


ಸಿದ್ದಕಟ್ಟೆ ಸರಕಾರಿ ಪ್ರೌಢಶಾಲೆಯಲ್ಲಿ ಆಳ್ವಾಸ್ ಕಾಲೇಜಿನ ಕನ್ನಡ ವಿಭಾಗ, ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ಘಟಕ ಹಾಗೂ ರೋಟರಿ ಕ್ಲಬ್ ಸಿದ್ದಕಟ್ಟೆಯ ಸಹಯೋಗದಲ್ಲಿ ‘ಪರಿಸರ ಪ್ರೀತಿ’ (ಪರಿಸರ ಪ್ರಜ್ಞೆ ಮತ್ತು ಸಾಹಿತ್ಯ ಜಾಗೃತಿ) ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪನಾ ಟ್ರಸ್ಟಿ ವಿವೇಕ್ ಆಳ್ವ, “ಪ್ರಕೃತಿಯ ಪ್ರತಿಯೊಂದು ಜೀವಿಯೂ ಪ್ರಕೃತಿಪೂರಕವಾಗಿ ಬದುಕುತ್ತದೆ. ಮನುಷ್ಯ ಮಾತ್ರ ಪ್ರಕೃತಿಗೆ ಸವಾಲಾಗಿದ್ದಾನೆ. ಮನುಷ್ಯನಿಂದ ಹಾನಿಯಾದ ಪ್ರಕೃತಿಯನ್ನು ಮನುಷ್ಯನೇ ಸರಿಪಡಿಸಬೇಕಾಗಿದೆ. ನಿಸರ್ಗದ ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದೆ, ಇತರ ಜೀವಿಗಳನ್ನು ಕೊಂದು ಮನುಷ್ಯ ಉಳಿಯಲು ಸಾಧ್ಯವಿಲ್ಲ” ಎಂದರು. ಪಶ್ಚಿಮ ಘಟ್ಟ ಮತ್ತು ಸಮುದ್ರದ ಮಧ್ಯೆ ಇರುವ ಈ ಸುಂದರ ನಾಡನ್ನು ಮನುಷ್ಯ ತನ್ನ ಸ್ವಾರ್ಥಕ್ಕೆ ಇದೇ ರೀತಿ ಉಪಯೋಗಿಸುತ್ತಾ ಹೋದರೆ ಭವಿಷ್ಯದಲ್ಲಿ ಈ ಭಾಗದ ಜನರು ದೊಡ್ಡ ಅಪಾಯಗಳನ್ನು ಎದುರಿಸಬೇಕಾಗುತ್ತದೆ ಎಂದು ನುಡಿದರು .
ಅಧ್ಯಕ್ಷತೆ ವಹಿಸಿ ಮಾತನಾಡಿದ ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಶ್ವನಾಥ ಬಂಟ್ವಾಳ, “ಕಾರಂತ, ಕುವೆಂಪು, ತೇಜಸ್ವಿ ಮೊದಲಾದ ಕವಿಗಳ ಬರಹಕ್ಕೆ ಪ್ರಕೃತಿಯೇ ಪ್ರೇರಣೆ. ಪ್ರಕೃತಿಗೆ ಸಾಹಿತ್ಯ ಸೃಷ್ಟಿಸುವ ಗುಣವಿದೆ. ಓದು ಮತ್ತು ಪ್ರಕೃತಿಯನ್ನು ರಕ್ಷಿಸುವ ಕೆಲಸವನ್ನು ಶ್ರದ್ಧೆಯಿಂದ ನಿರ್ವಹಿಸಬೇಕಾಗಿದೆ” ಎಂದು ತಿಳಿಸಿದರು.

