
ಬಂಟ್ವಾಳ: ಮಂಗಳೂರಿನಲ್ಲಿ ಸಂಪುಟ ಸಭೆ ನಡೆಸಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ದಕ್ಷಿಣ ಕನ್ನಡ ಜಿಲ್ಲೆಯ ಅನ್ನದಾತರಾದ ರೈತರನ್ನು ಭೇಟಿಯಾಗದೇ ನಿರ್ಲಕ್ಷಿಸಿರುವುದಕ್ಕೆ ರೈತ ಮುಖಂಡರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಬೈಲುಗುತ್ತು ಶ್ರೀಧರ್ ಶೆಟ್ಟಿ, ರಾಜ್ಯ ಕಾರ್ಯದರ್ಶಿ ನಡಿಕಂಬಳಗುತ್ತು ಮನೋಹರ್ ಶೆಟ್ಟಿ, ಬಂಟ್ವಾಳ ತಾಲೂಕು ಅಧ್ಯಕ್ಷ ಸುಬ್ರಹ್ಮಣ್ಯ ಭಟ್, ಕಾರ್ಯದರ್ಶಿಗಳಾದ ಎಂ.ಕೆ. ಇದಿನಬ್ಬ ಹಾಗೂ ಸುದೇಶ್ ಮಯ್ಯ, ಜಿಲ್ಲಾ ಸಂಚಾಲಕರಾದ ದಯಾನಂದ ಶೆಟ್ಟಿ ಕುಳವೂರುಗುತ್ತು ಹಾಗೂ ಹರಿಶ್ಚಂದ್ರ ಕೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ್ದಾರೆ.
ತುಳು ಭಾಷೆಯನ್ನು ರಾಜ್ಯದ ಆಡಳಿತ ಭಾಷೆಯನ್ನಾಗಿ ಘೋಷಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಿರ್ಧಾರವನ್ನು ಮತ್ತು ಸಭೆಯಲ್ಲಿ ಕೈಗೊಂಡ ಜನಪರ ತೀರ್ಮಾನಗಳನ್ನು ಕರಾವಳಿಯ ಮುಖಂಡರು ಮುಕ್ತಕಂಠದಿಂದ ಅಭಿನಂದಿಸಿದ್ದಾರೆ. ಸಭೆಯ ಸಂದರ್ಭದಲ್ಲಿ ಶ್ರಮಜೀವಿ ಮೀನುಗಾರರನ್ನು ಖುದ್ದಾಗಿ ಭೇಟಿಯಾಗಿ ಅವರ ಕುಂದುಕೊರತೆ ಆಲಿಸಿದ ಮುಖ್ಯಮಂತ್ರಿಗಳ ನಡೆ ಶ್ಲಾಘನೀಯ ಎಂದು ಹೇಳಿರುವ ರೈತ ಮುಖಂಡರು, ಇದೇ ವೇಳೆ ಜಿಲ್ಲೆಯಲ್ಲಿ ರೈತ ವಿರೋಧಿ ಮನಸ್ಥಿತಿಯ ಅಧಿಕಾರಿಗಳು ಹೆಚ್ಚಾಗಿದ್ದು, ‘ರೈತ ಸಂಪರ್ಕ’ ಸಂಪೂರ್ಣವಾಗಿ ಮೂಲೆಗುಂಪಾಗಿದೆ. ಪ್ರಸ್ತುತ ಅಡಕೆ ಹಾಗೂ ಭತ್ತ ಬೆಳೆಗಾರರು ಹಲವು ಸಂಕಷ್ಟಗಳನ್ನು ಎದುರಿಸುತ್ತಿದ್ದು, ಅವರ ಅಳಲನ್ನು ಕೇಳುವವರೇ ಇಲ್ಲದಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳಾಗಲಿ, ಕೃಷಿ, ತೋಟಗಾರಿಕೆ ಅಥವಾ ಕಂದಾಯ ಸಚಿವರಾಗಲಿ ಜಿಲ್ಲೆಗೆ ಭೇಟಿ ನೀಡಿದಾಗ, ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಕಡ್ಡಾಯವಾಗಿ “ರೈತ ಸಂಪರ್ಕ ಸಭೆ“ ಆಯೋಜಿಸಬೇಕು ಹಾಗೂ ರೈತರ ಹತ್ತು ಹಲವು ಸಮಸ್ಯೆಗಳನ್ನು ಆಲಿಸಿ ಪರಿಹಾರ ಒದಗಿಸಬೇಕು ಎಂದು ವಿನಂತಿಸಿದ್ದಾರೆ.



Be the first to comment on "ಮಂಗಳೂರಿನಲ್ಲಿ ಸಂಪುಟ ಸಭೆ: ಜಿಲ್ಲೆಯ ರೈತರ ಭೇಟಿಯಾಗದ ಸಿಎಂ ನಡೆಗೆ ರೈತ ಸಂಘಟನೆ ಬೇಸರ"