನ್ನೂ ಕೊಯ್ದು ಚೆಂದದ ಮಾಲೆ ಕಟ್ಟಿದ್ದರು. ಹೊರಡುವಾಗ ಸರಸ್ವತಿಯ ತಲೆಯೂ ಸೇರಿದಂತೆ ಮೂವರ ತಲೆಯ ಮೇಲೆ ಬಣ್ಣ ಬಣ್ಣದ ಹೂಗಳ ರಾಶಿಯೇ ಇತ್ತು.ಅದನ್ನು ನೋಡಿ ’ಈ ಎಲ್ಲಾ ಮಾಲೆಯನ್ನು ಪೇಟೆಯಲ್ಲಿ ಮಾರಿದ್ದರೆ ಬಸ್ಸಿನ ಟಿಕೆಟ್ ದುಡ್ದು ಬರ್ತಿತ್ತು’ ಅಂತ ನಾನೇ ಹಾಸ್ಯ ಮಾಡಿದ್ದೆ.

ಜಾಹೀರಾತು

ಆತ್ಮೀಯ ಸ್ವಾಗತ, ಜೊತೆಗೆ ಹಲವಾರು ಕೆಲಸಗಳ ಜವಾಬ್ಧಾರಿ. ಹೀಗೆ ಉಪನಯನದ ಸಡಗರದೊಳಗೆ ನಾವೂ ಮುಳುಗಿದ್ದೆವು. ಉಪನಯನದ ದಿನ ಬೆಳಿಗ್ಗೆ ನನ್ನ ಮಕ್ಕಳು ಅದ್ಯಾವ ಮಾಯದಲ್ಲಿ ತೋಟಕ್ಕೆ ಹೋಗಿದ್ದರೋ ಗೊತ್ತಿಲ್ಲ. ಅಲ್ಲಿ ಕಣ್ಣಿಗೆ ಆಕರ್ಷಕವಾಗಿ ಕಂಡ ವೆನಿಲ್ಲಾ ಹೂವನ್ನೆಲ್ಲಾ ಕೊಯ್ದು ಮಡಿಲಲ್ಲಿ ತುಂಬಿಕೊಂಡು ಬಂದು ಎಲ್ಲರ ಎದುರು ಹರವಿದರು. . ಸಡಗರದಿಂದಿದ್ದ ಮನೆ ಇದನ್ನು ನೋಡಿ ಒಮ್ಮೆಲೇ ಸ್ಥಬ್ಧವಾಯಿತು. ಎಲ್ಲರೂ ತಲೆಗೊಂದರಂತೆ ಮಾತನಾಡುವವರೇ.. ವೆನಿಲ್ಲಾಕ್ಕೆ ಚಿನ್ನದ ಬೆಲೆಯ ಸಮಯವದು. ನನಗೂ ಮಕ್ಕಳ ಬುದ್ಧಿ ಹೀನ ಕೆಲ್ಸ ನೋಡಿ ಸಿಟ್ಟು ಬಂದರೂ ಎಲ್ಲರೆದುರು ಹೊಡೆದು ಬಡಿದು ಬಂಗಿಸಲು ಸಾಧ್ಯವೇ? ಸಿಟ್ಟನ್ನು ತಡೆದುಕೊಂಡು ಸುಮ್ಮನಾಗಿದ್ದೆ.

ಸರಸ್ವತಿ ಕೈಯಲ್ಲೇ ಮಕ್ಕಳಿಬ್ಬರಿಗೂ ಎರಡೇಟು ಬಿಗಿದಿದ್ದಳು. ಭಾವನ ಹತ್ತಿರ ನಾನೇ ಕ್ಷಮಾಪಣೆ ಕೇಳಿದ್ದೆ.ಆದರೆ ಅವನ ಮುಖ ಎಷ್ಟೊತ್ತಾದರೂ ಪ್ರಸನ್ನ ಸ್ಥಿತಿಗೆ ಬರಲೇ ಇಲ್ಲ.

ನಾವು ಹೊರಡುವಾಗಲೂ ಮುಖ ಬಿಗಿದುಕೊಂಡೇ ’ಹೋಗಿ ಬರ್ತೇವೆ’ ಎಂದದ್ದಕ್ಕೆ ತಲೆ ಅಲುಗಿಸಿದಂತೆ ಮಾಡಿ ಒಳ ನಡೆದಿದ್ದ. ಸರಸ್ವತಿ ದುಃಖದಿಂದಲೇ ಹೊರಟರೆ ಮಕ್ಕಳು ಹೆದರಿ ಕಂಗಾಲಾಗಿದ್ದವು. ದೊಡ್ಡ ಮಗಳಂತೂ ’ಅಪ್ಪಾ ತಪ್ಪಾಯಿತಪ್ಪಾ ಮನೆಗೆ ಹೋಗಿ ಹೊಡೀಬೇಡ ..ನಾವಿನ್ನೂ ಯಾವ ಹೂವೂ ಕೊಯ್ಯೋದಿಲ್ಲ ಅಪ್ಪಾ’ಎಂದು ಕ್ಶಣಕ್ಕೊಮ್ಮೆ ನನ್ನನ್ನು ಅಂಗಲಾಚುತ್ತಿದ್ದಳು. ಕೊನೆಗೇ ನಾನೇ ಅವಳನ್ನು ಎತ್ತಿ ಸಮಾಧಾನ ಪಡಿಸಬೇಕಾಯಿತು.

