ಬಿ.ಸಿ.ರೋಡ್: ಬಂಟ್ವಾಳ ತಾಲೂಕಿನ ಕುಕ್ಕಿಪ್ಪಾಡಿ ಗ್ರಾಮದ ಪೆಲತ್ತಬೆಟ್ಟು ಎಂಬಲ್ಲಿ ಮಹಿಳೆ ಮತ್ತು ಅವರ ಹೆಣ್ಣು ಮಗಳು ವಾಸಿಸುತ್ತಿದ್ದ ಮನೆ ಸಂಪೂರ್ಣ ಕುಸಿದುಹೋಗಿದ್ದ ಹಿನ್ನೆಲೆಯಲ್ಲಿ, ಸಂಕಷ್ಟದಲ್ಲಿರುವ ಜಯಂತಿಯವರ ಕುಟುಂಬಕ್ಕೆ ಹೊಸ ಮನೆಯೊಂದನ್ನು ನಿರ್ಮಿಸಿಕೊಡುವ ಮಾನವೀಯ ಕಾರ್ಯಕ್ಕೆ ಸಿದ್ದಕಟ್ಟೆ ಕುಲಾಲ ಸುಧಾರಕ ಸಂಘ ಮುಂದಾಗಿದೆ.
ಆರ್ಥಿಕವಾಗಿ ಹಲವು ಸವಾಲುಗಳ ನಡುವೆಯೂ ಸಂಘವು ದೃತಿಗೆಡದೆ ದಾನಿಗಳು ಹಾಗೂ ಸಮಾಜ ಬಾಂಧವರ ಸಹಕಾರದೊಂದಿಗೆ ಮನೆ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಂಡಿದೆ. ವಿವಿಧ ದಾನಿಗಳು ನೀಡಿದ ದೇಣಿಗೆಯಿಂದ ಮನೆ ನಿರ್ಮಾಣಕ್ಕೆ ಅಗತ್ಯವಿರುವ ಕಟ್ಟಡ ಸಾಮಗ್ರಿಗಳನ್ನು ಸಂಗ್ರಹಿಸಿ, ಕೂಲಿ ಕಾರ್ಮಿಕರನ್ನೇ ಅವಲಂಬಿಸದೆ ಸಂಘದ ಸದಸ್ಯರೇ ಶ್ರಮದಾನದ ಮೂಲಕ ಮನೆ ನಿರ್ಮಿಸುವ ನಿರ್ಧಾರ ಕೈಗೊಂಡಿದ್ದಾರೆ.
ಕಳೆದ ಸುಮಾರು ಆರು ವಾರಗಳಿಂದ ಸಂಘದ ಸದಸ್ಯರು ನಿರಂತರವಾಗಿ ಶ್ರಮದಾನ ನಡೆಸಿ, ಮನೆಯ ಪಾಯ ಹಾಕುವುದರಿಂದ ಹಿಡಿದು ಕಲ್ಲಿನ ಕಟ್ಟಡ ನಿರ್ಮಾಣದವರೆಗೆ ವಿವಿಧ ಹಂತದ ಕಾಮಗಾರಿಗಳನ್ನು ಸ್ವತಃ ನಿರ್ವಹಿಸಿದ್ದಾರೆ. ಸಂಘದ ಸದಸ್ಯರ ಸಾಮೂಹಿಕ ಪರಿಶ್ರಮದಿಂದ ಮನೆಯ ಗೋಡೆ ನಿರ್ಮಾಣ ಕಾರ್ಯವೂ ಬಹುತೇಕ ಪೂರ್ಣಗೊಂಡಿದ್ದು, ಇದೀಗ ಮನೆಗೆ ಹಂಚು ಹಾಸುವ ಕಾರ್ಯ ನಡೆಯುತ್ತಿದೆ.
