| ಬಂಟ್ವಾಳ ಪುರಸಭೆಯಲ್ಲಿ ಎಂಎಲ್ಎ ರಾಜೇಶ್ ನಾಯ್ಕ್, ಎಂಎಲ್ ಸಿ ಮಂಜುನಾಥ ಭಂಡಾರಿ ಮೀಟಿಂಗ್
ಪುರಸಭಾ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸರಬರಾಜು ಸಮಸ್ಯೆ ಮತ್ತು ತ್ಯಾಜ್ಯ ನಿರ್ವಹಣೆ ವ್ಯವಸ್ಥೆ ಹದಗೆಟ್ಟಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹಾಗೂ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮುಂದಿನ 15 ದಿನಗಳೊಳಗೆ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿ ವರದಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಸೋಮವಾರ ಬಂಟ್ವಾಳ ಪುರಸಭೆಯಲ್ಲಿ ನಡೆದ ವಿಶೇಷ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕುಡಿಯುವ ನೀರು ಸರಬರಾಜು, ಪೈಪ್‌ಲೈನ್ ದುರಸ್ತಿ ಮತ್ತು ಕಸ ವಿಲೇವಾರಿ ಕುರಿತು ಇಬ್ಬರು ಶಾಸಕರೂ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ನೀರು ಸಮೃದ್ಧವಿದ್ದರೂ ಸಮಸ್ಯೆ ಏಕೆ?
ಬಂಟ್ವಾಳದಲ್ಲಿ ಡ್ಯಾಂಗಳಲ್ಲಿ ಬೇಕಾದಷ್ಟು ನೀರು ಸಂಗ್ರಹವಿದ್ದರೂ, ನೀರಿನ ಸರಬರಾಜಿನಲ್ಲಿ ವ್ಯತ್ಯಯವಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದು ಸಮಂಜಸವಲ್ಲ ಎಂದು ಶಾಸಕ ರಾಜೇಶ್ ನಾಯ್ಕ್ ಅಸಮಾಧಾನ ವ್ಯಕ್ತಪಡಿಸಿದರು.ಮಣಿಹಳ್ಳ ಮತ್ತು ಕುದನೆಗುಡ್ಡೆಯ ಸ್ಥಳೀಯರ ಕುಡಿಯುವ ನೀರಿನ ಬೇಡಿಕೆಗೆ ಸ್ಪಂದಿಸಿ, ಕೂಡಲೇ ಬೋರ್‌ವೆಲ್ ನಿರ್ಮಿಸಿಕೊಡುವುದಾಗಿ ಶಾಸಕರು ಭರವಸೆ ನೀಡಿದರು.
ಪೌರ ಕಾರ್ಮಿಕರ ಬಳಕೆ ಬೇಡ
ಪೈಪ್‌ಲೈನ್ ದುರಸ್ತಿ ಕಾರ್ಯಕ್ಕೆ ಪೌರ ಕಾರ್ಮಿಕರನ್ನು ಬಳಸಿಕೊಳ್ಳಬಾರದು. ತುರ್ತಾಗಿ ಪ್ರತ್ಯೇಕ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲು ಅಥವಾ ಅಗತ್ಯವಿದ್ದರೆ ಟೆಂಡರ್ ಕರೆಯಲು ಸೂಚಿಸಲಾಯಿತು. ಪುರಸಭೆ ವ್ಯಾಪ್ತಿಯಲ್ಲಿ ಸುಮಾರು 30 ಕಡೆಗಳಲ್ಲಿ ನೀರಿನ ಪೈಪ್‌ಗಳು ಒಡೆದು ನೀರು ಪೋಲಾಗುತ್ತಿದ್ದರೂ ದುರಸ್ತಿ ಕಾರ್ಯ ನಡೆಯುತ್ತಿಲ್ಲ ಎಂದು ಮಾಜಿ ಸದಸ್ಯ ಗೋವಿಂದ ಪ್ರಭು ಗಮನ ಸೆಳೆದರು. ಪೈಪ್‌ಲೈನ್ ದುರಸ್ತಿ ಕಾರ್ಯವನ್ನು ಪೌರ ಕಾರ್ಮಿಕರಿಂದಲೇ ಮಾಡಿಸುತ್ತಿರುವುದರಿಂದ ಇತರ ಕೆಲಸಗಳ ಮೇಲೂ ಪರಿಣಾಮ ಬೀರುತ್ತಿದೆ ಎಂದರು. ಟೆಂಡರ್ ಪ್ರಕ್ರಿಯೆ ಮುಗಿದಿದ್ದರೂ ಪೌರ ಕಾರ್ಮಿಕರ ವಸತಿ ಸೌಕರ್ಯ ಕಾಮಗಾರಿ ಆರಂಭವಾಗದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಶಾಸಕ ರಾಜೇಶ್ ನಾಯ್ಕ್ ತಕ್ಷಣವೇ ಕೆಲಸ ಆರಂಭಿಸಲು ಸೂಚಿಸಿದರು.