ಜಾಹೀರಾತು

ಸ್ವಲ್ಪ ಸಮಯವಾದ ಮೇಲೆ ಇದೆಲ್ಲಾ ಪುಟ್ಟ ಮಕ್ಕಳ ತಂಟೆ ಎಂದು ನಾವಿಬ್ಬರೂ ಮರೆತೂ ಬಿಟ್ಟಿದ್ದೆವು.ಒಂದು ದಿನ ಇದ್ದಕ್ಕಿದ್ದಂತೆ ಸರಸ್ವತಿ ’ ಅಲ್ಲಾ ಈ ಸೆಪ್ಟೆಂಬರ್ ತಿಂಗಳಲ್ಲೇ ಅಲ್ವಾ ನನ್ನಪ್ಪನ ತಿಥಿ ಬರೋದು.. ಅಣ್ಣನ ಹೇಳಿಕೆ ಕಾಗದ ಬರಲಿಲ್ವಾ.. ಸೂತಕ ಗೀತಕ ಎಂತಾರೂ ಬಂತೋ ಹೇಗೆ’ ಅಂತ ಕೇಳಿದ್ದಳು.

ನನಗೂ ಹಾಗೇ ಅನಿಸಿ, ಇದ್ದರೂ ಇರಬಹುದು ಎಂದುಕೊಂಡಿದ್ದೆ. ಆದರೆ ಕೆಲ ದಿನಗಳಲ್ಲಿ ಹತ್ತಿರದ ಮನೆಯ ಜೆಂಬ್ರವೊಂದರಲ್ಲಿ ರಾಮಣ್ಣ ಭಟ್ರು ಸಿಕ್ಕಿದ್ದರು. ಅವರು ಸರಸ್ವತಿಯನ್ನು ಕಂಡು ’ಎಂತಾ ನೀನೀ ಸರ್ತಿ ಅಪ್ಪನ ತಿಥಿಗೆ ಬರಲಿಲ್ಲಾ.. ನರಹರಿಯೂ ಕಾಣ್ಲಿಲ್ಲ’ ಅಂತ ಕೇಳಿದ್ದರಂತೆ. ನಮ್ಮಿಬ್ಬರಿಗೂ ಮುಖದ ಮೇಲೆ ಹೊಡೆದಂತಾ ಪೆಟ್ಟು.ಸರಸ್ವತಿಯಂತೂ ಅತ್ತೂ ಅತ್ತೂ ಸುಸ್ತಾದಳು. ಮತ್ತೆ ಸ್ವಲ್ಪ ದಿನಗಳಲ್ಲಿ ಇವಳ ಅಣ್ಣ ಇನ್ಯಾರ ಬಳಿಯೋ ’ನಾನು ವೆನಿಲ್ಲಾ ಬೆಳೆದು ದುಡ್ಡು ಮಾಡ್ತೇನೆ ಅಂತ ಅವರಿಗೆ ಅಸೂಯೆ. ಅದಕ್ಕಾಗಿ ಅವರೇ ಮಕ್ಕಳನ್ನು ಕಳಿಸಿ ಹೂ ಕೊಯ್ಸಿದ್ದು.. ಈ ಪಾಪದವ್ರಿಗೆ ಹುಳ್ಕು ಬುದ್ಧಿ ಜಾಸ್ತಿ ನೋಡಿ .. ನಾನೇನೋ ತಂಗಿ ಭಾವ ಅಂತ ಅವರನ್ನು ಸುಮ್ಮನೆ ಹೋಗಲು ಬಿಟ್ಟೆ. ಬಾಕಿಯವ್ರಾಗಿದ್ರೆ ಒದ್ದು ಕಳಿಸ್ತಿದ್ರು.. ’ ಎಂದು ಹೇಳಿದ ಸುದ್ಧಿ ನನ್ನ ಕಿವಿಗೆ ಬಿತ್ತು. ಆದಿನವೇ ಮನೆಗೆ ಬಂದು ’ಸರಸ್ವತೀ ಇನ್ನು ನಿನಗೆ ಅಪ್ಪನ ಮನೆ ಇಲ್ಲ. ಅಳೋದೇನಿದ್ರೂ ಈಗಲೇ ಅತ್ತು ಮುಗಿಸಿ ಬಿಡು. ಇನ್ನು ಅವರಿಗಾಗಿ ನೀನು ಅಳ್ತೀಯಾ ಅಂತಾದರೆ ಅದು ನನಗೆ ಮಾಡುವ ಅವಮಾನ’ ಎಂದಿದ್ದೆ. ಅವಳೂ ಗಟ್ಟಿ ಹೆಂಗಸು. ಅವ್ರಿಗೆ ನಾವು ಬೇಡದವರಾದ್ರೆ ನಮ್ಗ್ಯಾಕೆ ಬೇಕು ಅವ್ರು. ಬಿಡಿ ಅತ್ಲಾಗಿ.. ಋಣ ಇದ್ದಿದ್ದೇ ಅಷ್ಟು ಅಂದ್ಕೊಳ್ತೀನಿ ಎಂದು ಸುಮ್ಮನಾಗಿದ್ದಳು.