ಸಂಪನ್ಮೂಲ ವ್ಯಕ್ತಿ ಗುರುರಾಜ ಸನಿಲ್ ಮಾತನಾಡಿ, “ಹಾವು ತಾನಾಗಿ ಕಚ್ಚುವುದಿಲ್ಲ. ಹಾವು ನಮ್ಮ ಶತ್ರುವಲ್ಲ, ಅದೊಂದು ಸಹಜೀವಿ. ಸಮಾಜದಲ್ಲಿ ಹಾವಿನ ಕುರಿತಾದ ನಂಬಿಕೆ ಹಾಗೂ ಅಪನಂಬಿಕೆಗಳೆರಡೂ ಇವೆ. ಪರಿಸರ ಸಮತೋಲನವನ್ನು ಕಾಪಾಡುವಲ್ಲಿ ಹಾವಿನ ಪಾತ್ರ ಹಿರಿದು” ಎಂದು ತಿಳಿಸಿದರು. ಇದೇ ವೇಳೆ ಹಾವು ಕಚ್ಚಿದಾಗ ನಿರ್ವಹಿಸಬೇಕಾದ ಪ್ರಥಮ ಚಿಕಿತ್ಸೆಯ ಕುರಿತು ಅವರು ಸಮಗ್ರ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಆಳ್ವಾಸ್ ಕಾಲೇಜಿನ ಹಾಗೂ ಸಿದ್ದಕಟ್ಟೆ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಪರಿಸರ ಜಾಗೃತಿಯ ಹಾಡು, ಪರಿಸರ ಚಿತ್ತಾರ, ಪರಿಸರ ಸಂಬಂಧಿ ರಸಪ್ರಶ್ನೆ ಮತ್ತು ಪರಿಸರ ಕುರಿತ ಕವಿಗೋಷ್ಠಿ ಜರುಗಿದವು.
ರೋಟರಿ ಕ್ಲಬ್ ಫಲ್ಗುಣಿ ಸಿದ್ದಕಟ್ಟೆಯ ಅಧ್ಯಕ್ಷೆ ಟೀನಾ ಡಿಕೋಸ್ತಾ, ಎಸ್‌ಡಿಎಂಸಿ ಉಪಾಧ್ಯಕ್ಷ ಉಮೇಶ್, ಪಾಣೆಮಂಗಳೂರು ಹೋಬಳಿ ಸಾಹಿತ್ಯ ಪರಿಷತ್ತಿನ ಘಟಕಾಧ್ಯಕ್ಷ ಮಹಮ್ಮದ್, ಸಾಹಿತ್ಯ ಪರಿಷತ್ತಿನ ರಜನಿ ಚಿಕ್ಕಯ್ಯಮಠ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಣೇಶ್ ಶೆಟ್ಟಿ, ರೋಟರಿ ಕಾರ್ಯದರ್ಶಿ ಪ್ರಮೀಳಾ ದುರ್ಗಾದಾಸ್ ಶೆಟ್ಟಿ, ಗುರು ಚೈತನ್ಯ ಸೇವಾಶ್ರಮದ ಹೊನ್ನಯ್ಯ ಕಾಟಿಪಳ್ಳ, ರೋಟರಿ ಕ್ಲಬ್ ಸಿದ್ದಕಟ್ಟೆಯ ಮಾಜಿ ಅಧ್ಯಕ್ಷ ಮೈಕಲ್ ಡಿಕೋಸ್ತಾ ಹಾಗೂ ದುರ್ಗಾದಾಸ್ ಶೆಟ್ಟಿ ಉಪಸ್ಥಿತರಿದ್ದರು.
ಡಾ. ಯೋಗೀಶ್ ಕೈರೋಡಿ ಸ್ವಾಗತಿಸಿ, ಉಪಪ್ರಾಂಶುಪಾಲೆ ಲೋನಾ ಲೋಬೊ ವಂದಿಸಿದರು. ಶಿಕ್ಷಕ ಮಹೇಶ್ ಕರ್ಕೇರ ಕಾರ್ಯಕ್ರಮ ನಿರೂಪಿಸಿದರು.


Be the first to comment on "ಸಿದ್ದಕಟ್ಟೆಯಲ್ಲಿ ‘ಪರಿಸರ ಪ್ರೀತಿ’ ಕಾರ್ಯಕ್ರಮ"