ಜಿಲ್ಲೆಯ ಹಲವೆಡೆ ಭಾನುವಾರ ಸಂಜೆ ಮತ್ತು ಸೋಮವಾರ ಬೆಳಗಿನ ಜಾವ ಮಳೆಯಾಗಿದೆ. ಇಂದು ಬೆಳಿಗ್ಗೆ ಸಿಡಿಲು ಬಡಿದು ಬಂಟ್ವಾಳ ತಾಲೂಕಿನ ಮನೆಯೊಂದಕ್ಕೆ ಹಾನಿಯಾಗಿದ್ದಲ್ಲದೆ, ಅಲ್ಲಿ ವಾಸವಿದ್ದ ಮಹಿಳೆ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬೆಳಗಿನ ಜಾವ ನಡೆದ ಘಟನೆಯಲ್ಲಿ ಅಜ್ಜಿಬೆಟ್ಟು ಗ್ರಾಮದ ಮಲೆರ್ಮಲಕೋಡಿ ಎಂಬಲ್ಲಿ ಕುಶಾಲಾಕ್ಷಿ-ನಾಗೇಶ್ ಮೂಲ್ಯ ಎಂಬವರ ಮನೆಗೆ ಸಿಡಿಲು ಬಡಿದು ತೀವ್ರ ಹಾನಿಯಾಗಿದೆ. ಸಿಡಿಲು ಬಡಿದು ಕುಶಾಲಾಕ್ಷಿ ಗಾಯಗೊಂಡಿದ್ದು, ಅವರನ್ನು ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಸೇರಿಸಲಾಗಿದೆ. ಸಿಡಿಲಿನ ತೀವ್ರ ಹೊಡೆತಕ್ಕೆ ಮನೆಯ ಹಂಚು, ಗೋಡೆ ಹಾಗೂ ಕಿಟಕಿಗಳ ಗಾಜುಗಳು ಪುಡಿಪುಡಿಯಾಗಿದ್ದು, ಮನೆಗೆ ಭಾರೀ ಹಾನಿಯಾಗಿದೆ.