’ಕೂ ಕೂ.. ಅಪ್ಪಾ ಅಪ್ಪಾ..’ ಮಗಳ ಸ್ವರ ತೋಟದ ಇನ್ನೊಂದು ಮೂಲೆಯಿಂದ ಕೇಳಿ ಬಂತು. ನರಹರಿ ತಲೆ ಕೊಡವಿ ಮೇಲೆದ್ದು ಕೈಯಲ್ಲಿದ್ದ ಹಾಳೆಯನ್ನು ಹಿಡಿದುಕೊಂಡು, ಬಂದೇ ಎಂದು ಸ್ವರ ಏರಿಸಿ ಹೇಳಿದ.

ಜಾಹೀರಾತು

’ಅಮ್ಮಾ ಹಲಸಿನಕಾಯಿ ದೋಸೆ ಮಾವಿನಹಣ್ಣಿನ ರಸಾಯನ ಮಾಡಿ ನಿಮ್ಮನ್ನು ಆಗಿನಿಂದ ಕರೀತಾ ಇದ್ದಾಳೆ. ಕೊಡಿ ಇತ್ಲಾಗಿ ಆ ಹಾಳೆ’ ಎಂದು ಕೈಯಿಂದ ತೆಗೆದುಕೊಂಡಳು.

ಅಬ್ಬಿ ಕೊಟ್ಟಿಗೆಯಲ್ಲಿ ಕೈಕಾಲು ತೊಳೆದುಕೊಂಡು ಗೋಡೆಗೊರಗಿಸಿದ್ದ ಮಣೆ ಎಳೆದು, ಬಾಳೆಯ ಎಲೆಯೆದುರು ಕೂತ ನರಹರಿ, ಕಾಗದ ಬಂದ ಸುದ್ಧಿ ಹೇಳದೇ ಇದ್ದುದು ಸರಸ್ವತಿಗೆ ಬೇಸರವಾಯಿತೇನೋ ಎಂದು ಹೆಂಡತಿಯ ಮುಖ ನೋಡಿದ. ಆದರೆ ಅವಳು ಎಂದಿನಂತೆ ಶಾಂತ ಚಿತ್ತದಲ್ಲಿದ್ದಂತೆ ಕಂಡಿತು. ಮತ್ತೆ ಅದನ್ನೇ ಕೆದಕುವುದೇಕೆಂದು ಸುಮ್ಮನಾಗಿ ದೋಸೆ ತಿನ್ನಲು ಶುರು ಮಾಡಿದ. ರುಚಿಯಾದ ರಸಾಯನ ನಾಲಿಗೆಗೆ ತಾಗುತ್ತಿದ್ದಂತೇ ಹೊಸ ಉಲ್ಲಾಸ ಉಕ್ಕಿ ಬಂತು.

’ ಅಪ್ಪಾ ಇವತ್ತು ನನ್ನ ಕಾಲೇಜು ರಿಸಲ್ಟ್ .. ಒಳ್ಳೇ ಮಾರ್ಕಂತೂ ಗ್ಯಾರಂಟಿ, ನಾನು ಎಮ್ ಎಸ್ ಸಿ ಮಾಡ್ಬೇಕಪ್ಪ. ಕಷ್ಟ ಆಗಬಹುದಾ ಅಪ್ಪಾ ನಿಮ್ಗೆ.. ತಂಗಿಗೆ ಕೂಡಾ ಓದ್ಬೇಕಲ್ಲ ಎಂದ ಮಗಳ ಮಾತು ಎದೆಗೆ ತಟ್ಟಿತು. ಇಲ್ಲಾ ಮಗಳೇ.. ಕಷ್ಟ ಎಂತದ್ದು.. ಕಲಿ ನೀನು.. ಸ್ವಲ್ಪ ದಿನ ಉಂಟಲ್ಲ ಸಮಯ .. ಹಣದ ವ್ಯವಸ್ಥೆ ನಾನು ಮಾಡ್ತೇನೆ ಎಂದು ನರಹರಿ ಎದ್ದ.

