ಅಕ್ಷರ ದಾಸೋಹ ಯೋಜನೆಯನ್ನು ಖಾಸಗೀಕರಣಗೊಳಿಸುವ ಉದ್ದೇಶದ ‘ಕ್ಲಸ್ಟರ್ ಕಿಚನ್’ ಯೋಜನೆಯನ್ನು ಕೈಬಿಡಬೇಕು, ಬಾಕಿ ವೇತನವನ್ನು ಕೂಡಲೇ ಪಾವತಿಸಬೇಕು ಹಾಗೂ ಹೆಚ್ಚುವರಿ ಕೆಲಸದ ಹೊರೆ ತಪ್ಪಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಪ್ರಗತಿಪರ ಅಕ್ಷರ ದಾಸೋಹ ನೌಕರರ ಸಂಘ (ಎಐಸಿಸಿಟಿಯು) ನೇತೃತ್ವದಲ್ಲಿ ಬಂಟ್ವಾಳದ ಆಡಳಿತ ಸೌಧದ ಮುಂಭಾಗ ಪ್ರತಿಭಟನೆ ನಡೆಯಿತು.
ಪ್ರತಿಭಟನಾಕಾರರು ಸರ್ಕಾರದ ನೀತಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ತಮ್ಮ ವಿವಿಧ ಬೇಡಿಕೆಗಳನ್ನೊಳಗೊಂಡ ಮನವಿಯನ್ನು ಬಂಟ್ವಾಳ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳಿಗೆ ಸಲ್ಲಿಸಿದರು.
ಉದ್ಯೋಗ ಭದ್ರತೆಗೆ ಧಕ್ಕೆ: ರಾಮಣ್ಣ ವಿಟ್ಲ ಆಕ್ರೋಶ: ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಎಐಸಿಸಿಟಿಯು ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ರಾಮಣ್ಣ ವಿಟ್ಲ, “ಕ್ಲಸ್ಟರ್ ಕಿಚನ್ ಹೆಸರಿನಲ್ಲಿ ಅಕ್ಷರ ದಾಸೋಹ ಯೋಜನೆಯನ್ನು ಖಾಸಗೀಕರಣಗೊಳಿಸಲು ಹುನ್ನಾರ ನಡೆಯುತ್ತಿದೆ. ಇದರಿಂದ ಬಿಸಿಯೂಟ ನೌಕರರ ಉದ್ಯೋಗ ಭದ್ರತೆಗೆ ಕುತ್ತು ಬರಲಿದ್ದು, ಮಕ್ಕಳಿಗೆ ಸ್ಥಳೀಯವಾಗಿ ಸಿಗುತ್ತಿರುವ ಗುಣಮಟ್ಟದ ಆಹಾರಕ್ಕೂ ಧಕ್ಕೆಯಾಗಲಿದೆ. ಸರ್ಕಾರ ತಕ್ಷಣವೇ ಈ ಯೋಜನೆಯನ್ನು ಕೈಬಿಡಬೇಕು” ಎಂದು ಒತ್ತಾಯಿಸಿದರು.
, “ನೌಕರರಿಗೆ ಬಾಕಿ ಇರುವ ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕು. ಈಗಾಗಲೇ ಅತ್ಯಲ್ಪ ಗೌರವಧನದಲ್ಲಿ ದುಡಿಯುತ್ತಿರುವ ನೌಕರರ ಮೇಲೆ ಹೆಚ್ಚುವರಿ ಕೆಲಸದ ಹೊರೆ ಹೇರುವುದನ್ನು ನಿಲ್ಲಿಸಬೇಕು” ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಎಐಸಿಸಿಟಿಯು ಜಿಲ್ಲಾ ಸಮಿತಿ ಸದಸ್ಯ ಸಂಜೀವ ಬೆಳ್ತಂಗಡಿ, ಅಕ್ಷರ ದಾಸೋಹ ನೌಕರರ ಸಂಘದ ಮುಖಂಡರಾದ ವಿನಯ ನಡುಮುಗೆರು, ಮಮತ ಬಿಳಿಯೂರು, ಹೇಮಾವತಿ ಕೆದಿಲ, ನಳಿನಿ ವಿಟ್ಲ, ಅಲೀಷ ಡಿ’ಸೋಜ ಸಾಲೆತ್ತೂರು, ಶಶಿಕಲಾ ಕಾಡುಮಠ, ಪೂರ್ಣಿಮಾ ಕಾರ್ಲ, ಶಮೀಮಾ ಬೊಳಂತಿಮೊಗರು, ಚಿತ್ರ ಮದ್ವ ಸೇರಿದಂತೆ ಹಲವು ನೌಕರರು ಪಾಲ್ಗೊಂಡಿದ್ದರು.