ಕಸ ಸಂಗ್ರಹ ವಾಹನಗಳು ಪ್ರತಿದಿನ ಬರುವ ಬದಲು ವಾರಕ್ಕೊಮ್ಮೆ ಬರುತ್ತಿರುವುದಕ್ಕೆ ಆಕ್ಷೇಪ ವ್ಯಕ್ತವಾಯಿತು. ಕಂಚಿನಡ್ಕ ಪದವಿನಲ್ಲಿರುವ ಯಂತ್ರೋಪಕರಣಗಳು ತುಕ್ಕು ಹಿಡಿಯುತ್ತಿದ್ದು, ಒಣತ್ಯಾಜ್ಯ ನಿರ್ವಹಣೆಗೆ ಎಂಆರ್‌ಎಫ್ ಘಟಕದ ಸಮನ್ವಯ ಪಡೆಯುವಂತೆ ಎಂ.ಎಲ್.ಸಿ ಮಂಜುನಾಥ ಭಂಡಾರಿ ಸಲಹೆ ನೀಡಿದರು.
ಅಧಿಕಾರಿ ಬಾರದಿದ್ದರೆ ಸಭೆ ನಡೆಸಿ ಪ್ರಯೋಜನವೇನು?
ಸಭೆಯ ಆರಂಭದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಚರ್ಚೆ ಆರಂಭವಾದಾಗ ನಗರ ನೀರು ಸರಬರಾಜು ಮಂಡಳಿಯ ಅಧಿಕಾರಿ ಎಲ್ಲಿದ್ದಾರೆ ಏಂದು ಶಾಸಕ ರಾಜೇಶ್ ನಾಯ್ಕ್ ಮುಖ್ಯಾಧಿಕಾರಿ ತೀರ್ಥಪ್ರಸಾದ್ ಅವರಿಗೆ ಪ್ರಶ್ನಿಸಿದರು.
“ಅವರನ್ನು ಕರೆದಿಲ್ಲ” ಎಂದು ಮುಖ್ಯಾಧಿಕಾರಿ ಉತ್ತರಿಸಿದಾಗ “ನೀರಿನ ಸಮಸ್ಯೆ ಪರಿಹಾರ ಆಗಬೇಕಾದರೆ ಅದಕ್ಕೆ ಸಂಬಂಧಿಸಿದ ಅಧಿಕಾರಿ ಇಲ್ಲವಾದರೆ ಚರ್ಚಿಸಿ ಪ್ರಯೋಜನ ಇಲ್ಲ. ಸಂಬಂಧಿಸಿದ ಅಧಿಕಾರಿಯೇ ಇಲ್ಲವಾದರೆ ಪರಿಹಾರ ಹೇಗೆ”? ಎಂದು ರಾಜೇಶ್ ನಾಯ್ಕ್ ಹಾಗೂ ಮಂಜುನಾಥ ಭಂಡಾರಿ ಆಕ್ಷೇಪಿಸಿ, ತತ್ ಕ್ಷಣವೇ ಬರುವಂತೆ ಕರೆ ಮಾಡಲು ಸೂಚಿಸಿದರು. ಒಂದು ಗಂಟೆಯ ಬಳಿಕ ಸಭೆಗೆ ಆಗಮಿಸಿದ ಅಧಿಕಾರಿಯೊಂದಿಗೆ ತಾಂತ್ರಿಕ ಸಮಸ್ಯೆಗಳ ಕುರಿತು ಚರ್ಚೆ ನಡೆಯಿತು.
ಪುರಸಭೆಯ ಮಾಜಿ ಸದಸ್ಯರು ಹಾಗೂ ಸಾರ್ವಜನಿಕರ ದೂರುಗಳಿಗೆ ಉತ್ತರಿಸಿದ ಮುಖ್ಯಾಧಿಕಾರಿ ತೀರ್ಥಪ್ರಸಾದ್, ನಿಯಮಾನುಸಾರ ಟೆಂಡರ್ ಆಧಾರದಲ್ಲೇ ಕೆಲಸಗಳನ್ನು ನಡೆಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ರಾಜೇಶ್ ನಾಯ್ಕ್, ಸಾರ್ವಜನಿಕರಿಗೆ ಸಮಸ್ಯೆ ಸೃಷ್ಟಿಸಿ ಅವರ ನೋವಿಗೆ ಸ್ಪಂದಿಸದಿರುವುದು ಉತ್ತಮ ಆಡಳಿತವಲ್ಲ. ನಿಯಮಗಳನ್ನು ಪಾಲಿಸುವ ಜತೆಗೆ ಮಾನವೀಯ ನೆಲೆಯಲ್ಲೂ ಕೆಲಸ ಮಾಡಬೇಕು. ಸಮಸ್ಯೆ ಸೃಷ್ಟಿಸುವುದು ನಮ್ಮ ಗುರಿಯಾಗಬಾರದು, ಪರಿಹರಿಸುವುದೇ ಮುಖ್ಯ ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
ಸಹಾಯಕ ಆಯುಕ್ತೆ ಮೀನಾಕ್ಷಿ ಆರ್ಯ, ಪುರಸಭೆ ಮುಖ್ಯಾಧಿಕಾರಿ ತೀರ್ಥಪ್ರಸಾದ್, ಕ.ನ.ನೀ.ಸ.ಒ.ಮಂ.ಸಹಾಯಕ ಇಂಜಿನಿಯರ್ ಶೋಭಾಲಕ್ಷ್ಮೀ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.