ಜಾಹೀರಾತು

ಮಂಡಿಗೆ ಅಡಿಕೆ ಹಾಕಿ ಹೊರ ಬರುವಾಗ ರಾಂಭಟ್ರು ಯಾರದೋ ಬೈಕಿನ ಹಿಂದೆ ಕುಳಿತು ಬಂದವರು ಇಳಿಯುತ್ತಿದ್ದುದು ಕಾಣಿಸಿತು. ಅರೇ ಇವತ್ತು ಸರಸ್ವತಿಯ ಅಣ್ಣನ ಮಗಳ ಮದುವೆ ಅಲ್ವಾ.. ಇವರ್ಯಾಕೆ ಹೋಗಿಲ್ಲ ಎಂದುಕೊಂಡ ನರಹರಿ. ಅವರು ನರಹರಿಯನ್ನು ಕಂಡವರೇ ಹತ್ತಿರ ಬಂದು ’ವಿಷಯ ಗೊತ್ತಾಯ್ತಾ.. ನಿನ್ನ ಬಾವನ ಮಗಳು ನಿಘಂಟಾದ ಮದುವೆ ಬೇಡ ಅಂತ ಮೊನ್ನೆಯೇ ಮದುವೆಗೆ ತಂದ ವಸ್ತ್ರ ವಡವೆ ಎಲ್ಲಾ ತೆಗೆದುಕೊಂಡು ಅವಳು ಮದುವೆ ಆಗುತ್ತೇನೆ ಎಂದ ಹುಡುಗನ ಜೊತೆ ಎಲ್ಲಿಗೋ ಹೋಗಿದ್ದಾಳಂತೆ ಮಾರಾಯ.. ಎಂತಾ ಕಲಿಕಾಲ ನೋಡು..’ ಎಂದರು. ನರಹರಿಗೆ ಏನೂ ಹೇಳುವುದಾಗಲಿಲ್ಲ. ಮಾತು ಕೂಡಲೇ ಅಡಿಕೆಯ ರೇಟಿನ ಬಗ್ಗೆ ತಿರುಗಿ ಅದರ ಏರಿಳಿತದ ಚರ್ಚೆ ಶುರು ಆಗಿ ಮುಗಿಯಿತು.

ಈ ವಿಷಯವನ್ನೀಗ ಮನೆಯಲ್ಲಿ ಸರಸ್ವತಿಗೆ ಹೇಳುವುದೋ ಬೇಡವೋ ಎಂಬ ಗೊಂದಲದೊಂದಿಗೆ ನರಹರಿ ಮನೆಯ ಕಡೆಗೆ ಹೆಜ್ಜೆ ಹಾಕತೊಡಗಿದ.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು

About the Author

Anitha Naresh Manchi
ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಮಂಚಿಯ ರಾಮ ನರೇಶ್ ಮಂಚಿ ಅವರ ಪತ್ನಿ ಅನಿತಾ ನರೇಶ್ ಮಂಚಿ, ಕನ್ನಡದ ಪ್ರಸಿದ್ಧ ಲೇಖಕಿ. ಕೊಡೆ ಕೊಡೆ ನನ್ನಕೊಡೆ ಕಾಲೇಜು ಪಠ್ಯವಾಗಿದೆ. ಎರಡು ಲಘು ಬರಹ ಸಂಕಲನ, ಮೂರು ಕಥಾಸಂಕಲನ ಬಿಡುಗಡೆಗೊಂಡಿವೆ. ನಾಡಿನ ವಿವಿಧ ಪತ್ರಿಕೆಗಳಲ್ಲಿ ಕಥೆ, ಲೇಖನಗಳು ಪ್ರಕಟಗೊಂಡಿವೆ. ಅವರ ಕಥೆಗಳು ಬೇರೆ ಭಾಷೆಗೂ ಅನುವಾದಗೊಂಡಿವೆ. ವಿಜಯವಾಣಿ ದಿನಪತ್ರಿಕೆಯಲ್ಲಿ ಅಂಕಣ ಬರೆಯುವ ಅನಿತಾ ಅವರಿಗೆ ಮಂಗಳೂರಿನ ಕನ್ನಡ ರತ್ನ ಪ್ರಶಸ್ತಿ. ಕೊಡಗಿನ ಗೌರಮ್ಮ ಪ್ರಶಸ್ತಿ, ಅಕ್ಷರ ಶ್ರೀ ಪ್ರಶಸ್ತಿ ದೊರಕಿವೆ.

Be the first to comment on "ವೆನಿಲ್ಲಾ ಹೂವೂ, ರಕ್ತಸಂಬಂಧವೂ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*