ಬಿಸಿಲನ್ನೂ ಲೆಕ್ಕಿಸದೆ ಶ್ರಮದಾನ : ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಆಶ್ರಯದಲ್ಲಿರುವ ಕುಲಾಲ ಸೇವಾದಳವು ಮನೆಗೆ ಹಂಚು ಹಾಸುವ ಕಾರ್ಯಕ್ಕೆ ಸಹಕಾರ ನೀಡುವಂತೆ ಸಂಘದ ವತಿಯಿಂದ ಮನವಿ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಅ.೪ರಂದು ಸೇವಾದಳದ ಸದಸ್ಯರು ಪೆಲತ್ತಬೆಟ್ಟುವಿನ ಮನೆ ನಿರ್ಮಾಣ ಸ್ಥಳಕ್ಕೆ ತೆರಳಿ ಶ್ರಮದಾನ ನಡೆಸಿದರು. ಸೇವಾದಳದ ದಳಪತಿ ಚಂದ್ರಶೇಖರ ಶಿವಾಜಿನಗರ, ಸದಸ್ಯರಾದ ಪುರುಷೋತ್ತಮ ಸೌತೆಬಳ್ಳಿ, ರಾಧಾಕೃಷ್ಣ ಅಲ್ಲಿಪಾದೆ, ಶೇಖರ ಮಣಿಹಳ್ಳ, ಕಾರ್ಯಕಾರಿ ಸಮಿತಿಯ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಯಾದವ ಅಗ್ರಬೈಲು, ನಿಕಟಪೂರ್ವ ಕಾರ್ಯಕಾರಿ ಸಮಿತಿಯ ಸದಸ್ಯರಾದ ರಾಜೇಶ್ ಕುಮಾರ್ ರಾಯಿ, ಯೋಗೀಶ್ ಬಂಗೇರ ಮಿತ್ತಬೈಲು, ದೇವದಾಸ ಅಗ್ರಬೈಲು, ಗಣೇಶ್ ಕುಲಾಲ್ ಬೆದ್ರಗುಡ್ಡೆ, ನಿಕಟಪೂರ್ವ ಸೇವಾದಳದ ದಳಪತಿ ಜಯಂತ್ ಕುಲಾಲ್ ಅಗ್ರಬೈಲು, ಬಂಟ್ವಾಳ ಕುಲಾಲ ಭವನದ ವ್ಯವಸ್ಥಾಪಕ ಜನಾರ್ದನ ಪೊಸಳ್ಳಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯೆ ಕವಿತಾ ಯಾದವ್ ಶ್ರಮದಾನದಲ್ಲಿ ಭಾಗವಹಿಸಿದ್ದರು.
ಬೆಳಗ್ಗೆಯಿಂದಲೇ ಬಿಸಿಲನ್ನು ಲೆಕ್ಕಿಸದೆ ಸದಸ್ಯರು ಹಂಚುಗಳಿಗೆ ಬಣ್ಣ ಬಳಿಯುವ ಕಾರ್ಯದಲ್ಲಿ ತೊಡಗಿಸಿಕೊಂಡರು. ಬಳಿಕ ಮನೆಗೆ ಹಂಚು ಜೋಡಿಸುವ ಕಾರ್ಯದಲ್ಲೂ ಸಕ್ರಿಯವಾಗಿ ಪಾಲ್ಗೊಂಡು, ನಿರ್ಮಾಣ ಕಾಮಗಾರಿಗೆ ವೇಗ ನೀಡಿದರು. ಸಮಾಜದ ಸಂಕಷ್ಟದಲ್ಲಿರುವ ಕುಟುಂಬವೊಂದಕ್ಕೆ ಸುರಕ್ಷಿತ ಸೂರು ಕಲ್ಪಿಸುವ ಕಾರ್ಯದಲ್ಲಿ ಕೈಜೋಡಿಸಿದ ಸೇವಾದಳದ ಸದಸ್ಯರ ಸೇವೆ ಸಾರ್ವಜನಿಕ ಮೆಚ್ಚುಗೆಗೆ ಪಾತ್ರವಾಗಿದೆ.